ಒಂದಾನೊಂದು ಕಾಲದಲ್ಲಿ ದೇವಾಸುರರ ಯುದ್ಧದಲ್ಲಿ ದೇವತೆಗಳು ವಿಜಯಸಾಧಿಸಿ ಸಂಭ್ರಮದಿಂದ ಸಂತೋಷಕೂಟವನ್ನು ಏರ್ಪಡಿಸಿದ್ದರು. ಎಲ್ಲಾ ದೇವತೆಗಳು ತಮ್ಮ ತಮ್ಮ ನಾಯಕರಾದ ದೇವತೆಗಳೇ ಈ ವಿಜಯಕ್ಕೆ ಕಾರಣ ಎಂದು ಬೀಗುತ್ತಿದ್ದರು. ಆಗ ವಾಯುವು ತನ್ನ ಮಹಿಮೆಯನ್ನು ನೆನೆದು ತಂಪಾಗಿ ಗಾಳಿ ಬೀಸಿದರೆ, ಅಗ್ನಿ ಜ್ವಾಜ್ವಲ್ಯಮಯವಾಗಿ ಬೆಳಗುತ್ತಿದ್ದ. ಇಂದ್ರ ವಿಜಯಸೂಚಕವಾಗಿ ಮೇಘನಾದವನ್ನು ಮಾಡುತ್ತಾ ವೃಷ್ಟಿಯನ್ನು ಸುರಿಸುತ್ತಿದ್ದ.
ಅಷ್ಟರಲ್ಲಿ ಪ್ರಕಾಶಮಾನವಾದ, ಸ್ವರ್ಣರೂಪದಿಂದ ಬೆಳಗುತ್ತಿದ್ದ, ತೇಜೋಮಯವಾದ ಆಕೃತಿಯೊಂದು ಯಕ್ಷರೂಪದಲ್ಲಿ ಸ್ವಲ್ಪದೂರದಲ್ಲಿ ಕಾಣಿಸಿತು. ಅಚ್ಚರಿ, ಕುತೂಹಲ, ಭಯದಿಂದ ಎಲ್ಲಾ ದೇವತೆಗಳು 'ಯಾವುದೀ ಜೀವಿ?' ಎಂದು ಪರಸ್ಪರ ಪ್ರಶ್ನೆಮಾಡಿಕೊಳ್ಳುತ್ತಿದ್ದರು. ಇದನ್ನು ವೀಕ್ಷಿಸಿದ ದೇವೇಂದ್ರ ಅಗ್ನಿಯನ್ನುದ್ದೇಶಿಸಿ, "ಆ ಯಕ್ಷನು ಯಾರೆಂದು ತಿಳಿದುಕೊಂಡು ಬಾ", ಎಂದು ಆದೇಶಿಸಿದನು. ಸರ್ವರಿಗಿಂತಲೂ ತಾನೇ ಶ್ರೇಷ್ಠನೆಂದು, ಇಂದ್ರ ತನ್ನನ್ನು ಈ ಕಾರ್ಯಕ್ಕೆ ನಿಯೋಜಿಸಿರುವನೆಂದು ತಿಳಿದು, ಹೆಮ್ಮೆಯಿಂದ ಆ ಯಕ್ಷನನ್ನು ಏನೇನು ಪ್ರಶ್ನೆಮಾಡಬೇಕೆಂದು ಮನಸ್ಸಿನಲ್ಲೇ ಯೋಚಿಸಿಕೊಂಡು ಅಗ್ನಿದೇವನು ಯಕ್ಷನಿದ್ದ ಸ್ಥಳಕ್ಕೆ ತಲುಪಿದನು. ಅಗ್ನಿ ಪ್ರಶ್ನೆಯನ್ನು ಕೇಳುವ ಮೊದಲೇ, ಯಕ್ಷನು ಅಗ್ನಿಯನ್ನು, "ಯಾರು ನೀನು?", ಎಂದು ಕೇಳಿದನು. ಅಗ್ನಿಗೆ ತಾನು ಯಾರು ಎಂದು ತಿಳಿಯದ ಜೀವಿಯೂ ಇದೆಯೇ ಎಂದು ಅವಮಾನವಾದಂತಾಗಿ, "ನಾನು ಅಗ್ನಿ. ಸರ್ವಯಜ್ಞಗಳ ಹವಿಸ್ಸನ್ನು ಮನುಷ್ಯರಿಂದ ದೇವತೆಗಳಿಗೆ ತಲುಪಿಸುವವನು ನಾನೇ. ಸರ್ವವೇದಗಳನ್ನು ತಿಳಿದ ನನ್ನನ್ನು ಜಾತವೇದನೆಂದೂ ಕರೆಯುತ್ತಾರೆ" ಎಂದನು. ಯಕ್ಷನು, "ನಿನ್ನ ಶಕ್ತಿಯಾದರೂ ಏನು?" ಎಂದು ಕೇಳಿದಾಗ ಅಗ್ನಿ ಕೋಪದಿಂದ, "ನಾನು ಜಗತ್ತಿನ ಯಾವ ವಸ್ತುವನ್ನಾದರೂ ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮಮಾಡಬಲ್ಲೆ", ಎಂದನು. ಯಕ್ಷ ಅಗ್ನಿಯ ಮುಂದೆ ಒಂದು ಸಣ್ಣ ದರ್ಬೆಯನ್ನು ಇಟ್ಟು, "ಇದನ್ನು ಭಸ್ಮಮಾಡು", ಎಂದಾಗ ಇನ್ನಷ್ಟು ಅವಮಾನವಾಯಿತು. ತನ್ನ ಒಂದು ಜ್ವಾಲೆಯನ್ನು ಕಳಿಸಿದನು. ದರ್ಬೆ ಸುಟ್ಟುಹೋಗಲಿಲ್ಲ. ಹೆಚ್ಚು ಶಕ್ತಿಯನ್ನು ಉಪಯೋಗಿಸಿದನು. ಏನೂ ಬದಲಾವಣೆ ಆಗಲಿಲ್ಲ. ತಾನೇ ಹೋಗಿ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ ಅದರ ಮೇಲೆ ಕುಳಿತರೂ ಒಂದೇ ಒಂದು ಕಿಡಿಯೂ ಅದಕ್ಕೆ ಅಂಟಲಿಲ್ಲ. ಅಗ್ನಿ ತನ್ನ ಸೋಲನ್ನು ನೆನೆದು ಪೆಚ್ಚುಮುಖದಿಂದ ದೇವತೆಗಳಿದ್ದ ಸ್ಥಳಕ್ಕೆ ಮರಳಿ, "ನನಗೆ ಆ ಯಕ್ಷ ಯಾರೆಂದು ತಿಳಿಯಲಾಗಲಿಲ್ಲ" ಎಂದು ತಿಳಿಸಿದ.
