🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 11 (Bhajagovindam - Sloka 11)

ಸಂಸಾರಚಕ್ರದಲ್ಲಿ ಬಿದ್ದು ನರಳಾಡುತ್ತಿರುವ ಜೀವಿಗಳನ್ನುದ್ದೇಶಿಸಿ, ಆಚಾರ್ಯ ಶಂಕರರು ಕನಿಕರದಿಂದ ಮೊಕ್ಷೋಪಾಯವನ್ನು ಉಪದೇಶಿಸಿರುವ ಸ್ತೋತ್ರರೀತಿಯ ವೇದಾಂತ ಪ್ರಕರಣ ಗ್ರಂಥವೇ ಭಜಗೋವಿಂದಮ್. ನಮ್ಮಲ್ಲಿ ಅನಾದಿಕಾಲದಿಂದಲೂ ಅಡಕವಾಗಿರುವ ಅವಿದ್ಯೆಯನ್ನು ನಾಶಮಾಡುವ ಆತ್ಮಜ್ಞಾನವೊಂದೇ ಮೋಕ್ಷಸಾಧನ ಎಂಬುದು ವೇದಾಂತ ಡಿಂಡಿಮ. ಮಾರ್ಗದಲ್ಲಿ ಬಂದೊದಗಬಹುದಾದ ಮೋಹಗಳನ್ನು, ಅದರಿಂದ ಹೊರಬರುವ ವಿಧಾನವನ್ನು ಮತ್ತು ಆತ್ಮಜ್ಞಾನವನ್ನು ಪಡೆಯುವ ಪರಿಯನ್ನು ಇಲ್ಲಿಯವರೆಗೆ ತಿಳಿಸಿದ್ದಾರೆ. ಇಷ್ಟೆಲ್ಲಾ ತಿಳಿದಿದ್ದರೂ ನಮ್ಮ ಪ್ರಯತ್ನಗಳು ಹಲವು ಬಾರಿ ವಿಫಲವಾಗುವುದರ ಕಾರಣ ಜಗತ್ತಿನ ವಸ್ತು-ವಿಷಯಗಳ ಮೇಲಿರುವ ಸಂಗ(ಅಂಟು). ನಾವೆಲ್ಲರೂ ಅಂಟಿನ ನಂಟನ್ನು ಬಿಡಿಸಿಕೊಂಡು ಮೋಕ್ಷಸ್ವರೂಪದಲ್ಲಿ ನೆಲೆನಿಲ್ಲಬೇಕೆಂಬ ಆಶಯದಿಂದ ಶಂಕರರು ಹೀಗೆ ಉಪದೇಶಿಸುತ್ತಿದ್ದಾರೆ.

ಮಾ ಕುರು ಧನ-ಜನ-ಯೌವನ-ಗರ್ವಂ

ಹರತಿ ನಿಮೇಷಾತ್ಕಾಲಃ ಸರ್ವಮ್

ಮಾಯಾಮಯಮಿದಮಖಿಲಂ ಹಿತ್ವಾ

ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ 11 ||

ಪ್ರಸ್ತುತ ಶ್ಲೋಕದಲ್ಲಿ ಮುಕ್ತಿಯನ್ನು ಪಡೆಯುವ ಆಸಕ್ತಿ ಹೊಂದಿರುವ ಮುಮುಕ್ಷುಗಳ ಜೀವನದಲ್ಲಿ ಅಡ್ಡಬರುವ ವಿಷಯಗಳು, ಅವುಗಳ ನೈಜತೆ ಮತ್ತು ಅವುಗಳಿಂದ ಹೊರಬರುವ ಪರಿಯನ್ನು ಸೂಚಿಸಲಾಗಿದೆ.

