🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 8 (Bhajagovindam - Sloka 8)

 ಭಾರತದ ಸುಪ್ರಸಿದ್ಧ ಕ್ಷೇತ್ರಕ್ಕೆ ತೀರ್ಥಯಾತ್ರೆಗಾಗಿ ಒಬ್ಬ ವ್ಯಕ್ತಿ travel agency ಮೂಲಕ ಪ್ರಯಾಣದ ಯೋಜನೆ ಮಾಡಿ ಹೊರಟ. ಕ್ಷೇತ್ರಕ್ಕೆ ತೆರಳಿದ ವ್ಯಕ್ತಿ, ಸ್ಥಳದ ಮಾರುಕಟ್ಟೆಯಲ್ಲಿ ವಸ್ತುಗಳನ್ನು ಕೊಂಡುಕೊಳ್ಳುವುದರಲ್ಲಿ, ಬೀದಿಬದಿಯಲ್ಲಿರುವ ರುಚಿಕರವಾದ ತಿನಿಸುಗಳನ್ನು ಸೇವಿಸುವುದರಲ್ಲಿ, ಅಲ್ಲಿರುವ ವ್ಯಕ್ತಿಗಳ ಉಡುಗೆತೊಡುಗೆಗಳನ್ನು ಗಮನಿಸುತ್ತಿದ್ದ. ಆಗ travel agent, "ಸಮಯವಾಯಿತು. ಮರಳಿ ಊರಿಗೆ ತೆರಳೋಣ" ಎಂದು ಹೇಳಿದಾಗ ವ್ಯಕ್ತಿಗೆ ತಾನು ಬಂದ ಉದ್ದೇಶವೇ ತೀರ್ಥಯಾತ್ರೆ; ದೇವರ ದರ್ಶನವೇ ಆಗಿಲ್ಲದಿದ್ದರೂ ಹೋಗಬೇಕಲ್ಲ ಎಂದು ಪೆಚ್ಚುಮುಖದೊಂದಿಗೆ ಊರಿಗೆ ಮರಳಿದ. ನಮ್ಮಲ್ಲಿರುವ ಬಹುಪಾಲು ಜನರ ಜೀವನಶೈಲಿ ಹೀಗೇ ಎಂದು ಆದಿ ಶಂಕರಾಚಾರ್ಯರು ಹಿಂದಿನ ಶ್ಲೋಕದಲ್ಲಿ ತಿಳಿಸಿದ್ದಾರೆ. ಮಾನವ ಜೀವನದ ಉದ್ದೇಶವಾದ ಬ್ರಹ್ಮಸಾಕ್ಷಾತ್ಕಾರವನ್ನು ಮರೆತು, ಬಾಲ್ಯದಲ್ಲಿ ಆಟಿಕೆಗಳಲ್ಲಿ ಆಸಕ್ತಿ, ತಾರುಣ್ಯದಲ್ಲಿ ಸ್ತ್ರೀಪುರುಷರ ನಡುವಿನ ಪರಸ್ಪರ ಆಕರ್ಷಣೆ, ವೃದ್ಧಾಪ್ಯದಲ್ಲಿ ಹಲವಾರು ಚಿಂತೆಗಳಲ್ಲೇ ಮಗ್ನರಾಗಿ ಜೀವನವನ್ನು ವ್ಯರ್ಥವಾಗಿ ಕಳೆಯುವವರನ್ನು ಉದ್ದೇಶಿಸಿ ಹೇಳಿದ ಮಾತಾಗಿತ್ತು. ನಮ್ಮಲ್ಲಿ ಕೆಲವರು ಆಚಾರ್ಯರ ಇಂಗಿತವನ್ನು ಅರಿತು ಅಧ್ಯಾತ್ಮ ಜೀವನವನ್ನು ನಡೆಸಲು ಸಿದ್ಧರಾಗಲು ಏನು ಮಾಡಬೇಕೆಂದು ಯೋಚಿಸುತ್ತಿರುವಾಗ ಮುಂದಿನ ಶ್ಲೋಕ ನಮ್ಮ ಸಹಾಯಕ್ಕೆ ಬರುತ್ತದೆ

