🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 13 (Bhajagovindam - Sloka 13)

ಹಲವಾರು ಉಪನ್ಯಾಸಕರ ಪ್ರವಚನವನ್ನು ಕೇಳಿದಾಗ, ಅವರು ಮಾತನಾಡಿದ ವಿಷಯಗಳು ನಮ್ಮೆಲ್ಲರಿಗೂ ಇಷ್ಟವೇನೋ ಆಗಬಹುದು. ಆದರೆ, ಅವರ ಪ್ರವಚನದ ವಿಷಯವೇನು ಎಂಬುದೇ ತಿಳಿಯುವುದಿಲ್ಲ. ಏಕೆಂದರೆ, ಪ್ರಾರಂಭವೇ ಒಂದು ರೀತಿಯಿಂದಿದ್ದು, ವಿಷಯ ಪ್ರಸ್ತಾವನೆ ಇನ್ನೊಂದಾಗಿದ್ದು, ಕೊನೆಯಲ್ಲಿ ಉಪಸಂಹಾರ ಮತ್ತೊಂದು ರೀತಿಯದ್ದಾಗಿರುವ ಅನುಭವ ನಮಗೆಲ್ಲರಿಗೂ ಆಗಿರುತ್ತದೆ. ಆದರೆ, ಅಚಾರ್ಯಶ್ರೇಷ್ಠರಾದ ಶಂಕರರು, ವಯೋವೃದ್ಧನನ್ನು ನೆಪಮಾಡಿಕೊಂಡು, ನಮ್ಮಲ್ಲಿರುವ ಮೋಹಗಳನ್ನು ನಾಶಮಾಡುವ ಏಕೈಕ ವಿಷಯವನ್ನುಪಕ್ರಮಿಸಿ, ಉಪನ್ಯಾಸದ ಉಪಸಂಹಾರದಲ್ಲೂ ನಮ್ಮೆಲ್ಲರನ್ನೂ ಮೋಹದಿಂದ ಮೋಕ್ಷದೆಡೆಗೆ ಕರೆದೊಯ್ಯುವ ಉಪದೇಶವನ್ನು ನೀಡುತ್ತಿದ್ದಾರೆ.

ಕಾ ತೇ ಕಾಂತಾ ಧನಗತಚಿಂತಾ

ವಾತುಲ ಕಿಂ ತವ ನಾಸ್ತಿ ನಿಯಂತಾ

ತ್ರಿಜಗತಿ ಸಜ್ಜನಸಂಗತಿರೇಕಾ

ಭವತಿ ಭವಾರ್ಣವತರಣೇ ನೌಕಾ ॥ 13

 

ಹೇ ವಾತುಲ - ಎಲೈ ಮೂರ್ಖಶಿಖಾಮಣಿ! ಪ್ರಾರಂಭದಿಂದ ನಮ್ಮನ್ನೆಲ್ಲ ಮೂಢ, ಮೂರ್ಖ, ಭ್ರಾಂತ ಎಂದು ಸಂಬೋಧಿಸಿದ ಆಚಾರ್ಯರು, ಇನ್ನೂ ಮೋಹಗಳಿಂದ ಎಚ್ಚರಗೊಳ್ಳದ ಸುಪ್ತರನ್ನು(ನಮ್ಮೆಲ್ಲರನ್ನು) ಬಡಿದೇಳಿಸಲು ಹೀಗೆ ಸಂಬೋಧಿಸಿದ್ದಾರೆ. ವಿಷಯ ವಸ್ತುಗಳೆಡೆಗೆ ಚೆಲ್ಲಾಪಿಲ್ಲಿಯಾದ, ಅಶಾಂತ ಮನಸ್ಸಿರುವವರೆಲ್ಲರಿಗೂ 'ವಾತುಲ' ಸಂಬೋಧನೆ ಅನ್ವಯವಾಗುತ್ತದೆ.

 

ನಮ್ಮ ಮನಸ್ಸು ರೀತಿಯಾಗಿರುವುದಕ್ಕೆ ಕಾರಣವಾದರೂ ಏನು? ಚಿಂತೆ. ಯಾವುದರ ಚಿಂತೆ?

