ಒಂದಾನೊಂದು ಕಾಲದಲ್ಲಿ ಮಹಾವೃಷ ಎಂಬ ಸಂಸ್ಥಾನವನ್ನು ಜಾನಶ್ರುತಿ ಎಂಬ ರಾಜನು ಆಳುತ್ತಿದ್ದನು. ಸಮಸ್ತ ಜನರಿಗೆ ಉಪಯೋಗವಾಗಲಿ ಎಂದು ಅನ್ನಛತ್ರಗಳನ್ನು, ಭಾವಿ ಕೊಳವೆಗಳನ್ನು, ಆಸ್ಪತ್ರೆಗಳನ್ನು ನಿರ್ಮಿಸಿ, ಸರ್ವವಿಧಗಳಲ್ಲೂ ಸೇವಾ ಕಾರ್ಯಕ್ಕಾಗಿ ತನ್ನನ್ನು ತಾನು ಮುಡುಪಾಗಿಟ್ಟಿದ್ದನು. ಅವನಲ್ಲಿ ದೈವ ಶ್ರದ್ಧೆ, ಶಾಸ್ತ್ರ ಶ್ರದ್ಧೆ ಮತ್ತು ಕರ್ಮ ನಿಷ್ಟುರತೆಯೂ ನೆಲೆಸಿತ್ತು. ದಾನ ಧರ್ಮಗಳಿಂದ,
ಮತ್ತು ಅವನ ಜನಪರ ಕಾರ್ಯಗಳಿಂದ ಜನಪ್ರಿಯ ರಾಜನಾಗಿದ್ದನು. ಅವನ ಜನಪ್ರಿಯತೆ ಮತ್ತು ಕೀರ್ತಿ ತನ್ನ ರಾಜ್ಯದಲ್ಲಷ್ಟೇ ಅಲ್ಲದೆ, ದೂರದೂರದ ರಾಜ್ಯಗಳಲ್ಲಿಯೂ ಕೂಡ ಹಬ್ಬಿತ್ತು. ಈ ಕಾರಣದಿಂದ ಅವನಲ್ಲಿಯೂ ಕೂಡ ಕೊಂಚ ಗರ್ವದ ಮನೋಭಾವವು ತುಂಬಿತ್ತು.
ಒಂದು ದಿನ ತನ್ನ ಕೆಲಸಗಳನ್ನು ಮುಗಿಸಿ ರಾತ್ರಿ ಅರಮನೆಯ ಮೇಲ್ಚಾವಣಿಯ ಮೇಲೆ ಮಲಗಿದ್ದು, ಆ ದಿನದ ತನ್ನ ಕಾರ್ಯಗಳ ಬಗ್ಗೆ ಮೆಲಕುಹಾಕುತ್ತಿದ್ದನು. ಆ ಸಮಯದಲ್ಲಿ ಎರಡು ಪಕ್ಷಿಗಳು ಆ ಅರಮನೆಯ ಮೇಲೆ ಹಾರುತ್ತಿದ್ದವು. ಅದರಲ್ಲಿ ಹಿಂದಿನ ಪಕ್ಷಿ ಮುಂದಿನ ಪಕ್ಷಿಯನ್ನುದೇಶಿಸಿ, " ಹೇ ಮೂರ್ಖ ಭಲ್ಲಾಕ್ಷ! ಆತುರ ಪಡಬೇಡ. ನಿನ್ನ ಕೆಳಗೆ ಜಾನಶ್ರುತಿಯ ಕೀರ್ತಿಯ ಪ್ರಭೆಯನ್ನು ಕಾಣಲಾರೆಯೇ? ಆ ಕೀರ್ತಿಯ ಪ್ರಭೆಯು ಅಕಾಶವನ್ನೆಲ್ಲಾ ವ್ಯಾಪಿಸಿದೆ ಮತ್ತು ಅದರಿಂದ ನೀನು ಸುಟ್ಟುಭಸ್ಮವಾದರೂ ಆಶ್ಚರ್ಯವೇನಿಲ್ಲ. ಜಾಗ್ರತೆ" ಎಂದು ನುಡಿಯಿತು. ಪಕ್ಷಿಗಳ ಭಾಷೆಯನ್ನು ಅರಿತಿದ್ದ ಜಾನಶ್ರುತಿ ರಾಜನು ತನ್ನ ಉತ್ಕೃಷ್ಟತೆಯು ಆಕಾಶವನ್ನು ವ್ಯಾಪಿಸುತ್ತಿರುವುದನ್ನು ತಿಳಿದು ಇನ್ನಷ್ಟು ಹಿಗ್ಗುತ್ತಾನೆ. ಅದೇ ವೇಳೆಗೆ ಮುಂದಿದ್ದ ಪಕ್ಷಿಯು ಹಿಂತಿರುಗಿ, "ನೀನು ಯಾರ ಕೀರ್ತಿಯ ಬಗ್ಗೆ ಇಷ್ಟು ಹೊಗಳುತ್ತಿರುವೆ? ನೀನು ಹೇಳುವುದನ್ನು ಕೇಳಿದರೆ ಏನೋ ತಳ್ಳುವಗಾಡಿಯ ರೈಕ್ವನ ಕೀರ್ತಿ ಎಂಬಂತೆ ಮಾತನಾಡುತ್ತಿರುವೆ. ರೈಕ್ವನ ಕೀರ್ತಿಯಾದರೋ ಮೂರು ಲೋಕವನ್ನೂ ವ್ಯಾಪಿಸಿ ಸಮಸ್ತ ಆನಂದವನ್ನು ಪಡೆದಿದ್ದಾನೆ."