 

ಕಾ ತೇ ಕಾಂತಾ ಕಸ್ತೇ ಪುತ್ರಃ

ಸಂಸಾರೋಽಯಮತೀವ ವಿಚಿತ್ರಃ

ಕಸ್ಯ ತ್ವಂ ಕಃ ಕುತ ಆಯಾತಃ

ತತ್ತ್ವಂ ಚಿಂತಯ ತದಿಹ ಭ್ರಾತಃ ॥ 8|| 

 

ಸ್ವಾಮಿ ಚಿನ್ಮಯಾನಂದರು, "If you do whatever you did, you get whatever you have already got and nothing more" ಎಂದು ಹೇಳಿರುವುದನ್ನು ಸ್ಮರಿಸುವುದು ಉತ್ತಮ. ಹಲವಾರು ಜನ್ಮಗಳಿಂದ ಜಗತ್ತಿನ ವಿಷಯಗಳಲ್ಲಿ, ವಸ್ತುಗಳಲ್ಲಿ, ವ್ಯಕ್ತಿಗಳಲ್ಲಿ, ಸಂಬಂಧಗಳಲ್ಲಿ ಅತ್ಯಂತಿಕ ಸುಖವನ್ನು ಹುಡುಕಿ ಹುಡುಕಿ ಸೋತಿರುವ ನಾವು, ಇನ್ನೂ ಅದೇ ತಪ್ಪನ್ನು ಮಾಡದೆ, ಪರಮಾನಂದವನ್ನು ನಮ್ಮ ಹೃದಯಾಂತರಾಳದಲ್ಲಿ ಆತ್ಮಶೋಧನೆಯ ಮೂಲಕ ಹುಡುಕುವುದು ವಿವೇಕ.

 

ಹೇ ಭ್ರಾತ: - ವಿವೇಕಿಯಾದ ಅಣ್ಣ, ತಪ್ಪುಮಾರ್ಗದಲ್ಲಿ ನಡೆಯುತ್ತಿರುವ ತಮ್ಮನಿಗೆ ಪ್ರೀತಿಯಿಂದ ಧರ್ಮಮಾರ್ಗವನ್ನು ತಿಳಿಸುತ್ತಾನೆ. ಹಾಗೇ, ಎಲೈ ಸಹೋದರ! ಎಂದು ಆಚಾರ್ಯರು ತಮ್ಮನಂತೆ ನಮ್ಮನ್ನು ಸಂಬೋಧಿಸಿ ಸಾಧನಾಮಾರ್ಗಕ್ಕೆ ಹಚ್ಚುತ್ತಿದ್ದಾರೆ. ಭ್ರಾಂತಎಂಬ ಪಾಠಾಂತರವೂ ಇದೆ. ಜನ್ಮಜನ್ಮಾತರದಿಂದ ಮಾಡಿದ ತಪ್ಪನ್ನೇ ಮಾಡಿ ಮತ್ತೂ ಅದೇ ಜಾಡನ್ನು ಹಿಡಿದ ನಮ್ಮನ್ನು ಎಚ್ಚರಿಸಲು, "ಹೇ ಮೂರ್ಖ!" ಎಂದು ಸಂಬೋಧಿಸಿದ್ದಾರೆ ಎಂದೂ ಅರ್ಥೈಸಬಹುದು.

