🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 10 (Bhajagovindam - Sloka 10)

 ಶಂಕರಾಚಾರ್ಯರು ಭಜಗೋವಿಂದಮ್ ಗ್ರಂಥದಲ್ಲಿ ಒಬ್ಬ ವ್ಯಕ್ತಿಯಲ್ಲಿರುವ ವಿವಿಧ ಮೋಹಗಳನ್ನು ಮುದ್ಗರದಿಂದ ನಾಶಗೊಳಿಸಿ, ಮೋಕ್ಷದೆಡೆಗೆ ಸಾಗುವ ಉಪದೇಶವನ್ನು ನೀಡುತ್ತಿದ್ದಾರೆ. ಶ್ರೀಕೃಷ್ಣ, "ಧ್ಯಾಯತೋ ವಿಷಯಾನ್ ಪುಂಸ:..||" (ಗೀತೆ 2.62-63) ವ್ಯಕ್ತಿಯ ಅಧ:ಪತನದ ಹಾದಿಯನ್ನು ಎಚ್ಚರಿಕೆ ಗಂಟೆಯಂತೆ ಉಪದೇಶಿಸಿದರೆ(Ladder of fall), ಶಂಕರಾಚಾರ್ಯರು ಹಿಂದಿನ ಶ್ಲೋಕದಲ್ಲಿ, "ಸತ್ಸಂಗತ್ವೇ ನಿಸ್ಸಂಗತ್ವಂ..||" (.ಗೋ 9) ವ್ಯಕ್ತಿಯನ್ನು ಜೀವನ್ಮುಕ್ತಿಗೆ ಕರೆದೊಯ್ಯುವ ಏಣಿಯನ್ನು (Ladder of Rise) ತೋರಿಸಿಕೊಟ್ಟು ಪ್ರೇರೇಪಿಸಿದ್ದಾರೆ. ಜೀವನ್ಮುಕ್ತಿಯಿಂದ ಗಳಿಸುವುದಾದರೂ ಏನು? ಎಂದು ಪ್ರಶ್ನಿಸಿದರೆ ಸಂಸಾರನಿವೃತ್ತಿ. ಸಂಸಾರ ಎಂದರೆ ಕನ್ನಡ ಭಾಷೆಯಲ್ಲಿ ಉಪಯೋಗಿಸುವ ಕುಟುಂಬ ಎಂಬ ಅರ್ಥವೆಂದು ಭಾವಿಸದೇ, ಜನನ-ಮರಣಚಕ್ರವೆಂದು ತಿಳಿಯುವುದು ಸೂಕ್ತ. ಸಂಸಾರನಿವೃತ್ತಿರೂಪವಾದ ಮೋಕ್ಷ ಎಂದರೆ ಚಕ್ರದಿಂದ ಬಿಡುಗಡೆ ಎಂಬುದು ಎಲ್ಲ ಆಸ್ತಿಕರ ನಂಬಿಕೆ. ವ್ಯಕ್ತಿಯು ಮೋಕ್ಷಸಾಧನೆಯಿಂದ ಆತ್ಯಂತಿಕ ದುಃಖನಿವೃತ್ತಿ ಮತ್ತು ಪರಮಾನಂದಪ್ರಾಪ್ತಿಯನ್ನು ಗಳಿಸುತ್ತಾನೆ ಎಂಬುದು ಸರ್ವಶಾಸ್ತ್ರಗಳ ಉದ್ಘೋಷ.