ಈ ವಾಕ್ಯಗಳನ್ನು ಕೇಳಿ ರಾಜನು ಮಂತ್ರಮುಗ್ಧನಾಗಿ, ತನಗಿಂತ ಕೀರ್ತಿವಂತನಾದ ರೈಕ್ವನಾರಿರಬಹುದು ಎಂದು ಕುತೂಹಲದಿಂದ ರಾಜಭಟರನ್ನು ರೈಕ್ವನ ಹುಡುಕಾಟಕ್ಕಾಗಿ ಸರ್ವದಿಕ್ಕುಗಳಲ್ಲೂ ನಿಯೋಜಿಸುತ್ತಾನೆ. ರಾಜಧಾನಿ, ನಗರಗಳಲ್ಲಿ ಹುಡುಕಿ ಸೋತುಬಂದ ರಾಜಭಟರಿಗೆ ರಾಜನು ಹಳ್ಳಿಗಳಲ್ಲೋ, ನದೀ ತೀರದಲ್ಲೋ, ದೇವಸ್ಥಾನದ ಬಳಿಯಲ್ಲೋ ಹುಡುಕಲು ಆದೇಶಿಸುತ್ತಾನೆ. ರಾಜನ ಆದೇಶದಂತೆ ಹುಡುಕುತ್ತಾ ಹೋದ ರಾಜಭಟರ ಕಣ್ಣಿಗೆ ಒಂದು ಹಳ್ಳಿಯಲ್ಲಿ, ಒಂದು ಗಾಡಿಯಡಿಯಲ್ಲಿ ನೋಡಲು ಅಷ್ಟೇನು ಸುಂದರನಲ್ಲದ ವ್ಯಕ್ತಿಯನ್ನು ಕಂಡು ಅವನೇ ರೈಕ್ವನೆಂದು ಖಾತರಿಪಡಿಸಿಕೊಂಡು ರಾಜನಿಗೆ ವಿಚಾರವನ್ನು ಮುಟ್ಟಿಸುತ್ತಾರೆ.
ಅನಂದಭರಿತನಾದ ರಾಜ ತನ್ನ ಪರಿವಾರದೊಂದಿಗೆ, ಗೋವುಗಳನ್ನು ಮತ್ತು ಧನಕನಕಾದಿಗಳನ್ನು ದಾನಕ್ಕೆಂದು ಕೊಂಡೊಯ್ಯುತ್ತಾನೆ. ರೈಕ್ವನ ಮುಂದೆ ತಾನು ತಂದಿರುವ ಸಂಪತ್ತನ್ನೆಲ್ಲಾ ತೋರಿಸಿ, "ಹೇ ಮಹಾತ್ಮ! ಇವೆಲ್ಲವೂ ನಿನ್ನವೇ ಎಂದು ತಿಳಿ. ನಿನ್ನ ಅಪೂರ್ವಕೀರ್ತಿಗೆ ಕಾರಣವಾಗಿರುವ ವಿದ್ಯೆಯನ್ನು ನನಗೂ ತಿಳಿಸಿಕೊಡಿ" ಎನ್ನುತ್ತಾನೆ. ಕೋಪಗೊಂಡ ರೈಕ್ವ, "ಎಲೈ ಮೂರ್ಖ! ಹಣದಿಂದ ವಿದ್ಯೆಯನ್ನು ಕೊಳ್ಳಲು ಸಾಧ್ಯವೇ! ನಿನ್ನ ಗೋವುಗಳು, ಧನಸಂಪತ್ತು ನಿನಗೇ ಇರಲಿ. ಇಂಥ ಗುಣಹೊಂದಿರುವವನಾದ ನೀನು ಗುಣಶೂದ್ರನೇ ಸರಿ. ತೊಲಗು ಇಲ್ಲಿಂದ" ಎಂದು ನುಡಿದ. ರಾಜನಿಗೆ ಅವಮಾನವಾದರೂ ರೈಕ್ವನ ಮಾತಿನ ಹಿಂದಿನ ಉದ್ದೇಶವನ್ನರಿತು, ಹಿಂದಿರುಗಿ ರೈಕ್ವನ ಬಗ್ಗೆ, ಅವನ ವ್ಯಕ್ತಿತ್ವದ ಬಗ್ಗೆ, ವಿದ್ಯೆಯ ಬಗ್ಗೆ ವ್ಯಾಕುಲನಾಗಿ ಯೋಚಿಸುತ್ತಿದ್ದನು. ಕೆಲವು ದಿನಗಳ ಬಳಿಕ ಇನ್ನಷ್ಟು ಸಂಪತ್ತು ಮತ್ತು ಪ್ರಾಣಸದೃಶಳಾದ ಮಗಳನ್ನೂ ಕರೆದೊಯ್ದು ರೈಕ್ವನಿಗೆ, "ಸಮಸ್ತವೂ ನಿಮ್ಮದೇ. ಎಲ್ಲವನ್ನೂ ನಿಮಗೆ ಅರ್ಪಿಸುತ್ತಿದ್ದೇನೆ. ಮಗಳನ್ನೂ ನಿಮಗೆ ಕನ್ಯಾದಾನ ಮಾಡಲು ಸಿದ್ಧನಿದ್ದೇನೆ. ದಯಮಾಡಿ ನನಗೆ ಉಪದೇಶ ನೀಡಿ" ಎಂದಾಗ ಅವನಲ್ಲಿದ್ದ ವಿನಯ, ಸಮರ್ಪಣಾಭಾವ, ವಿದ್ಯೆಯ ಮೇಲಿರುವ ಹಂಬಲವನ್ನು ಗಮನಿಸಿ ರೈಕ್ವ ಸಂವರ್ಗವಿದ್ಯೆಯನ್ನು ಜಾನಶ್ರುತಿಗೆ ಉಪದೇಶಿಸುತ್ತಾನೆ.
ಈ ಕಥೆಯಿಂದ ನಾವು ಕಲಿಯಬಹುದಾದ ಕೆಲವು ಅಂಶಗಳು
1) ದಾನದ ಶ್ರೇಷ್ಠತೆ ಮತ್ತು ಅದರಿಂದ ಆಗುವ ಚಿತ್ತಶುದ್ಧಿ
2) ದಾನ ಮಾಡುವಾಗ ಯಾವುದೇ ಗರ್ವವಿರಬಾರದು
3) ಗುರುವಿನ ಅವಶ್ಯಕತೆ ಮತ್ತು ಹುಡುಕಾಟ - ನಿಜವಾದ ಸಂತರು ಹೊರಗಿನಿಂದ ಸಾಮಾನ್ಯರಂತಿದ್ದರೂ ಆಂತರಿಕವಾಗಿ ವಿಶಿಷ್ಟವಾಗಿರುತ್ತಾರೆ
4) ಶಿರವನೆ ಗುರುವಿಗೆ ಅರ್ಪಿಸಿದರೂ ಅದು ಕೇವಲ ತೃಣವೇ ಎಂಬಂತೆ ನಮ್ಮಲ್ಲಿ ಸರ್ವಸಮರ್ಪಣಾಭಾವ ಜಾಗೃತಿ
5) ಉಪನಿಷತ್ತಿನಲ್ಲಿ ಪ್ರತಿಪಾದ್ಯವಾದ ಆಧ್ಯಾತ್ಮಿಕ ವಿದ್ಯೆಯಿಂದ ಮಾತ್ರವೇ ನಿಜವಾದ ಆನಂದ, ಕೀರ್ತಿ ಲಭಿಸುವುದು.
ಈ ಎಲ್ಲಾ ಪಾಠಗಳು ನಮ್ಮ ಜೀವನದಲ್ಲಿ ದಾನ-ಧರ್ಮವನ್ನು ಮಾಡುವುದರ ಮೂಲಕ ಚಿತ್ತಶುದ್ಧಿಯನ್ನು ಸಂಪಾದಿಸಿ, ಗುರುವನ್ನಾಶ್ರಯಿಸಿ ವಿದ್ಯೆಯನ್ನು ಗಳಿಸಲು ದಾರಿದೀಪವಾಗಲಿ ಎಂದು ಹಾರೈಸುತ್ತೇವೆ.
(ಛಾ0ದೋಗ್ಯ ಉಪನಿಷತ್ತು)
No comments:
Post a Comment