🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 6 (Bhajagovindam - Sloka 6)

 ಆದಿ ಶಂಕರಾಚಾರ್ಯರು ನಮ್ಮಲ್ಲಿರುವ ಮೋಹವನ್ನು ತೊಲಗಿಸಲು ಮುದ್ಗರದಿಂದ ಪ್ರಹಾರಮಾಡುತ್ತಾ, ನಾವು ಯಾವುದನ್ನು ಸತ್ಯವೆಂದು ನಂಬಿ ಅವಲಂಬಿಸಿದ್ದೇವೋ, ಅವುಗಳ ನೈಜತೆಯನ್ನು ಬಯಲು ಮಾಡಿ, ಇಹ-ಪರ ಜೀವನಕ್ಕೆ ನಂಬಬಹುದಾದ ಏಕೈಕ ಆಶ್ರಯವೆಂದರೆ, ಅದು ಆತ್ಮಸ್ವರೂಪವೇ ಆದ ಭಗವಂತನೆಂದು ತೋರಿಸಿಕೊಟ್ಟಿದ್ದಾರೆ. ವೈದ್ಯರು ರೋಗಿಯ ಆರೋಗ್ಯಕ್ಕಾಗಿ ಸರ್ವಪ್ರಯತ್ನಗಳನ್ನೂ ಮಾಡುವರು ಮತ್ತು ಔಷಧ ಕಹಿಯಿದ್ದರೂ ನೀಡುವರು. ಒಬ್ಬೊಬ್ಬರ ದೇಹಕ್ಕೆ ಔಷಧದ high dosage ಅವಶ್ಯವಿದ್ದು, ಅದನ್ನು ನೀಡುವುದೂ ವೈದ್ಯರ ಜವಾಬ್ದಾರಿಯಾಗುತ್ತದೆ. ಹಾಗೇ, ಸತ್ಯ ಕಹಿಯೆನಿಸಿದರೂ ಸತ್ಯವನ್ನೇ ಉಪದೇಶಿಸಬೇಕಾದ್ದು ಆಚಾರ್ಯರ ಕರ್ತವ್ಯ. ಹಿಂದಿನ ಶ್ಲೋಕದಲ್ಲಿ ಪ್ರಾಪಂಚಿಕ ಪ್ರೀತಿಯು ಹೇಗೆ ಸಾಪೇಕ್ಷಿಕವಾಗಿದ್ದು, ಎಲ್ಲಿಯವರೆಗೆ ನಾವು ಉಪಯುಕ್ತರಾಗಿರುತ್ತೇವೋ ಅಲ್ಲಿಯವರೆಗೆ ಪ್ರೀತಿಯಿರುತ್ತದೆ ಎಂದು ತಿಳಿಸಿದ್ದರು. ನಮ್ಮಲ್ಲಿ ಹಲವರು ತಾವು ಅದೃಷ್ಟವಂತರೆಂದು, ತಮ್ಮ ಕುಟುಂಬದವರು ಹಾಗಿಲ್ಲವೆಂದು ಭಾವಿಸಬಹುದು. ಅಂಥವರಿಗೆ high dosage ಔಷಧವನ್ನು ಕೊಡಲು ಆಚಾರ್ಯರು ಮುಂದಿನ ಶ್ಲೋಕವನ್ನು ಪ್ರತಿಪಾದಿಸುತ್ತಿದ್ದಾರೆ.

 

ಯಾವತ್ಪವನೋ ನಿವಸತಿ ದೇಹೇ

ತಾವತ್ಪೃಚ್ಛತಿ ಕುಶಲಂ ಗೇಹೇ

ಗತವತಿ ವಾಯೌ ದೇಹಾಪಾಯೇ

ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ 6  ||

 