ಜನನಮರಣಚಕ್ರದಲ್ಲಿ ತೊಂದರೆಯಾದರೂ ಏನು? ಇದರಲ್ಲೇ ಮಗ್ನನಾದರೆ ಕಳೆದುಕೊಳ್ಳುವುದಾದರೂ ಏನು? ಎಂದು ಪ್ರಶ್ನೆ ಕೇಳಬಹುದು. ನಮ್ಮೆಲ್ಲರ ಜೀವನವನ್ನೇ ಗಮನಿಸಿ. ಸಂಸಾರ ಎಂಬುದು ದುಃಖ, ಚಿಂತೆ, ಮಾನಸಿಕ ಅಸಮತೋಲನ, ಅಪೂರ್ಣತೆ ಹೀಗೆ ಹಲವಾರು ರೀತಿಯಲ್ಲಿ ವ್ಯಕ್ತವಾಗುತ್ತದೆ. ಇದೆಲ್ಲದರಿಂದ ಹೊರಬರುವುದೇ ನಮ್ಮೆಲ್ಲರ ಪ್ರಯತ್ನ ಅಲ್ಲವೇ? ದುಃಖನಿವಾರಣೆಗೆ ಅಥವಾ ಸುಖಪ್ರಾಪ್ತಿಗೆ ನಮ್ಮ ಪ್ರಯತ್ನಗಳು ವಸ್ತುವಿನ, ಸ್ಥಳದ, ವ್ಯಕ್ತಿಗಳ, ವೃತ್ತಿಯ, ಸಂದರ್ಭಗಳ ಅಥವಾ ಇನ್ನಾವುದರ ಬದಲಾವಣೆ ಮಾಡುವುದರಲ್ಲೇ ಆಗಿದೆ. ಆದರೂ ನಾವು ಪ್ರಯತ್ನದಲ್ಲಿ 100% ಸಫಲರಾಗಿದ್ದೇವೆಯೇ? ಯೋಚಿಸಿ. ಇವೆಲ್ಲವೂ ನಮಗೆ ಕ್ಷಣಿಕ ಪರಿಹಾರ ನೀಡಬಹುದಷ್ಟೇ. ರೋಗದಿಂದ ಬಳಲುತ್ತಿರುವ ವಕ್ತಿ, ರೋಗವನ್ನು ಸಮೂಲವಾಗಿ ತೆಗೆಯದೇ, ಅದರ ಲಕ್ಷಣಗಳಿಗಷ್ಟೇ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ಮತ್ತೆ ರೋಗ ಉಲ್ಬಣಗೊಂಡು, ತನ್ನ ಪ್ರತಾಪವನ್ನು ಇನ್ನಷ್ಟು ಪ್ರಮಾಣದಲ್ಲಿ ತೋರಿಸುತ್ತದೆ. ಹಾಗಾದರೆ ನಮಗಿರುವ ಮಾರ್ಗವೇನು? ಲಕ್ಷಣಗಳಿಗೆ ಕಾರಣವಾಗಿರುವ ರೋಗವನ್ನು ಆಮೂಲಾಗ್ರವಾಗಿ ನಿವಾರಿಸುವುದು. ಅಂತೆಯೇ ಸಂಸಾರನಿವೃತ್ತಿ ಎಂಬ ವ್ಯಾಧಿಗೆ ಬೇಕಾದ ಸೂಕ್ತಚಿಕಿತ್ಸೆಯನ್ನು ಉಪದೇಶವಾಗಿ ಆಚಾರ್ಯರು ಮುಂದಿನ ಶ್ಲೋಕದಲ್ಲಿ ಉಪಮೆಗಳ ಮೂಲಕ ವಿವರಿಸಿದ್ದಾರೆ.

ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ
ಕ್ಷೀಣೇ ವಿತ್ತೇ ಕಃ ಪರಿವಾರಃ
ಜ್ಞಾತೇ ತತ್ತ್ವೇ ಕಃ ಸಂಸಾರಃ ॥10

ವಯಸಿ ಗತೇ ಕಃ ಕಾಮವಿಕಾರಃ - ಯೌವ್ವನದ ವಯಸ್ಸು ಕಳೆದನಂತರ ಕಾಮವಿಕಾರಕ್ಕೆಲ್ಲಿ ಸ್ಥಳವಿರುತ್ತದೆ. ಇಲ್ಲಿ ಕಾಮವೆಂದಾಗ ಸ್ತ್ರೀ-ಪುರುಷ ಪರಸ್ಪರ ಆಕರ್ಷಣೆ ಎಂದು ಅರ್ಥೈಸುವುದು ಉತ್ತಮ. ವಿಕಾರ ಎಂದರೆ ಕಾರ್ಯ. ಯೌವ್ವನದ ವಯಸ್ಸಿನಲ್ಲಿ ಒಬ್ಬ ವ್ಯಕ್ತಿಯ ನಡೆ, ನುಡಿ, ಕೆಲಸಗಳ ಉದ್ದೇಶ ಹೇಗಾದರೂ ಮತ್ತೊಬ್ಬರನ್ನು ಆಕರ್ಷಿಸುವಲ್ಲಿ ಮತ್ತು ಕಾಮಗಳನ್ನು ಪೂರೈಸುವುದರಲ್ಲೇ ಇರುತ್ತದೆ. ವ್ಯಕ್ತಿ ವಯಸ್ಸಾದಂತೆ, ಆತನ ದೇಹ  ಕ್ಷೀಣಿಸಿ, ವೀರ್ಯಶಕ್ತಿಯನ್ನು ಕಳೆದುಕೊಳ್ಳುತ್ತದೆ. ನಂತರ ಕಾಮದ ಚೇಷ್ಟೆ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ವಯೋವೃದ್ಧರಲ್ಲಿ ಇಲ್ಲವೇ ಇಲ್ಲದಂತಾಗಬಹುದು. ಹಾಗಾಗಿ, ಯೌವ್ವನದ ನಮ್ಮೆಲ್ಲಾ ಕರ್ಮಗಳಿಗೆ ಕಾಮ ಕಾರಣವಾದರೆ, ಕಾಮಕ್ಕೆ ದೇಹದ ಬಲ/ಶಕ್ತಿ ಕಾರಣವಾಗುತ್ತದೆ. ಯೌವ್ವನ ಕಳೆದು ದೇಹ ದುರ್ಬಲವಾದಾಗ ಕಾಮ- ಕರ್ಮಗಳೂ ತಮ್ಮ ಪ್ರಬಲತೆಯನ್ನು ಕಳೆದುಕೊಂಡು ನಿಂತುಹೋಗುತ್ತದೆ.

