ಶಂಕರಾಚಾರ್ಯರು ಪ್ರಸ್ಥಾನತ್ರಯಕ್ಕೆ ಭಾಷ್ಯರಚಿಸಿ, ವ್ಯಾಸರ ಅನುಜ್ಞೆಯಂತೆ ಭಾರತದ ಪರ್ಯಟನೆ ಮಾಡುತ್ತಾ, ಜನರಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಬಿತ್ತುತ್ತಾ ಕಾಶೀ ಕ್ಷೇತ್ರಕ್ಕೆ ಬಂದಿದ್ದಾರೆ. ಪಾವನಗಂಗೆಯಲ್ಲಿ ಮಿಂದು ತಮ್ಮ ಶಿಷ್ಯರೊಡನೆ ಸಂಚರಿಸುತ್ತಿದ್ದಾಗ ಮಾರ್ಗದಲ್ಲಿ ಒಬ್ಬ ವಯೋವೃದ್ಧ ಮುದುಕ ಪಾಣಿನಿಯ ಸೂತ್ರವೊಂದನ್ನು(ಡುಕೃಂಕರಣೇ ) ಪುನಃ ಪುನಃ ಬಾಯಿಪಾಠ ಮಾಡುತ್ತಿದ್ದುದು ಕಾಣುತ್ತಾರೆ. ಹಣ್ಣು ಮುದುಕನಾದರೂ, ಮೃತ್ಯು ಸಮೀಪಿಸುತ್ತಿದ್ದರೂ ಮಾನವ ಜೀವನದ ಉದ್ದೇಶವನ್ನರಿಯದೇ ಜೀವಿಸುತ್ತಿರುವ ವ್ಯಕ್ತಿಯ ಚರ್ಯೆಯನ್ನು ಕಂಡು ಆಶ್ಚರ್ಯಚಕಿತರಾಗಿ, ಅವನಿಗೆ ಸರಿಯಾದ ಮಾರ್ಗದರ್ಶನ ಮಾಡಲು ಕರುಣೆಯಿಂದ ಹೊರಬ೦ದ ಪ್ರೇರಣಾಸಾಹಿತ್ಯವೇ ಭಜಗೋವಿಂದಮ್, ಆ ವೃದ್ಧನನ್ನು ನೆಪಮಾಡಿಕೊಂಡು ನಮ್ಮೆಲ್ಲರನ್ನೂ ಉದ್ದೇಶಿಸಿ, ಉಪದೇಶಿಸಿರುವ ಭಜಗೋವಿಂದಮ್ ಗ್ರಂಥದ ಒಂದೊಂದೇ ಶ್ಲೋಕವನ್ನು ಅಧ್ಯಯನ ಮಾಡೋಣ.
ಭಜ
ಗೋವಿಂದಮ್ ಭಜ ಗೋವಿಂದಮ್
ಗೋವಿಂದ ಭಜ ಮೂಢಮತೇ |
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನಹಿ ನಹಿ ರಕ್ಷತಿ ಡುಕೃಂಕರಣೇ ॥
ಹೇ
ಮೂಢಮತೇ - ಎಲೈ ಮೂರ್ಖನೇ! ಶಂಕರಾಚಾರ್ಯರು
ನಮ್ಮೆಲ್ಲರನ್ನೂ ಮೂರ್ಖ ಎಂದು ಕಠೋರವಾಗಿ ಸಂಬೋಧಿಸುವುದು
ಎಷ್ಟು ಸಮಂಜಸ ಎಂಬ ಪ್ರಶ್ನೆ ಏಳಬಹುದು.
