🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 9 (Bhajagovindam - Sloka 9)

 ಒಬ್ಬ ಚಿತ್ರಕಲೆ ವಿದ್ಯಾರ್ಥಿ ತನ್ನ ಗುರುಗಳಿಗೆ ತಾನು ರಚಿಸಿದ ಅದ್ಭುತ ಚಿತ್ರಪಟವನ್ನು ತೋರಿಸಿದ. ಗುರುಗಳು, 'ಇನ್ನೂ ಚೆನ್ನಾಗಿ ಮಾಡಬಹುದು' ಎಂದು ಹೇಳಿದರು. ತನ್ನ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ರಚಿಸಿದ ಚಿತ್ರಕ್ಕೆ ಗುರುಗಳ ಮೆಚ್ಚುಗೆ ಸಿಗಲಿಲ್ಲವೆಂದು ಖಿನ್ನನಾಗಿ, ಚಿತ್ರವನ್ನು ಒಂದು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನಕ್ಕೆ ಇಟ್ಟ. ಚಿತ್ರದ ಕೆಳಗೆ, "ಚಿತ್ರದಲ್ಲಿ ಎಲ್ಲಾದರು ತಪ್ಪು ಕಂಡರೆ, 'X' ಮಾರ್ಕ್ ಮಾಡಿ" ಎಂದು ಬರೆದ. ಸಂಜೆಯ ವೇಳೆಗೆ ಚಿತ್ರಪಟದ ತುಂಬಾ 'X' ಮಾರ್ಕ್ ಇತ್ತು. ಬೇಸರದಿಂದ ಗುರುವಿನತ್ತ ಹೋಗಿ, ತನ್ನ ಅಳಲನ್ನು ತೋಡಿಕೊಂಡ. ಗುರುಗಳು ಚಿತ್ರದ ಕೆಳಗಿರುವ ಸೂಚನೆಯನ್ನು ನೋಡಿ, ಅದನ್ನು ಹೀಗೆ ಬದಲಿಸಿದರು - "ಚಿತ್ರದಲ್ಲಿ ಎಲ್ಲಾದರೂ ತಪ್ಪು ಕಂಡರೆ, ಅದನ್ನು ಸರಿ ಮಾಡಿ". ಸಂಜೆಯೊಳಗೆ ಒಂದೂ ಬದಲಾವಣೆ ಇರಲಿಲ್ಲ. ಗುರುಗಳು ನಂತರ ಚಿತ್ರದಲ್ಲಿದ್ದ ಗುಣ-ದೋಷಗಳೆರಡನ್ನೂ ತೋರಿಸುವುದಷ್ಟೇ ಅಲ್ಲದೇ, ಸರಿ ಮಾಡುವ ವಿಧಾನವನ್ನು ತಿಳಿಸಿದರು