ಮನುಷ್ಯನ ಇಡೀ ಜೀವನದ ಕಾರ್ಯಗಳನ್ನು ಗಮನಿಸಿದರೆ, ಅದರ ಬಹುಭಾಗ ದೇಹದ ರಕ್ಷಣೆಗಾಗಿ, ಚಿಕಿತ್ಸೆಗಾಗಿ, ಪೋಷಣೆಗಾಗಿ ಮತ್ತು ಆರೈಕೆಗಾಗಿಯೇ ವಿನಿಯೋಗವಾಗುತ್ತಿದೆ. ಇಷ್ಟೆಲ್ಲಾ ಆರೈಕೆಯ ನಂತರವಾದರೂ ದೇಹ ನಮ್ಮಿಷ್ಟದಂತಿರುತ್ತದೋ? ಇಲ್ಲ. ಅದಕ್ಕಾಗೇ ಅಲ್ಲವೇ ಇನ್ನಷ್ಟು, ಮತ್ತಷ್ಟು ಮಾಡುವುದು. ಕೆಲವರು ದೇಹದ ವಯೋಸಹಜವಾದ ಕುಂದುಕೊರತೆಗಳನ್ನು ಮರೆಮಾಡಲು ಶ್ರಮವಹಿಸಿದರೆ, ಹಲವಾರು ಯುವಕರು make-up ಮತ್ತು show-off ಮಾಡಲು ತಮ್ಮ ಜೀವನದ ಅತ್ಯಮೂಲ್ಯ ಸಮಯ, ಶ್ರಮ ಮತ್ತು ಹಣವನ್ನು ಪೋಲುಮಾಡುತ್ತಿದ್ದಾರೆ. ಹಾಗಾದರೆ, ದೇಹವನ್ನು ಪೋಷಿಸಬಾರದೇ ಎಂಬ ಚಿಂತನೆ ಬರಬಹುದು. ಅದನ್ನು ನಿಶ್ಚಯಿಸಲು ಸ್ವಲ್ಪ ವಿಮರ್ಶೆ ಮಾಡೋಣ. ದೇಹಕ್ಕೆ ತನ್ನದೇ ಆದಂತಹ ಯಾವುದೇ ಮೌಲ್ಯವಿಲ್ಲ. ಅದಕ್ಕಿರುವ ಮೌಲ್ಯವು ಇನ್ನೊಂದರಿಂದ ಪಡೆದಿರುವ ಮೌಲ್ಯವಷ್ಟೇ. ದೇಹಕ್ಕೆ ತೋರಿಸುವ ಪಾಲನೆ, ಪೋಷಣೆ, ಗೌರವ, ಮನ್ನಣೆ, ಪ್ರೀತಿ ಮುಂತಾದವು - ದೇಹಕ್ಕೋ ಅಥವಾ ದೇಹದ ಒಳಗಿದ್ದು ಸಚೇತನಗೊಳಿಸುವ ಚೈತನ್ಯಕ್ಕೋ? ಯೋಚಿಸಿ

 

ವಿಷಯವನ್ನು ತಿಳಿಸಲು ಪ್ರಶ್ನೋಪನಿಷತ್ತಿನಲ್ಲಿ ಕಥೆಯೊಂದರ ಪ್ರಸ್ತಾಪವಿದೆ. ಒಮ್ಮೆ ದೇಹದ ಬೇರೆ ಬೇರೆ ಇಂದ್ರಿಯಗಳಲ್ಲಿ ತಾವೇ ಶ್ರೇಷ್ಠರೆಂಬ ಅಭಿಮಾನ ಬಂದಿತಂತೆ. ಎಲ್ಲ ಇಂದ್ರಿಯಗಳೂ ತಮ್ಮ ತಮ್ಮ ಕೀರ್ತಿಪ್ರತಾಪಗಳನ್ನು ಹೇಳಿಕೊಳ್ಳುತ್ತಾ, ತಾವಿಲ್ಲದಿದ್ದರೆ ಜೀವಕ್ಕಾಗುವ ಕಷ್ಟವನ್ನು ಪ್ರಾಯೋಗಿಕವಾಗಿ ತೋರಿಸುತ್ತಿದ್ದವು. ಎಲ್ಲರ ಸರದಿ ಮುಗಿದ ನಂತರ, ಶಾಂತವಾಗಿದ್ದ ಪ್ರಾಣವಾಯು ದೇಹದಿಂದ ಹೊರಡಲು ಮುಂದಾದಾಗ ಸರ್ವೆನ್ದ್ರಿಯಗಳೂ ತಮ್ಮ ಶಕ್ತಿ ಕಳೆದುಕೊಂಡು ಜೀವಿಯಿಂದ ಹೊರಟು ಪ್ರಾಣವನ್ನೇ ಹಿಂಬಾಲಿಸುವಂತಾಯಿತು. ಪ್ರಾಣದ ಶ್ರೇಷ್ಠತೆ ಇಷ್ಟಾದರೆ, ಪ್ರಾಣಸ್ಯ ಪ್ರಾಣ: (ಕೇನ ಉಪನಿಷತ್ತು 1.2) ಆದ ಚೈತನ್ಯದ ಶ್ರೇಷ್ಠತೆ ಹೇಳತೀರದು.

