ಹೀಗಿರುವಾಗ ಕೋಸಲ ಸಾಮ್ರಾಜ್ಯದಿಂದ ಕಮಲಾಯನ(ಉಪಕೋಸಲ)ನೆಂಬ ವಿದ್ಯಾರ್ಥಿಯು ಗುರುಕುಲಕ್ಕೆ ಪ್ರವೇಶ ಪಡೆದು ಅಧ್ಯಯನವನ್ನು ಪ್ರಾರಂಭಿಸಿದ. ಉಪಕೋಸಲನಿಗೆ ಗುರುಗಳಾದ ಸತ್ಯಕಾಮರೊಡನೆ ಯಾಗಶಾಲೆಯಲ್ಲಿ ಅಗ್ನಿಯನ್ನು ಸಂರಕ್ಷಿಸುವುದು ಹಾಗೂ ಗುರುಗಳ ವೈದಿಕ ಕರ್ಮಗಳಿಗೆ ಸಹಾಯ ಮಾಡುವ ಜವಾಬ್ದಾರಿಯನ್ನು ನೀಡಲಾಗಿತ್ತು. ಆತನು ಅಗ್ನಿದೇವನ ಸೇವಾಕಾರ್ಯವನ್ನು ಶ್ರದ್ಧಾ ಭಕ್ತಿಗಳಿಂದ, ಕರ್ತವ್ಯ ತತ್ಪರತೆಯಿಂದ ಮಾಡುತ್ತಿದ್ದ. ಹೀಗೇ ದಿನಗಳು, ಮಾಸಗಳು, ಸಂವತ್ಸರಗಳು ಉರುಳಿದವು.ಉಪಕೋಸಲನಿಗಿಂತ ಹಿರಿಯರು ಸಮಾವರ್ತನಗೊಂಡು (graduation) ಗುರುಕುಲದಿಂದ ನಿರ್ಗಮಿಸಿದರು. ಸಮಾವರ್ತನ ಕಾರ್ಯಕ್ರಮದಲ್ಲಿ ಉಪಕೋಸಲ ಉತ್ಸಾಹದಿಂದ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಂತೋಷದಿಂದ ಎಲ್ಲ ಮಿತ್ರರನ್ನು ಬೀಳ್ಕೊಡುತ್ತಿದ್ದ. ಹೀಗೇ ಕಾಲಕ್ರಮೇಣ ತನ್ನ ಸಹಪಾಠಿಗಳೂ ಮತ್ತು ಕಿರಿಯರೂ ಅಧ್ಯಯನವನ್ನು ಪೂರ್ಣಗೊಳಿಸಿ, ಗುರುಕುಲದಿಂದ ತೆರಳಿದರು. ಆದರೆ ಉಪಕೋಸಲನಿಗೆ ಇನ್ನೂ ಗುರುಕುಲದಿಂದ ನಿರ್ಗಮಿಸಲು ಗುರುಗಳಿಂದ ಅಜ್ಞೆಯಾಗಿರಲಿಲ್ಲ. ಈ ಒಂದು ಯೋಚನೆ ಅವನ ಮನಸ್ಸನ್ನು ಸದಾ ಕಾಡುತ್ತಿತ್ತು - "ನನಗಿಂತ ಹಿರಿಯರಾದ ವಿದ್ಯಾರ್ಥಿಗಳು, ನನ್ನ ಸಹಪಾಠಿಗಳು ಮತ್ತು ನನಗಿಂತ ಕಿರಿಯ ವಿದ್ಯಾರ್ಥಿಗಳೆಲ್ಲರೂ ಅಧ್ಯಯನವನ್ನು ಪೂರ್ಣಗೊಳಿಸಿ, ಸಮಾವರ್ತನೆಗೊಂಡು, ಗುರುಕುಲದಿಂದ ನಿರ್ಗಮಿಸಿದ್ದಾರೆ. ನಾನೂ ಕೂಡ ಹಲವು ವರ್ಷಗಳಿಂದ ಅಧ್ಯಯನ ಮತ್ತು ಗುರುಸೇವೆ ಮಾಡುತ್ತಿದ್ದರೂ, ಗುರುಗಳು ನನ್ನನ್ನು ಏಕೆ ಗುರುಕುಲದಿಂದ ಸಮಾವರ್ತನಾಗಲು ಇನ್ನೂ ಅನುಮತಿ ನೀಡಿಲ್ಲ. ನಾನು ಅಷ್ಟು ಮೂರ್ಖನೇ?". ಆದರೆ, ಈ ವಿಷಯವಾಗಿ ಗುರುಗಳನ್ನು ನೇರವಾಗಿ ಎಂದೂ ಕೇಳಿರಲಿಲ್ಲ. ಒಮ್ಮೆ ಸತ್ಯಕಾಮರ ಪತ್ನಿ, ಸತ್ಯಕಾಮರ ಬಳಿಸಾರಿ ಉಪಕೋಸಲನ ವಿಷಯವನ್ನು ಪ್ರಸ್ತಾಪಿಸಿದರೂ, ಸತ್ಯಕಾಮರು ಮುಗುಳ್ನಕ್ಕು, ಏನೂ ಉತ್ತರಿಸದೆ, ಯಾವುದೋ ಕೆಲಸದ ಮೇಲೆ ಯಾತ್ರೆಗೆ ಹೊರಟರು.ಗುರುಗಳ ನಿರ್ಗಮನದ ನಂತರ, ಉಪಕೋಸಲ ಗುರುಕುಲದಲ್ಲಿ ದಿನನಿತ್ಯ ತಪ್ಪದೇ ತನ್ನ ಕಾರ್ಯಗಳನ್ನು ನಿರ್ವಹಿಸುತ್ತಿದ್ದರೂ, ತಾನಿನ್ನೂ ಗುರುವಿನ ಅನುಗ್ರಹಕ್ಕೆ ಪಾತ್ರನಾಗಿಲ್ಲವಲ್ಲ ಎಂಬ ಖೇದ ಈಟಿಯಂತೆ ಮನಸ್ಸನ್ನು ಇರಿದಂತಾಗುತ್ತಿತ್ತು. ಈ ವೇದನೆಯು ಹೆಚ್ಚಾಗಿ, ಗುರುವಿನ ಅನುಗ್ರಹವನ್ನು ಗಳಿಸದ ತನ್ನ ಜೀವನ ವ್ಯರ್ಥವೆಂದು ಭಾವಿಸಿ, ನೀರು - ಆಹಾರ - ವಿಹಾರಗಳನ್ನೆಲ್ಲಾ ತ್ಯಜಿಸಿದ. ಗುರುಮಾತೆಯಾದ ಸತ್ಯಕಾಮರ ಪತ್ನಿ, ಉಪಕೋಸಲನಿಗೆ ಸಾಂತ್ವನವನ್ನು ನೀಡಿ, ಸಮಾಧಾನಗೊಳಿಸಿ, ಊಟೋಪಚರಗಳನ್ನು ಮಾಡಿಸಿ ಮಲಗಿಸಿದಳು. ಗುರುಗಳು ತನಗೆ ಸಮಾವರ್ತನಾಗಲು ಅನುಮತಿ ನೀಡದಿದ್ದಕ್ಕೆ ಗುರುಗಳನ್ನು ದೂಷಿಸದೇ, ಬದಲಾಗಿ ತನ್ನಲ್ಲೇ ಏನೋ ದೋಷವಿರಬಹುದು ಎಂದು ಆತ್ಮಾವಲೋಕನೆ ಮಾಡಲು ಪ್ರಾರಂಭಿಸಿದ. ಇದರಿಂದ ತನ್ನಲ್ಲಿರುವ ನ್ಯೂನತೆಗಳಾದ - ಭಾವನಾತ್ಮಕ ಅಸಮತೋಲನ, ಸಂಶಯಾತ್ಮಕ ಮನಸ್ಸು ಹಾಗು ಏಕಾಗ್ರತೆಯ ಕೊರತೆಯನ್ನು ಗುರುತಿಸಿಕೊಳ್ಳಲಾರಂಭಿಸಿದ. ಗುರುಮಾತೆಯ ಬಳಿ ಈ ಸಮಸ್ಯೆಗಳಿಗೆ ಸಲಹೆಗಳನ್ನು ಪಡೆದು ಅದರಂತೆ ಕರ್ಮೋಪಾಸನೆಗಳಲ್ಲಿ ತೊಡಗಿಸಿಕೊಂಡು ತನ್ನನ್ನು ತಾನು ಉದ್ಧರಿಸಿಕೊಳ್ಳಿರುವ ಕಾರ್ಯದಲ್ಲಿ ನಿರತನಾದ.