ಹೀಗೆ ಜೀವನದಲ್ಲಿ ತಪ್ಪನ್ನೇ ಗುರುತಿಸುವವರು ನೂರಾರು ಜನ ಇರುತ್ತಾರೆ. ಆದರೆ, ನಮಗೆ ಸರಿಯಾದ ಮಾರ್ಗದರ್ಶನ ನೀಡುವವರೇ ನಿಜವಾದ ಆಚಾರ್ಯರು. ನಮ್ಮ ಜೀವನದಲ್ಲಿ ಮೋಹದಿಂದ ನಾವು ಎಡವುವ ಸಂಗತಿಗಳನ್ನು ತೋರಿಸಿ, ಅದರಿಂದ ಹೊರಬರುವ ಹಾದಿಯನ್ನೂ ಶಂಕರಾಚಾರ್ಯರು ಭಜಗೋವಿಂದಮ್ ಗ್ರಂಥದಲ್ಲಿ ತೋರಿಸುತ್ತಿದ್ದಾರೆ. ಹಿಂದಿನ ಶ್ಲೋಕದಲ್ಲಿ "ನಿನ್ನ ಹೆಂಡತಿ ಮಕ್ಕಳು ಯಾರು? ನೀನು ಯಾರು? ಎಲ್ಲಿಂದ ಬಂದೆ? ಎಂಬ ಮೂಲಭೂತ ಪ್ರಶ್ನೆಗಳ ಆಳವಾದ ವಿಚಾರ ಮಾಡು" ಎಂದು ಉಪದೇಶಿಸಿದ್ದರು. ಆತ್ಮವಿಚಾರವನ್ನೇನೋ ಮಾಡಬೇಕೆಂದಿದೆ; ಆದರೆ, ಸ್ವಂತವಾಗಿ ಅಲ್ಲ. ಗುರು-ಶಾಸ್ತ್ರದ ನೆರವಿನಿಂದ. ಹೀಗೇಕೆ? ಸ್ವಂತವಾಗಿ ನಾವೇ ಏಕೆ ವಿಚಾರ ಮಾಡಬಾರದು? ಒಂದು ಸಣ್ಣ ಪ್ರವಾಸಕ್ಕೆ ಹೋಗುವಾಗಲೇ ನಮ್ಮ ಮಾರ್ಗದರ್ಶನಕ್ಕೆ travel guide ಬೇಕಾಗುವಾಗ, ಅಧ್ಯಾತ್ಮಪ್ರವಾಸಕ್ಕೆ ಗುರು ಬೇಡವೆನ್ನುವುದು ಮೂರ್ಖತನವಷ್ಟೇ! ಅಧ್ಯಾತ್ಮಜ್ಞಾನಕ್ಕೆ ಗುರುವಿನ ಅವಶ್ಯಕತೆಯನ್ನು ಗೀತಾಚಾರ್ಯನೂ ತಿಳಿಸಿದ್ದಾನೆ - ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಾಯಾ |ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನ: ತತ್ತ್ವದರ್ಶಿನಃ ||. ಶಂಕರಾಚಾರ್ಯರು ತಮ್ಮ ಉಪದೇಶವನ್ನು ನಿಷ್ಠೆಯಿಂದ ಪಾಲಿಸುವ ನಮ್ಮೆಲ್ಲರಿಗೂ ಖಚಿತವಾಗಿ ಗಮ್ಯವನ್ನು ತಲುಪುವ ಉಪಾಯವನ್ನು ಶ್ಲೋಕದಲ್ಲಿ ತಿಳಿಸುತ್ತಿದ್ದಾರೆ.