ಮನೆಗೆ ಬೆಂಕಿ ಹತ್ತಿ ನಮ್ಮೆಲ್ಲರ ಪ್ರಾಣ ಅಪಾಯದಲ್ಲಿರುವಾಗ, ಮಲಗಿರುವ ನಮ್ಮನ್ನು ಪಾರುಮಾಡಬೇಕೆಂದಿರುವ ವ್ಯಕ್ತಿ ಶಿಷ್ಟಾಚಾರದಿಂದ ಏಳಿಸುವುದು ಅಗತ್ಯವೇ!!? ಹಾಗೇ, ಸಂಬೋಧಿಸಿ ನಾವೆಲ್ಲರೂ ಮೋಹವೆಂಬ ಮದಿರೆಯನ್ನು ಕುಡಿದು ಈ ಜೀವನದ ಪ್ರಯಾಣದಲ್ಲಿ
ಗಂತವ್ಯವನ್ನು ಮರೆತು ದಾರಿತಪ್ಪಿ ಅಪಘಾತ ಸಂಭವಿಸಬಹುದಾದ ವೇಳೆಯಲ್ಲಿ ತುರ್ತಾಗಿ ನಮ್ಮನ್ನು ಎಚ್ಚರಿಸಲು ಚಾಟಿಯ ಏಟಿನಂತೆ 'ಹ ಮೂಢಮತೇ' ಎಂದು
ಸಂಬೋಧಿಸಿ, ನಮ್ಮ ಗಮನವನ್ನುಉಪದೇಶದೆಡೆಗೆ ಸೆಳೆಯುತ್ತಿರುವುದು ಆಚಾರ್ಯರ
ಚಾತುರ್ಯವೇ ಸರಿ.
ಸಂಪ್ರಾಪ್ತೇ
ಸನ್ನಿಹಿತೇ ಕಾಲೇ – ಮರಣಕಾಲ ಸಮೀಪಿಸಿದಾಗ. ಇಲ್ಲಿ 'ಕಾಲೇ' ಎಂಬ ಪದವು ಕಾಲದೇವತೆಯಾದ
ಯಮನನ್ನು ಅಥವಾ ಮೃತ್ಯುವನ್ನು ಸೂಚಿಸುತ್ತದೆ.
ಮರಣಸಮಯ ಯಾವಾಗ ಬರುತ್ತದೆ? ಸಾಧಾರಣವಾಗಿ ವಯಸ್ಸಾದ ನಂತರ ಎಂದು ಭಾವಿಸುತ್ತೇವೆ.
ಆದರೆ ಈ ಅನಿಶ್ಚಿತ ಜೀವನದಲ್ಲಿ
ಯಾವ ಕ್ಷಣದಲ್ಲಾದರೂ ಮೃತ್ಯು ಸಮೀಪಿಸಬಹುದು ಎಂಬುದು ನಮ್ಮ ಸುತ್ತ ನಡೆಯುತ್ತಿರುವ
ವಿದ್ಯಮಾನದಿಂದಲೇ ತಿಳಿಯುತ್ತದೆ. ಆದ್ದರಿಂದ ಈ ಗ್ರಂಥದ ಉಪದೇಶವು
ವಯಸ್ಸಾಗಿ ಹಾಸಿಗೆ ಹಿಡಿದವರಿಗಷ್ಟೇ ಅಲ್ಲದೆ, ಸಮಸ್ತ ಮಾನವಜನಾಂಗಕ್ಕೆ ಎಚ್ಚರಿಕೆಯ ಗಂಟೆಯಂತಿದೆ.
ನಹಿ
ನಹಿ ರಕ್ಷತಿ ಡುಕೃಂಕರಣೇ - ಕೊನೇಕ್ಷಣದಲ್ಲಿ ಈ ವ್ಯಾಕರಣಾದಿ ವಿಷಯಗಳು
ನಮ್ಮನ್ನು ಕಾಪಾಡುವುದಿಲ್ಲ. ಈ ವಾಕ್ಯವನ್ನು ಅರ್ಥಮಾಡಿ-
ಕೊಳ್ಳುವುದಕ್ಕಿಂತ ಅಪಾರ್ಥಮಾಡಿಕೊಳ್ಳುವವರೇ ಹೆಚ್ಚು; ಸಂಸ್ಕೃತ ಕಲಿಯಲು ನಮ್ಮಲ್ಲಿರದ ಆಸಕ್ತಿ, ಶ್ರದ್ಧೆ ಮತ್ತು ನಿಷ್ಠೆಗೆ ಆಚಾರ್ಯರ ಒಪ್ಪಿಗೆಯೂ ಸಿಕ್ಕಿತಲ್ಲ ಎಂದು. ಆಚಾರ್ಯರೇ ಮಹಾಸಂಸ್ಕೃತಜ್ಞರೂ, ವ್ಯಾಕರಣಜ್ಞರೂ ಆಗಿದ್ದಾಗ ವ್ಯಾಕರಣವನ್ನು ದೂಷಿಸುವರೇ? ಯಾವುದೇ ಅಧ್ಯಯನವೂ ಅದರ ಉದ್ದೇಶವನ್ನರಿಯದೇ ಮಾಡಬಾರ-
