🔍 Search This Blog

🌍 Translate

ಉಪನಿಷತ್ ಕಥಾಮಾಲ - ಸಾರ್ಥಕ ಜೀವನಕ್ಕೆ ದಾರಿದೀಪಗಳು - 1 - ಪರಿಚಯ

 

ಒಂದು ಹೊಸ ಯಂತ್ರವನ್ನು ಸಮರ್ಪಕವಾಗಿ ಬಳಸಲು ಯಂತ್ರ ನಿರ್ಮಾಪಕರು ಯಂತ್ರದೊಂದಿಗೆ ಒಂದು ಕೈಪಿಡಯನ್ನು ನೀಡಿರುತ್ತಾರೆ. ಕೈಪಿಡಿಯಿಲ್ಲದೇ ಯಂತ್ರವನ್ನು ಬಳಸಲು ಪ್ರಯತ್ನಿಸಿದರೆ ಅದರ ಸಮರ್ಪಕ ಉಪಯೋಗವಾಗುವ ಬದಲು ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಒಂದು ಯಂತ್ರದ ವಿಷಯದಲ್ಲಿ ಹೀಗೆ ಆಗಬಹುದು ಎಂದಾದರೆ, ಮನುಷ್ಯ ಜೀವನದ ವಿಷಯವೇನು!!? ಜೀವನವನ್ನು ಹೇಗೆ ಉಪಯೋಗಿಸಬೇಕು, ಯಾವುದಕ್ಕಾಗಿ ನಿಯೋಜಿಸಬೇಕು ಎಂದು ತಿಳಿಯದೇ ಜೀವಿಸಿದರೆ, "ರತ್ನದಂತಹ ನರಜನ್ಮ ಮೂರ್ ಕಾಸಿಗೆ ಹೋಯ್ತು" ಎಂಬಂತಾಗುತ್ತದೆ. ಜೀವನ ಎಂದರೆ ಏನು, ಜೀವನವನ್ನು ಹೇಗೆ ನಡೆಸಬೇಕು, ಯಾವ ಉದ್ದೇಶದಿಂದ ಬಾಳಬೇಕು  ಎಂಬ ವಿಷಯಗಳನ್ನು ತಿಳಿಸುವ ಕೈಪಿಡಿಯೇ ವೇದ. ಇದು ಯಾವುದೇ ವ್ಯಕ್ತಿಯಿಂದ ರಚಿಸಲ್ಪಡದೆ ಭಗವಂತನಿಂದ ನಮಗೆ ನೀಡಲ್ಪಟ್ಟಿದೆ. ಆದ್ದರಿಂದ ವೇದವನ್ನು ಅಪೌರುಷೇಯ ಎನ್ನಲಾಗಿದೆ.

 ವೇದದ ಅಂತ್ಯಭಾಗ ಮತ್ತು ಸಿದ್ಧಾಂತ ಭಾಗ ಎಂದೇ ಖ್ಯಾತಿ ಹೊಂದಿರುವ ಉಪನಿಷತ್ತುಗಳು ಮನುಷ್ಯನ ಪರಮಪುರುಷರ್ಥವಾದ ಮೊಕ್ಷವೊಂದನ್ನೇ ಲಕ್ಷ್ಯವಾಗಿ ಹೊಂದಿದೆ. ಉಪನಿಷತ್ತಿನ ಪದದ ಅರ್ಥವೇ ಬ್ರಹ್ಮವಿದ್ಯೆ ಅಥವಾ ರಹಸ್ಯ ವಿದ್ಯೆ. ಬ್ರಹ್ಮವಿದ್ಯೆಯು ಶಾಸ್ತ್ರಾಧಾರಿತ, ಸದ್ಗುರು ಉಪದೇಶದಿಂದ ಮಾತ್ರ ಸಾಧ್ಯ ಮತ್ತು ಬ್ರಹ್ಮ ವಿದ್ಯೆಯೊಂದೇ ಮೋಕ್ಷಕ್ಕೆ ನೇರಾದ ಸಾಧನ.

 ಗಹನವಾದ ತತ್ತ್ವಗಳನ್ನು ವಿಶದಪಡಿಸುವ ಉಪನಿಷತ್ತುಗಳು ಹಲವರಿಗೆ ಕಬ್ಬಿಣದ ಕಡಲೆಯಂತೆ ಭಾಸವಾಗುತ್ತದೆ. ಹಲವರು ಇದೇ ಕಾರಣದಿಂದ ಜ್ಞಾನದಿಂದ ದೂರ ನಿಂತು ಮತ್ತಿತರ ಸಾಧನೆಗೆ ತಮ್ಮನ್ನು ನಿಯೋಜಿಸಿ ಕೊಳ್ಳುತ್ತಾರೆ ಹಾಗೂ ಅಧ್ಯಾತ್ಮ ಜೀವನವನ್ನು ನಡೆಸಲು ಪ್ರಯತ್ನಿಸುತ್ತಾರೆ. ಆದರೆ "ಜ್ಞಾನಾದೇವ ಕೈವಲ್ಯ0"(ಜ್ಞಾನದಿಂದಲೇ ಮೋಕ್ಷ) ಎಂಬುದೇ ವೇದೋಪನಿಷತ್ತುಗಳ ನಿಶ್ಚಯ. ಜ್ಞಾನವನ್ನು ಪಡೆಯಲು ಸರ್ವರೂ ಪ್ರಯತ್ನಿಸಿ ಜೀವನಸಾಫಲ್ಯ ಮಾಡಿಕೊಳ್ಳಲಿ ಎಂಬುದೇ ವೇದದ ಆಶಯ ಮತ್ತು ಅದರ ತಾತ್ಪರ್ಯ.