ಶುಷ್ಕೇ ನೀರೇ ಕಃ ಕಾಸಾರಃ - ನೀರಿಲ್ಲದ ಸರೋವರವಾದರೂ ಯಾವುದು!? ಕಾಸಾರ ಎಂದರೆ ಕೊಳ, ಸರೋವರ ಹೀಗೆ ಯಾವುದಾದರೂ ಜಲಸ್ಥಾನವಾಗಬಹುದು. ಬಿಸಿಲಿನ ಬೇಗೆಯಿಂದಲೋ, ಬರಗಾಲದಿಂದಲೋ ನೀರೆಲ್ಲಾ ಆವಿಯಾದರೆ, ಸರೋವರವನ್ನು ಸರೋವರವೆಂದು ಕರೆಯಲು ಸಾಧ್ಯವೇ? ನೀರು ಕಾರಣ, ಸರೋವರ ಕಾರ್ಯ. ಕಾರಣವಿಲ್ಲದ ಕಾರ್ಯವಾದರೂ ಎಲ್ಲಿ!

ಕ್ಷೀಣೇ ವಿತ್ತೇ ಕಃ ಪರಿವಾರಃ - ಧನ, ಸಂಪತ್ತು ಕಳೆದುಕೊಂಡ ಮೇಲೆ ಬಂಧುಬಾಂಧವರು ಎಲ್ಲಿರುತ್ತಾರೆ. ನಮ್ಮಲ್ಲಿ ಧನ, ಅಧಿಕಾರ, ಸಂಪತ್ತುಗಳಿದ್ದಾಗ ಪರಿವಾರದವರಿಂದ ಸಿಗುವ ಪ್ರೀತಿ-ಗೌರವ-ಮನ್ನಣೆಗೂ, ಧನಹೀನನಾದವನಿಗೆ ದೊರೆಯುವ ಮರ್ಯಾದೆಗೂ ಅಜಗಜಾಂತರ ವ್ಯತ್ಯಾಸವಿರುವುದು ನಮ್ಮೆಲ್ಲರ ಅನುಭವದಲ್ಲೇ ಇದೆ. ಸಂದರ್ಭದಲ್ಲಿ ಹಾಸ್ಯೋಕ್ತಿಯಂತೆ ಕಾಣುವ ಸುಭಾಷಿತವೊಂದನ್ನು ನೆನಪಿಗೆ ತಂದುಕೊಳ್ಳಬಹುದು. "भो दारिद्र्य नमस्तुभ्यं सिद्धोऽहं त्वत्प्रसादतः | पश्याम्यहं जगतसर्वं मां पश्यति कश्चन ||" - "ಹೇ ದಾರಿದ್ರ್ಯವೇ, ನಿನಗೆ ನಮಸ್ಕಾರ! ನಿನ್ನ ಪ್ರಸಾದದಿಂದ ನಾನು ಸಿದ್ಧನಾಗಿದ್ದೇನೆ. ಜಗತ್ತೆಲ್ಲವನ್ನು ನಾನು ನೋಡಬಲ್ಲೆ. ಆದರೆ ಒಬ್ಬರೂ ನನ್ನ ಕಡೆ ತಿರುಗುವುದಿಲ್ಲ." ವಿತ್ತ ಮತ್ತು ಪರಿವಾರದ ಸಂಬಂಧವನ್ನು ಪ್ರಸ್ತುತಗ್ರಂಥದ "ಯಾವಾದ್ವಿತ್ತೋ..||" (.ಗೋ 5) ಶ್ಲೋಕದಲ್ಲಿ ವಿಶ್ಲೇಷಿಸಲಾಗಿದೆ.

