ಆದಿಶಂಕರಚಾರ್ಯರು
ವಯೋವೃದ್ಧನನ್ನು ನೆಪಮಾಡಿಕೊಂಡು ನಮಗೆಲ್ಲರಿಗೂ ಉಪದೇಶಿಸುತ್ತಾ, ಲೌಕಿಕ ಜ್ಞಾನದ ಮಿತಿಯನ್ನು ತಿಳಿಸಿ ಆಧ್ಯಾತ್ಮಿಕ ಜ್ಞಾನದ ಶ್ರೇಷ್ಠತೆಯನ್ನು ಭಜಗೋವಿಂದಮ್ ಗ್ರಂಥದ ಮೊದಲನೆಯ ಶ್ಲೋಕದಲ್ಲಿ ತಿಳಿಸಿದರು. ಪರಮಸತ್ಯವಾದ ಬ್ರಹ್ಮವೇ ನಾವಾಗಿದ್ದರೂ, ಅನಾತ್ಮದ ಮೇಲಿರುವ ನಮ್ಮ ಅಭಿಮಾನವೇ ಈ
ಆತ್ಮಜ್ಞಾನರೂಪ ಮೋಕ್ಷಕ್ಕೆ ಅಡ್ಡಬಂದಿರುವುದು. ಹಾಗಾಗಿ, ನಮ್ಮಲ್ಲಿರುವ ಅನಾತ್ಮ ಅಭಿಮಾನವನ್ನು ಕ್ರಮಬದ್ಧವಾಗಿ ಒಂದೊಂದಾಗಿ ತೆಗೆಯುವ ಯೋಜನೆಯನ್ನು ಶಂಕರಾಚಾರ್ಯರು ಪ್ರಸ್ತುತ ಗ್ರಂಥದಲ್ಲಿ ಕೈಗೆತ್ತಿಕೊಂಡಿದ್ದಾರೆ. ನಮಗಿರುವ ದಟ್ಟವಾದ ಮೋಹ - ಧನದ ವಿಷಯವಾದ್ದು. ಇದರ
ಮೋಹವನ್ನು ಹೋಗಲಾಡಿಸಲು ಆಚಾರ್ಯರು ಎರಡನೇ ಶ್ಲೋಕದಲ್ಲಿ
ಮೂಢ
ಜಹೀಹಿ ಧನಾಗಮತೃಷ್ಣಾಂ
ಕುರು
ಸದ್ಬುದ್ಧಿಂ ಮನಸಿ ವಿತೃಷ್ಣಾಮ್ ।
ಯಲ್ಲಭಸೇ
ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್ ॥ 2 ॥
ಮೂಢ - ತನ್ನ ಅಜ್ಞಾನದಿಂದ ತಾನೇ ಕಷ್ಟದಲ್ಲಿ ಸಿಕ್ಕಿಹಾಕಿಕೊಳ್ಳುವವನು
ಮತ್ತು ಸಾಧ್ಯ-ಸಾಧನಗಳ ಬಗ್ಗೆ ಗೊಂದಲವಿರುವ ವ್ಯಕ್ತಿ.
ಜಹೀಹಿ - ಬಿಟ್ಟುಬಿಡು ಅಥವಾ ತೊರೆಯುವಂತವನಾಗು. ಏನನ್ನು
ಬಿಡಬೇಕು? ಹಣವನ್ನೇ? ಹಣವನ್ನು ಬಿಟ್ಟು ಜೀವನ ನಡೆಸಲಾದೀತೆ? ಹೀಗೆ
ಉಪದೇಶಿಸಿದರೆ ಅದನ್ನು ಅನುಷ್ಠಾನಕ್ಕೆ ತರಲಾದರೂ ಸಾಧ್ಯವೇ? ಎಂಬ ಪ್ರಶ್ನೆ ಏಳುವುದು
ಸಹಜ. ಆದ್ದರಿಂದಲೇ,
ಧನಾಗಮತೃಷ್ಣಾಮ್ - ಧನದ ಬಗ್ಗೆ ಇರುವ ತೀರದ ದಾಹವನ್ನು,
ಲೋಭವನ್ನು ತೊರೆಯಲು ಉಪದೇಶಿಸಿದೆಯೇ ಹೊರತು ಧನವನ್ನಲ್ಲ. ಹಾಗಾದರೆ ಧನದ ಬಗ್ಗೆ ಇರುವ
ಮೋಹವಾದರೂ ಏನು? ಹಣವೇ ಸರ್ವಸ್ವವೆಂದು
ತಿಳಿಯುವುದು. ಧನವನ್ನೇ ಸರ್ವಸ್ವವೆಂದು ತಿಳಿದ ಮೂಢರಿಗೆ ನಮ್ಮ ಶಾಸ್ತ್ರಗಳು ಅನ್ವಯ-ವ್ಯತಿರೇಕ ಯುಕ್ತಿಯನ್ನು ಬಳಸಿ ಪ್ರಶ್ನೆಗಳ ಮಳೆಯನ್ನೇ
ಸುರಿಸುತ್ತದೆ.