ಕೆಲವು ತಿಂಗಳುಗಳ ನಂತರ, ಯಾಗಶಾಲೆಯಲ್ಲಿ ತನ್ನ ನಿತ್ಯಕರ್ಮವನ್ನು ಮಾಡುತ್ತಿರುವಾಗ ಅಗ್ನಿದೇವನು ಪ್ರತ್ಯಕ್ಷನಾಗಿ, "ಎಲೈ ಉಪಕೋಸಲ, ಹಲವಾರು ವರ್ಷಗಳಿಂದ ನನ್ನ ಸೇವೆಯನ್ನು ಮಾಡಿರುವೆ. ನಿನ್ನ ಶ್ರದ್ಧಾ - ಭಕ್ತಿಗೆ ಮೆಚ್ಚಿ, ನಿನ್ನ ಸೇವೆಗೆ ಸಂಪ್ರೀತನಾಗಿರುವೆ. ನಿನಗೆ ತಿಳಿಯಲು ಆಸಕ್ತಿಯಿದ್ದರೆ ಉಪದೇಶಿಸುವೆ", ಎಂದು ವರವನ್ನು ನೀಡಿದ. ಆನಂದ ಮತ್ತು ಉತ್ಸುಕತೆಯಿಂದ ಉಪಕೋಸಲ, "ಧನ್ಯನಾದೆ ಅಗ್ನಿದೇವ. ನನಗೆ ಬ್ರಹ್ಮವನ್ನು ಉಪದೇಶಿಸಿ", ಎಂದು ಬೇಡಲು ಅಗ್ನಿದೇವ, "ಪ್ರಾಣೋ ಬ್ರಹ್ಮ ಕಂ ಬ್ರಹ್ಮ ಖಂ ಬ್ರಹ್ಮ", ಎಂದು ಸೂಚ್ಯವಾಗಿ ಉಪದೇಶಿಸಿದ. ಏಕಾಗ್ರತೆಯಿಂದ ಆಲಿಸಿದ ಉಪಕೋಸಲ,"ದೇವಾ! ಪ್ರಾಣ ಬ್ರಹ್ಮವೆಂಬ ವಿಷಯ ಅರ್ಥವಾಯಿತು. ಆದರೆ ಕಂ ಎಂದರೆ ಅನಿತ್ಯವಾದ ವಿಷಯಸುಖ ಮತ್ತು ಖಂ ಎಂದರೆ ಜಡವಾದ ಆಕಾಶ. ಇವು ಹೇಗೆ ಬ್ರಹ್ಮವೆಂದು ತಿಳಿಯಲಿಲ್ಲ", ಎಂದು ಕೇಳಲು ಅಗ್ನೀದೇವನು,"ಯತ್ ಕಂ ತದೇವ ಖಂ, ಯದೇವ ಖಂ ತದೇವ ಕಂ. ಹೃದಯಾಕಾಶ(ಖಂ) ಎಂಬ ಉಪಲಬ್ಧಿಸ್ಥಾನದಲ್ಲಿ ಅನುಭವವಾಗುವ ಪ್ರತಿಯೊಂದು ಆನಂದವೂ(ಕಂ) ಬ್ರಹ್ಮದ ಪ್ರತಿಬಿಂಬವೇ ಆಗಿದೆ. ಇದನ್ನು ಧ್ಯಾನಿಸು. ಮುಂದಿನ ವಿದ್ಯೆಯನ್ನು ಮತ್ತು ಫಲದ ವಿಷಯಗಳನ್ನು ನಿನ್ನ ಗುರುಗಳು ಉಪದೇಶಿಸುತ್ತಾರೆ", ಎಂದು ಉತ್ತರಿಸಿ ಅಂತರ್ಧಾನನಾದ. ಅಗ್ನಿದೇವನಿಂದಲೇ ಜ್ಞಾನವನ್ನು ಪಡೆದರೂ, ಸ್ವಲ್ಪವೂ ದರ್ಪವಿಲ್ಲದೆ, ಉಪಕೋಸಲ ತನ್ನ ನಿತ್ಯಕರ್ಮಗಳನ್ನು, ಗುರುಕುಲದ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಮುಂದುವರೆದ.
ಕೆಲವು ದಿನಗಳ ನಂತರ ಸತ್ಯಕಾಮರು ಗುರುಕುಲಕ್ಕೆ ಹಿಂದಿರುಗಿ ಬಂದರು. ಮರುದಿನ ಯಾಗಶಾಲೆಯಲ್ಲಿ ಅಗ್ನಿಯ ಮುಂದೆ ಜಾಜ್ವಲ್ಯಮಾನವಾಗಿ ಬೆಳಗುತ್ತಿದ್ದ ಶಿಷ್ಯನಾದ ಉಪಕೋಸಲನನ್ನು ಗಮನಿಸಿ ಸತ್ಯಕಾಮರು, "ನಿನ್ನ ಮುಖ ಬ್ರಹ್ಮತೇಜಸ್ಸಿನಿಂದ ಹೊಳೆಯುತ್ತಿದೆ. ನಿನಗೆ ಯಾರಾದರೂ ಬ್ರಹ್ಮೋಪದೇಶವನ್ನು ಮಾಡಿದರೇ?", ಎಂದು ಕೇಳಿದರು. ಉಪಕೋಸಲ ವಿನಯದಿಂದ ತನಗಾದ ಅನುಭವ ಮತ್ತು ಉಪದೇಶವನ್ನು ತಿಳಿಸಿ,"ನನಗೆ ನಿಮ್ಮ ಹೊರತು ಬೇರಾರು ಗತಿಯಿಲ್ಲ ಗುರುವರ್ಯ. ದಯಮಾಡಿ ಬ್ರಹ್ಮವನ್ನು ಪೂರ್ಣವಾಗಿ ಉಪದೇಶಿಸಿ", ಎನ್ನಲು ಸಂತೋಷದಿಂದ ಗುರುಗಳು, "ಈ ಕಾಲಕ್ಕಾಗಿ ನಾನು ಇಷ್ಟು ವರ್ಷ ಕಾಯುತ್ತಿದ್ದೆ. ನಿನ್ನನ್ನು ಬ್ರಹ್ಮಜ್ಞಾನಿಯನ್ನಾಗಿ ಮಾಡಲು ಇಷ್ಟು ಕಾಲ ಗುರುಕುಲದಲ್ಲಿ ಉಳಿಸಿಕೊಂಡೆ. ನಿನಗೆ ಅಗ್ನಿದೇವನಿಂದ ಉಪದೇಶವಾಗಿರುವುದು ಕೇವಲ ಬ್ರಹ್ಮದ ಉಪಲಬ್ಧಿಸ್ಥಾನ. ಬ್ರಹ್ಮದ ನಿಜ ಸ್ವರೂಪವನ್ನು ತಿಳಿಸುವೆ", ಎಂದು ಅವನಿಗೆ ಕ್ರಮಬದ್ಧವಾಗಿ ಉಪದೇಶಿಸಿದರು. ಉಪಕೋಸಲನಿಗೆ ತನ್ನ ಗುರು ತನ್ನನ್ನು ಹೆಚ್ಚು ಕಾಲ ಗುರುಕುಲದಲ್ಲಿ ಉಳಿಸಿಕೊಂಡಿದ್ದು ತನ್ನ ಮೇಲಿನ ತಾತ್ಸಾರದಿಂದಲ್ಲ; ಬದಲಿಗೆ ತನ್ನಲ್ಲಿ ಜ್ಞಾನಯೋಗ್ಯತೆಗಳನ್ನು ಬೆಳೆಸಿ, ಬ್ರಹ್ಮಜ್ಞಾನಿಯನ್ನಾಗಿ ಮಾಡಬೇಕೆಂಬ ನಿರತಿಶಯ ಪ್ರೀತಿಯಿಂದ ಎಂದು ತಿಳಿಯಿತು. ಉಪಕೋಸಲನು ಆತ್ಮವನ್ನರಿತು ಕೃತಕೃತ್ಯನಾದ ಎಂಬಲ್ಲಿಗೆ ಛಾಂದೋಗ್ಯ ಉಪನಿಷತ್ತಿನ ಈ ಸುಂದರ ಆಖ್ಯಾಯಿಕೆ ಪೂರ್ಣಗೊಳ್ಳುತ್ತದೆ.