 ಸತ್ಸಂಗತ್ವೇ ನಿಸ್ಸಂಗತ್ವಂ

ನಿಸ್ಸಂಗತ್ವೇ ನಿರ್ಮೋಹತ್ವಮ್

ನಿರ್ಮೋಹತ್ವೇ ನಿಶ್ಚಲತತ್ತ್ವಂ

ನಿಶ್ಚಲತತ್ತ್ವೇ ಜೀವನ್ಮುಕ್ತಿಃ ॥9||

 ಸತ್ಸಂಗತ್ವೇ - ಸತ್ಸಂಗದಿಂದ. ಹಾಗಾದರೆ ದುಸ್ಸಂಗವೆಂಬುದಿದೆಯೇ? ದುಸ್ಸಂಗವೆಂದರೇನು? ಪ್ರಾಪಂಚಿಕತೆಯೇ ಜೀವನವೆಂದು ನಂಬಿದವರೊಡನೆ ಒಡನಾಟ. ಅವರೊಡನೆ ಸಮಯಕಳೆದಷ್ಟೂ ನಮ್ಮ ಆಧ್ಯಾತ್ಮಿಕತೆಗೆ ಪೆಟ್ಟುಬೀಳುವುದು ಖಚಿತ. ಹಾಗಾಗಿ ಮೊದಲು ದುಸ್ಸಂಗತ್ಯಾಗ, ನಂತರ ಸತ್ಸಂಗಪ್ರಾಪ್ತಿ. 'ಸತ್' ಎಂದರೆ ಪರಮಾತ್ಮ. ಅವನೊಡನೆ ಸಂಯೋಗವಾಗುವುದೇ ನಿಜವಾದ ಸತ್ಸಂಗ. ಇಲ್ಲಿ ಸತ್ಸಂಗವೆಂದರೆ ಸದ್ಗುರುಗಳ, ಸಾಧು-ಸಂತರ, ಜ್ಞಾನಿಗಳ ಸಾನ್ನಿಧ್ಯವೆಂದು ತಿಳಿಯಬಹುದು. ಸಂಗವೆಂದರೆ ಸುಮ್ಮನೆ ಜೊತೆಯಿರುವುದಲ್ಲ ; ಅವರ ಒಡನಾಟದಲ್ಲಿದ್ದು, ಅವರ ಉಪದೇಶವನ್ನು ನಮ್ಮ ಜೀವನದಲ್ಲಿ ತರುವುದು. ಇಂಥ ಸತ್ಸಂಗ ದೊರೆಯುವುದು ಪೂರ್ವಜನ್ಮ ಸುಕೃತವೇ ಸರಿ. ಸತ್ಸಂಗದ ಮಹಿಮೆಯನ್ನು ತಿಳಿಸುವ ಕಥೆಗಳು ಪುರಾಣಗಳಲ್ಲಿ ಒಂದೇ ಎರಡೆ? ರತ್ನಾಕರ ವಾಲ್ಮೀಕಿಯಾದದ್ದು, ಧ್ರುವ ನಾರಾಯಣನ ದರ್ಶನ ಪಡೆದದ್ದು, ಪ್ರಹ್ಲಾದ ಮಹಾಭಕ್ತನಾದದ್ದು ಸತ್ಸಂಗದಿಂದಲೇ ಅಲ್ಲವೇ! ಸತ್ಸಂಗ ನಮಗೆ ಧರ್ಮ-ಅಧರ್ಮ, ಸಾಧ್ಯ-ಸಾಧನ, ನಿತ್ಯ-ಅನಿತ್ಯ ವಿವೇಕವನ್ನು ಮೂಡಿಸುವುದು. ವಿವೇಕಜಾಗೃತಿಗೆ ಸದ್ಗುರು ನಮಗೆ ಹಲವಾರು ಸಾಧನೆಗಳನ್ನು ಉಪದೇಶಿಸಬಹುದು. ಅದನ್ನು ಯಥಾಶಕ್ತಿ, ಯಥಾಭಕ್ತಿ ಕಾರ್ಯರೂಪಕ್ಕೆ ತರುವುದು ನಮ್ಮ ಕರ್ತವ್ಯ

 ನಿಸ್ಸಂಗತ್ವಂ - ಸತ್ಸಂಗದಿಂದ ನಿಸ್ಸಂಗ ದೊರೆಯುತ್ತದೆ. ನಿಸ್ಸಂಗವೆಂದರೆ ವಿವೇಕದಿಂದ ಬೆಳೆದ ವೈರಾಗ್ಯ. ಸತ್ಸಂಗವೆಂಬುದು ಆತ್ಮವಿಚಾರಕ್ಕೆ ಬೇಕಾದ ಪ್ರೇರಣೆಯನ್ನು ಕೊಡುವುದಷ್ಟೇ ಅಲ್ಲದೆ, ನಮ್ಮ ಅಧ್ಯಾತ್ಮಮಾರ್ಗನಿಷ್ಠೆಯನ್ನು ದೃಢಗೊಳಿಸುತ್ತದೆ. ಮಾರ್ಗದಲ್ಲಿ ಮುಂದುವರಿದಂತೆ ಪ್ರಾಪಂಚಿಕ ವಿಚಾರಗಳ ಮತ್ತು ಪ್ರಾಪಂಚಿಕ ಗಳಿಕೆಗಳ ಹಣೆಬರಹ(ಅನಿತ್ಯತೆ) ತಿಳಿದು ವೈರಾಗ್ಯ ಉತ್ಪತ್ತಿಯಾಗುವುದು ಸಹಜವಲ್ಲವೇ? ವೈರಾಗ್ಯ ಸ್ಮಶಾನವೈರಾಗ್ಯವೋ ಅಥವಾ ಜವಾಬ್ದಾರಿಯಿಂದ ಓಡಿಹೋಗುವ ಪಲಾಯನವಾದವೋ ಅಲ್ಲ. ಧರ್ಮಾಚರಣೆ, ಭಕ್ತಿ ಮತ್ತು ವಿವೇಕದಿಂದ ಸ್ವಾಭಾವಿಕವಾಗಿ ಬೆಳೆದ ಪ್ರಬುದ್ಧತೆ.