 

ಕಾ ತೇ ಕಾಂತಾ - 'ಯಾರು ನಿನ್ನ ಮಡದಿ?' ಎಂದು ವಿಚಾರಮಾಡು. ಕಾಂತಾ ಎಂದರೆ ಆಕರ್ಷಣೆ. ಅಯಸ್ಕಾಂತ ಎಂಬ ಪದವೂ ಇದೇ ಅರ್ಥವನ್ನು ಹೊಂದಿದ್ದು, ಮಡದಿ ಎಂಬುದು ಇಲ್ಲಿ ಉಪಲಕ್ಷಣ. ಇದು ಸತಿಪತಿಯರಿಬ್ಬರಿಗೂ ಅನ್ವಯ

ತಮ್ಮ ಇಚ್ಛೆಯಂತೆ ನಡೆಯದಿದ್ದಾಗ ಒಬ್ಬರಿಗೊಬ್ಬರು ಹೇಳುವ ಹತಾಶೆಯ ಮಾತಲ್ಲ ಇವು. ಇಲ್ಲಿ ಸ್ವಲ್ಪ ಆಳವಾಗಿ ವಿಚಾರ ಮಾಡಬೇಕು. ಇಬ್ಬರು ವ್ಯಕ್ತಿಗಳು ತಮ್ಮದೇ ಜೀವನವನ್ನು ಸಂತಸದಿಂದ ಸಾಗಿಸುತ್ತಿದ್ದು, ಹೇಗೋ ಒಬ್ಬರಿಗೊಬ್ಬರು ಪರಿಚಯವಾಗಿ, ಮದುವೆ ಎಂಬ ಸಮಾರಂಭದ ನಂತರ ಪತಿಪತ್ನಿಯರಾಗಿ ಒಬ್ಬರಿಗಾಗಿ ಮತ್ತೊಬ್ಬರು ಎಂಬ ನಿರ್ಧಾರಕ್ಕೆ ಬರುತ್ತಾರೆ. ನಂತರ ವ್ಯಕ್ತಿಯ ಜೀವನದ ಉದ್ದೇಶ ಮತ್ತು ಪ್ರೀತಿಯ ಕೇಂದ್ರವೇ ಬದಲಾಗಿಸುವ, ಒಬ್ಬರಿಲ್ಲದಿದ್ದರೆ ಮತ್ತೊಬ್ಬರು ಬದುಕುವ ಆಸೆಯನ್ನೇ ಕಳೆದುಕೊಳ್ಳುವ ಸಂಬಂಧ ಸಮ್ಯಕ್ ಬಂಧನವೇನು? ಎಂದು ವಿಚಾರಮಾಡಬೇಕು. ಯಾವುದೋ ಬೆಟ್ಟದ ಮೇಲಿರುವ ಮಾವಿನ ಮರದ ಹಣ್ಣು ಮತ್ತು ಯಾವುದೋ ಸಮುದ್ರದಲ್ಲಿದ್ದ ಉಪ್ಪು ಸೇರಿ ಒಳ್ಳೆಯ ಉಪ್ಪಿನಕಾಯಿಯಾಗಿ ರುಚಿಯಾಗುತ್ತದೆ. ಆದರೆ, ಉಪ್ಪಿಲ್ಲದೇ ಮಾವು ಹಾಗೂ ಮಾವಿಲ್ಲದೇ ಉಪ್ಪು ಮುಂಚೆಯೂ ಇತ್ತು, ಮುಂದೆಯೂ ಇರಬಹುದು ಮತ್ತು ತಮ್ಮ ಅಸ್ತಿತ್ವದ ಪ್ರಯೋಜನವನ್ನು ಮಾಡಿಕೊಳ್ಳಬಹುದು. ಯಾವುದೋ ಪ್ರದೇಶದ ಹೆಣ್ಣು, ಇನ್ಯಾವುದೋ ಪ್ರದೇಶದ ಗಂಡು ಸೇರಿ, ಗೃಹಸ್ಥಾಶ್ರಮವನ್ನು ಪ್ರವೇಶಿಸಿ, ಸತಿಪತಿಯರಾಗಿ ಜೀವನದ ರುಚಿಯನ್ನು ಸವಿಯುವುದು ಸರಿ. ಆದರೆ ಅದರಲ್ಲೇ ಮಗ್ನರಾಗಿ, ತಮ್ಮತಮ್ಮ ಜೀವನದ ಸಾರ್ಥಕ್ಯವನ್ನು ಮಾಡಿಕೊಳ್ಳದಿದ್ದರೆ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ಉದ್ದೇಶ ವಿಫಲವಾದಂತೆ