 

ಯಾವತ್ಪವನೋ ನಿವಸತಿ ದೇಹೇ ತಾವತ್ಪೃಚ್ಛತಿ ಕುಶಲಂ ಗೇಹೇ - ಎಲ್ಲಿಯವರೆಗೆ ದೇಹದಲ್ಲಿ ಪ್ರಾಣತತ್ತ್ವವು ಇರುವುದೋ, ಅಲ್ಲಿಯವರೆಗೆ ಮನೆಯಲ್ಲಿ ಕುಶಲಸಮಾಚಾರಗಳನ್ನು ವಿಚಾರಿಸುತ್ತಾರೆ. ಹೌದಲ್ಲವೇ!! ಮನೆಯವರ ಪ್ರೀತಿ, ಅಕ್ಕರೆ, ಸೇವೆ ಎಲ್ಲವೂ ದೇಹದಲ್ಲಿ ಪ್ರಾಣವಿರುವವರೆಗೆ ಮಾತ್ರ. ಅಲ್ಲಿಯವರೆಗೆ ದೇಹವೇ ಸರ್ವಸ್ವವೆಂದು ತಿಳಿದು ಪ್ರೀತಿಸುವುದೇನು, ಗೌರವಿಸುವುದೇನು, ಸಂರಕ್ಷಣೆಗೆ ತೋರಿಸುವ ಕಾಳಜಿಯು ನಮಗೆಲ್ಲಾ ತಿಳಿದೇ ಇದೆ

 

ಗತವತಿ ವಾಯೌ ದೇಹಾಪಾಯೇ - ದೇಹದಿಂದ ಪ್ರಾಣಪಕ್ಷಿಯು(ಜೀವ) ಹೊರಟುಹೋದಾಗ, ಸುಂದರ, ಶ್ರೇಷ್ಠ, ಅತ್ಯುತ್ತಮವೆಂದು, ದಿವ್ಯವೆಂದು ಪರಿಗಣಿಸಲ್ಪಿಟ್ಟಿದ್ದ ಶರೀರ, ಕುರೂಪವಾಗಿ, ನಿಕೃಷ್ಟವಾಗಿ, ಅಶೌಚವಾಗಿ, ಹೆಣವಾಗಿ ಬಿದ್ದಿರುತ್ತದೆ. ಇಲ್ಲಿಯವರೆಗೆ ಅವನು/ಅವಳು ಎಂದು ಸಂಬೋಧಿಸುತ್ತಿದ್ದ ದೇಹವನ್ನು ಅದು/ಇದು ಎಂದು ಕರೆಯುತ್ತಾರೆ. ಹಲವಾರು ವಸ್ತುಗಳಿಂದ, ಸುಗಂಧ ದ್ರವ್ಯಗಳಿಂದ ಅಲಂಕರಿಸುತ್ತಿದ್ದ ದೇಹವನ್ನು ice pack ಮಾಡಿ, ದುರ್ವಾಸನೆ ಹರಡದಂತೆ ಸಾಮ್ರಾಣಿ ಹೊಗೆ ಹಾಕುತ್ತಾರೆ. ಜೀವಂತವಿದ್ದ ಮಹಾವ್ಯಕ್ತಿಯನ್ನು ಭೇಟಿಮಾಡಲು ಹೋಗುವಾಗ ಸ್ನಾನಮಾಡಿ ಹೋಗುತ್ತಿದ್ದ ಜನ, ಈಗ 'ಇದನ್ನು' ನೋಡಿ, ಮನೆಗೆ ಹೋಗಿ ಸ್ನಾನಮಾಡುತ್ತಾರೆ! ಹೀಗಾದಾಗ ಅಚ್ಚುಮೆಚ್ಚಿನ ಹತ್ತಿರದ ಸಂಬಂಧಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ?