 ನಿಸ್ಸಂಗತ್ವೇ ನಿರ್ಮೋಹತ್ವಮ್ - ನಿಸ್ಸಂಗದಿಂದ ನಿರ್ಮೋಹತ್ವವು ಉಂಟಾಗುತ್ತದೆ. ಮೋಹವೆಂದರೆ ನಮ್ಮ ಬಗ್ಗೆ, ಸಂಬಂಧಗಳ ಬಗ್ಗೆ, ಜೀವನದ ಗುರಿಯ ಬಗ್ಗೆ ಇರುವ ತಪ್ಪುತಿಳುವಳಿಕೆ. ಆಚಾರ್ಯರು ಪ್ರಸ್ತುತ ಗ್ರಂಥದ ಒಂದನೇ ಶ್ಲೋಕದಿಂದ ಏಳನೇ ಶ್ಲೋಕದವರೆಗೆ ಮೋಹಗಳ ಪಟ್ಟಿಯನ್ನು ನೀಡುವುದಲ್ಲದೇ, ಮೋಹಗಳನ್ನು ಮುದ್ಗರದಿಂದ ನಾಶಮಾಡುವ ವಿಧಾನವನ್ನೂ ತಿಳಿಸಿದ್ದಾರೆ. ನಿರ್ಮೋಹವೆಂದರೆ ವಿವೇಕ-ವೈರಾಗ್ಯದಿಂದ ತಿಳಿದುಬಂದ ಸಾಧ್ಯ-ಸಾಧನಗಳ ಯಥಾರ್ಥಜ್ಞಾನ.

ಅಪರಾವಿದ್ಯೆ ಪರಾವಿದ್ಯೆಯ ಸಾಧನವಾಗಬೇಕು. ಅರ್ಥಪುರುಷಾರ್ಥ ಧರ್ಮಕ್ಕಾಗಿ ವಿನಿಯೋಗಿಸಬೇಕು. ಮನುಷ್ಯಜನ್ಮ ದೊರೆತಿರುವುದು ಮೋಕ್ಷಸಾಧನೆಗಾಗಿ ಎಂಬ ವಿಚಾರ ಮನದಟ್ಟಾಗುವುದು ಮುಖ್ಯ. ಅಧ್ಯಾತ್ಮ ಮಾರ್ಗದಲ್ಲಿ ಬರುವ ಸರ್ವಮೋಹಗಳಿಂದ ನಿರ್ಮೋಹನಾಗಲು ಸತ್ಸಂಗ(ವಿವೇಕ) ಮತ್ತು ನಿಸ್ಸಂಗ(ವೈರಾಗ್ಯ) ಸಾಧನವಾಗುತ್ತದೆ.

 ನಿರ್ಮೋಹತ್ವೇ ನಿಶ್ಚಲತತ್ತ್ವಂ - ಮೋಹಗಳಿಂದ ಹೊರಬರುವುದು ಸುಲಭವಲ್ಲ. ಅಧ್ಯಾತ್ಮಜ್ಞಾನವನ್ನು ಪಡೆಯುವ ಹಾದಿಯಲ್ಲಿ ಹಲವಾರು ಸಂಶಯಗಳು ಬುದ್ಧಿಯಲ್ಲಿ ಏಳುತ್ತವೆ. ಸಂಶಯಗಳಿಗೆಲ್ಲಾ ಉತ್ತರವನ್ನು ಹುಡುಕಬೇಕು. ಆತ್ಮವಿಷಯದಲ್ಲಿ ಸಂಶಯರಹಿತವಾದ ನಿಶ್ಚಯಜ್ಞಾನವನ್ನು ಮನನದಿಂದ ಮತ್ತು ಗುರುಗಳೊಡನೆ ಸಂವಾದದಿಂದ ಸಿದ್ಧಿಸಿಕೊಳ್ಳಬೇಕು ( ಛಿದ್ಯಂತೆ ಸರ್ವಸಂಶಯಾ: - ಮುಂಡಕ ಉಪನಿಷತ್ತು ). ಆಗ ಮನಸ್ಸು ಪೂರ್ಣ ಶಾಂತಿಯಲ್ಲಿರುತ್ತದೆ. ಹೀಗೆ ನಿಶ್ಚಲಚಿತ್ತಮ್ ಎಂಬ ಪಾಠಾಂತರವೂ ಇಲ್ಲಿ ಸೂಕ್ತವಾಗುತ್ತದೆ. 'ಆತ್ಮಚೈತನ್ಯವೇ ನಾನು' ಎಂಬ ತತ್ತ್ವದಲ್ಲಿ ನಿಶ್ಚಯಹೊಂದುವುದನ್ನು ನಿಶ್ಚಲತತ್ತ್ವ ಎಂದಿರುವುದು.

