🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 5 (Bhajagovindam - Sloka 5)

ದೇಹದ ಹಲವಾರು ಅಂಗಾಂಗಗಳಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ ಸ್ಥೂಲಕಾಯಿಗಳಾಗಿ ಹಲವಾರು ದೈಹಿಕ ಖಾಯಿಲೆಗಳಿಗೆ ತುತ್ತಾಗುವುದನ್ನು ನಾವೆಲ್ಲರೂ ಕಂಡಿದ್ದೇವೆ. ಸಂದರ್ಭದಲ್ಲಿ ವೈದ್ಯರು ಔಷಧಿಯೊಂದಿಗೆ ದೇಹದ ಕೆಲವು ಭಾಗಗಳಲ್ಲಿರುವ ಕೊಬ್ಬನ್ನು ಕರಗಿಸಲು ವಿಶೇಷ  ವ್ಯಾಯಾಮಗಳನ್ನು ತಿಳಿಸುತ್ತಾರೆ. ಔಷಧ ಸೇವನೆಯೊಂದಿಗೆ ವ್ಯಾಯಾಮಗಳ ಉದ್ದೇಶವನ್ನು ತಿಳಿದು, ನಿಷ್ಠೆಯಿಂದ ಸತತ ಅಭ್ಯಾಸ ಮಾಡುವುದರಿಂದ ಆರೋಗ್ಯವೆಂಬ ಭಾಗ್ಯ ನಮ್ಮದಾಗುತ್ತದೆ. ಹಾಗೇ ಆದಿ ಶಂಕರಾಚಾರ್ಯರು ನಮ್ಮಲ್ಲಿರುವ ಮೋಹವನ್ನು ಹೋಗಲಾಡಿಸಲು ಆತ್ಮಜ್ಞಾನವೆಂಬ ಔಷಧವನ್ನು ಕೊಡುವವರಿದ್ದು ಅದರ ಪೂರ್ಣಪ್ರಯೋಜನ ಪಡೆಯಲು ಸಹಕಾರಿಯಾಗಿ ಹಲವು ವಿಶೇಷ ಅಭ್ಯಾಸಗಳನ್ನು ಭಜಗೋವಿಂದಮ್ ಗ್ರಂಥದಲ್ಲಿ ತಿಳಿಸುತ್ತಿದ್ದಾರೆ

ಈವರೆಗೆ ವಿದ್ಯೆ, ಅರ್ಥ, ಕಾಮ ಮತ್ತು ಜೀವನದ ಬಗ್ಗೆ ಇರುವ ಮೋಹವನ್ನು ಹೋಗಲಾಡಿಸುವ ಮಾರ್ಗವನ್ನು ಸೂಚಿಸಿ, ಈಗ ನಮ್ಮೆಲ್ಲರಲ್ಲೂ ಆಳವಾಗಿ ಬೇರೂರಿರುವ ಪ್ರೀತಿ, ತದ್ವಿಷಯಕವಾದ ಮೋಹವನ್ನು ಹೋಗಲಾಡಿಸಲು ಮುದ್ಗರಪ್ರಹಾರವನ್ನು ಮಾಡುತ್ತಿದ್ದಾರೆ.

 

ಯಾವದ್ವಿತ್ತೋಪಾರ್ಜನಸಕ್ತಃ

ತಾವನ್ನಿಜಪರಿವಾರೋ ರಕ್ತಃ

ಪಶ್ಚಾಜ್ಜೀವತಿ ಜರ್ಜರದೇಹೇ

ವಾರ್ತಾಂ ಕೋಽಪಿ ಪೃಚ್ಛತಿ ಗೇಹೇ ||5

 