 

ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ - ವ್ಯಕ್ತಿಯ ದೇಹವನ್ನು ಕಂಡು ಮಡದಿಯೂ ಕೂಡ ಭಯಭೀತಿ ಹೊಂದುತ್ತಾಳೆ. ಇದನ್ನು ತಿಳಿಸಲು ರಾಮಕೃಷ್ಣ ಪರಮಹಂಸರು ಒಂದು ಕಥೆ ಹೇಳುತ್ತಾರೆ - ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ಅತಿಯಾಗಿ ಅಂಟಿಕೊಂಡಿರುವುದನ್ನು ಕಂಡು ಗುರುಗಳು ಅವನಿಗೆ ಪ್ರಾಪಂಚಿಕ ಪ್ರೀತಿಯ ಸತ್ಯವನ್ನು ತಿಳಿಸಿದರು. ವ್ಯಕ್ತಿ ನಂಬಲಿಲ್ಲ. ಗುರುಗಳು ಒಂದು ಮೂಲಿಕೆಯನ್ನು ಶಿಷ್ಯನಿಗೆ ಸೇವಿಸಲು ಹೇಳಿದರು. ಮೂಲಿಕೆ ಸೇವಿಸಿದ ವ್ಯಕ್ತಿ ಜಗತ್ತಿಗೆ ಸತ್ತವನಂತೆ ಕಂಡರೂ, ಅವನಿಗೆ ಸುತ್ತಮುತ್ತ ನಡೆಯುವ ವಿಚಾರಗಳು ತಿಳಿಯುತ್ತಿತ್ತು. ಸತ್ತಂತಿದ್ದ ವ್ಯಕ್ತಿಯನ್ನು ಕಂಡು, "ಇವರಿಲ್ಲದ ಬದುಕು ಬದುಕೇ ಅಲ್ಲ. ದೇವರು ನನ್ನನ್ನಾದರೂ ಕರೆದುಕೊಳ್ಳಬಾರದಿತ್ತೆ" ಎಂಬ ಮಡದಿಯ ಆಕ್ರಂದನ ಮುಗಿಲನ್ನು ಮುಟ್ಟಿತ್ತು. ಅವಳ ಪ್ರೀತಿಯ ಮಾತುಗಳನ್ನು ಆಲಿಸುತ್ತಿದ್ದ ವ್ಯಕ್ತಿ ಒಳಗೊಳಗೆ ಖುಷಿಪಡುತ್ತಿದ್ದ. ಆಗ ಗುರುಗಳು ಮನೆಗೆ ಆಗಮಿಸಿದರು. ವ್ಯಕ್ತಿಯ ಮಡದಿ ಓಡಿ ಹೋಗಿ ಗುರುಗಳಿಗೆ ನಮಿಸಿ ತನ್ನ ದುಃಸ್ಥಿತಿಯನ್ನು ವಿವರಿಸಿದಳು. ಗುರುಗಳು ಯೋಚಿಸಿದಂತೆ ಮಾಡಿ, "ನಿನ್ನ ಆಯಸ್ಸನ್ನು ಕೊಡುವುದಾದರೆ, ಇವನನ್ನು ಉಳಿಸಬಲ್ಲೆ" ಎಂದಾಗ ಮಡದಿ ಭಯಭೀತಳಾಗಿ, ಹಿಂಜರಿದು, ಅಳುತ್ತಲೇ, "ಗುರುಗಳೇ, ನಾನು ನನ್ನ ಪ್ರಾಣವನ್ನು ಕೊಡಲಾರೆ. ಮಕ್ಕಳಿಗೆ ತಾಯಿಪ್ರೀತಿ ಮುಖ್ಯವಲ್ಲವೇ!" ಎಂದು ನಿರಾಕರಿಸಿದಳು. ಆಗಲೇ ವ್ಯಕ್ತಿಗೆ ಸತ್ಯದ ದರ್ಶನವಾಯಿತು. ಸತ್ತಂತಿದ್ದ ವ್ಯಕ್ತಿಯ ದೇಹದ ಕೈಕಾಲುಗಳು ಹರಡಿಕೊಂಡಿದ್ದವು. ಮಡದಿ, "ಹೆಚ್ಚು ಕಾಲ ಹೆಣವಿದ್ದರೆ ಮಕ್ಕಳು ಭಯಪಡುತ್ತಾರೆ. ಮುಂದಿನ ಕಾರ್ಯವನ್ನು ಮಾಡೋಣ" ಎಂದಳು.  'ಅದನ್ನು' ಹೊರಗೆ ತೆಗೆದುಕೊಂಡು ಹೋಗಲು ಹೊರಟಾಗ, ಬಾಗಿಲು ಸಣ್ಣದಾಗಿದ್ದರಿಂದ ಗುರುಗಳು, "ಬಾಗಿಲ ಬಳಿಯಿರುವ ಗೋಡೆಯನ್ನು ಒಡೆದರೆ ಸೂಕ್ತ" ಎಂದರು. ಅದಕ್ಕೆ ಮಡದಿ ಓಡಿಬಂದು, "ಪತಿಯನ್ನೇನೋ ಕಳೆದುಕೊಂಡೆ. ಈಗ ಮನೆಯನ್ನೂ ಕಳೆದುಕೋ ಎನ್ನುವಿರಾ? ಶವದ ಕೈಕಾಲುಗಳನ್ನು ನಿಧಾನವಾಗಿ ಕಡಿದು ಸ್ಮಶಾನಕ್ಕೆ ಕೊಂಡೊಯ್ಯಿರಿ" ಎಂದಾಗ ಸತ್ತಂತಿದ್ದ ವ್ಯಕ್ತಿ ಎದ್ದು ಪ್ರಾಪಂಚಿಕ ಪ್ರೀತಿಯ ಸತ್ಯತೆ ತಿಳಿದು ವೈರಾಗ್ಯವನ್ನು ಹೊಂದಿದ