 ನಿಶ್ಚಲತತ್ತ್ವೇ ಜೀವನ್ಮುಕ್ತಿಃ - ತತ್ತ್ವನಿಶ್ಚಯದಿಂದಲೇ ಜೀವನ್ಮುಕ್ತಿ. ಪಡೆದಿರುವಂತಹ ಆತ್ಮಜ್ಞಾನವನ್ನು ಸ್ಥಿರವಾಗಿಸುವುದು ಜೀವನ್ಮುಕ್ತಿ. ಗೀತೆಯಲ್ಲಿ ತಿಳಿಸಿರುವ ಸ್ಥಿತಪ್ರಜ್ಞನ( ಏಷಾ  ಬ್ರಾಹ್ಮಿಸ್ಥಿತಿ ಪಾರ್ಥ... ), ಪರಾಭಕ್ತನ, ಗುಣಾತೀತನ ಲಕ್ಷಣ, ಜೀವನಚರ್ಯೆಯನ್ನು ನೆನಪುಮಾಡಿಕೊಳ್ಳುವುದು ಪ್ರಸ್ತುತವಿಷಯಕ್ಕೆ ಸಮಂಜಸವಾಗುತ್ತದೆ. ಯಾವ ಯಾವ ಗುಣಗಳನ್ನು ಸಾಧಕನು ಪ್ರಯತ್ನಪೂರ್ವಕವಾಗಿ ಸಿದ್ಧಿಸಿಕೊಳ್ಳಬೇಕೋ(ಸರ್ವಭೂತದಯೆ, ನಿಷ್ಕಾಮಭಾವ, ಸಂತುಷ್ಟಿ ಮುಂತಾದವು) , ಅವೆಲ್ಲವೂ ಜೀವನ್ಮುಕ್ತನಲ್ಲಿ ಅನಾಯಾಸವಾಗಿ ಹಾಗೂ ಸ್ವಾಭಾವಿಕವಾಗಿ ಕಂಡುಬರುತ್ತವೆ. ಜೀವನ್ಮುಕ್ತಿಯನ್ನು ಸಿದ್ಧಿಸಿಕೊಳ್ಳುವುದೇ ಮಾನವಜೀವನದ ಪರಮಗುರಿ.

 ಜಗತ್ತಿನ ಎಲ್ಲ ಅಧ್ಯಾತ್ಮ ಮಾರ್ಗಗಳೂ ಮುಕ್ತಿಯನ್ನೇ ಗುರಿಯಾಗಿ ಹೊಂದಿವೆ. ಕೆಲವು ಮಾರ್ಗಗಳು ಸತ್ತನಂತರ ಹೋಗಿ ಪಡೆಯುವ ಸ್ವರ್ಗ, ವೈಕುಂಠ ಮುಂತಾದ ಸ್ಥಳವನ್ನು ಸೇರುವುದೇ ಮುಕ್ತಿಯೆಂದರೆ, ಮತ್ತೆ ಕೆಲವು ಸಮಾಧಿ, ಬೋಧಿಯೆಂಬ ವಿಶೇಷಾನುಭವವನ್ನು ಮುಕ್ತಿಯೆನ್ನುತ್ತವೆ. ಆದರೆ, ವೇದಾಂತವು ಸಾರ್ವತ್ರಿಕವಾಗಿರುವ, ದಿನನಿತ್ಯದ ಅನುಭವವನ್ನೇ ವಿಚಾರಕ್ಕೊಳಪಡಿಸಿ, ಅನುಭವಕ್ಕೆಲ್ಲಾ ಸಾಕ್ಷಿಯಾದ ಚೈತನ್ಯದ ಅಪರೋಕ್ಷಜ್ಞಾನದಿಂದ ಮುಕ್ತಿಯನ್ನು ಇಲ್ಲೇ ಉಂಟುಮಾಡಿಸುತ್ತದೆ(here and now). ಇದೇ ಅದ್ವೈತವೇದಾಂತದ ವೈಶಿಷ್ಟ್ಯ. ಕೇನೋಪನಿಷತ್ತು - ಇಹ ಚೇದವೇದೀದಥ ಸತ್ಯಮಸ್ತಿ ಚೇದಿಹಾವೇದೀನ್ ಮಹತೀ ವಿನಷ್ಟಿ - ಎಂದು ಜೀವನ್ಮುಕ್ತಿಯೇ ಸತ್ಯವೆಂದು ಎತ್ತಿಹಿಡಿದಿದೆ.