ಪ್ರಾಪಂಚಿಕ ಪ್ರೀತಿಯೆಲ್ಲವೂ ಸಾಪೇಕ್ಷಿಕವಾಗಿದ್ದು, ಜಾಹೀರಾತುಗಳಲ್ಲಿ ತೋರಿಸುವ  mark(conditions apply) ನೊಂದಿಗೆ ಕೂಡಿರುತ್ತದೆ. ಎಲ್ಲಿಯವರೆಗೆ ನೀವು ಇನ್ನೊಬ್ಬರಿಗೆ ಯಾವುದಾದರೂ ರೀತಿಯಲ್ಲಿ ಉಪಯೋಗವಾಗಿರುವಿರೋ, ಅಲ್ಲಿಯವರೆಗೆ ಅವರ ಪ್ರೀತಿಯಿರುತ್ತದೆ. ಏಕೆಂದರೆ - ಇದರಿಂದ ನನಗೇನು ಲಾಭ?(What's in it for me?) ಅಥವಾ ನನಗೇನೂ ಸಿಗದಿದ್ದಾಗ ನಾನೇಕೆ ಏನಾದರೂ ಮಾಡಲಿ?(Why do anything for nothing?) ಎಂಬ ಅಪೇಕ್ಷೆಗಳ ಷರತ್ತುಗಳ ಮೇಲೆ ಎಲ್ಲಾ ಪ್ರಾಪಂಚಿಕ ಪ್ರೀತಿ ನಿಂತಿರುವುದು. ನಿಮ್ಮಿಂದಾಗುವ ಉಪಯೋಗ - ದೈಹಿಕ, ಮಾನಸಿಕ, ಆರ್ಥಿಕ ಅಥವಾ ಮತ್ತಾವುದೇ ರೀತಿಯಿರಬಹುದು. ಸಂದರ್ಭದಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ಮೈತ್ರೇಯಿಗೆ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಆತ್ಮನಸ್ತು ಕಾಮಾಯ ಸರ್ವಂ ಪ್ರಿಯಂ ಭವತಿ (ಬೃ. - 2.4.5) ಎಂದು ಉಪದೇಶಿಸಿದ ಮಾತು ಸ್ಮೃತ್ಯರ್ಹ.

 

ಯಾವತ್ .. ತಾವತ್ ಪರಿವಾರೋ ರಕ್ತ: - ಎಲ್ಲಿಯವರೆಗೆ ವ್ಯಕ್ತಿ ಲಾಭದಾಯಕರಾಗಿರುವನೋ, ಅಲ್ಲಿಯವರೆಗೆ ಮಾತ್ರ ಪರಿವಾರದವರ ಪ್ರೀತಿಯಿರುತ್ತದೆ. ಇದನ್ನು ಕೇಳಿದ ಕ್ಷಣ ವಿಚಾರ ಸಮಂಜಸವಲ್ಲ ಎನ್ನಿಸಬಹುದು. ಆದರೆ, ಸ್ವಲ್ಪ ಯೋಚಿಸಿದಾಗ ಹಾಗೂ ಮನೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಸೂಕ್ಷ್ಮಗ್ರಾಹಿಗೆ ಇದೇ ಸತ್ಯವೆಂದು ವೇದ್ಯವಾಗುತ್ತದೆ. ನಾವು ಎಷ್ಟು ಹೆಚ್ಚು ಉಪಯುಕ್ತರಾಗಿರುತ್ತಿವೋ ಅಷ್ಟು ಹೆಚ್ಚು ಪ್ರೀತಿಯನ್ನು ತೋರಿಸುತ್ತಾರೆ. ಹಾಗೂ ನಮ್ಮ ಉಪಯುಕ್ತತೆ ಅವರಿಗೆ ಕಡಿಮೆಯಾದಂತೆಲ್ಲಾ ಪ್ರೀತಿಯೂ ಕ್ಷೀಣವಾಗುವುದನ್ನು ಕಾಣುತ್ತೇವೆ. ಹೇಗೆ? ಇಷ್ಟು ದಿನ ಪ್ರೀತಿಸುತ್ತಿದ್ದ ಜನರೇ, ಈಗ ಬಳಸುವ ಭಾಷೆ, ಪದಗಳು, ನಮ್ಮೊಂದಿಗೆ ವರ್ತಿಸುವ ರೀತಿ, ಹಾವಭಾವ, ನಡವಳಿಕೆ, ಮುಂತಾದದ್ದನ್ನು ನಾವು ಗಮನಿಸಿಲ್ಲವೇ?

 