ಮೋಹ
1 - ಧನವಿದ್ದಲ್ಲಿ ಆನಂದ ಸಿಗುತ್ತದೆ - ನಮ್ಮ
ಜೀವನದ ಬಹುಪಾಲು ಪರಿಶ್ರಮವೆಲ್ಲ ಈ ಒಂದು ಮೋಹದಿಂದಲೇ.
ಆದರೆ, ಧನಿಕರೆಲ್ಲರೂ ಆನಂದದಿಂದ ಇದ್ದಾರೆಯೇ? ಹೆಚ್ಚು ಧನವಿಲ್ಲದ ಬಡವರು ಆನಂದದಲ್ಲಿಲ್ಲವೇ? ಶ್ರೀಮಂತಿಕೆ ಹೆಚ್ಚಾದಷ್ಟೂ ಆನಂದ ಹೆಚ್ಚಾಗುತ್ತದೆ ಎನ್ನುವುದು
ನಮಗೆ ಕಾಣುತ್ತಿದೆಯೇ? ಯೋಚಿಸಿ ನೋಡೋಣ. ಶ್ರೀಮಂತರು ಖಿನ್ನತೆಗೊಳಗಾಗುವುದು, ನಿದ್ರಾಹೀನತೆಗೊಳಗಾಗುವುದು, ಔಷಧವನ್ನೇ ಆಹಾರದಂತೆ ಸೇವಿಸುವುದು, ಜೀವನವನ್ನೇ ಅಂತ್ಯಮಾಡಿಕೊಳ್ಳುವ ಉದಾಹರಣೆಗಳು ಒಂದೇ ಎರಡೇ. ಕುಗ್ರಾಮದಲ್ಲಿದ್ದರೂ,
ತೀರಾ ಅವಶ್ಯಕ ವಸ್ತುಗಳೂ ಇರದ ಕೆಲ ಬಡವರ
ಮುಖದಲ್ಲಿ ಸಂತೋಷ ನೋಡಿದಾಗ ಹಣದ ಬಗ್ಗೆ ಇರುವ
ನಮ್ಮ ಕಲ್ಪನೆಗಳು ಎಷ್ಟು ವಿಚಾರಹೀನವಾದದ್ದು ಎಂದು ತಿಳಿಯುತ್ತದಲ್ಲವೇ? ಧನದ
ಬಗ್ಗೆ ಇರುವ ಮೋಹದ ವಿಚಾರವನ್ನು
ನಮಗೆ ಅರ್ಥ ಮಾಡಿಸಲು ಬೃಹದಾರಣ್ಯಕ
ಉಪನಿಷತ್ತಿನ ಕಥೆಯೊಂದನ್ನು ನೋಡೋಣ. ಯಾಜ್ಞವಲ್ಕ್ಯ ಮಹರ್ಷಿಗಳು ತಮ್ಮ ಇಬ್ಬರು ಹೆಂಡತಿಯರಿಗೆ
ತಮ್ಮ ಆಸ್ತಿಯನ್ನು ಸಮವಾಗಿ ಹಂಚಿ ಸನ್ಯಾಸಸ್ವೀಕಾರ ಮಾಡಲು
ನಿರ್ಧರಿಸುತ್ತಾರೆ. ಕಾತ್ಯಾಯನಿ ಈ ವಿಚಾರಕ್ಕೆ ಸಮ್ಮತಿಯನ್ನು
ಸೂಚಿಸುತ್ತಾಳೆ ಹಾಗೂ ಮತ್ತೋರ್ವ ಮಡದಿಯಾದ
ಮೈತ್ರೇಯೀ, "ಈ ಧನದಿಂದ ನನಗೆ
ನೀವು ಪಡೆಯಲು ಹೊರೆಟಿರುವ ಅಮೃತತ್ವದ ಆನಂದ ಸಿಗುತ್ತದೆಯೇ?" ಎಂದು ಕೇಳಿದಾಗ
ಮಹರ್ಷಿಗಳು, "ಜಗತ್ತಿನ ಸಮಸ್ತ ಧನವೆಲ್ಲವೂ ನಮ್ಮದಾದರೂ ಅದರಿಂದ ಅಮೃತತ್ವದ(ಪೂರ್ಣತೆಯ) ನಿರತಿಶಯ ಆನಂದ ಸಿಗುವ ಭರವಸೆಯನ್ನು
ಹೊಂದಬೇಡ" (ಅಮೃತತ್ವಸ್ಯ ನ ಆಶಾಸ್ತಿ ವಿತ್ತೇನ)
ಎಂದು ಉಪದೇಶಿಸುತ್ತಾರೆ. ಹಣಕ್ಕೂ ಆಂತರಿಕ ಅನಂದಕ್ಕೂ ನೇರಾದ ಸಂಬಂಧವಿಲ್ಲವೆಂದಾಯಿತು.