 

ಕಸ್ತೇ ಪುತ್ರಃ - 'ನಿನ್ನ ಮಗ ಯಾರು?' ಎಂದು ವಿಚಾರಮಾಡು. ಮಕ್ಕಳು ತಪ್ಪು ಮಾಡಿದಾಗ ಅಥವಾ ಅವಮಾನಕರವಾಗಿ ನಡೆದಾಗ ಹೇಳುವ ಬೇಸರದ ಮಾತಲ್ಲ ಇವು. ಆದರೆ ಇಲ್ಲೂ ಕೂಡಾ ಒಳಹೊಕ್ಕಿ ವಿಚಾರಮಾಡಬೇಕೆನ್ನುವುದು ಲಕ್ಷ್ಯ. ಸತಿಪತಿಯರಾದರೂ ಎಲ್ಲಿಂದಲೋ ಬಂದು ಸೇರಿದ ಸಂಬಂಧ, ಆದರೆ ಮಕ್ಕಳು ನಮ್ಮವೇ. ನಾವೇ ಜನ್ಮವಿತ್ತ ಕೂಸು ಎಂದು ಮಕ್ಕಳ ಮೇಲೆ ನಮ್ಮ ಜೀವನದ ಬಹುಪಾಲು ಶ್ರಮ-ಧನ-ಪ್ರೀತಿಯನ್ನು ಧಾರೆಯೆರೆಯುತ್ತೇವೆ. ಆದರೆ ಸ್ವಲ್ಪ ಯೋಚಿಸಿ - ನಾವು ಯಾವುದಕ್ಕೆ ಜನ್ಮ ನೀಡಿದ್ದು? ಜೀವಕ್ಕೋ ಅಥವಾ ಶರೀರಕ್ಕೋ? ಒಂದು ದೃಷ್ಟಿಯಿಂದ ಜೀವಕ್ಕೆ ಯಾವ ತಂದೆತಾಯಿಯರಿಲ್ಲ. ಜೀವ ಅನಾದಿ. ಇನ್ನೊಂದು ದೃಷ್ಟಿಯಿಂದ ಜೀವ ಕೋಟ್ಯಂತರ ದೇಹಗಳನ್ನು ಪಡೆದು, ಹಲವಾರು ಯೋನಿಗಳ  ತಂದೆತಾಯಿಗಳು ಜೀವಕ್ಕೆ ಆಗಿಹೋಗಿದ್ದಾರೆ. ಹಾಗಿದ್ದರೆ ನಾವು ಮಕ್ಕಳಿಗೆ ಏನು? ಅನಾದಿಯಿಂದ ಸದಾ ಇರುವ ಜೀವ, ಅವ್ಯಕ್ತವಾಗಿದ್ದಾಗ, ತನ್ನ ಕರ್ಮಾನುಸಾರ ವ್ಯಕ್ತವಾಗಲು( ಅವ್ಯಕ್ತಾದೀನಿ ಭೂತಾನಿ ವ್ಯಕ್ತಮಧ್ಯಾನಿ ಭಾರತ - ಗೀತೆ ) ಒಂದು ತಾತ್ಕಾಲಿಕ ಆಶ್ರಯಸ್ಥಾನವನ್ನು ಹುಡುಕುತ್ತಿತ್ತು. ತಾತ್ಕಾಲಿಕ ನಿವಾಸವನ್ನು ಪಡೆಯಲು ತಂದೆ-ತಾಯಿ ಮಾಧ್ಯಮರಷ್ಟೇ. ಜೀವ ತನ್ನ ಕೆಲಸವನ್ನು ಮುಗಿಸಿದನಂತರ, ದೇಹವೆಂಬ ಮನೆಯನ್ನು ತೊರೆದು ಮತ್ತೊಂದು ಆಶ್ರಯಸ್ಥಾನವನ್ನು ಪಡೆಯಲು ಮರಣವೆಂಬ ಪ್ರಕ್ರಿಯೆಯ ಮೂಲಕ ತೆರಳುತ್ತದೆ