 ಆತ್ಮತತ್ತ್ವವನ್ನು ಸಾಮಾನ್ಯರಿಗೂ ತಿಳಿಸುವ ಅಭೀಪ್ಸೆಯನ್ನು ಹೊಂದಿರುವ ಉಪನಿಷತ್ತುಗಳು ಅಲ್ಲಲ್ಲಿ ಕಥೆಗಳನ್ನು ಉಪಯೋಗಿಸುತ್ತವೆ. ಕಥೆಗಳು ಆಬಾಲ ವೃದ್ಧರಿಗೂ ಸದಾ ರುಚಿಕರವೇ ಸರಿ. ಕಥೆಗಳು ಮನಸ್ಸಿಗೆ ಮುದವನ್ನು ನೀಡುವುದಷ್ಟೇ ಅಲ್ಲದೇ ಬುದ್ಧಿಗೆ ವಿಚಾರ ಮಾಡುವಂತೆ ಪ್ರಚೋದಿಸುತ್ತದೆ. ಕಥೆಗಳ ಉದ್ದೇಶವನ್ನು ಶಂಕರರು ತಮ್ಮ ಭಾಷ್ಯಗಳಲ್ಲಿ "ವಿದ್ಯಾ ಪ್ರಾಪ್ತಿ ಉಪಾಯ ಪ್ರದರ್ಶನ ಅರ್ಥೈವ ಆಖ್ಯಾಯಿಕಾ", "ವಿದ್ಯಾ ಸಂಪ್ರದಾನ ಗ್ರಹಣ ವಿಧಿ ಪ್ರಕಾಶನಾರ್ಥ0"  ಇತ್ಯಾದಿಯಾಗಿ ವಿವರಿಸುತ್ತಾರೆ. ಕೆಲವು ಉಪನಿಷತ್ತಿನ ಕಥೆಗಳು ಐತಿಹಾಸಿಕ ಇರಬಹುದು, ಕೆಲವು ಪೌರಾಣಿಕ ಇರಬಹುದು ಮತ್ತು ಕೆಲವು ಸಾಂಕೇತಿಕವೂ ಇರಬಹುದು. ನಾವು ಕಥೆಗಳ ಅಧ್ಯಯನ ಮಾಡುವಾಗ ಅವುಗಳ ಚಾರಿತ್ರಿಕ ನೈಜತೆಗೆ ಹೆಚ್ಚು ಗಮನ ಹರಿಸದೆ, ಕಥೆಗಳ ಉದ್ದೇಶವನ್ನು ಗ್ರಹಿಸಿ, ಅದರಂತೆ ನಮ್ಮ ಜೀವನವನ್ನು ನಡೆಸಬೇಕು ಎಂಬುದು ವಿನಂತಿ. ಹಾಗಾದಾಗ ಮಾತ್ರ ಉಪನಿಷತ್ತಿನ ಕಥೆಗಳು ಸಾರ್ಥಕ ಜೀವನಕ್ಕೆ ದಾರಿದೀಪಗಳು ಎಂಬ ಅಂಕಣದ ಶೀರ್ಷಿಕೆಗೆ ಅರ್ಥ ಬರುತ್ತದೆ.

 

ಉಪನಿಷತ್ತಿನ ಕಥೆಗಳ ಉದ್ದೇಶಗಳು -

  1. ಸರಳವಾಗಿ ಮತ್ತು ಸುಲಭವಾಗಿ ಬ್ರಹ್ಮ ವಿದ್ಯೆಯನ್ನು ಮಂಡಿಸುವುದು.
  2. ಬ್ರಹ್ಮಜ್ಞಾನ ಸಂಪಾದನೆಗಾಗಿ ಗಳಿಸಬೇಕಾದ ಜ್ಞಾನಯೋಗ್ಯತೆಯ(ಸಾಧನ ಚತುಷ್ಟಯ) ಪ್ರಾಮುಖ್ಯತೆ ತಿಳಿಸುವುದು.
  3. ಬ್ರಹ್ಮವಿದ್ಯೆ ಸಂಪಾದನೆ ಗುರು ಶಿಷ್ಯ ಶಾಸ್ತ್ರ ಪರಂಪರೆಯಿಂದ ಮಾತ್ರ ಸಾಧ್ಯ ಎಂಬ ನಿಶ್ಚಯಮಾರ್ಗ ತೋರಿಸುವುದು.
  4. ಬ್ರಹ್ಮವಿದ್ಯೆ ತರ್ಕಬದ್ಧ ವಿಚರವಷ್ಟೇ ಅಲ್ಲದೆ ಅನುಷ್ಠಾನ ವೇದಾಂತವಾಗಿ ಜೀವನ್ಮುಕ್ತಿಯೆಡೆಗೆ ಪ್ರೇರಿಸಿರುವುದು.

ಅಂಕಣದ ಕಥೆಗಳು ಉಪನಿಷತ್ತುಗಳನ್ನು ಅಧ್ಯಯನ ಮಾಡಬೇಕೆಂಬ ಇಚ್ಛೆ ಹತ್ತಿಸಿದರೆ ಮತ್ತು ಶ್ರೇಯೋ ಮಾರ್ಗದಲ್ಲಿ ಜೀವನವನ್ನು ನಡೆಸುವಂತೆ ಪ್ರೇರಿಸಿದರೆ ನಮ್ಮ ಶ್ರಮಸಾರ್ಥಕ.




No comments:

Post a Comment