ಮೇಲಿನ ಮೂರು ಉಪಮೆಗಳನ್ನು ಗಮನಿಸಿದಾಗ ನಮಗೆ ತಿಳಿದುಬರುವ ವಿಷಯಗಳೆಂದರೆ

1) ಕಾಮ, ಸರೋವರದ ನೀರು, ಪರಿವಾರಗಳೆಲ್ಲವೂ ಅನಿತ್ಯ.

2) ಕಾಮ ವಯಸ್ಸಿನ ಮೇಲೆ, ಸರೋವರ ನೀರಿನ ಮೇಲೆ ಅವಲಂಬಿಸಿದೆ ಮತ್ತು ಪರಿವಾರದವರು ಸಂಪತ್ತಿನ ಮೇಲೆ ಅವಲಂಬಿಸಿರುತ್ತಾರೆ 

3) ಕಾರಣ ನಾಶೇ ಕಾರ್ಯ ನಾಶ: - ನೀರು ತೆಗೆದರೆ ಸರೋವರ ನಾಶ, ವಿತ್ತನಾಶದಿಂದ ಪರಿವಾರನಿವೃತ್ತಿ ಹಾಗೂ ಯೌವ್ವನ ಹೋದನಂತರ ಕಾಮಭಾವನೆಗಳ ನಿವೃತ್ತಿ.

ಇಷ್ಟೆಲ್ಲಾ ಉದಾಹರಣೆಗಳನ್ನು ಕೊಟ್ಟ ಉದ್ದೇಶವಾದರೂ ಏನು? ಆಚಾರ್ಯರು ನಮಗೆ ತಿಳಿದಿರುವ ವಿಷಯವನ್ನೇ ಹೇಳುತ್ತಿರುವರಲ್ಲ ಎಂದೆನಿಸಬಹುದು. ಶ್ಲೋಕದ ಕಡೆಯಪಾದವೇ ಮುಖ್ಯ ಉಪದೇಶ.