ಈ ಕಥೆಯಿಂದ ನಮ್ಮ ಜೀವನಕ್ಕೆ ಕಲಿಯಬಹುದಾದ ಕೆಲವು ಅಂಶಗಳು:
✓ ಆತ್ಮಜ್ಞಾನದಿಂದಲೇ ಜೀವನದಲ್ಲಿ ಕೃತಕೃತ್ಯತೆ ಸಿಗುವುದು ಎಂಬ ಗುರಿಯನ್ನು ನಿಶ್ಚಯ ಮಾಡಿಕೊಳ್ಳುವುದು.
✓ ಸತ್ಯಕಾಮರು ತನ್ನ ಶಿಷ್ಯರಲ್ಲಿ ವೇದ, ವಿಜ್ಞಾನ, ಜೀವನಕಲೆ ಮತ್ತು ಮೌಲ್ಯಗಳನ್ನು ಬಿತ್ತುತ್ತಿದ್ದ ರೀತಿ ಶಿಕ್ಷಕರೆಲ್ಲರಿಗೂ ಮಾರ್ಗಸೂಚಿಯಾಗಬೇಕು.
✓ ಉಪಕೋಸಲನ ಗುರುಭಕ್ತಿ, ಸೇವಾತತ್ಪರತೆ, ಶ್ರದ್ಧೆ ಮತ್ತು ಕರ್ಮನಿಷ್ಟೆ ಅನುಸರಣೀಯ.
✓ ತನಗೆ ಬೇಕಿದ್ದ ಉದ್ದೇಶ ಪೂರ್ಣವಾಗದಿದ್ದಾಗ, ಗುರುಗಳನ್ನು ದೂಷಿಸದೆ, ಉಪಕೋಸಲ ಆಯ್ದುಕೊಂಡ ಆತ್ಮಾವಲೋಕನೆ ಎಲ್ಲರೂ ಕೈಗೊಳ್ಳಬೇಕು.
✓ ಬೇಸರದಲ್ಲಿದ್ದಾಗ ಗುರುಮಾತೆ ತೋರಿದ ಪ್ರೀತಿ, ಕಾಳಜಿ ಮತ್ತು ಆಪ್ತಸಲಹೆ ಕುಗ್ಗಿಹೋಗಿದ್ದ ಉಪಕೋಸಲನ ಉತ್ಸಾಹವನ್ನು ಜಾಗ್ರತ ಮಾಡಿದಂತೆ, ನಾವೂ ಸಹ ಸುತ್ತಮುತ್ತಲಿನವರಿಗೆ ಸಂವೇದನಾಶೀಲರಾಗಿರಬೇಕು.
✓ ದೇವತೆಗಳಿಂದ ಜ್ಞಾನವನ್ನು ಪಡೆದ ಬಳಿಕವೂ ಉಪಕೋಸಲನಲ್ಲಿದ್ದ ವಿನಯ, ವಿನಮ್ರತೆ ಮತ್ತು ಗುರುಭಕ್ತಿ ನಮಗೆಲ್ಲರಿಗೂ ಆದರ್ಶವಾಗಬೇಕು.