 

ಸಂಸಾರೋಽಯಮತೀವ ವಿಚಿತ್ರಃ - ಇಷ್ಟಾದರೂ ನಮ್ಮನ್ನು ಸಂಸಾರಚಕ್ರದಲ್ಲಿ ಚೆನ್ನಾಗಿ ಸುತ್ತಿಸುವ ಸಂಬಂಧಗಳು ಎಷ್ಟು ವಿಚಿತ್ರವಲ್ಲವೇ? ಸಂಬಂಧಗಳೆಲ್ಲವೂ ದೇಹಾಭಿಮಾನವನ್ನು ಆಶ್ರಯಿಸಿದ್ದು, ಜನ್ಮಮರಣದ ಚಕ್ರದಲ್ಲಿ ನಮ್ಮನ್ನು ಭ್ರಾಂತಿಗೊಳಿಸುತ್ತವೆ

 

ಕಸ್ಯ ತ್ವಂ ಕಃ ಕುತ ಆಯಾತಃ - 'ನೀನು ಯಾರು? ಎಲ್ಲಿಂದ ಬಂದಿದ್ದೀಯಾ?' ಎಂದು ವಿಚಾರ ಮಾಡಬೇಕು. ನಮ್ಮ ಎಲ್ಲಾ ವ್ಯವಹಾರಗಳ ಕೇಂದ್ರಬಿಂದು 'ನಾನು'. 'ನಾನು' ಎಂಬುದರ ಸತ್ಯ ಏನು? ದೇಹವೇ? ಇಂದ್ರಿಯಗಳೇ? ಮನಸ್ಸೇ? ಅಹಂಕಾರವೇ? ವ್ಯಕ್ತಿತ್ವವೇ?. ಇವೆಲ್ಲವೂ ಬದಲಾಗುತ್ತಿದ್ದರೂ 'ನಾನು' ಎಂಬುದು ಬದಲಾಗದೇ ಶಾಶ್ವತವಾಗಿದೆಯಲ್ಲ. ನಾನು ಜನ್ಮಕ್ಕಿಂತ ಮುಂಚೆ ಎಲ್ಲಿದ್ದೆ, ಎಲ್ಲಿಂದ ಬಂದೆ, ಎಲ್ಲಿಗೆ ಮರಳುವೆ? ಎಂಬ ಮೂಲಭೂತ ಪ್ರಶ್ನೆಗಳು ನಮ್ಮನ್ನು ಕಾಡದಿದ್ದರೆ ನಾವು ಜೀವನವನ್ನು ಸರಿಯಾಗಿ ಜೀವಿಸೇ ಇಲ್ಲವೆಂಬಂತೆ

 