ದೆನ್ನುವುದನ್ನು ಇಲ್ಲಿ ಸೂಚಿಸಿದೆ. ಹಾಗಾದರೆ ವ್ಯಾಕರಣಾದಿ ವಿಷಯಗಳ ಅಧ್ಯಯನದ ಉದ್ದೇಶವೇನು? ಸಂಸ್ಕೃತ ವ್ಯಾಕರಣದ ಅಧ್ಯಯನದ ಮೂಲಕ ಸರಿಯಾಗಿ ಶಾಸ್ತ್ರ
ಶ್ರವಣ, ಮನನ, ನಿದಿಧ್ಯಾಸನ ಮತ್ತು
ತನ್ಮೂಲಕ ಆತ್ಮಜ್ಞಾನರೂಪ ಮೋಕ್ಷಪ್ರಾಪ್ತಿ. ಇಲ್ಲಿ ವ್ಯಾಕರಣ ಎಂಬುದು ಉಪಲಕ್ಷಣವಷ್ಟೇ; ಇದರಲ್ಲಿ ಸಮಸ್ತ ಲೌಕಿಕಜ್ಞಾನವನ್ನೂ ಸೇರಿಸಿಕೊಳ್ಳಬೇಕು. ಈ ವಿಷಯವನ್ನು ಅರ್ಥೈಸಲು
ಛಾಂದೋಗ್ಯ ಉಪನಿಷತ್ತಿನ ನಾರದ-ಸನತ್ಕುಮಾರರ ಕಥೆಯನ್ನು
ನೋಡೋಣ.
ಸಕಲವಿದ್ಯಾಪಾರಂಗತರಾದರೂ
ನಾರದರು ಮಾನಸಿಕ ಖಿನ್ನತೆಯಿಂದ ಸನತ್ಕುಮಾರರ ಬಳಿ ಸಾಗಿ, ತಮಗೆ
ಉಪದೇಶಿಸಿ ಎಂದಾಗ ಸನತ್ಕುಮಾರರು, 'ನಿನಗೀಗ ಏನೇನು ತಿಳಿದಿದೆಯೋ ಅದನ್ನು ತಿಳಿಸು' ಎನ್ನುತ್ತಾರೆ. ಆಗ ನಾರದರು ತಮಗೆ
ತಿಳಿದಿರುವ ವಿಷಯಗಳ ಪಟ್ಟಿಯನ್ನು ಹೇಳುತ್ತಾರೆ. ಅದರಲ್ಲಿ ಚತುರ್ವೇದಗಳು, ವೇದಾಂಗಗಳು, ಪುರಾಣ, ಇತಿಹಾಸಗಳು, ನೀತಿಶಾಸ್ತ್ರ, ಧರ್ಮಶಾಸ್ತ್ರ, ತರ್ಕಶಾಸ್ತ್ರ, ಕಲೆ, ಕಾತ್ರವಿದ್ಯೆ. ಭೂತವಿದ್ಯೆ,
ಸರ್ಪವಿದ್ಯೆ ಮುಖ್ಯವಾದವುಗಳು. ಸನತ್ಕುಮಾರರು ತಾಳ್ಮೆಯಿಂದ ಆಲಿಸಿ, 'ಇವೆಲ್ಲವೂ ಅಪರಾವಿದ್ಯೆ. ಇದರಿಂದ ಪರಿಪೂರ್ಣತೆ ದೊರೆಯಲಸಾಧ್ಯ. ಆತ್ಮವಿದ್ಯೆ, ಬ್ರಹ್ಮವಿದ್ಯೆ ಅಥವಾ ಪರಾವಿದ್ಯೆಯಿಂದ ಮಾತ್ರ
ಅತ್ಯುನ್ನತವಾದ ಮೊಕ್ಷರೂಪವಾದ ಪರಿಪೂರ್ಣತೆ ಸಾಧ್ಯವಾಗುತ್ತದೆ' ಎನ್ನುತ್ತಾರೆ. ನಂತರ ಆತ್ಮಜ್ಞಾನದ ಉಪದೇಶವನ್ನು
ಪಡೆದು ನಾರದರು ಸ೦ಸಾರಸಾಗರದಿಂದ ಮುಕ್ತರಾಗಿ ಪರಿಪೂರ್ಣ- ತೆಯನ್ನು ಹೊಂದುತ್ತಾರೆ ( ತರತಿ ಶೋಕಮ್ ಆತ್ಮವಿತ್).