 

ಹಾಗಾದರೆ ಸಮಸ್ಯೆ ಏನು?  ನಮಗೆ ದೇಹದ ಬಗ್ಗೆ ಇರುವ ತಪ್ಪುತಿಳಿವಳಿಕೆ ಮತ್ತು ಮೋಹ

1) ದೇಹವೇ ನಾನು ಮತ್ತು ದೇಹವೇ ಸರ್ವಸ್ವವೆಂದು ಭಾವಿಸಿ ಜೀವನದ ಪರಮೋನ್ನತ ಗುರಿ ದೇಹಪೋಷಣೆ, ಪಾಲನೆ ಮತ್ತು ದೇಹದ ಪೂಜೆ ಮಾಡುವ ರಾಕ್ಷಸೀಪ್ರವೃತ್ತಿ

2) ದೇಹವನ್ನು ಉಪಯೋಗಕ್ಕಿಲ್ಲದ್ದೆಂದು ನಿಕೃಷ್ಟವಾಗಿ ಕಂಡು, ಅಧ್ಯಾತ್ಮಿಕತೆಯ ಹೆಸರಲ್ಲಿ ದೇಹವನ್ನು ಚಿತ್ರಹಿಂಸೆಗೆ ಒಳಪಡಿಸುವುದು (*ಕರ್ಷಯಂತ: ಶರೀರಸ್ಥಮ್.. ಭಗವದ್ಗೀತೆ*)

3) ಸಂಬಂಧಗಳನ್ನು ದೈಹಿಕ ಸ್ತರಕ್ಕಷ್ಟೇ ಮುಡಿಪಾಗಿಡುವುದು

 

ಹಾಗಾದರೆ ನಾವೇನು ಮಾಡಬೇಕು?

ಸಂಬಂಧಗಳನ್ನು ದೈಹಿಕ ಸ್ತರದಿಂದ ಆಧ್ಯಾತ್ಮಿಕ ಸ್ತರಕ್ಕೆ ಏರಿಸುವುದು

ಸತ್ತನಂತರ ನಮ್ಮೊಂದಿಗೆ ಯಾವ ವಸ್ತುಗಳಾಗಲೀ, ಸಂಬಂಧಿಕರಾಗಲೀ ಬರುವುದಿಲ್ಲ. ಆದರೆ ನಮ್ಮೊಂದಿಗೆ ನಮ್ಮ ಧರ್ಮಾಧರ್ಮಗಳೇ ಬರುವುದು ಎಂಬುದನ್ನು ಅರಿತು, ನಮ್ಮ ಜೀವನವನ್ನು ವಿವೇಕದಿಂದ ನಡೆಸುವುದು