ತತ್ತ್ವಂ ಚಿಂತಯ ತದಿಹ - ಈಗಲೇ ತತ್ತ್ವವನ್ನು ಚಿಂತಿಸು. ರಮಣ ಮಹರ್ಷಿಗಳ ಉಪದೇಶ ಸಾರವೇ "who am I?" enquiry. ನನ್ನ ನಿಜಸ್ವರೂಪ ದೇಹೇಂದ್ರಿಯಮನೋಬುದ್ಧಿಗಳಿಗೆ ವ್ಯತಿರಿಕ್ತವಾದ ಆತ್ಮಚೈತನ್ಯವೆಂದು ತಿಳಿಯಬೇಕು. ನನ್ನ ಸ್ವರೂಪ ಚೈತನ್ಯವಾದರೆ, ನನ್ನ ಮಡದಿ, ಪುತ್ರ, ಸಂಬಂಧಿಕರ ಸ್ವರೂಪವೂ ಅದೇ ಚೈತನ್ಯವೇ ಅಲ್ಲವೇ. ಹೀಗೇ ಜೀವ-ಜಗತ್ತಿನ ತತ್ತ್ವವಾದ ಬ್ರಹ್ಮವಸ್ತುವನ್ನು ಗುರುಶಾಸ್ತ್ರದ ಸಹಾಯದಿಂದ ಸದಾ ಚಿಂತಿಸು ಎಂದು ಶಂಕರಾಚಾರ್ಯರು ಉಪದೇಶಿಸಿದ್ದಾರೆ

 

ಸಾರಾಂಶ: ಪಾರಮಾರ್ಥಿಕ ಸತ್ಯವನ್ನರಿಯಲು ವ್ಯಾವಹಾರಿಕವಾಗಿ ಬಂದೊದಗಿರುವ ಜವಾಬ್ದಾರಿಗಳನ್ನು ನಿರ್ಲಿಪ್ತತೆಯಿಂದ ಕರ್ತವ್ಯದೃಷ್ಟಿಯಿಂದ ಮಾಡಬೇಕೆಂಬುದು ಅಧ್ಯಾತ್ಮಜೀವನ. ನಾಟಕದಲ್ಲಿ ನಮ್ಮ ಪಾತ್ರದಲ್ಲೇ ಮುಳುಗಿ, ಮಗ್ನರಾಗದೇ, ಪಾತ್ರವನ್ನು ಮೀರಿದ ಸತ್ಯವನ್ನು ತಿಳಿದು ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸುವಂತೆ, ನಮ್ಮ ನಿಜಸ್ವರೂಪಜ್ಞಾನವನ್ನು ಪಡೆದು, ಜಗನ್ನಾಟಕದಲ್ಲಿ ಧರ್ಮಮಾರ್ಗದಲ್ಲಿ ನಡೆಯುತ್ತಾ, ಸಮರ್ಪಕವಾಗಿ ಬಹುಜನ ಹಿತಾಯ ಬಹುಜನ ಸುಖಾಯ ಎಂಬಂತೆ ಸಮರ್ಥವಾಗಿ ಪಾತ್ರವಹಿಸುವುದು. ಕೋಽಹಂ(ನಾನು ಯಾರು?) ಎಂಬ ವಿಚಾರದಿಂದ ಸೋಽಹಂ(ಅವನೇ ನಾನು) ಎಂಬ ನಿಶ್ಚಿತ ಜ್ಞಾನವನ್ನು ಸಂಪಾದಿಸಿಕೊಳ್ಳಲು ಪ್ರಾರ್ಥಿಸೋಣ - ಭಜಗೋವಿಂದಮ್.




1 comment:

  1. ತೀರ್ಥಯಾತ್ರೆಗೆ ಬಂದ ವ್ಯಕ್ತಿ ದೇವರ ದರ್ಶನವೆಂಬ ತನ್ನ ನಿಜವಾದ ಗುರಿಯನ್ನು ಮರೆತು, ಮಾರ್ಗದಲ್ಲಿರುವ ಸವಿನೆನಪುಗಳಲ್ಲೇ ಸಿಲುಕಿಬಿಟ್ಟಂತೆ—
    ನಮ್ಮ ಜೀವನವೂ ಇದೇ ರೀತಿಯಾಗಿ ಹೊರಗಿನ ಆಕರ್ಷಣೆಗಳಲ್ಲಿ ಮುಳುಗಿ ತನ್ನ ಮೂಲ ದಿಕ್ಕನ್ನು ಕಳೆದುಕೊಳ್ಳುತ್ತದೆ.