ಮೋಹ
2 - ಹಣ ಭದ್ರತೆಯನ್ನು ನೀಡುತ್ತದೆ - ಹಣ ನಮ್ಮ ಭೌತಿಕ
ಅವಶ್ಯಕತೆ ಪೂರೈಸುತ್ತದೆ ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ ಎಂಬುದು ಸತ್ಯವಾದರೂ, ಮಾನಸಿಕ ಭದ್ರತೆ ನೀಡುತ್ತದೆ ಎನ್ನುವುದು ಭ್ರಮೆಯಷ್ಟೇ. ನಮಗೆ ಭದ್ರತೆ ನೀಡಬೇಕಾದ
ಸಂಪತ್ತಿಗೆ ಭದ್ರತೆ ನೀಡುವ ಪರಿಸ್ಥಿತಿ ಬಂದಿಲ್ಲವೇ? ಅದಕ್ಕಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು, ಅವರ ಭದ್ರತೆಗಾಗಿ ಶ್ವಾನವೊಂದನ್ನು,
CCTV ಅಳವಡಿಕೆ ಹೀಗೆ ಸದಾ ಹಣದ
ರಕ್ಷಣೆಯ ವಿಷಯದಲ್ಲಿ ಮಾನಸಿಕ ಅಭದ್ರತೆಯೇ ಹೆಚ್ಚು ಎಂಬುದು ಸರ್ವವಿದಿತವಾಗಿದೆ! ಹಣದ ಆಸೆಯಿಂದಾಗಿ ಮತ್ತೊಬ್ಬರ
ದರೋಡೆ, ಕಳ್ಳತನ, ಅಪಹರಣ, ಹತ್ಯೆಯಾಗುವುದು ಸಮಾಜದಲ್ಲಿ ಕಾಣುತ್ತಿಲ್ಲವೇ! ಅಧಿಕ ಹಣವಿಲ್ಲದ ಕೆಲವರು
ನೆಮ್ಮದಿಯಿಂದ ಜೀವಿಸುತ್ತಿರುವುದು ಹಣದ ಮೇಲಿರುವ ನಮ್ಮ
ದುರಾಸೆಯನ್ನು ಪ್ರಶ್ನಿಸುವುದಿಲ್ಲವೇ? ಭಗವಂತನನ್ನು ಅನನ್ಯವಾಗಿ ಆಶ್ರಯಿಸಿದರೆ ನಿರಪೇಕ್ಷವಾದ ಮಾನಸಿಕ ಭದ್ರತೆ ಕಟ್ಟಿಟ್ಟಬುತ್ತಿ ಎಂಬ ಗೀತಾಚಾರ್ಯನ 'ಯೋಗಕ್ಷೇಮಮ್
ವಹಾಮ್ಯಹಮ್' ಭರವಸೆ ನೆನಪಿಗೆ ಬಂದರೆ ನಾವು ನೆಮ್ಮದಿಯಿಂದಿರಬಹುದು.