ಯಾವತ್ ವಿತ್ತೋಪಾರ್ಜನಸಕ್ತಃ ಎಲ್ಲಿಯವರೆಗೆ ಧನವನ್ನು ಸಂಪಾದಿಸುವ ಆಸಕ್ತಿ(ಶಕ್ತಿ)ಯನ್ನು ಹೊಂದಿರುತ್ತಾನೋ, ಅಲ್ಲಿಯವರೆಗೆ ಮನೆಯಲ್ಲಿ , ಸಮಾಜದಲ್ಲಿ, ಬಂಧುಬಳಗದಲ್ಲಿ ಅವನಿಗೆ ತೋರುವ ಪ್ರೀತಿ, ಗೌರವ, ಮನ್ನಣೆಗೇನೂ ಕೊರತೆಯಿರುವುದಿಲ್ಲ. ಕಾಲಕಳೆದಂತೆ ವಯೋವೃದ್ಧನಾಗಿ, ಕೆಲಸದಿಂದ ನಿವೃತ್ತನಾಗಿ, ಆರ್ಥಿಕವಾಗಿ ಅವಲಂಬಿತನಾದರೆ ಅವನಿಗೆ ತೋರುವ ಪ್ರೀತಿ, ಗೌರವಗಳು ಕಡಿಮೆಯಾಗುತ್ತಾ ಹೋಗುತ್ತದೆ. ಹಣವಿದ್ದಾಗ ಬಂಧು ಬಳಗದವರು, ಸಂಬಂಧಿಕರು ಪ್ರೀತಿಯಿಂದ ಕಾಣುವುದು ಮತ್ತು ಹಣವಿಲ್ಲದಾಗ ಅವರೆಲ್ಲರ ಪ್ರೀತಿ ಕ್ಷೀಣವಾಗುವುದನ್ನು ಕಂಡರೆ ಅನ್ವಯ ವ್ಯತಿರೇಕ ನ್ಯಾಯದಂತೆ ನಮ್ಮ ಪ್ರಾಪಂಚಿಕ ಪ್ರೀತಿಯ ಹಣೆಬರಹ ಗೊತ್ತಾಗುತ್ತದೆ. ಇಲ್ಲಿ ಧನವೆಂಬುದು ಉಪಲಕ್ಷಣವಷ್ಟೇ. ಇದರ ಜಾಗದಲ್ಲಿ ನಮ್ಮ ಆರೋಗ್ಯವನ್ನು, ದೈಹಿಕ ಶಕ್ತಿಯನ್ನು, ಮಾನಸಿಕ ಸ್ಥಿರತೆಯನ್ನು, ಸಾಮಾಜಿಕ ಗೌರವವನ್ನು ಸೇರಿಸಿಕೊಳ್ಳಬಹುದು.

 

ಪಶ್ಚಾಜ್ಜೀವತಿ ಜರ್ಜರದೇಹೇ - ಜೀವಿಯ ದೇಹವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಜರ್ಜರ ಪರಿಸ್ಥಿತಿಗೆ ಬಂದ ನಂತರ, ಪ್ರಾಪಂಚಿಕ ಪ್ರೀತಿಯ ಕರಾಳಮುಖದರ್ಶನವಾಗುವುದು ಖಂಡಿತ. ದುಡಿಯದಿರುವ ವ್ಯಕ್ತಿ, ಅನಾರೋಗ್ಯದಿಂದ ಹಾಸಿಗೆ ಹಿಡಿದನೆಂದರೆ ಅವನಿಗೆ ತೋರಿಸುವ ಪ್ರೀತಿಯ ರೀತಿಯೇ ಬೇರೆ. ಅತ್ಯಂತ ಪ್ರೀತಿಮಾಡುತ್ತಿದ್ದ, ವ್ಯಕ್ತಿಯಿಲ್ಲದೇ ಬದುಕಿರಲಾರೆ ಎನ್ನುತ್ತಿದ್ದ ಮನೆಯವರೇ ಇವನನ್ನು ನೋಡಿಕೊಳ್ಳಲಾಗದೇ, "ದೇವರೇ, ಇವರನ್ನು ಬೇಗ ನಿನ್ನ ಬಳಿಗೆ ಕರೆದುಕೋ" ಎಂದು ಪ್ರಾರ್ಥನೆ ಮಾಡುವುದು, ಹರಕೆ ಹೊತ್ತುಕೊಳ್ಳುವುದನ್ನು ಕಂಡಾಗ ಮನೋವಿದ್ರಾಕವಾಗುವುದಿಲ್ಲವೇ!! 

 

ವಾರ್ತಾಂ ಕೋಽಪಿ ಪೃಚ್ಛತಿ ಗೇಹೇ - ಮನೆಯವರೇ ಅವನ ಸಮಾಚಾರವನ್ನು ಕೇಳುವುದಿಲ್ಲ. ಸಾಮಾನ್ಯವಾಗಿ ಯಾವುದೇ ವಯೋವೃದ್ಧರನ್ನು ವಿಚಾರಿಸಿ ನೋಡಿ. ಅವರೆಲ್ಲರ ಕಥೆಯೂ ಹೀಗೇ ಇರುತ್ತದೆ. ಮನೆಯಲ್ಲಿ ನಿರ್ಧಾರಗಳಿಗೆ ಪರಿಗಣಿಸದಿರುವುದು, ಅವರ ಸಲಹೆಗಳನ್ನು ಕಡೆಗಣಿಸುವುದು, ಯೋಗಕ್ಷೇಮವನ್ನೂ ವಿಚಾರಿಸದಿರುವುದು, ಮುಖಕೊಟ್ಟು ಮಾತನಾಡದಿರುವುದು ಹೀಗೇ ಅವರ ನೋವಿನಕಥೆಗಳು ಒಂದೇ ಎರಡೇ! ಇನ್ನೂ ಹಲವರು, "ತಿಂಡಿ ಆಯಿತಾ, ಕಾಫಿ ಬೇಕಾ, ಬದುಕಿದ್ದೀಯಾ, ಸತ್ತೆಯಾ ಎಂದು ಕೂಡ ಕೇಳುವವರಿಲ್ಲ" ಎಂದಾಗ ಕರುಳು ಹಿಂಡಿದಂತಾಗುತ್ತದೆ