 ಮಾ ಕುರು ಧನ-ಜನ-ಯೌವನ-ಗರ್ವಂ - ಯೌವ್ವನ, ಧನ, ಜನರ ಗರ್ವವನ್ನು ಹೊಂದಬೇಡ. ಇಲ್ಲಿ ಯೌವ್ವನವನ್ನೋ, ಧನವನ್ನೋ ಅಥವಾ ಜನ/ಸಂಬಂಧಿಕರನ್ನೋ ದೂಷಿಸಿಲ್ಲ; ಅದರಿಂದ ಹುಟ್ಟುವ ಗರ್ವವನ್ನು ದೂಷಿಸಲಾಗಿದೆ

ಯೌವ್ವನದ ಗರ್ವ - ಯಾವುದೇ ವ್ಯಕ್ತಿಗಾದರೂ ಗರ್ವ, ಮದ, ಅಹಂಕಾರ ತೋರಲು ಮೊದಲ ಕಾರಣವೆಂದರೆ ಯೌವ್ವನ. ತಂದೆ/ತಾಯಿಯ ಅಸರೆಯಲ್ಲಿದ್ದು ಎಲ್ಲಕ್ಕೂ ಅವರನ್ನು ಅವಲಂಬಿಸುತ್ತಿದ್ದ ತರುಣರು, ಯೌವ್ವನಕ್ಕೆ ಪ್ರವೇಶಿಸಿದ ನಂತರ ತಂದೆ-ತಾಯಂದಿರ ಮಾತನ್ನು ಕೇಳುವುದಿರಲಿ, ಅವರನ್ನೇ ದೂಷಿಸುವುದನ್ನು ಕಂಡಿಲ್ಲವೇ? 'ದೇವಾಲಯಕ್ಕೆ ಹೋಗು' ಅಥವಾ 'ಪ್ರಾರ್ಥನೆ ಮಾಡು' ಎಂಬ ಉಪದೇಶವೆಲ್ಲವೂ ಯಾರಲ್ಲಿ ಶಕ್ತಿಯಿಲ್ಲವೋ, ದುರ್ಬಲರೋ ಅಂಥವರಿಗೇ ಮಾತುಗಳು ಸರಿ ಎಂದು ಯುವಕರು ಧರ್ಮ, ದೇವರು, ಶಾಸ್ತ್ರಗಳನ್ನು ವ್ಯಂಗ್ಯಮಾಡುವುದಕ್ಕೆ ನಾವೆಲ್ಲಾ ಮೂಕಪ್ರೇಕ್ಷಕರಾಗಿಲ್ಲವೇ?ಯುವಕರಲ್ಲಿರುವ ದೈಹಿಕಶಕ್ತಿ, ಬುದ್ಧಿಸಾಮರ್ಥ್ಯದಿಂದ ಮದಾಂಧರಾಗಿ ಗುರುಹಿರಿಯರನ್ನೂ ನಿಂದಿಸುವ ಪ್ರಕ್ರಿಯೆಯನ್ನು ನೋಡಿದಾಗ ನಾವೆತ್ತ ಸಾಗುತ್ತಿದ್ದೇವೆ ಎಂಬ ಪ್ರಶ್ನೆ ಏಳುವುದು ಸಹಜ. ಜಗತ್ತನ್ನೇ ಬುಡಮೇಲು ಮಾಡುವ ಶಕ್ತಿ ತಮಗಿದೆಯೆಂಬ ಮೋಹಕ್ಕೊಳಪಡಿಸುತ್ತದೆ ಯೌವ್ವನದ ಗರ್ವ!

ಧನದ ಗರ್ವ - ಯೌವ್ವನದ ಅವಸ್ಥೆಯಲ್ಲಿ ಹೆಚ್ಚು ಸಂಬಳ ದೊರಕುವ ಕೆಲಸವಿದ್ದರೆ ವ್ಯಕ್ತಿಯ ಗರ್ವ ದುಪ್ಪಟ್ಟಾಗುತ್ತದೆ. ಧನದಿಂದ ತೀರದ ಬಯಕೆಗಳ ಬೆನ್ನತ್ತಿಹೋಗುವುದು, ರಂಗುರಂಗಿನ ಉಡುಪುಗಳು, ಕಾರು, ಬಂಗಲೆ ಮುಂತಾದ ವಿಷಯ-ವಸ್ತುಗಳನ್ನು ಅವಶ್ಯವಲ್ಲದಿದ್ದರೂಪ್ರದರ್ಶನಕ್ಕಾಗಿ ಖರೀದಿಸಿ ವಿಜೃಂಭಿಸುವುದು ಇಂದಿನ ಸಮಾಜದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇಂಥಹ ವ್ಯಕ್ತಿಯ ಗರ್ವದ ಪರಿಮಾಣ ಎಷ್ಟೆಂದು ಊಹಿಸಲಸಾಧ್ಯ.

ಜನ ಗರ್ವ - ಯೌವ್ವನವೂ ಇದ್ದು, ಧನ-ಸಂಪತ್ತೂ ಇದ್ದರೆ ಸುತ್ತಮುತ್ತ ಹೊಗಳುಭಟ್ಟರಿಗೇನು ಕೊರತೆ! 'ನೀನೇ ಇಂದ್ರ, ನೀನೇ ಚಂದ್ರ. ನಿನ್ನಿಂದಲೇ ಎಲ್ಲವೂ ನಡೆಯುತ್ತಿರುವುದು' ಎಂದು ಏರಿಸಿದರೆ, ಮನುಷ್ಯನ ಗರ್ವವು ಸಾವಿರಪಟ್ಟಾಗುತ್ತದೆ. ವ್ಯಕ್ತಿ ಎಲ್ಲೇ ಹೋದರೂ, ಇವರ ಸುತ್ತಮುತ್ತ ಜನರ ದಂಡು ಕಾಣುತ್ತದೆ. ಇವೆಲ್ಲವೂ ಇರುವ ವ್ಯಕ್ತಿ ಭೂಮಿಯ ಮೇಲೆ ನಡೆಯುವುದಕ್ಕಿಂತ ಕಾಲ್ಪನಿಕ ಆಕಾಶದಲ್ಲೇ ತೇಲಾಡುತ್ತಿರುತ್ತಾನೆ(cloud nine). 

ಇಂದಿನ ಯುವಸಮಾಜ ಧನ-ಜನ-ಯೌವ್ವನವೇ ತಮ್ಮ ಜೀವನದ ಗುರಿಯೆಂದು ಭಾವಿಸಿ ನಡೆಯುತ್ತಿರುವುದು ವಿಪರ್ಯಾಸ. ಇದರಲ್ಲಿ ಒಂದರ ಪ್ರಾಪ್ತಿಯಿಂದಲೇ ಗರ್ವ, ಡಂಭ ಬರುವಾಗ, ಮೂರೂ ಒಬ್ಬ ವ್ಯಕ್ತಿಯಲ್ಲಿದ್ದರೆ (3 in 1 offer) ಗರ್ವದ ಮೂರ್ತರೂಪವೇ ಆಗಿಬಿಡುತ್ತಾನೆ.

ಮಾ ಕುರು ಗರ್ವಂ - ಗರ್ವ ಪಡಬೇಡ. ಏಕೆಂದರೆ, ಗರ್ವದಿಂದ ಅಹಂಕಾರ ಹೆಚ್ಚಾಗುತ್ತದೆ. ಅಹಂಕಾರ ಹೆಚ್ಚಾದಷ್ಟೂ ದೇಹಾಭಿಮಾನ ಗಾಢವಾಗುತ್ತಾ ಬರುತ್ತದೆ. ದೇಹಾಭಿಮಾನದ ಸಂಸ್ಕಾರ ಮನಸ್ಸಿನಲ್ಲಿ ಅಚ್ಚಾಗುತ್ತಾ ಧನ-ಜನ-ಯೌವ್ವನದ ಮೇಲಿನ ಅವಲಂಬನೆ ಹೆಚ್ಚಾಗಿ, ವಿಷಯವಸ್ತುಗಳ ದಾಸನಾದ ವ್ಯಕ್ತಿ ಅಧ್ಯಾತ್ಮಮಾರ್ಗದಿಂದ ವಿಮುಖರಾಗುವುದು ಖಚಿತ. (ಕ್ಲೇಶೋಧಿಕ...ದೇಹವದ್ಭಿ: ಅವಾಪ್ಯತೆ|| ಗೀತೆ - 12.5)