ದೇಹದ ಮೇಲೆ ಅತೀ ಮೋಹವನ್ನೂ ಇಡದೆ, ತಾತ್ಸಾರವನ್ನೂ ಮಾಡದೆ ಮಧ್ಯಪಂಥವನ್ನು ಅನುಸರಿಸುವುದು

ದೇಹ ಒಂದು ಅತ್ಯುತ್ಕೃಷ್ಟವಾದ ಉಪಕರಣ. ದೇಹವೆಂಬುದು ದೇವರು ನಮಗೆ ಕೊಟ್ಟಿರುವ ಅದ್ಭುತ ಕೊಡುಗೆ. ಅದರ ಪಾಲನೆ, ಪೋಷಣೆ, ಧಾರಣೆಯ ಉದ್ದೇಶವಿರುವುದು ಧರ್ಮಾಚರಣೆ                            ( ಶರೀರಮಾದ್ಯಮ್ ಖಲು ಧರ್ಮಸಾಧನಂ - ಕುಮಾರಸಂಭವ ) ಮತ್ತು ಮೋಕ್ಷಸಾಧನೆಗೆ ಎಂದು ಅರಿತು ಜೀವನವನ್ನು ನಡೆಸುವುದು.

 

ಸಾರಾಂಶದೇಹದ ಬಗೆಗಿರುವ ಮೋಹವನ್ನು ತೊರೆದು, ದೇಹವು ಬಿದ್ದು ಶವ ಆಗುವ ಮುನ್ನ, ದೇಹವನ್ನು ಆತ್ಮಜ್ಞಾನಕ್ಕೆ ನಿಯೋಜಿಸಿ, ಶಿವೋಹಂ ಎಂದು ತಿಳಿದು ಮೋಕ್ಷದೆಡೆಗೆ ಪಯಣಿಸೋಣ - ಭಜಗೋವಿಂದಮ್.



6 comments:

  1. ನಮಸ್ಕಾರ ಗುರೂಜೀ,
    ತಮ್ಮ ಉಪನ್ಯಾಸಗಳು ನಮಗೆ ನಿಜವಾದ ಜೀವನ ನಡೆಸುವ ಮಾರ್ಗ ತಿಳಿಸುತ್ತಿವೆ ಹಾಗು ನಮ್ಮನ್ನೆಲ್ಲ ದೈವೀ ಮನುಷ್ಯರನ್ನಾಗಿ ಪರಿವರ್ತಿಸುತ್ತಿವೆ. ತಮ್ಮ ಉಪದೇಶಗಳನ್ನು ಪಾಲಿಸುವ ಉದ್ದೇಶ ಹೊಂದಿದ್ದೇನೆ. ಇಡೀ ಬ್ರಹ್ಮಾಂಡದ ಎಲ್ಲದರಲ್ಲೂ ಸಮಾನತೆ, ಏಕತೆ ಮತ್ತು ಎಲ್ಲವೂ ಪರಮಾತ್ಮನ ರೂಪ ಅನ್ನುವ ಅರಿವಿನಲ್ಲಿರುವ ಪ್ರಯತ್ನದಲ್ಲಿದ್ದೇನೆ. ದೈವೀ ಕೃಪೆಯಿಂದ ನಮ್ಮ ಈ ಆಧ್ಯಾತ್ಮಿಕ ಪ್ರಯಾಣ ಸಾಧ್ಯ ಎಂಬ ನಂಬಿಕೆ ಇದೆ. ಶಿವೋಹಂ ಶಿವೋಹಂ. ಧನ್ಯವಾದಗಳು.

    ReplyDelete
    Replies
    1. Thank you very much 🙏 Happy to see your learning spirit and sadhana.. Keep learning and continue to support us in future as well...

      Delete
  2. ಹೌದು ಗುರೂಜಿ ನೀವು ಕೊಟ್ಟ ತಿಳಿವಳಿಕೆ ಅತ್ಯಮೂಲ್ಯ ವಾದದು ನಾವು ಹಾಗೆ ಇರಲಿಕ್ಕೆ ಅನುಗ್ರಹಿಸಿ ಜಯ್ ಗುರುದೇವ್

    ReplyDelete
    Replies
    1. Thank you very much 🙏 Happy to see your learning spirit.. Hope you keep learning and continue to support us in future as well...

      Delete
  3. 🙏💐🙏💐🙏💐🙏💐🙏💐🙏💐🙏💐🙏

    ReplyDelete
    Replies
    1. Thank you very much 🙏 Keep learning and continue to support us in future as well...

      Delete