ಕಾಂತಾ ಧನಗತ ಚಿಂತಾ - ಮಡದಿ ಮತ್ತು ಧನದ ಚಿಂತೆ. ಕಾಂತಾ ಎಂದರೆ ನಮ್ಮ ಅತೀ ಬಯಕೆಯ(ಅಯಸ್ಕಾಂತದಂತೆ ಆಕರ್ಷಿಸುವ) ಯಾವುದೇ ವಸ್ತು ಅಥವಾ ವ್ಯಕ್ತಿಯಾಗಬಹುದು. ಅರ್ಥದಿಂದಲೇ ಮಡದಿಯನ್ನು ಕಾಂತಾ ಎನ್ನುವುದು. ಇಲ್ಲಿ ಕಾಂತಾ ಎಂಬುದನ್ನು ಸರ್ವಕಾಮನೆಗಳಿಗೆ ಉಪಲಕ್ಷಣವಾಗಿ ಬಳಸಿದೆ ಎಂದು ತಿಳಿದರೆ ಹೆಚ್ಚು ಪ್ರಸ್ತುತ. ಧನವೆಂದಾಗ ಸರ್ವರೀತಿಯ ಹಣ, ಸಂಪತ್ತು, ಸವಲತ್ತುಗಳು ಎಂದು ಗ್ರಹಿಸಬೇಕು. ಇಲ್ಲಿ ಅರ್ಥಕಾಮದ ಪುರುಷಾರ್ಥವನ್ನು ನೇರವಾಗಿ ದೂಷಿಸದೆ, ಅದರ ಗಳಿಕೆಗಾಗಿ ನಾವು ಪಡುವ ಚಿಂತೆಯನ್ನು ದೂಷಿಸಿದೆ. ಅರ್ಥಕಾಮಗಳನ್ನು ಗಳಿಸಲು ಮಾಡುವ ಪ್ರಯತ್ನಗಳೆಷ್ಟು, ತಂತ್ರ-ಕುತಂತ್ರಗಳೆಷ್ಟು? ಇಷ್ಟಾಗಿಯೂ ದಕ್ಕಿದ ವಸ್ತುಗಳ ಬಗ್ಗೆ ಸಮಾಧಾನವಿರದೆ, ದಕ್ಕದ ವಿಷಯಗಳ ಬಗ್ಗೆ ತೀವ್ರ ನಿರಾಸೆ ಹೊಂದಿ ಸಾಗುವುದೇ ಸಾಮಾನ್ಯರ ಜೀವನ. ನಮ್ಮ ಜೀವನದ ಚಿಂತೆಯೆಲ್ಲಾ ಅರ್ಥಕಾಮಗಳನ್ನು ಗಳಿಸಲು ಮಾತ್ರ ನಿಯೋಜಿಸಿದರೆ, ನಮ್ಮನ್ನು ಮೂರ್ಖಶಿಖಾಮಣಿ ಎನ್ನದೇ ಇನ್ನೇನೆಂದು ಕರೆಯಬೇಕು ನೀವೇ ಯೋಚಿಸಿ