 

ಇದು ಇಂದಿನ ಪರಿಸ್ಥಿತಿಯಷ್ಟೇ ಅಲ್ಲ; ಶಂಕರಾಚಾರ್ಯರ ಕಾಲದಲ್ಲೂ ಹೀಗಿತ್ತು. ನಮಗೆ ಅರ್ಥವಾಗಬೇಕಾದ ವಾಸ್ತವಿಕ ಸತ್ಯವೆಂದರೆಪ್ರಾಪಂಚಿಕ ಪ್ರೀತಿಯ ಮೇಲೆ ನಮಗಿರುವ ಮೋಹ - ಮೋಹದಿಂದ ನಮಗೆ  ವಾಸ್ತವಕ್ಕೆ ದೂರವಾದ ಅಪೇಕ್ಷೆಗಳು - ಅಪೇಕ್ಷೆಗಳು ಪೂರೈಸದಿದ್ದಾಗ ನಿರಾಶೆ - ನಿರಾಶೆಯಿಂದ ಮಾನಸಿಕ ಖಿನ್ನತೆ ಮತ್ತು ದುಃಖ. ಇದೇ ನಮ್ಮೆಲ್ಲರ ಜನ್ಮಜನ್ಮಾಂತರದ ಸಂಸಾರಚಕ್ರವಾಗಿದೆಪ್ರೀತಿಯ ಮೇಲಿನ ಮೋಹದಿಂದಲೇ ವಿವಾಹದಲ್ಲಿ ಅಪನಂಬಿಕೆ, ವಿಚ್ಚೇದನ ಮುಂತಾದ ವಿದ್ಯಮಾನಗಳು ಹೆಚ್ಚಾಗುತ್ತಿರುವುದು

ಹಾಗಾದರೆ ಪ್ರೀತಿಯೆನ್ನುವುದು ಸುಳ್ಳೇ? ನಿಜವಾದ ಪ್ರೀತಿಯಿಲ್ಲವೇ? ಸಂಬಂಧಗಳನ್ನು ಹೇಗೆ ನಿರ್ವಹಿಸಬೇಕು? ಎಂಬ ಪ್ರಶ್ನೆಗಳು ಏಳುವುದು ಸಹಜ. ಸಂಬಂಧಗಳ ಉದ್ದೇಶವಿರುವುದೇ ನಮ್ಮನ್ನು ಪ್ರಬುದ್ಧರನ್ನಾಗಿ ಮಾಡಲು ಮತ್ತು ಬಂಧನದ ಅವಲಂಬನೆಯಿಂದ ಮುಕ್ತರಾಗಲು ಎಂದು ಅರಿಯುವುದೇ ಮೊಟ್ಟ ಮೊದಲ ಹೆಜ್ಜೆಯಾಗಿರುತ್ತದೆ. ಸಾಪೇಕ್ಷಿಕ ಪ್ರಾಪಂಚಿಕ ಪ್ರೀತಿಗೂ ನಿರಪೇಕ್ಷಿಕ ಅಲೌಕಿಕ ಪ್ರೇಮಕ್ಕೂ ವ್ಯತ್ಯಾಸವನ್ನು ತಿಳಿಯುವುದು ಮುಂದಿನ ಹೆಜ್ಜೆ.  

 

Table format

ಪ್ರಾಪಂಚಿಕ ಪ್ರೀತಿ : Attachment 

1) ಯಾವುದೋ ಕಾರಣದಿಂದಿರುತ್ತದೆ (because of) 

2) ಹಕ್ಕನ್ನು ಚಲಾಯಿಸಲು ಪ್ರೇರಿಸುತ್ತದೆ (rights driven)

 3) ಸ್ವಾರ್ಥಕೇಂದ್ರಿತ (Self-centered) 

4) ಮತ್ತೊಬ್ಬರಿಗೆ ಬಂದೀಖಾನೆಯಲ್ಲಿರುವ ಭಾವವಿರುತ್ತದೆ(Binding)

 