ಮೋಹ
3 - ಧನದಿಂದ ತೃಪ್ತಿ ದೊರೆಯುತ್ತದೆ ಎಂಬ ಭ್ರಾಂತಿಯಂತೂ ಅನುಭವಕ್ಕೂ,
ಯುಕ್ತಿಗೂ ದೂರ. ದುಡಿಮೆಗೋಸ್ಕರ ತಮ್ಮ
ವೈಯಕ್ತಿಕ ಆರೋಗ್ಯ, ಕೌಟುಂಬಿಕ ಜೀವನ, ಸಾಮಾಜಿಕ ಸಾಮರಸ್ಯವನ್ನೆಲ್ಲಾ ಕಳೆದುಕೊಂಡರೂ, ಜೀವನವಿಡೀ ದುಡಿದು ನಿವೃತ್ತಿಯಾದ ನಂತರವೂ ದುಡಿಮೆಯ ಮೇಲಿರುವ ಮೋಹವನ್ನು ನೋಡಿದರೆ ಜಗತ್ತಿನ ಅತೀ ಶ್ರೀಮಂತವ್ಯಕ್ತಿಗಳಿಗೂ ಪೂರ್ಣತೃಪ್ತಯಂತಿರಬಹುದೇನೋ! ಇದನ್ನೇ ಡಿ.ವಿ.ಜಿ ತಮ್ಮ
ಕಗ್ಗದಲ್ಲಿ ಹೀಗೆ ಚಿತ್ರಿಸುತ್ತಾರೆ.
ಬೇಕು
ಬೇಕದು ಬೇಕು ಬೇಕಿದೆನಗಿನ್ನೊಂದು ।
ಬೇಕೆನುತ
ಬೊಬ್ಬಿಡುತಲಿಹ ಘಟವನಿದನು ॥
ಏಕೆಂದು
ರಚಿಸಿದನೊ ಬೊಮ್ಮನೀ ಬೇಕು ಜಪ ।
ಸಾಕೆನಿಪುದೆಂದಿಗಲೊ
- ಮಂಕುತಿಮ್ಮ ॥
ಹಾಗಾದರೆ
ನಾವೇನು ಮಾಡಬೇಕು? ಧನಕ್ಕೂ ಹಾಗು ಮಾನಸಿಕ ಭದ್ರತೆ,
ತೃಪ್ತಿ, ಆನಂದಕ್ಕೂ ಕಾರಣ-ಕಾರ್ಯ ಸಂಬಂಧವಿದೆ
ಎನ್ನುವ ಮೋಹವನ್ನು ತೊರೆಯಬೇಕು.
ಕುರು
ಸದ್ಬುದ್ಧಿಮ್ ಮನಸಿ ವಿತೃಷ್ಣಾಮ್ - ಧನದ
ವಿಚಾರವಾಗಿ ಸದ್ಬುದ್ಧಿಯನ್ನು ಬೆಳೆಸಿಕೊಂಡು ಮನಸ್ಸಿನಿಂದ ಈ ದುರಾಸೆಯನ್ನು ದೂರಮಾಡಬೇಕು.
ಧನದ ಮೇಲಿದ್ದ ಮೋಹದಿಂದ ಲೋಭಿಯಾಗಿದ್ದ ನವಕೋಟಿ ನಾರಾಯಣ ಸದ್ಬುದ್ಧಿಯನ್ನು ಬೆಳೆಸಿಕೊಂಡು ಮನಸ್ಸನ್ನು ಭಗವಂತನಿಗಾಗಿ ಅರ್ಪಿಸಿ ಪುರಂದರದಾಸರಾದ ಕಥೆ ನಮಗೆ ಪ್ರೇರಣೆಯಾಗಬೇಕಲ್ಲವೇ?
ಎಲ್ಲರೂ ಪುರಂದರದಾಸರಂತಾಗಲು ಸಾಧ್ಯವಾಗದಿರಬಹುದು. ಆದರೆ ಏನಕೇನ ಪ್ರಕಾರೇಣ,
ಶತಾಯ ಗತಾಯ, ಅಧರ್ಮ ಮಾರ್ಗವನ್ನು(ಲಂಚ, ಭ್ರಷ್ಟಾಚಾರ ಇತ್ಯಾದಿ)
ಹಿಡಿದಾದರೂ ದುಡಿಯಬೇಕು ಎಂದು ಧನಕ್ಕೆ ದಾಸರಾಗಬೇಕಿಲ್ಲ
ಅಲ್ಲವೇ? ಅದನ್ನೇ ಆಚಾರ್ಯರು ಉಪದೇಶಿಸುತ್ತಿದ್ದಾರೆ.