    ಆದಿ ಶಂಕರಾಚಾರ್ಯರು ಮನುಷ್ಯನ ಹೃದಯಕ್ಕೆ ನೇರವಾಗಿ ತಲುಪುವ ಪ್ರಶ್ನೆಗಳನ್ನು ಕೇಳುತ್ತಾರೆ -

    “ನಿನ್ನ ಕಾಂತೆ ಯಾರು? ಆ ಬಂಧನ ಶಾಶ್ವತವಾ?”

    “ನಿನ್ನದು ಎಂದುಕೊಂಡಿರುವ ಪುತ್ರ—ಅವನು ಯಾವಾಗಲೂ ನಿನ್ನ ಜೊತೆ ಇರುತ್ತಾನಾ?”

    “ಈ ಸಂಸಾರವೆಂಬ ಅಲೆಗಳ ಸಾಗರ… ಎಷ್ಟು ವಿಚಿತ್ರ, ಎಷ್ಟು ಅನಿಶ್ಚಿತ!”

    ಎಲ್ಲವೂ ಬದಲಾಗುವ, ಎಲ್ಲವೂ ನಶ್ವರವಾದ ಈ ಜಗತ್ತಿನಲ್ಲಿ ಒಂದು ಪ್ರಶ್ನೆ ಮಾತ್ರ ನಿಲ್ಲುತ್ತದೆ.
    “ನೀನು ಯಾರು? ಎಲ್ಲಿಂದ ಬಂದೆ? ಜೀವನದ ನಿಜವಾದ ಗುರಿ ಏನು?”

    ನಾವು ಬಾಲ್ಯದಲ್ಲಿ ಆಟಪಾಟಗಳಲ್ಲಿ, ಯೌವ್ವನದಲ್ಲಿ ಆಸೆ–ಆಕಾಂಕ್ಷೆಗಳಲ್ಲಿ, ವೃದ್ಧಾಪ್ಯದಲ್ಲಿ ಚಿಂತೆ–ಕಳವಳಗಳಲ್ಲಿ ಮುಳುಗಿ,
    ಇದೆಲ್ಲದರ ಹಿಂದೆ ಇರುವ ನಿಜಸ್ವರೂಪವನ್ನು ಅರಿಯದೆ ಬದುಕನ್ನು ಸಾಗಿಸುತ್ತೇವೆ.

    ಶಂಕರರು ಹೇಳುವುದೇನು ಎಂದರೆ—
    “ಓ ಸಹೋದರಾ, ಕ್ಷಣ ಮಾತ್ರ ನಿಲ್ಲು.
    ಈ ಸಂಬಂಧಗಳ ನಿತ್ಯತೆಯನ್ನು ಮರೆತುಬಿಡು ಎಂದಲ್ಲ,
    ಆದರೆ ಅವುಗಳಾಚೆ ಇರುವ ನಿನ್ನ ನಿಜ ತತ್ತ್ವವನ್ನು ಅರಿತುಕೊಳ್ಳು.”

    ಬಾಳಿನಲ್ಲಿ ಬರುವ ಪಾತ್ರಗಳು ನಾಟಕದ ದೃಶ್ಯಗಳಂತೆ ಬಂದು ಹೋಗುತ್ತವೆ.
    ಆದರೆ ಒಳಗಿನ ಸಾಕ್ಷಿ—ಆ ಆತ್ಮಸ್ವರೂಪ ಎಂದಿಗೂ ಬದಲಾಗುವುದಿಲ್ಲ.

    ಆ ಸ್ವರೂಪವನ್ನು ಅರಿಯುವ ಕಡೆಗೆ ಹೆಜ್ಜೆಯಿಡುವಂತೆ ಆಚಾರ್ಯರು ಈ ಶ್ಲೋಕದಲ್ಲಿ ಮೃದುವಾಗಿ, ಆದರೆ ತೀವ್ರವಾಗಿ ಕರೆಯುತ್ತಾರೆ.

    ReplyDelete