🔍 Search This Blog

🌍 Translate

ಉಪನಿಷತ್ತಿನ ಕಥಾಮಾಲ - ಸಾರ್ಥಕ ಜೀವನಕ್ಕೆ ದಾರಿದೀಪಗಳು - 2 - ದ..ದ..ದ..

ಪ್ರಜಾಪತಿ ಬ್ರಹ್ಮನು ಜೀವಿಗಳ ಕರ್ಮಾನುಸಾರ ಸಾಧನ(ಉಪಾಧಿ), ಭೋಗವಿಷಯ ಮತ್ತು ಲೋಕಗಳನ್ನು ಸೃಷ್ಟಿಸಿದ್ದಾನೆ. ಪುಣ್ಯಪ್ರಾಧಾನ್ಯವಿರುವ ಜೀವಿಗಳು ಶ್ರೇಷ್ಠ ಉಪಾಧಿಯನ್ನು ಪಡೆದು ಸ್ವರ್ಗಲೋಕದಲ್ಲಿ ಜೀವಿಸುತ್ತಿದ್ದಾರೆ, ಪಾಪಪ್ರಧಾನವುಳ್ಳ ಜೀವಿಗಳು ನೀಚ ಉಪಾಧಿಯೊಂದಿಗೆ ಪಾತಾಳಲೋಕದಲ್ಲಿ ಜೀವಿಸುತ್ತಿದ್ದಾರೆ. ಇನ್ನು ಪುಣ್ಯಪಾಪಮಿಶ್ರಣವಿರುವ ಜೀವಿಗಳು ಭೂಲೋಕದಲ್ಲಿ ಮನುಷ್ಯರಾಗಿ ನಮ್ಮಂತೆ ಬದುಕುತ್ತಿದ್ದಾರೆ ಎಂಬುದು ಶಾಸ್ತ್ರಸಮ್ಮತ ವಿಚಾರ.

 ಹೀಗಿರುವಾಗ ಮೂರೂ ತರಹದ ಜೀವಿಗಳು ತಮ್ಮಕರ್ಮಾನುಸಾರ ಪಡೆದ ಉಪಾಧಿಯ ಮೂಲಕ ತಮ್ಮ ತಮ್ಮ ಲೋಕದಲ್ಲಿ ಜೀವಿಸುತ್ತಾ, ಉಪಭೋಗಿಸುತ್ತಿದ್ದರೂ ಹೇಳಲಾಗದ, ಸಹಿಸಲಾಗದ ಖಿನ್ನತೆ, ಅತೃಪ್ತಿ, ಅಪೂರ್ಣತೆ, ಶೂನ್ಯತಾ ಮನೋಭಾವಕ್ಕೊಳಗಾಗುತ್ತಾರೆ. ಇವುಗಳಿಂದ ಹೊರಬರಲು ಪ್ರಯತ್ನಿಸಿ, ಸೋತು, ದಾರಿ ತೋಚದೆ, ತಪಸ್ಸಿನ ಮೂಲಕ ಸೃಷ್ಟಿಕರ್ತನಾದ ಪ್ರಜಾಪತಿ ಬ್ರಹ್ಮನ ಮೊರೆಹೋಗುತ್ತಾರೆ. ಅತ್ಯಂತಕಾರುಣ್ಯದಿಂದ ಪ್ರಜಾಪತಿ ಅವರ ತಪಸ್ಸಿಗೆ ಮೆಚ್ಚಿ ಅವರ ಬಳಿ ಸಾರಿ, "ನನ್ನಿಂದ ನಿಮಗೇನು ಬೇಕು ಕೇಳಿಕೊಳ್ಳಿ" ಎಂದಾಗ, "ನಾವು ಶೂನ್ಯತೆ, ಖಿನ್ನತೆಯಿಂದ ಹೊರಬಂದು ಪೂರ್ಣತೆಯೆಡೆಗೆ ನಡೆಯುವ ದಾರಿಯನ್ನು ಉಪದೇಶಿಸಿ" ಎಂದು ಬೇಡಿಕೊಳ್ಳುತ್ತಾರೆ.