ನಿಜಕರ್ಮೋಪಾತ್ತಂ
ವಿತ್ತಂ - ಸ್ವಂತಪರಿಶ್ರಮದಿಂದ, ಪ್ರಾಮಾಣಿಕತೆಯಿಂದ, ಧನವನ್ನು ಗಳಿಸಬಹುದು, ಹಾಗೇ ಗಳಿಸಬೇಕು. ಲಾಟರಿ,
ಜೂಜು, ಕೆಲಸವನ್ನೇನೂ ಮಾಡದೇ ಪರರಿಂದ ಪಡೆಯುವ ಧನ ಮುಂತಾದವು ಮಹಾತ್ಮ
ಗಾಂಧೀಜಿ ತಿಳಿಸಿದಂತೆ Wealth without
work is a social sin ಆಗುವುದರಲ್ಲಿ
ಸಂಶಯವಿಲ್ಲ. ಧರ್ಮಾಧಾರಿತವಾಗಿ ಗಳಿಸಿರುವ ಧನವನ್ನು ಹೇಗೆ ವಿನಿಯೋಗಿಸಬೇಕು ಎಂಬುದನ್ನೂ
ಅಚಾರ್ಯರೇ ತಿಳಿಸುತ್ತಿದ್ದಾರೆ.
ವಿತ್ತಂ
ತೇನ ವಿನೋದಯ ಚಿತ್ತಂ - ಧನವನ್ನು ಮನಸ್ಸಿಗೆ ಉಲ್ಲಾಸವಾಗುವಂತೆ ಬಳಸಬೇಕು. ಹಾಗೆಂದ ಮಾತ್ರಕ್ಕೆ ಮೋಜು ಮಸ್ತಿ ಮಾಡುವ
ಮೂಲಕವಲ್ಲ. ಧನಾತ್ ಧರ್ಮಮ್ ತತ: ಸುಖಂ ಎಂಬಂತೆ
ಆ ಧನವನ್ನು ಧರ್ಮಾಚರಣೆಗೆ ವಿನಿಯೋಗ ಮಾಡಿ ಮನಸ್ಸಿನಲ್ಲಿ ವಿನೋದವನ್ನು
ಹೊಂದಬೇಕು ಎಂಬುದು ಲಕ್ಷ್ಯಾರ್ಥ. ಏಕೆಂದರೆ, ಧರ್ಮವೇ ಪುಣ್ಯಸಂಪಾದನೆಗೆ ಏಕಮಾತ್ರ ಕಾರಣ ಮತ್ತು ಪುಣ್ಯವೇ
ಆಂತರಿಕ ಸುಖಕ್ಕೆ ಏಕೈಕ ಕಾರಣ. ನಮಗೆ
ಬೇಕಿರುವ ಭದ್ರತೆ, ತೃಪ್ತಿ, ಆನಂದವನ್ನು ಧನದಲ್ಲಿ ಹುಡುಕುವ ಬದಲು ಧರ್ಮಾಚರಣೆಯ ಮೂಲಕ
ಹುಡುಕುವುದು ವಿವೇಕ.
ಸಾರಾಂಶ - ಸದ್ವಿಚಾರದಿಂದ ಧನದ ಮೇಲಿರುವ ಅತ್ಯಾಸೆಯನ್ನು
ಮನಸ್ಸಿನಿಂದ ತೊರೆದು, ಸ್ವಂತಪರಿಶ್ರಮದಿಂದ ಧನಾರ್ಜನೆ ಮಾಡಿ, ಆ ಧನವನ್ನು ಧರ್ಮಾಚರಣೆಗೆ
ವಿನಿಯೋಗಿಸಿ ಚಿತ್ತಶುದ್ಧಿ ಗಳಿಸಿಕೊಂಡು, ಅರ್ಥಪುರುಷಾರ್ಥದ ಬಗೆಗಿರುವ ಮೋಹವನ್ನು ತೊಲಗಿಸಿ ಮೋಕ್ಷದೆಡೆಗೆ ನಡೆಯೋಣ.
No comments:
Post a Comment