Hari 🕉️🙏ಸತ್ಯಕಾಮ ರಂಥ ಸದ್ಗುರು, ಉಪಕೋಸಲನಂಥ ಆದರ್ಶ ಶಿಷ್ಯ ನ ತಿತಿಕ್ಷೆ, ಆತ್ಮ ವಿಮರ್ಶೆ,ಸಾಧನೆ, ಪರಿಪ್ರಶ್ನೆ, ಎಲ್ಲವೂ ಸಾಧಕನಿ ಗೆ ದಾರಿದೀಪ 🙏. ವಂದೇ ಗುರು ಪರಂಪರಾಮ್ 🙏
ReplyDeleteನಮಸ್ತೆ ಗುರುಗಳೆ ,
ReplyDeleteಗುರುಗಳಿಂದ ಜ್ಞಾನವನ್ನು ಪಡೆಯಲು ಶ್ರದ್ಧೆ ಮತ್ತು ತಾಳ್ಮೆ ಎಷ್ಟು ಮುಖ್ಯ ಮತ್ತು ಆ ಜ್ಞಾನವನ್ನು ನಮ್ಮ ಜೀವನದಲ್ಲಿ ಯಾವ ರೀತಿ ಅಳವಡಿಸಿಕೊಂಡು ಹೇಗೆ ಮಾರ್ಪಾಡಾಗಬಹುದು ಎಂದು ಈ ಕಥೆಯಿಂದ ತುಂಬ ಚೆನ್ನಾಗಿ ಅರ್ಥ ಆಗುವ ಹಾಗೆ ತಿಳಿಸಿರುವಿರಿ.ಧನ್ಯವಾದ ಗುರುಗಳೆ 🙏
ಜ್ಞಾನ ದೊರಕಿದ ನಂತರವೂ ವಿನಯ, ವಿನಮ್ರತೆ ಮತ್ತು ಗುರುಭಕ್ತಿ ಉಳಿಸಿಕೊಳ್ಳುವುದೇ ಸಾರ್ಥಕ ಜೀವನದ ಲಕ್ಷಣ ಎಂಬುದೇ ಗುರು ಪ್ರಮೋದ್ ನಟರಾಜ್ ಅವರ ಲೇಖನದ ಸಾರ.
Deleteಸದ್ಗುರುಗಳಿಗೆ ವಂದಿಸುತ್ತಾ ಛಾಂದೋಗ್ಯೋಪನಿಷತ್ತಿನಲ್ಲಿನ ಈ ಆಖ್ಯಾಯಿಕೆ ಸದ್ಗುರುಗಳ ಮಹತ್ವವನ್ನು ತಿಳಿಸುತ್ತಾ ಸಚ್ಛಿಷ್ಯನಲ್ಲಿರಬೇಕಾದ ಸದ್ಗುಣಗಳನ್ನು ವಿವರಿಸುವುದರೊಂದಿಗೆ ಸಾಧಕರು ಆತ್ಮೋದ್ಧಾರ ಮಾಡಿಕೊಂಡು ಧನ್ಯರಾಗುವುದು ಉಪನಿಷತ್ ಋಷಿಗಳ ಹೃದಯವಾಗಿದೆ ಎಂಬುದನ್ನು ಅರಿವು ಮಾಡಿಕೊಡುವ ವ್ಯಾಖ್ಯಾನ ಹಾಗೂ ಬರವಣಿಗೆಯಲ್ಲಿ ಮೂಡಿಬಂದಿರುವ ಲೇಖನ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿದೆ ಎಂಬುದಾಗಿ ಅರಿಕೆ ಮಾಡಿಕೊಳ್ಳುತ್ತಾ ಹೃತ್ಪೂರ್ವಕ ಪ್ರಣಾಮಗಳನ್ನು ಅರ್ಪಿಸಲಾಗಿದೆ ಜೈ ಶ್ರೀ ರಾಮ್ ಜೈ ಗುರುದೇವ್ ಜೈ ಜೈ ಗುರುದೇವ್
ReplyDelete