ಇದನ್ನೇ ಅಲ್ಲವೇ ಡಿ.ವಿ.ಜಿ. ಮಂಕುತಿಮ್ಮನ ಕಗ್ಗದಲ್ಲಿ ವಿವರಿಸಿರುವುದು

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |

ಚಿನ್ನದಾತುರಕಿಂತ ಹೆಣ್ಣುಗಂಡೊಲವು || 

ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |

ತಿನ್ನುವುದದಾತ್ಮವನೆ - ಮಂಕುತಿಮ್ಮ ||

 ಧನ-ಜನ-ಯೌವ್ವನವನ್ನು ಜೀವನದ ಪರಮಗುರಿಯಾಗಿ ಮಾಡಿಕೊಳ್ಳಬಾರದೇಕೆ?

ಹರತಿ ನಿಮೇಷಾತ್ಕಾಲಃ ಸರ್ವಮ್ - ಇವೆಲ್ಲವನ್ನೂ ಕಾಲತತ್ತ್ವವು ಕ್ಷಣಮಾತ್ರದಲ್ಲಿ ಕಸಿದುಕೊಳ್ಳುತ್ತದೆ. ಕಳೆದ ವರ್ಷ ಒಂದು ದೊಡ್ಡ ಅಂತಾರಾಷ್ಟ್ರೀಯ IT ಸಂಸ್ಥೆಯು ಒಬ್ಬ ಯುವ ಇಂಜಿನಿಯರ್ ಅನ್ನು best performer of the company ಎಂದು ಘೋಷಿಸಿ, ಭಾರೀ ಪ್ರಮಾಣದ ಬಹುಮಾನವನ್ನು ನೀಡಿತ್ತು. ಅದೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜನರೆಲ್ಲ ವ್ಯಕ್ತಿಯನ್ನು ಹೊಗಳಿ, ಗುಣಗಾನ ಮಾಡುತ್ತಿರುವಾಗಲೇ, ಅವನನ್ನು ಯಾವುದೋ ಕಾರಣದಿಂದ ಅದೇ ಸಂಸ್ಥೆ pink slip ನೀಡಿ ಕೆಲಸದಿಂದ ವಜಾ ಮಾಡಿತ್ತು. ವ್ಯಕ್ತಿಯ ಗತಿಯೇನಾಗಿರಬೇಡ! ಉಗ್ರರ ದಾಳಿಯಿಂದ ಇಸ್ರೇಲ್ನಲ್ಲಿ ವಾಸಿಸುತ್ತಿದ್ದ ಹಲವರು ಧನ-ಜನರನ್ನು ಕಳೆದುಕೊಳ್ಳುವುದರೊಂದಿಗೆ, ಜೀವನವನ್ನೇ ಕಳೆದುಕೊಂಡರಲ್ಲ. ಚರಿತ್ರೆಯಲ್ಲಿ ಪ್ರವಾಹ, ಭೂಕಂಪ ಇನ್ನಿತರೆ ಪ್ರಾಕೃತಿಕ ವಿಕೋಪಕ್ಕೊಳಗಾಗಿ ಸರ್ವವನ್ನೂ ಕಳೆದುಕೊಂಡ ಜನರೆಷ್ಟೋ!  'ನಮ್ಮದು' ಎಂದು ಗಟ್ಟಿಯಾಗಿ ಹಿಡಿದುಕೊಂಡು ಜೀವಿಸುತ್ತಿರುವುದೆಲ್ಲವನ್ನೂ ಕಾಲವೆಂಬುದು ಕ್ಷಣಮಾತ್ರದಲ್ಲಿ ಕಸಿದುಕೊಂಡು ಬಿಡುತ್ತದೆ. ಇವೆಲ್ಲವೂ ಕಾಲತತ್ತ್ವದ ಆಟವೇ