ಅಲೌಕಿಕ ಪ್ರೇಮ -  Love 

1) ನಿರಪೇಕ್ಷ ಮತ್ತು ನಿಷ್ಕಾರಣವಾಗಿರುತ್ತದೆ(Unconditional) 

2) ಜವಾಬ್ದಾರಿ ಮತ್ತು ಕರ್ತವ್ಯಭಾವದ ಜಾಗೃತಿ ಮೂಡಿಸುತ್ತದೆ(Duty oriented) 

3) ನಿಸ್ವಾರ್ಥವಾಗಿದ್ದು ಪರರ ಹಿತವನ್ನು ಬಯಸುವುದಾಗಿರುತ್ತದೆ (You first, me next) 

4) ಬಂಧನದಿಂದ ಮುಕ್ತಿಯ ಕಡೆಗೆ ಮಾರ್ಗವನ್ನು ಸೂಚಿಸುತ್ತದೆ(non-binding)

 

ಆದ್ದರಿಂದ, ನಿಜವಾದ ಪ್ರೇಮವೆಂಬುದು ಭಗವಂತನಲ್ಲಿ, ಜ್ಞಾನಿಗಳಲ್ಲಿ, ಗುರುಗಳಲ್ಲಿ, ಸಂತರಲ್ಲಿ ಮಾತ್ರವಿರಲು ಸಾಧ್ಯವಾದ್ದರಿಂದ ನಮ್ಮ ಪ್ರೇಮದ ಹುಡುಕಾಟದ ದಿಕ್ಕನ್ನು ಬದಲಾಯಿಸುವುದು ಉತ್ತಮ.

 

ಸಾರಾಂಶ : ನಿರಪೇಕ್ಷ, ನಿಷ್ಕಾರಣ ಪ್ರೀತಿಯನ್ನು ಪ್ರಾಪಂಚಿಕರಲ್ಲಿ ಹುಡುಕುವುದೇ ಮೂರ್ಖತನ. ಹೆಂಡತಿ, ಮಕ್ಕಳು, ತಂದೆ, ತಾಯಿಯ ಪ್ರೀತಿಯನ್ನೇ ಕೊನೆಯೆಂದು ಭಾವಿಸಿ, ದರೋಡೆ ಮಾಡಿಯಾದರೂ ಅವರ ಪೋಷಣೆಯನ್ನು ಮಾಡಬೇಕೆಂದು ತಿಳಿದು, ಮೋಹಕ್ಕೊಳಗಾಗಿ ವ್ಯರ್ಥವಾಗಿ ಜೀವನ ನಡೆಸುತ್ತಿದ್ದ ಬೇಡ, ಗುರುವಿನ ಆದೇಶದಂತೆ ಭಗವಂತನ ನಿತ್ಯಪ್ರೇಮವನ್ನು ತನ್ನ ಹೃದಯದಲ್ಲೇ ಸಾಕ್ಷಾತ್ಕರಿಸಿಕೊಂಡು ವಾಲ್ಮೀಕಿಮಹರ್ಷಿಗಳಾದ ಕಥೆ ನಮಗೆ ಆದರ್ಶವಾಗಬೇಕುಸಾಧಕರಾದ ನಾವುಗಳೂ ಕೂಡ ನಮ್ಮ ಪ್ರೀತಿಯನ್ನು attachment ಎನ್ನುವ ವಿಷದಿಂದ ಬೇರ್ಪಡಿಸಿ, ನಮ್ಮೆಲ್ಲಾ ಪ್ರಾಪಂಚಿಕ ಸಂಬಂಧಗಳನ್ನೂ ಆಧ್ಯಾತ್ಮೀಕರಿಸಿ ಅಂತರಂಗದಿಂದ ವಿಕಾಸಹೊಂದುತ್ತಾ(ಸಂತರಾಗಿ), ಸುತ್ತಮುತ್ತಿನವರಿಗೆ ನಿಜವಾದ ಪ್ರೀತಿಯನ್ನು(Love) ಸಿಂಪಡಿಸಲು ಪ್ರಯತ್ನಿಸುತ್ತಾ, ಆತ್ಮಜ್ಞಾನಿಗಳಾಗಿ ಮೋಹದಿಂದ ಮೋಕ್ಷದೆಡೆಗೆ ನಡೆಯೋಣ - ಭಜಗೋವಿಂದಮ್.





1 comment:

  1. ವಾಸ್ತವದ ಚಿತ್ರಣ ಸರಿಯಾಗಿಯೇ ಅರ್ಥವಾಗುವಂತೆ ತಿಳಿಸಿದ್ದೀರಿ.
    ನೂರಕ್ಕೆ ನೂರರಷ್ಟು ಸತ್ಯ.

    ReplyDelete