 ಪ್ರಜಾಪತಿ ಬ್ರಹ್ಮ ಮೊದಲಿಗೆ ಸ್ವರ್ಗಲೋಕವಾಸಿಗಳಾದ ದೇವತೆಗಳ ಬಳಿಸಾರಿ, "" ಎಂದು ಉಪದೇಶಿಸಿ, "ಅರ್ಥವಾಯಿತೇ?" ಎನ್ನುತ್ತಾನೆ. ದೇವತೆಗಳು ಯೋಚಿಸಿ, "ಅರ್ಥವಾಯಿತು. ನಾವು ಸ್ವರ್ಗಲೋಕದಲ್ಲಿರುವ ಭೋಗವಸ್ತುಗಳನ್ನೆಲ್ಲ ಯಾವುದೇ ಸಂಯಮವಿಲ್ಲದೇ ಭೋಗಿಸಿದರೂ ಪೂರ್ಣಾನಂದ ಪ್ರಾಪ್ತಿಯಾಗುತ್ತಿಲ್ಲ. ಇದರಿಂದ ವಿಷಯಪ್ರಾಪ್ತಿಯಾದರೂ ಉನ್ನತಾನಂದದ ಕಡೆ ಮನಸ್ಸನ್ನು ಹರಿಸುತ್ತಿಲ್ಲ. ಇದರಿಂದ ಬೇಜಾರು ಮತ್ತು ಇಂದ್ರಿಯಗಳು ಬಲಹೀನವಾಗುತ್ತಿವೆ. ನಿಮ್ಮ ಉಪದೇಶ ನಮಗೆ ಸಮಸ್ಯೆಯಿಂದ ಪಾರಾಗುವ ಮಾರ್ಗವನ್ನು ಸೂಚಿಸುತ್ತಿದ್ದು, ಎಂದರೆ ದಾಮ್ಯತ" ಎಂದು ಉತ್ತರಿಸುತ್ತಾರೆ.

 ಪ್ರಜಾಪತಿ ಬ್ರಹ್ಮ ನಂತರ ಪಾತಾಳಲೋಕವಾಸಿಗಳಾದ ಅಸುರರನ್ನು ಉದ್ದೇಶಿಸಿ, "" ಎಂದು ಉಪದೇಶಿಸಿ, "ಅರ್ಥವಾಯಿತೇ?" ಎನ್ನುತ್ತಾನೆ. ಅಸುರರೂ ಕೂಡ ಯೋಚಿಸಿ, "ಅರ್ಥವಾಯಿತು. ನಾವು ಅಸುರಲೋಕದಲ್ಲಿದ್ದು ಪರರಿಗೆ ಹಿಂಸೆಮಾಡಿ, ಕಷ್ಟ ನೀಡಿ, ಅವಮಾನ ಮಾಡಿ, ಲೋಕನಾಶಕ ಕೃತ್ಯವೆಸಗಿ ಅದರಿಂದ ಬರುವ ಆನಂದವನ್ನು ಉಪಭೋಗಿಸುತ್ತಿದ್ದೇವೆ. ಆದರೆ ಮನಸ್ಸಿನ ಖಿನ್ನತೆ ಮಾತ್ರ ಕಡಿಮೆಯಾಗುತ್ತಿಲ್ಲ. ನಮ್ಮಲ್ಲಿರುವ ಕ್ರೌರ್ಯ, ಹಿಂಸಾತ್ಮಕ ಮನೋಭಾವದಿಂದ ಪರರನ್ನು ಸಮಸ್ಯೆಯಲ್ಲಿ ದೂಡುವುದಷ್ಟೇ ಅಲ್ಲದೇ, ನಾವೇ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ನಿಮ್ಮ ಉಪದೇಶ ನಮಗೆ ಸಮಸ್ಯೆಯಿಂದ ಪಾರಾಗುವ ಮಾರ್ಗವನ್ನು ಸೂಚಿಸುತ್ತಿದ್ದು, ಎಂದರೆ ದಯ" ಎಂದು ಉತ್ತರಿಸುತ್ತಾರೆ.

 ಪ್ರಜಾಪತಿ ಬ್ರಹ್ಮ ಕೊನೆಯದಾಗಿ ಭೂಲೋಕವಾಸಿಗಳಾದ ಮನುಷ್ಯರನ್ನು ಉದ್ದೇಶಿಸಿ, ಅದೇ ಉಪದೇಶವನ್ನು ನೀಡುತ್ತಾನೆ - "" ಎಂದು ಹಾಗು "ಅರ್ಥವಾಯಿತೇ" ಎನ್ನುತ್ತಾನೆ. ಮನುಷ್ಯರು ಯೋಚಿಸಿ, "ಅರ್ಥವಾಯಿತು. ನಾವು ಮನುಷ್ಯರಾಗಿದ್ದು ಪರರ ಅವಶ್ಯಕತೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ಸ್ವಾರ್ಥ ಮತ್ತು ದುರಾಸೆಯಿಂದ ಜಗತ್ತಿನ ವಸ್ತುಗಳೆಲ್ಲವೂ ನಮ್ಮ ಉಪಭೋಗಕ್ಕಾಗಿಯೇ ಇರುವುದು ಎಂದು ತಿಳಿದು ಜೀವಿಸುತ್ತಿದ್ದೇವೆ. ಇದರಿಂದ ನಮ್ಮ ತೃಷೆ ಇಂಗುತ್ತಿಲ್ಲ ಹಾಗೂ ಸುಖಪ್ರಾಪ್ತಿ ಎಂಬುದು ಮರಿಚಿಕೆಯಂತೆ ಭಾಸವಾಗುತ್ತಿದೆ. ಉನ್ನತಾನಂದದ ಕಡೆ ಮನಸ್ಸನ್ನು ಹರಿಸುತ್ತಿಲ್ಲ. ನಿಮ್ಮ ಉಪದೇಶ ನಮಗೆ ಸಮಸ್ಯೆಯಿಂದ ಪಾರಾಗುವ ಮಾರ್ಗವನ್ನು ಸೂಚಿಸುತ್ತಿದ್ದು, ಎಂದರೆ ದಾನ" ಎಂದು ಉತ್ತರಿಸುತ್ತಾರೆ.

 ಮೂರು ಜೀವಿಗಳ ಉಪದೇಶದ ಗ್ರಹಿಕೆಯನ್ನು ಆಲಿಸಿ, ನಗುಮುಖದಿಂದ ಪ್ರಜಾಪತಿ ಬ್ರಹ್ಮ "......" ಎಂದು ಗುಡುಗುತ್ತಾ ತನ್ನ ಲೋಕಕ್ಕೆ ಹಿಂತಿರುಗುತ್ತಾನೆ.

  ಕಥೆಯ ಮೂಲಕ ಹತ್ತುಹಲವು ವಿಷಯಗಳನ್ನು ಕಲಿತು ನಮ್ಮ ಜೀವನವನ್ನು ಹಸನುಗೊಳಿಸಿಕೊಳ್ಳಬಹುದು

1) ಎಲ್ಲ ಜೀವಿಗಳೂ ತಿಳಿದೋ ತಿಳಿಯದೆಯೋ ಹುಡುಕುತ್ತಿರುವುದು ಪರಿಪೂರ್ಣ ಆನಂದವನ್ನೇ 

2) ನಮ್ಮ ಪ್ರಯತ್ನ ಸಫಲವಾಗದಿದ್ದಾಗ ಭಗವಂತನ ಕಡೆಗೆ ತಿರುಗಿ ಪ್ರಾರ್ಥಿಸಿವುದು ವಿವೇಕ 

3) ಭಗವಂತನನ್ನು ಪರಿಪೂರ್ಣತೆ ಕೊಡು ಎಂದು ಕೇಳದೆ ಪರಿಪೂರ್ಣತೆಗೆ ದಾರಿಯನ್ನು ಉಪದೇಶಿಸು ಎಂದದ್ದು ನಮಗೆಲ್ಲರಿಗೂ ಪಾಠವಾಗಬೇಕು

4) ಗುರುವಿನ ಉಪದೇಶ ಸಮಾನವಾಗಿದ್ದರೂ ಅದರ ಅರ್ಥ ಶಿಷ್ಯನ ಮನಸ್ಥಿತಿಯನ್ನು ಆಧರಿಸುತ್ತದೆ 

5) ಗುರುವಿನ ಹಿತನುಡಿ ಶಿಷ್ಯನ ಮನಸ್ಸಿನಲ್ಲಿರುವ ದೌರ್ಬಲ್ಯದಿಂದ ಮುಕ್ತನಾಗುವ ಉಪದೇಶವೇ ಆಗಿರುತ್ತದೆ.

 ಶಂಕರಾಚಾರ್ಯರು ತಮ್ಮ ಭಾಷ್ಯಭಾಗದಲ್ಲಿ " ದೇವಾ ಅಸುರಾ ವಾ ಅನ್ಯೇ ಕೇಚನ ವಿದ್ಯಂತೆ ಮನುಷ್ಯೆಭ್ಯ:" - ಕಥೆಯಲ್ಲಿ ಬರುವ ದೇವತೆಗಳು, ಅಸುರರು ಮತ್ತಾರೂ ಅಲ್ಲದೇ ದೈವೀಗುಣ, ಅಸುರೀ ಗುಣ ಹೊಂದಿರುವ ಮನುಷ್ಯರೇ ಎಂದು ತಿಳಿಸಿರುತ್ತಾರೆಕೃಷ್ಣ ಗೀತೆಯಲ್ಲಿ ನರಕಕ್ಕಿರುವ ಮೂರು ಹೆಬ್ಬಾಗಿಲುಗಳು - ಕಾಮ, ಕ್ರೋಧ ಮತ್ತು ಲೋಭವೆಂದು ತಿಳಿಸಿದ್ದಾನೆ. ಕಥೆ ನಮ್ಮೆಲ್ಲರಿಗೂ ಚಿತ್ತಶುದ್ಧಿ ಪಡೆಯಲು ಉಪಯುಕ್ತವಾಗುವ ಮೌಲ್ಯಗಳನ್ನು ಉಪದೇಶಿಸಿದೆ. ಕಥೆಯ ಮೂಲಕ ತ್ರಿವಿಧನರಕದ್ವಾರಗಳಿಂದ ಪಾರಾಗಲು ಪ್ರತಿಪಕ್ಷಭಾವನೆಯನ್ನು ಅನುಸರಿಸಿ, ದಮ, ದಯ ಮತ್ತು ದಾನವನ್ನು ಅಭ್ಯಸಿಸಿ ಜೀವನೋದ್ಧಾರ ಮಾಡಿಕೊಳ್ಳಬೇಕು ಎಂಬುದೇ ಕಥೆಯ ಉದ್ದೇಶ.

(ಬೃಹದಾರಣ್ಯಕ ಉಪನಿಷತ್ತು)

 

2 comments:

  1. ನಮಸ್ಕಾರ ಗುರೂಜೀ . ನಿಮ್ಮ ಕಾರ್ಯಕ್ರಮ ನಮ್ಮ ಆಧ್ಯಾತ್ಮಿಕ ಪ್ರಯಾಣಕ್ಕೆ ತುಂಬ
    ಅನುಕೂಲವಾಗುತ್ತಿವೆ. ಧನ್ಯವಾದಗಳು.

    ReplyDelete
  2. ಗುರುಗಳ ಪಾದರವಿಂದಗಳಲ್ಲಿ ನಮಸ್ಕಾರಗಳು. ನಿಮ್ಮ ಪ್ರವಚನಗಳು ಉಪನಿಷತ್ಗಗಳ ಪ್ರವೇಶಕ್ಕೆ ಮತ್ತು ವೇದಾಂತ ಪ್ರವೇಶ ತಿಳುವಳಿಕೆಗೆ ದಾರಿ ದೀಪಗಳು. ಇವುಗಳನ್ನು ಕೊಡುತ್ತಿರುವ ನಿಮಗೆ ವಂದನೆಗಳು. 🙏🙏

    ReplyDelete