 ಹಾಗಾದರೆ, ಇದಾವುದನ್ನೂ ಗಳಿಸಬಾರದೇ? ಉಪದೇಶ ನಿರಾಶಾವಾದವಾಗುವುದಿಲ್ಲವೇ? ಹೀಗೆ ಅರ್ಥೈಸಬಾರದೆಂದು

ಮಾಯಾಮಯಮಿದಮಖಿಲಂ ಹಿತ್ವಾ - ಧನ-ಜನ-ಯೌವ್ವನವೆಲ್ಲವೂ ಮಾಯೆಯ ಕಾರ್ಯವೆಂದು ತಿಳಿದು ಮನಸ್ಸಿನಿಂದ ತ್ಯಾಗಮಾಡುವುದು. ಶಾಸ್ತ್ರೀಯ ಅರ್ಥಕ್ಕೆ ಹೋಗದೆ, ಪ್ರಸ್ತುತದಲ್ಲಿ ಮಾಯಾಮಯವೆಂದರೆ ಹುಸಿತೋರಿಕೆಯೆಂದು ತಿಳಿದರೆ ಸಾಕು. ನಮ್ಮೆಲ್ಲ ಪ್ರಾಪಂಚಿಕ ಗಳಿಕೆಗಳು ಅನಿತ್ಯ, ಅಸಾರ ಮತ್ತು ಬಂಧಕವೇ ಆಗಿವೆ. ವಸ್ತುಗಳು ನಮ್ಮೊಡನೆ ಇರುವಂತೆ ತೋರಿ, ಮರುಕ್ಷಣವೇ ಇಲ್ಲದಂತಾಗಬಹುದಾದ ಕಾರಣ ಇವೆಲ್ಲವೂ ಅನಿತ್ಯವೇ. ಎಷ್ಟೇ ಗಳಿಸಿದರೂ ಪರಿಪೂರ್ಣ ಆನಂದ ದೊರಕದ ಕಾರಣ ಇವೆಲ್ಲವೂ ಅಸಾರವೇ. ನಮ್ಮನ್ನು ಸಂಸಾರಚಕ್ರದಲ್ಲಿ ಮುಳುಗಿಸುವ ಕಾರಣ ಇವೆಲ್ಲವೂ ಬಂಧಕವೇ. ( ದುಃಖಾಲಯಮ್ ಅಶಾಶ್ವತಮ್ - ಗೀತೆ 8.15 ). ವಿವೇಕ-ವೈರಾಗ್ಯದ ಶಕ್ತಿಯಿಂದ ನಾವು ಅನಿತ್ಯ ವಸ್ತುಗಳಿಗೆ ಅಂಟಿಕೊಳ್ಳದೇ, ವಸ್ತುನಿಷ್ಠರಾಗಿ (objectivity) ಜೀವಿಸಬೇಕೆಂಬುದು ಆಶಯ. ಇಲ್ಲದಿದ್ದರೆ ಕೈಲಾಗದವರ ನಿರಾಶಾವಾದವಾಗಬಹುದು  (grapes are sour theory).

 ವಿವೇಕ-ವೈರಾಗ್ಯದ ಆಧಾರದ ಮೇಲೆ ಜಗತ್ತಿನ ಅನಿತ್ಯತೆಯನ್ನು ತಿಳಿದು ಮುಮುಕ್ಷುತ್ವದಿಂದ ಅಧ್ಯಾತ್ಮದಲ್ಲಿ ಮುನ್ನಡೆಯಬೇಕೆಂದು ಎಂದು -

ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ - ನೀನು ಪರಮಸತ್ಯವನ್ನು ತಿಳಿದು ಬ್ರಹ್ಮಪದವನ್ನು ಪ್ರವೇಶಿಸುವವನಾಗು. ಬ್ರಹ್ಮಪದವೆಂಬುದು ಮತ್ತಾವುದೇ ಲೋಕಪ್ರಾಪ್ತಿಯಲ್ಲದೆ, ಆತ್ಮವು ನಿತ್ಯ-ಶುದ್ಧ-ಬುದ್ಧ-ಮುಕ್ತಸ್ವರೂಪವೆಂಬ ನಿಶ್ಚಯಜ್ಞಾನವೇ ಆಗಿದೆ. ಇದನ್ನು ಸೂಚಿಸಲೆಂದೇ 'ವಿದಿತ್ವಾ' ಎಂಬ ಪದವನ್ನು ಉಪಯೋಗಿಸಿರುವುದು. ಜಗತ್ತನ್ನು ತುಚ್ಛವಾಗಿ ಕಾಣದೆ, ಜಗತ್ತಿಗೆ ಆಧಾರವಾದ ಬ್ರಹ್ಮವಸ್ತುವನ್ನು ಹೃದಯಗುಹೆಯಲ್ಲಿ, 'ನಾನೇ ಬ್ರಹ್ಮವಾಗಿದ್ದೇನೆ', ಎಂಬ ಜ್ಞಾನವೇ ಮೋಕ್ಷ.( ತಮೇವ ವಿದಿತ್ವಾ ಅತಿಮೃತ್ಯುಮೇತಿ ನಾನ್ಯ: ಪಂಥಾ ವಿದ್ಯತೇ ಅಯನಾಯ - ಶ್ವೇ.  ) ಇದೇ ಅಧ್ಯಾತ್ಮಮಾರ್ಗದ ಪರಾಮಗುರಿ.

 ಸಾರಾಂಶ : ಯೌವ್ವನ-ಧನ-ಜನ-ಅಧಿಕಾರದ ಗರ್ವದಿಂದ ಉಬ್ಬಿಹೋಗಿದ್ದ ಅಲೆಗ್ಸಾಂಡರ್, ಜಗತ್ತನ್ನೇ ತನ್ನ ಕೈವಶ ಮಾಡಿಕೊಳ್ಳುವ ಪ್ರಯತ್ನ ಮಾಡಿ, ಪರಿಪೂರ್ಣ ಯಶಸ್ಸನ್ನೂ ಸಾಧಿಸದೆ, ತನ್ನ ಮರಣದ ಸಮಯದಲ್ಲಿ ತನ್ನ ಸೇವಕರಿಗೆ ಹೀಗೆ ಆದೇಶಿಸುತ್ತಾನೆ, "ಜಗತ್ತನ್ನೇ ಗೆಲ್ಲಲು ಹೊರಟ ಅಲೆಗ್ಸಾಂಡರ್ ತೆರಳುವಾಗ ಏನೂ ತೆಗೆದುಕೊಂಡು ಹೋಗಲಾಗಲಿಲ್ಲ ಎಂದು ತಿಳಿಸಲು ನನ್ನ ಎರಡೂ ಕೈಗಳನ್ನು ಶವಪೆಟ್ಟಿಗೆಯ ಹೊರಗೆ, ಆಕಾಶದೆಡೆಗೆ ಮುಖಮಾಡುವಂತೆ ಅಂತಿಮಯಾತ್ರೆ ಮಾಡಿ ". ಜೀವನದ ಪ್ರತಿಯೊಂದು ಗಳಿಕೆಯನ್ನೂ ಈಶ್ವರಪ್ರಸಾದವೆಂದು ತಿಳಿದು, ಚಿತ್ತಶುದ್ಧಿಯನ್ನು ಗಳಿಸಿ, ಮಾಯಮಯಜಗತ್ತಿನ ವಿಷಯಗಳಿಗೆ ಅಂಟಿಕೊಳ್ಳದೆಸದ್ಗುರುಗಳನ್ನಾಶ್ರಯಿಸಿ, ಬ್ರಹ್ಮತತ್ತ್ವವನ್ನು ತಿಳಿದು, ಮೋಕ್ಷಸ್ವರೂಪವನ್ನು ಹೊಂದೋಣವೇ - ಭಜಗೋವಿಂದಮ್.


No comments:

Post a Comment