ನಮ್ಮ ಜೀವನದಲ್ಲಿ ಪುರುಷಾರ್ಥವನ್ನು ಗಳಿಸಲು ಯೋಜನೆಯೇನೋ(Planning) ಅಗತ್ಯ; ಚಿಂತೆ(Worrying) ಅನವಶ್ಯ. ಹೆಚ್ಚು ಚಿಂತೆ ಮಾಡುವುದರಿಂದ ಹೆಚ್ಚು ಗಳಿಕೆಯಾಗುವುದಾದರೆ ಖಂಡಿತ ಹೆಚ್ಚು ಚಿಂತೆ ಮಾಡೋಣ! ಆದರೆ ಮನೋತಜ್ಞರ ಅಭಿಪ್ರಾಯವು - ಚಿಂತೆಯಿಂದ ನಮ್ಮ ಶಕ್ತಿಯೆಲ್ಲ ವ್ಯಯವಾಗಿ, ಅನಾರೋಗ್ಯಕ್ಕೊಳಗಾಗಿ, ಉತ್ಸಾಹಹೀನರಾಗಿ, ಕಾರ್ಯದಲ್ಲಿ ಅಸಮರ್ಥರಾಗಿ, ಜೀವನದ ಯುದ್ಧದಲ್ಲಿ ಸೋಲುವುದೇ ಹೆಚ್ಚು ಎಂದು. ಇಂತಹಾ ಚಿಂತೆಯನ್ನು ಬಿಟ್ಟು ಯೋಜನೆಯನ್ನು(plan) ಮಾಡಿದರೆ ನಮಗೇ ಉತ್ತಮ. ಹಲವು ಬಾರಿ ಚಿಂತೆಯಲ್ಲಿ(worry) ಮಗ್ನರಾದವರು, ಯೋಜನೆ(plan) ಮಾಡುತ್ತಿದ್ದೇವೆ ಎಂದು ಭ್ರಮೆಯಲ್ಲಿರಬಹುದು. ಚಿಂತೆಯಂತಿರದೆ, ಯೋಜನೆಯನ್ನು ಯಾವಾಗ ಮಾಡಬೇಕು, ಯಾವ ವಿಷಯಕ್ಕಾಗಿ ಮಾಡಬೇಕು, ಆದಕ್ಕಾಗಿ ಎಷ್ಟು ಸಮಯ ನಿಯೋಜಿಸಬೇಕು ಎಂಬುದು ನಮ್ಮ ಕೈಯಲ್ಲಿರುತ್ತದೆ. ಇದರಿಂದ ಬುದ್ಧಿ ಚುರುಕಾಗಿ, ಕೆಲಸದಲ್ಲಿ ಸಮರ್ಪಕವಾಗಿ ನಮ್ಮನ್ನು ನಾವು ಜೋಡಿಸಿಕೊಂಡು ಅತ್ಯುತ್ತಮ ಫಲ ಲಭಿಸುವಂತೆ ಜೀವಿಸಬಹುದು

ಜೀವನದ ಯಾವುದಾದರೂ ಸಂದರ್ಭದಲ್ಲಿ ಚಿಂತೆಗೊಳಗಾದಾಗ ನೀವೇ ಯೋಚಿಸಿ - ಚಿಂತೆಗೆ ಕಾರಣವಾದ ಸಮಸ್ಯೆಗೆ ಪರಿಹಾರವಿದೆಯೇ? ಇಲ್ಲದಿದ್ದರೆ ಚಿಂತೆ ಮಾಡುವ ಉಪಯೋಗವಾದರೂ ಏನು! ಪರಿಹಾರವಿದೆ ಎಂದಾದರೆ, ಚಿಂತೆಯನ್ನು ಬಿಟ್ಟು ಯೋಜನೆಯಲ್ಲಿ ತೊಡಗಿ ಕಾರ್ಯೋನ್ಮುಖರಾಗಿ. ಹೇಗೇ ಆದರೂ ಚಿಂತೆ ವರ್ಜ್ಯ.

 

ಕಿಂ ತವ ನಾಸ್ತಿ ನಿಯಂತಾ - ನಿನ್ನನ್ನು ಸರಿಯಾದ ಮಾರ್ಗದಲ್ಲಿ ನಿಯೋಜಿಸುವವರು ಯಾರೂ ಇಲ್ಲವೇ? ಮಾನವನ ಸಹಜಗುಣವೆಂದರೆ ಸದಾ ಯಾವುದಾದರೂ ವಸ್ತುವಿಗೋ, ವ್ಯಕ್ತಿಗೋ ಅಂಟಿಕೊಳ್ಳುವುದು. ಇವೆಲ್ಲಕ್ಕೂ ಮೂಲಕಾರಣ ಮನುಷ್ಯ ತನ್ನ ಪೂರ್ಣತೆಯ ಸ್ವರೂಪವನ್ನು ಮರೆತಿರುವುದೇ ಆಗಿದೆ. ಇಷ್ಟೆಲ್ಲಾ ಬಂಧು-ಬಾಂಧವರು, ನೆಂಟರು-ಇಷ್ಟರು, ಸ್ನೇಹಿತರು ಇರುವ ನಮ್ಮ ಜೀವನದಲ್ಲಿ ಯಾರೂ ನಮ್ಮನ್ನು ಮೋಹದಿಂದ ಹೊರಬರುವ ವಿಷಯವನ್ನು ತಿಳಿಸುತ್ತಿಲ್ಲವೇ? ನಮ್ಮ ಜೀವನವನ್ನೇ ಒಮ್ಮೆ ಗಮನಿಸಿ - 'ನಮ್ಮವರು' ಎಂದು ಕರೆಸಿಕೊಳ್ಳುವವರು, ತಾವೂ ಅರ್ಥಕಾಮಗಳ ಬೆನ್ನತ್ತಿ, ತಮ್ಮ ನಡೆ, ನುಡಿಗಳಿಂದ ನಮ್ಮನ್ನು ಇನ್ನೂ ಹೆಚ್ಚು ಅರ್ಥಕಾಮಗಳಿಗೆ ದಾಸರನ್ನಾಗಿ ಮಾಡುವವರೇ ಅಲ್ಲವೇ

 

ಹಾಗಾದರೆ, ನಾವೇನು ಮಾಡಬೇಕು?

ತ್ರಿಜಗತಿ ಸಜ್ಜನಸಂಗತಿರೇಕಾ - ತ್ರಿಭುವನದಲ್ಲಿ ಅತಿಶ್ರೇಷ್ಠವಾದ ವಿಷಯವಾದ ಸಜ್ಜನರ ಸಂಗವೇ ಮಾರ್ಗ. ತ್ರಿಭುವನವೆಂದರೆ - ಭೂ:, ಭುವ:, ಸುವ: ಎಂದಾಗಬಹುದು ಅಥವಾ ದೇವಲೋಕ, ಮನುಷ್ಯಲೋಕ, ರಾಕ್ಷಸಲೋಕ ಎಂದಾಗಬಹುದು. ಸಜ್ಜನ ಸಂಗವೆಂಬುದು ನಮ್ಮನ್ನು ಮೋಹದಿಂದ ಹೊರತರಲು ಇರುವ ನೂರರಲ್ಲಿ ಒಂದು ಸಾಧನವಲ್ಲದೇ, ಅದೇ ಏಕೈಕ ಸಾಧನವೆಂದು ಸೂಚಿಸಲು 'ಏಕಾ' ಎಂದು ಬಳಸಲಾಗಿದೆ. ಸಜ್ಜನಸಂಗದಿಂದ ಸಾಧಿಸುವುದಾದರೂ ಏನು? ಎಂದರೆ - ನಮ್ಮ ಹಳೆಯ ಪ್ರಾಪಂಚಿಕ ಚಾಳಿಯನ್ನು ಬಿಡಿಸಿ, ಮನಸ್ಸಿಗೆ ಉತ್ಕೃಷ್ಟವಾದ ಆನಂದವನ್ನು ಸವಿಯುವ ಮಾರ್ಗವನ್ನು ಸೂಚಿಸುತ್ತದೆ ಮತ್ತು ಜಗತ್ತಿನಲ್ಲಿ ವಸ್ತುನಿಷ್ಠರಾಗಿ, ಕರ್ತವ್ಯಭಾವದಿಂದ, ಕರ್ಮಯೋಗಿಯಾಗಿ ಬದುಕಲು ಪ್ರೇರೇಪಿಸಿ, ಜೀವನಕ್ಕೆ ಅತ್ಯುತ್ಕೃಷ್ಟವಾದ ಮೋಕ್ಷವೆಂಬ ಗುರಿಯನ್ನು ನೀಡುತ್ತದೆ. ಇದರಿಂದ ಚಿಂತೆ ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ಒಂದು ಸುಭಾಷಿತ ಹೀಗೆ ತಿಳಿಸುತ್ತದೆ.