ದೇವೇಂದ್ರ ವಾಯುವನ್ನು ಉದ್ದೇಶಿಸಿ, "ಹೇ ವಾಯುದೇವ! ನೀನೇ ಹೋಗಿ ಈ ಯಕ್ಷ ಯಾರೆಂದು ತಿಳಿದುಕೊಂಡು ಬಾ" ಎಂದು ಆದೇಶಿಸಿದನು. ವಾಯುದೇವ ತನ್ನ ಪ್ರತಾಪವನ್ನು ನೆನೆದು ಯಕ್ಷನ ಬಳಿಸಾರಿದನು. ಯಕ್ಷನು ಅದೇ ರೀತಿಯಲ್ಲಿ ವಾಯುವನ್ನು, "ನೀನು ಯಾರು? ನಿನ್ನ ಸಾಮರ್ಥ್ಯವಾದರೂ ಏನು?", ಎಂದನು. ತನ್ನನ್ನು ಪರಿಚಯಮಾಡಿಕೊಳ್ಳುತ್ತಾ, "ನಾನು ಸರ್ವಗತನಾಗಿರುವ ವಾಯುದೇವ. ನಾನು ಸರ್ವಪ್ರಾಣಿಗಳು ಜೀವಿಸಲು
ಕಾರಣವಾದ್ದರಿಂದ ಮಾತರಿಶ್ವ ಎಂಬ ಬಿರುದಿದೆ. ಜಗತ್ತಿನಲ್ಲಿರುವ ಯಾವುದೇ ವಸ್ತುವನ್ನಾದರೂ ಬುಡಮೇಲು ಮಾಡುವ ಸಾಮರ್ಥ್ಯವಿದೆ" ಎಂದನು. ಯಕ್ಷ ಅಗ್ನಿಯ ಮುಂದಿಟ್ಟ ದರ್ಬೆಯನ್ನೇ ತೋರಿಸಿ, "ಆ ದರ್ಬೆಯನ್ನು ಚಲಿಸುವಂತೆ ಮಾಡು" ಎಂದು ಸವಾಲು ಮಾಡಿದ. ಸರ್ವಪ್ರಯತ್ನಗಳನ್ನು ಮಾಡಿದರೂ, ಅಗ್ನಿಗಾದ ಮುಖಭಂಗವೇ ವಾಯುವಿಗೂ ಆಗಿ ದೇವತೆಗಳೆಡೆಗೆ ನಾಚಿಕೆಯಿಂದ ನಡೆದ.
ಈ ಬಾರಿ ಇಂದ್ರ ತಾನೇ ಹೋಗಿ, 'ಆ ಯಕ್ಷನಾರು?' ಎಂದು ತಿಳಿಯುತ್ತೇನೆ ಎಂದು ನಿಶ್ಚಯಿಸಿ ಬರುವಷ್ಟರಲ್ಲಿ, ಯಕ್ಷ ಕಣ್ಮರೆಯಾದ. ಇಂದ್ರ ತನಗೆ ಆ ಅಪರೂಪವಾದ ಯಕ್ಷನನ್ನು ಮಾತನಾಡಿಸುವುದಿರಲಿ, ದರ್ಶನವೂ ಸಿಗಲಿಲ್ಲವಲ್ಲ; ಇದಕ್ಕೆ ಕಾರಣವಾದರೂ ಏನು ಎಂದು ತನ್ನ ಮನ:ಪರಿಶೋಧನೆ ಮಾಡಿ, ತನ್ನ ತಪ್ಪನ್ನು ತಿಳಿದ. ಪಶ್ಚಾತ್ತಾಪಹೊಂದಿ ಪ್ರಾರ್ಥನೆ ಮಾಡುತ್ತಾ, "ನಾನು ಈ ಯಕ್ಷನ ಸ್ವರೂಪವನ್ನು ತಿಳಿಯದೇ ಮರಳುವುದಿಲ್ಲ" ಎಂದು ತೀರ್ಮಾನಿಸಿ ಅಲ್ಲೇ ಕುಳಿತ. ಅಷ್ಟರಲ್ಲಿ ಯಕ್ಷನು ಅಂತರ್ಧಾನವಾದ ಸ್ಥಳದಿಂದ ಒಂದು ದಿವ್ಯವಾದ, ಪ್ರಕಾಶಮಯವಾದ ಸ್ತ್ರೀರೂಪವೊಂದು ಕಂಡಿತು. ