ನಾವು ಈ ಅನಂತ
ಜಗತ್ತನ್ನು ಗಮನಿಸಿದಾಗ ಇಲ್ಲಿ ಹಲವಾರು ನಿರ್ಜೀವ ವಸ್ತುಗಳನ್ನು ಕಾಣುತ್ತೇವೆ. ಅವುಗಳೆಲ್ಲವೂ ಅಸ್ತಿತ್ವವನ್ನು
ಹೊಂದಿದೆಯಷ್ಟೆ. ಮರ, ಗಿಡ, ಔಷಧ ಸಂಪತ್ತುಗಳೆಲ್ಲವು ಅಸ್ತಿತ್ವವನ್ನು ಹೊಂದಿರುವುದಷ್ಟೇ ಅಲ್ಲದೆ ಅವುಗಳಿಗೆ
ಜೀವವಿದ್ದು ಬೆಳೆಯುತ್ತವೆ. ಇನ್ನು ಪ್ರಾಣಿಸಮೂಹವು ಅಸ್ತಿತ್ವದಲ್ಲಿದ್ದು ಬೆಳೆಯುವುದಷ್ಟೇ ಅಲ್ಲದೆ
ತಮ್ಮ ಬದುಕನ್ನುನಾವು ನಿರ್ವಹಿಸಲು ಹೋರಾಡುತ್ತವೆ. ಮನುಷ್ಯರಾಗಿಯೂ ಕೂಡ ಹಲವಾರು ಕಾಲಘಟ್ಟಗಳಲ್ಲಿ
ಜಡವಾಗಿರುವಂತೆ ಅಸ್ತಿತ್ವದಲ್ಲಿರುವುದು, ಭೌತಿಕವಾಗಿ ಬೆಳೆಯುವುದು ಅಥವಾ ನಮ್ಮ ಬದುಕನ್ನು ಕಾಪಾಡಿಕೊಳ್ಳುವುದಷ್ಟೇ
ಆಗಿರುತ್ತದೆ. ಮನುಷ್ಯನ ಜೀವನವಿರುವುದು ಇಷ್ಟುಮಾತ್ರಕ್ಕಾಗಿಯೇ? ಅಲ್ಲ. ವಿಕಸನ ಹೊಂದುವುದಕ್ಕಾಗಿ
ಮತ್ತು ಪರಿಪೂರ್ಣತೆಯನ್ನು ತನ್ನಲ್ಲಿಯೇ ಕಂಡುಕೊಳ್ಳುವುದಕ್ಕಾಗಿ, ಮನುಷ್ಯನ ಪ್ರತಿಯೊಂದು ಕ್ರಿಯೆಯೂ
ಈ ಪರಿಪೂರ್ಣತೆಯನ್ನು ಸಾಧಿಸುವುದಕ್ಕಾಗಿಯೇ ಇದೆ. ಅದು ದುಃಖ ನಿವೃತ್ತಿಯನ್ನು ಮಾಡಿಕೊಳ್ಳಲು ಅರ್ಥಪುರುಷಾರ್ಥದ
ಬೆನ್ನುಹತ್ತುವ ಪ್ರಯತ್ನವಿರಬಹುದು ಅಥವಾ ಪ್ರಾಪ್ತಿಗಾಗಿ ನಾವು ಬಯಸುವ ಕಾಮಪುರುಷಾರ್ಥವೇ ಆಗಬಹುದು.
ಕೇವಲ ಅರ್ಥ ಕಾಮಗಳನ್ನೇ ಪುರುಷಾರ್ಥವಾಗಿ ಹೊಂದಿರುವಂತಹ ಜೀವಿಯನ್ನುಮನುಷ್ಯನೆಂದು ಕರೆಯಬಹುದೇ?
ಆಹಾರನಿದ್ರಾಭಯಮೈಥುನಂ
ಚ ಸಾಮಾನ್ಯಮೇತತ್ ಪಶುಭಿರ್ನರಾಣಾಮ್ |
ಧರ್ಮೋ ಹಿ ತೇಷಾಮಧಿಕೋ ವಿಶೇಷ: ಧರ್ಮೇಣ ಹೀನಾಃ ಪಶುಭಿಃ ಸಮಾನ: ||
ಹಾಗಾದರೆ ನಾವು ಅರ್ಥಕಾಮಗಳನ್ನು ಗಳಿಸಬಾರದೇ? ಹಾಗಲ್ಲ. ಈ ಅರ್ಥಕಾಮಗಳನ್ನು ಗಳಿಸುವುದು ಧರ್ಮಾಧಾರಿತವಾಗಿದ್ದು
ಮತ್ತುಪರಿಪೂರ್ಣತೆಯನ್ನು ಕಂಡುಕೊಳ್ಳಲು ಮೋಕ್ಷವನ್ನು ಪರಮಗುರಿಯಾಗಿ ಹೊಂದುವುದು ವಿವೇಕೀ ಮನುಷ್ಯನ
ಜೀವನಚರ್ಯೆಯಾಗಿರುತ್ತದೆ.
ಒಂದು ಹೊಸ ಯಂತ್ರವನ್ನು ಸಮರ್ಪಕವಾಗಿ ಬಳಸಲು ಯಂತ್ರ ನಿರ್ಮಾಪಕರು ಯಂತ್ರದೊಂದಿಗೆ ಒಂದು ಕೈಪಿಡಿಯನ್ನು
ನೀಡಿರುತ್ತಾರೆ. ಕೈಪಿಡಿಯಿಲ್ಲದೇ ಯಂತ್ರವನ್ನು ಬಳಸಲು ಪ್ರಯತ್ನಿಸಿದರೆ ಅದರ ಸಮರ್ಪಕ ಉಪಯೋಗವಾಗುವ
ಬದಲು ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಒಂದು ಯಂತ್ರದ ವಿಷಯದಲ್ಲಿ ಹೀಗೆ ಆಗಬಹುದು ಎಂದಾದರೆ, ಈ
ಮನುಷ್ಯ ಜೀವನದ ವಿಷಯವೇನು!? ಈ ಜೀವನವನ್ನು ಹೇಗೆ ಉಪಯೋಗಿಸಬೇಕು, ಯಾವುದಕ್ಕಾಗಿ ನಿಯೋಜಿಸಬೇಕು ಎಂದು
ತಿಳಿಯದೇ ಜೀವಿಸಿದರೆ, "ರತ್ನದಂತಹ ಈ ನರಜನ್ಮ ಮೂರು-ಕಾಸಿಗೆ ಹೋಯ್ತು" ಎಂಬಂತಾಗುತ್ತದೆ.
ಈ ಜೀವನ ಎಂದರೆ ಏನು, ಈ ಜೀವನವನ್ನು ಹೇಗೆ ಧರ್ಮದಿಂದ ನಡೆಸಬೇಕು ಮತ್ತು ಪರಮಪುರುಷಾರ್ಥವಾದ ಮೋಕ್ಷ
(ಪರಿಪೂರ್ಣತೆ) ಪಡೆಯುವ ಪರಿಯನ್ನು ಮುಖ್ಯಧೇಯವನ್ನಾಗಿ ಹೊಂದಿರುವ ವೇದವೆಂಬ ಕೈಪಿಡಿಯನ್ನು ಭಗವಂತನು
ಜೀವಿಗಳ ಉದ್ಧಾರಕ್ಕೆಂದೇ ನೀಡಿರುತ್ತಾನೆ. ಹೀಗೆ ವೇದವು ಮನುಷ್ಯನಿಗೆ ಮೋಕ್ಷವೆಂಬ ಧೈಯವನ್ನು ನೀಡಿ
ಧರ್ಮವೆಂಬ ಮಾರ್ಗವನ್ನು ತೋರಿಸಿ ಜೀವನವನ್ನು ನಡೆಸುವಂತೆ ಉಪದೇಶಿಸುತ್ತದೆ.
ಇದನ್ನೇ ಜಗತ್ತಿನ ಇತಿಹಾಸದಲ್ಲಿ ಬಂದುಹೋದಂತಹ ಅಧ್ಯಾತ್ಮ ಗುರುಗಳಲ್ಲಿ ಶಂಕರಾಚಾರ್ಯರು ಅಗ್ರಗಣ್ಯರು ಎಂದರೆ ಅತಿಶಯೋಕ್ತಿಯಾಗಲಾರದು. ಅವರು ಉಪನಿಷತ್ತು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳ (ಪ್ರಸ್ಥಾನತ್ರಯ) ಇಂಗಿತಾರ್ಥವನ್ನು ಅರ್ಥೈಸಿ, ಭಾಷ್ಯಗಳ ರಚನೆಯ ಮೂಲಕ ಜಗತ್ತಿಗೆ ಮಹಾಕೊಡುಗೆಯನ್ನೇ ನೀಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಪ್ರಕರಣ ಗ್ರಂಥಗಳ ಮತ್ತು ಸ್ತೋತ್ರಸಾಹಿತ್ಯದ ಮೂಲಕ ಇಂದಿಗೂ ಸಹ ಮಾನವಜನಾಂಗದ ಹಿತ ಸಾಧಿಸುತ್ತಿದ್ದಾರೆ. ಶಂಕರಾಚಾರ್ಯರ ಹಲವಾರು ಗ್ರಂಥಸಾಹಿತ್ಯದಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಹೊಂದಿರುವ ಗ್ರಂಥವೆಂದರೆ ಅದು ಭಜಗೋವಿಂದಮ್ ಎನ್ನುವುದರಲ್ಲಿ ಸಂಶಯವಿಲ್ಲ. ನಮ್ಮಲ್ಲಿರುವ ಅರ್ಥಕಾಮದ ಬಗೆಗಿರುವ ಮೋಹವನ್ನು ತೊಲಗಿಸಿ ಮೋಕ್ಷದೆಡೆಗೆ ಕರೆದೊಯ್ಯುವ ಗ್ರಂಥವೇ ಭಜಗೋವಿಂದಮ್, ಇದೊಂದು ಸ್ತೋತ್ರಸಾಹಿತ್ಯದಂತೆ ಕಂಡರೂ ಇದೊಂದು ವೇದಾಂತದ ಪ್ರಕರಣ- ಗ್ರಂಥವೆಂದು ಗ್ರಹಿಸುವುದು ಸೂಕ್ತ. ಈ ಗ್ರಂಥದಲ್ಲಿ ವೇದಾಂತದ ಮೂಲಭೂತ ವಿಚಾರಗಳು, ಪಾರಿಭಾಷಿಕ ಶಬ್ದಗಳು ಅಡಕವಾಗಿದ್ದು, ಮೋಕ್ಷವನ್ನೇ ಲಕ್ಷವಾಗಿ ಹೊಂದಿದೆ. ಈ ಗ್ರಂಥವು ವಿದ್ವಾಂಸರಿಗೆ ಎಷ್ಟು ಪ್ರಿಯವೋ, ಸಾಧಕರಿಗೆ ಎಷ್ಟು ಹಿತವೋ, ಸಾಮಾನ್ಯರಿಗೆ ಅಷ್ಟೇ ಅನುಷ್ಠಾನ ಯೋಗ್ಯವೂ ಆಗಿದೆ.
ಈ ಗ್ರಂಥಕ್ಕೆ ಹಲವಾರು ನಾಮಧೇಯಗಳಿದ್ದು ಭಜಗೋವಿಂದಮ್ ಎಂಬ ಪಲ್ಲವಿಯಿರುವುದರಿಂದ ಅದೇ ಹೆಸರಲ್ಲಿ ಪ್ರಸಿದ್ಧವಾಗಿದೆ.
ಈ ಗ್ರಂಥವು ಸುಶ್ರಾವ್ಯವಾಗಿ, ಶ್ರುತಿಬದ್ಧವಾಗಿ, ಸಂಗೀತ-ಸಂಯೋಜನೆಯೊಂದಿಗೆ ಹಾಡಬಹುದಾದರೂ ಅರ್ಥದ
ಕಡೆ ಮನಸ್ಸನ್ನು ಹೊರಳಿಸಿದಾಗ ಇದು ನಮ್ಮನ್ನು ಅಜ್ಞಾನದ ನಿದ್ದೆಯಿಂದ ಏಳಿಸುವ ಚಾಟಿಯೇ ಸರಿ. ನಮ್ಮಲ್ಲಿರುವ
ಮೋಹವನ್ನು ಮೋಹವನ್ನು ವಿವೇಕದ ಸುತ್ತಿಗೆಯಿಂದ ಪುಡಿಪುಡಿ ಮಾಡುವ ಕಾರಣದಿಂದ 'ಮೋಹಮುದ್ದರ' ಎಂಬ ಹೆಸರು
ಗ್ರಂಥಕ್ಕೆ ಅನ್ವರ್ಥವಾಗಿದೆ. ಹರಿದ ಬಟ್ಟೆಯೊಳಗಿರುವ ಜೀವ ದೇಹವೆಂಬ ಪಂಜರದೊಳಗೆ ಸಿಕ್ಕಿ ನರಳುತ್ತಿದ್ದು
ಮುಕ್ತಿಗಾಗಿ ಹಾತೊರೆಯುತ್ತಿರುವುದರಿಂದ ಇದಕ್ಕೆ ಚರ್ಪಟಪಂಜರಿಕಾ ಎಂಬ ನಾಮಾಂಕಿತವೂ ಇದೆ. ದ್ವಾದಶಮಂಜರಿ,
ಚತುರ್ದಶಮಂಜರಿ ಹೀಗೆ ಹಲವು ಶೀರ್ಷಿಕೆಗಳೊಂದಿಗೆ ಪ್ರತೀ ಮನೆಮನಗಳನ್ನು ತಲುಪುತ್ತಿದೆ. ಈ ಗ್ರಂಥ ಯಾವುದೇ
ವಾದವಿವಾದಗಳ ಸರಣಿಯನ್ನು ಹಿಡಿಯದೇ ಉಪದೇಶದ ಕ್ರಮವನ್ನು ಅನುಸರಿಸಿದೆ. ಪ್ರಸ್ತುತ ಗ್ರಂಥದಲ್ಲಿ ಚಿತ್ತಶುದ್ಧಿಗೆ
ಬೇಕಾದ ಸಾಧನಚತುಷ್ಟಯ (ವಿವೇಕ, ವೈರಾಗ್ಯ, ಶಮಾದಿ ಸಂಪತ್ತು ಮತ್ತು ಮುಮುಕ್ಷುತ್ವ ), ಮೋಕ್ಷಕ್ಕೆ
ಕಾರಣವಾದ ಆತ್ಮಜ್ಞಾನ ಮತ್ತು ಮತ್ತು ಜೀವನ್ಮುಕ್ತನ ಲಕ್ಷಣವನ್ನು ವಿಶದಪಡಿಸಿದೆ. ಜೀವನಿಗೆ ಗಮ್ಯವನ್ನು
ಸಾಕ್ಷಾತ್ತಾಗಿ ತಿಳಿಸುವ ಭಜಗೋವಿಂದಮ್ ಗ್ರಂಥವನ್ನು ಅಧ್ಯಯನ ಮಾಡಿ, ಮೋಹದಿಂದ ಮೋಕ್ಷದೆಡೆಗೆ ನಡೆಯೋಣವೇ?
No comments:
Post a Comment