  ಶ್ಲೋಕದಲ್ಲಿ ಜ್ಞಾನಯೋಗದ ಹಂತಗಳಾದ ಶಾಸ್ತ್ರಶ್ರವಣ (ಸತ್ಸಂಗ),  ಮನನ (ನಿಶ್ಚಲತತ್ತ್ವ) ಮತ್ತು ನಿದಿಧ್ಯಾಸನದ ಮೂಲಕ ಜೀವನ್ಮುಕ್ತಿಯನ್ನು ಸೂಕ್ಷ್ಮವಾಗಿ ಸೂಚಿಸಿರುವುದನ್ನು ಗಮನಿಸಬಹುದು

 ಸಾರಾಂಶ : ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣರ ಸತ್ಸಂಗವನ್ನು ಪಡೆದು, ಅವರ ಉಪದೇಶದಿಂದ ಪ್ರಾಪಂಚಿಕವಸ್ತುಗಳಿಂದ ನಿಸ್ಸಂಗಹೊಂದಿ, ತೀವ್ರವಾಗಿ ಆಧ್ಯಾತ್ಮಿಕ ಸಾಧನೆಗಳಲ್ಲಿ ಮುಳುಗಿ, ಅವರಲ್ಲಿದ್ದ ಮೋಹಗಳನ್ನೆಲ್ಲಾ ನಾಶಮಾಡಿಕೊಂಡು, ಯೋಗಿಯಂತೆ ನಿಶ್ಚಲಚಿತ್ತರಾಗಿ, ತತ್ತ್ವನಿಶ್ಚಯಮಾಡಿಕೊಂಡು, ಜಗತ್ತಿನಲ್ಲೆಲ್ಲಾ ವೇದಾಂತದ ಡಿಂಡಿಮವನ್ನು ಬಾರಿಸುತ್ತಾ, ಜೀವನ್ಮುಕ್ತರಾಗಿ ಬದುಕಿದ ಜೀವನ ಶ್ಲೋಕಕ್ಕೆ ಹಿಡಿದ ಕನ್ನಡಿಯಂತಿದೆ. ನಾವೂ ಕೂಡ ವೇದಾಂತ ಬೋಧಿಸುವ ಸಂಪ್ರದಾಯವಿದರಾದ ಸದ್ಗುರುಗಳನ್ನು ಅರಸಿ, ಆಶ್ರಯಿಸಿ, ವಿವೇಕ-ವೈರಾಗ್ಯವನ್ನು ಬೆಳೆಸಿಕೊಂಡು, ಅವರಿಂದ ಆತ್ಮವಿದ್ಯೆಯನ್ನು ಕ್ರಮಬದ್ಧವಾಗಿ ಕಲಿತು, ಬ್ರಹ್ಮಾತ್ಮ ಐಕ್ಯಜ್ಞಾನವನ್ನು ಹೊಂದುವ ಮೂಲಕ ಜೀವನ್ಮುಕ್ತಿಯನ್ನು ಪಡೆಯುವ ನಿರ್ಧಾರ ಮಾಡೋಣ - ಭಜಗೋವಿಂದಮ್.



No comments:

Post a Comment