ಪ್ರಸ್ತುತದಲ್ಲೂ ಕೂಡ ಆಚಾರ್ಯರು ಸಮಸ್ತಲೌಕಿಕಜ್ಞಾನದ
(ಆಪರಾವಿದ್ಯೆ ) ಪರಿಮಿತಿಯನ್ನು ತಿಳಿಸುತ್ತಿದ್ದಾರೆ. ಹಾಗೆಂದಮಾತ್ರಕ್ಕೆ ಲೌಕಿಕಜ್ಞಾನವು ಉಪಯೋಗಕ್ಕಿಲ್ಲವೆಂದಲ್ಲ. ಅದನ್ನು ಸಾಧನವಾಗಿ ಬಳಸಿಕೊಂಡು ಸಾಧ್ಯವಾದ ಮೋಕ್ಷದೆಡೆಗೆ ನಡೆಯಬೇಕೆಂಬುದೇ ಲಕ್ಷ್ಯಾರ್ಥ, ಮರಣಕಾಲದ ಯೋಚನೆ ಜೀವಿಯ ಮುಂದಿನ ಗತಿಯನ್ನು ಸೂಚಿಸುತ್ತದೆ ಎಂಬುದನ್ನು ಕೃಷ್ಣ ಗೀತೆಯಲ್ಲಿ ತಿಳಿಸಿದ್ದಾನೆ.
ಯಂ ಯಂ ವಾಪಿ ಸ್ಮರಮ್ಭಾವಂ
ತ್ಯಜತ್ಯಂತೇ ಕಲೇವರಮ್ |
ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ |
ಅಂತಕಾಲೇ ಚ ಮಾಮೇವ ಸ್ಮರನ್ನುಕ್ಕಾ ಕಲೇವರಮ್ |
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಲ್ವತ್ರ ಸಂಶಯಃ ।
ಮರಣಸಮಯದಲ್ಲಿ
ವ್ಯಕ್ತಿಯು ಯಾವ ಚಿಂತನೆಯಲ್ಲಿರುತ್ತಾನೋ, ಅವನು ಸ್ಥಿತಿಯನ್ನೇ
ಪಡೆಯುತ್ತಾನೆ. ಹಾಗಾದರೆ ಕೊನೆಯ ಸಂದರ್ಭದಲ್ಲಿ ಯಾವ ಚಿಂತನೆ ಮಾಡಬೇಕು?
ಜೀವಿಯ ಸದ್ಗತಿಗೆ ಮರಣಸಂದರ್ಭದಲ್ಲಿ ಭಗವಂತನ ಸ್ಮರಣೆಯೇ ಮಾರ್ಗವೆಂದು, ಅಂತ್ಯಕಾಲದಲ್ಲಿ ಭಗವಂತನ ಚಿಂತನೆ ಬರಬೇಕಾದರೆ ಬದುಕಿರುವ ಅನುಕ್ಷಣವೂ ಅದೇ ಭಾವದಲ್ಲಿರಬೇಕೆನ್ನುವುದನ್ನೂ ( ತಸ್ಮಾತ್ ಸರ್ವೇಷು ಕಾಲೇಷು ಮಾಮನುಸ್ಥರ ) ಕೃಷ್ಣನೇ ತಿಳಿಸಿದ್ದಾನೆ. ಈ ವಿಷಯವನ್ನೇ ಪ್ರಸ್ತಾಪಿಸುತ್ತಾ, ಬದುಕಿನ ಪ್ರತೀಕ್ಷಣ ಮತ್ತು ಕೊನೆಯ ಕ್ಷಣ ನಾವು ಮಾಡಬೇಕಾದದ್ದು ಭಜಗೋವಿಂದಮ್ ಎಂದು ತಿಳಿಹೇಳುತ್ತಿದ್ದಾರೆ.
ಭಜ
ಎಂದರೆ ಸೇವಿಸುವುದು, ಪೂಜಿಸುವುದು ಅಥವಾ ಕಂಡುಕೊಳ್ಳುವುದು ಎಂದು ಅರ್ಥೈಸಬಹುದು.