ಜ್ಞಾತೇ ತತ್ತ್ವೇ ಕಃ ಸಂಸಾರಃ - ತತ್ತ್ವಜ್ಞಾನವಾದ ಬಳಿಕ ಸಂಸಾರವೆಲ್ಲಿ!? ಕರ್ಮಚಕ್ರದ ಸಂಸಾರದಿಂದ ಹೊರಬರಲು ಧಾರ್ಮಿಕರೆಲ್ಲರಿಗೂ ಆಸೆಯಿರುವುದು ಸಹಜ. ಆದರೆ ಸಂಸಾರದಿಂದ ಹೊರಬರಲು ಮಾಡುವ ಪ್ರಯತ್ನಗಳು ಅದರ ಮೂಲಕಾರಣದ ನಿರ್ಮೂಲನೆಯ ದಿಕ್ಕಿನಲ್ಲಿದೆಯೋ ಅಥವಾ ಸಂಸಾರದ  ಮೇಲ್ಮೈಲಕ್ಷಣಗಳಿಗೆ ಮುಲಾಮು ಹಾಕುವುದರಲ್ಲಿದೆಯೋ? ಕರ್ಮಚಕ್ರದಿಂದ ಬಿಡಿಸಿಕೊಳ್ಳಲು ಮತ್ತಷ್ಟು ಕರ್ಮದಿಂದ ಸಾಧ್ಯವಿಲ್ಲ. ಕರ್ಮಕ್ಕೆ ಕಾರಣ ಕಾಮ. ಕಾಮಕ್ಕೆ ಕಾರಣ ನಮ್ಮ ಬಗ್ಗೆ ನಮಗಿರುವ ಅವಿದ್ಯೆ. ಅವಿದ್ಯಾ-ಕಾಮ-ಕರ್ಮದ ಚಕ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಜೀವ, ಸಂಸಾರದಿಂದ ಹೊರಬರಲು ಅವಿದ್ಯೆ/ಅಜ್ಞಾನ ತೊಲಗಿಸುವುದೊಂದೇ ಮಾರ್ಗ. ವಿಷಯವನ್ನೇ ಆಚಾರ್ಯರು ಇಲ್ಲಿ ತಿಳಿಸಿರುವುದು - ಆತ್ಮಜ್ಞಾನವನ್ನು ಪಡೆದವನಿಗೆ ಇನ್ಯಾವ ಸಂಸಾರ? ನಾವು ಅರಸುತ್ತಿರುವ ಶಾಂತಿ, ಆನಂದ, ಪೂರ್ಣತೆ ಎಲ್ಲವೂ ನಮ್ಮ ಸ್ವರೂಪವೇ ಆಗಿದೆ. ಅದನ್ನು ತಿಳಿಯುವುದಷ್ಟೇ ಮೋಕ್ಷ. ಮೋಕ್ಷವೆಂಬುದು ಯಾವುದೇ ಕರ್ಮದಿಂದಲ್ಲ; ಜ್ಞಾನದಿಂದ ಮಾತ್ರ ಸಾಧ್ಯ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ. ತನ್ನ ಜೇಬಿನಲ್ಲಿರುವ ಅನರ್ಘ್ಯವಸ್ತುವನ್ನು ಮರೆತು ಊರೆಲ್ಲಾ ಹುಡುಕಿ, ಕಂಗಾಲಾಗಿರುವ ವ್ಯಕ್ತಿಗೆ ಜೇಬಿನಲ್ಲಿರುವ ವಸ್ತುವಿನ ಜ್ಞಾನಮಾತ್ರದಿಂದ ಸರ್ವದುಃಖನಿವಾರಣೆಯಾಗುವಂತೆ ನಮ್ಮ ಜೀವನದ ಸರ್ವದುಃಖನಿವಾರಣೆಗೆ ಆತ್ಮಜ್ಞಾನವೊಂದೇ ಮದ್ದು.

ಸಾರಾಂಶ : ರಕ್ತಬೀಜಾಸುರನನ್ನು ಸಂಹಾರಮಾಡಲು ಹಲವು ದೇವತೆಗಳು ಹರಸಾಹಸ ಮಾಡಿದರೂ ಸಾಧ್ಯವಾಗದೇ, ಅಸುರನ ಪ್ರತಾಪ ಹೆಚ್ಚಾಗುತ್ತಾ ಹೋಯಿತು. ಆಮೂಲಾಗ್ರವಾಗಿ ದುರ್ಗಾಪರಮೇಶ್ವರಿ ಅವನನ್ನು ನುಂಗಿಹಾಕಿದಾಗಲೇ ಅವನ ಅಟ್ಟಹಾಸ ನಿಂತದ್ದು. ಕರ್ಮ, ಪೂಜೆ, ಧ್ಯಾನ, ಭಕ್ತಿ, ಮುಂತಾದ ಮಾರ್ಗಗಳಿಂದ ಅಧ್ಯಾತ್ಮಸಾಧನೆಗೆ ಸಹಾಯವಾಗಬಹುದಾದರೂ, ಸಂಸಾರದ ಅಟ್ಟಹಾಸವನ್ನು ಸಮೂಲವಾಗಿ ಹೋಗಲಾಡಿಸಲು ಬ್ರಹ್ಮಾತ್ಮ ಐಕ್ಯಜ್ಞಾನವೊಂದೇ ಮಾರ್ಗ ("ಸರ್ವಂ ಕರ್ಮಾಖಿಲಮ್ ಪಾರ್ಥ..||" ಗೀತೆ - 4.33). ಹಾಗಾಗಿ, ನಮ್ಮ ಪ್ರಯತ್ನಗಳೆಲ್ಲವೂ ಸಹಕಾರಿ ಸಾಧನೆಗಳನ್ನು ಉಪಯೋಗಿಸಿಕೊಂಡು, ಜ್ಞಾನಮಾರ್ಗದಿಂದ ಆತ್ಮಸಾಕ್ಷಾತ್ಕಾರದೆಡೆಗೆ ಸಾಗುವಂತಾಗಲಿ ಎಂದು ಪ್ರಾರ್ಥಿಸೋಣ - ಭಜಗೋವಿಂದಮ್





1 comment:

  1. Soo nice and depth information thank you Guruji. Dandvat pranams

    ReplyDelete