गङ्गा पापं शशी तापं दैन्यं कल्पस्तरुतथा। 

पापं तापं दैन्यं धन्ति सन्तो महाशयाः॥

ಅರ್ಥ - ಗಂಗೆ ನಮ್ಮ ಪಾಪಗಳನ್ನು ತೊಳೆದರೆ, ಚಂದ್ರ ಬಿಸಿಲಿನ ತಾಪವನ್ನು ಕಳೆಯುತ್ತಾನೆ. ಕಲ್ಪವೃಕ್ಷ ನಮ್ಮಲ್ಲಿರುವ ದಾರಿದ್ರ್ಯವನ್ನು ತೊಲಗಿಸಿದರೆ, ಮಹಾತ್ಮರಾದ, ಜ್ಞಾನಿಗಳಾದ ಸಂತರು ನಮ್ಮ ಸ್ವರೂಪವನ್ನು ನಮಗೇ ಪರಿಚಯಿಸುವುದರ ಮೂಲಕ ಪಾಪ, ತಾಪ ಮತ್ತು ದೈನ್ಯಗಳೆಲ್ಲವನ್ನೂ ನಾಶಮಾಡುತ್ತಾರೆ

ಸಜ್ಜನಸಂಗ ನಮ್ಮನ್ನು ಯಾವ ರೀತಿ ಚಿಂತೆಯಿಂದ ಕಾಪಾಡುತ್ತದೆ ಎಂಬುದಕ್ಕೆ ಉಪಮಾನವನ್ನು ಸೂಚಿಸುತ್ತಿದ್ದಾರೆ ಆಚಾರ್ಯರು.

ಭವಾರ್ಣವ ತರಣೇ ನೌಕಾ ಭವತಿ - (ಸತ್ಸಂಗವೆಂಬುದು) ಸಂಸಾರಸಾಗರವನ್ನು ದಾಟಲು ನೌಕೆಯಂತೆ ಸಹಾಯವಾಗುತ್ತದೆ. ನಮ್ಮ ಜೀವನ/ಸಂಸಾರವನ್ನು ಸಾಗರಕ್ಕೆ ಹೋಲಿಸಿರುವುದು ಎಲ್ಲ ಗ್ರಂಥಗಳಲ್ಲೂ ಕಾಣುತ್ತೇವೆ. ಕೊನೆಮೊದಲಿಲ್ಲದ ಸಾಗರವನ್ನು ದಾಟಲು ಸರಿಯಾದ ನೌಕೆಯು ಅತ್ಯಗತ್ಯ. ಹಾಗೇ ಅನಾದಿಯಾದ ಸಂಸಾರವನ್ನು ದಾಟಲು ಸತ್ಸಂಗ ಅಥವಾ ಗುರುವಿನ ಸಂಗ ನೌಕೆಯಂತಾಗುತ್ತದೆ

ಗುರುವಿಗೂ ನೌಕೆಗೂ ಇರುವ ಕೆಲವು ಹೋಲಿಕೆಗಳು

  1. ನೌಕೆಯು ಸಮುದ್ರವನ್ನು ದಾಟಲು ಪ್ರಾರಂಭದಲ್ಲಿ ಮಾತ್ರವಲ್ಲ, ದಡಮುಟ್ಟುವವರೆಗೂ ಬೇಕಾಗುತ್ತದೆ. ಹಾಗೇ ಗುರುವಿನ ಮಾರ್ಗದರ್ಶನ ಅಧ್ಯಾತ್ಮ ಜೀವನದಲ್ಲಿ ಸ್ವರೂಪನಿಶ್ಚಯ ಆಗುವವರೆಗೂ ಅಗತ್ಯವಿರುತ್ತದೆ
  2. ನೌಕೆ ನೀರಿನಲ್ಲಿರುತ್ತದೆ. ನೀರು ನೌಕೆಯಲ್ಲಿರುವುದಿಲ್ಲ. ಹಾಗೇ ಸದ್ಗುರುಗಳು ಪ್ರಪಂಚದಲ್ಲಿರುತ್ತಾರೆ. ಪ್ರಾಪಂಚಿಕತೆ ಸದ್ಗುರುಗಳಲ್ಲಿರುವುದಿಲ್ಲ
  3. ಸಮುದ್ರಯಾನದಲ್ಲಿ ಪ್ರಯಾಣಿಕರನ್ನು ಗಮ್ಯಸ್ಥಳಕ್ಕೆ ತಲುಪಿಸಲು ನಾವಿಕ ದಿಕ್ಸೂಚಿಯನ್ನು ಬಳಸುವಂತೆ, ಸದ್ಗುರುಗಳು ಶಾಸ್ತ್ರವೆಂಬ ದಿಕ್ಸೂಚಿಯನ್ನು ಬಳಸಿ, ಆತ್ಮಜ್ಞಾನವನ್ನು ಪಡೆಯುವ ಆಂತರಿಕ ಪಯಣವನ್ನು ಮಾಡಿಸುತ್ತಾರೆ.
  4. ಸಮರ್ಥ ನಾವಿಕನೊಂದಿಗೆ ಪಯಣ ಅನಂದದಾಯಕವಾಗಿರುತ್ತದೆ ಮತ್ತು ಕೆಲವೊಮ್ಮೆ ಹಡಗು ಏರುಪೇರು ಆದರೂ, ಅದು ಸಮುದ್ರಯಾನದ ಪಯಣವನ್ನು ಇನ್ನೂ ಹೆಚ್ಚು ಸುಂದರವಾಗಿಸುತ್ತದೆ. ಹಾಗೇ ಗುರುಗಳೊಂದಿಗೆ ನಮ್ಮ ಆಧ್ಯಾತ್ಮಿಕ ಪಯಣ ಯಾವುದೇ ಅಪಾಯವಿಲ್ಲದೇ, ಸುಖಕರವಾಗಿರುತ್ತದೆ.

 

ಸಾರಾಂಶ : ಶ್ರೀರಂಗಂ ದೇವಸ್ಥಾನದಲ್ಲಿ ಒಬ್ಬ ಸುಂದರ ನರ್ತಕಿಯ ಸೊಬಗಿಗೆ ಮಾರು ಹೋಗಿ, ಧನುರ್ದಾಸನೆಂಬ ವ್ಯಕ್ತಿ ದೇವಸ್ಥಾನದಲ್ಲಿ ಕೆಲಸಕ್ಕೆ ಸೇರಿದ್ದರೂ, ಸದಾ ಮನಸ್ಸು ಭಗವಂತನಲ್ಲಿರದೇ, ತನ್ನ ಪ್ರೇಯಸಿಯ ಮೇಲಿರುತ್ತಿತ್ತು. ಇಂಥಾ ಅದ್ಭುತಸೌಂದರ್ಯಕ್ಕೆ ಮೋಹಗೊಂಡು ತನ್ನ ಜೀವನವನ್ನು ನಡೆಸುತ್ತಿದ್ದ ಧನುರ್ದಾಸನಿಗೆ ಒಮ್ಮೆ ರಾಮಾನುಜರ ಸಂಗ ದೊರಕಿ, ಅವರು ಇವನ ಜೀವನವನ್ನು ಉನ್ನತ ಧ್ಯೇಯಕ್ಕೆ ನಿಯೋಜಿಸಬೇಕೆಂದು ಶ್ರೀರಂಗನ ದರ್ಶನಮಾಡಿಸಿದರು ಮತ್ತು ತದನಂತರ ಧನುರ್ದಾಸ ಸಂತನಾಗಿ ಪರಿವರ್ತನಾದ ಕಥೆ ಪ್ರಸ್ತುತ ಶ್ಲೋಕಕ್ಕೆ ಹಿಡಿದ ಕನ್ನಡಿ. ಕಾಮಿನಿ-ಕಾಂಚನದಿಂದ ಮೋಹಗೊಳ್ಳದೆ, ಗುರುಗಳ ಸಂಗದಿಂದ ಪರಮಾತ್ಮನನ್ನು ಹೃದಯಗುಹೆಯಲ್ಲಿ ಸಾಕ್ಷಾತ್ಕರಿಸಿಕೊಂಡು ಮೋಕ್ಷದೆಡೆಗೆ ಸಾಗುವ ಪ್ರಯತ್ನ ಮಾಡೋಣ - ಭಜಗೋವಿಂದಮ್.





No comments:

Post a Comment