ಗೋವಿಂದ
ಎಂಬ ಪದಕ್ಕೆ ಹಲವಾರು ಅರ್ಥಗಳಿವೆ.
- ಗಾಂ ವಿಂದತಿ ಪಾಲಯತಿ ವಿಕೋಪದಿಂದ ಇಂದ್ರನ ಗೋಕುಲದ ನಿವಾಸಿಗಳನ್ನು ಗೋರಕ್ಷಕನಾಗಿ ರಕ್ಷಿಸಿ, ಪಾಲಿಸಿದ ಗೋವರ್ಧನೋದ್ಧಾರಕ ಕೃಷ್ಣ.
- ಗಾಂ ಪೃಥಿವೀಂ ಬಾಲಯತಿ – ಭೂಭಾರಹರಣ - ಮಾಡಿ ಪೃಥ್ವಿಯನ್ನು ರಕ್ಷಿಸಲು ಭಗವಂತನೆತ್ತಿದ ಸರ್ವ ಅವತಾರಗಳು.
- ಗಃ ಇಂದ್ರಿಯಾಣಿ ಬಾಲಯತಿ - ಸಮಸ್ತ ಇಂದ್ರಿಯಗಳನ್ನೂ, ಮನಸ್ಸನ್ನೂ ಸಚೇತನಗೊಳಿಸುವ ಆತ್ಮ.
- ಗೋಭಿಃ ವೇದಾಂತವಾಕ್ಯ: ವಿಂದ್ಯತೆ ಉಪನಿಷತ್ ಪ್ರಮಾಣಮಾತ್ರದಿಂದ ತಿಳಿಯಲ್ಪಡುವ ಪರಬ್ರಹ್ಮ.
ಭಜಗೋವಿಂದಮ್
ಪದದ ಅರ್ಥ 'ಕೃಷ್ಣನನ್ನು ಭಜಿಸು' ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ ಹಾಗೂ ಆದರಿಂದ ಚಿತ್ತಶುದ್ಧಿಯೂ
ಆಗುತ್ತದೆ. ಆದರೆ ಶಂಕರಾಚಾರ್ಯರು ಭಜಗೋವಿಂದಮ್
ಎಂದಾಗ ಆತ್ಮ- ಜ್ಞಾನದ ಮೂಲಕ ಪರಬ್ರಹ್ಮನನ್ನು ಹೃದಯದಲ್ಲಿ
ಸಾಕ್ಷಾತ್ಕ ರಿಸುವುದು ಎಂಬ ಗೂಢಾರ್ಥವನ್ನು ಹುದುಗಿಸಿದ್ದಾರೆ.
ಶಂಕರರು
ತಮ್ಮ ಇಷ್ಟದೇವತೆ(ಕುಲದೇವತೆ)ಯಾದ ಕೃಷ್ಣನಿಗೆ, ಗುರುಗಳಾದ
ಗೋವಿಂದ ಭಗವತ್ಪಾದರಿಗೆ ಮತ್ತು ಹೃದಯಾಂತರ್ಗತವಾದ ಬ್ರಹ್ಮಚೈತನ್ಯಕ್ಕೆ ತಮ್ಮ ನಮನಗಳನ್ನು ಸಲ್ಲಿಸಲು
ಮೂರು ಬಾರಿ ಭಜಗೋವಿಂದಮ್ ಬಳಸಿದ್ದಾರೆ
ಎನ್ನಬಹುದು. ಲೌಕಿಕಜ್ಞಾನದ ಬಗ್ಗೆ ನಮ್ಮಲ್ಲಿರುವ ಸಾಧ್ಯಸಾಧಕದ ಅವಿವೇಕದ ಮೋಹವನ್ನು ಹೋಗಲಾಡಿಸಿ, ಅಪರಾವಿದ್ಯೆಯನ್ನು ಪರಾವಿದ್ಯೆಗೆ ಪೂರಕವಾಗುವಂತೆ ಬಳಸಿಕೊಂಡು 'ಮೋಹದಿಂದ ಮೋಕ್ಷದೆಡೆಗೆ ಸಾಗಲು ಪ್ರಯತ್ನಿಸೋಣ.
No comments:
Post a Comment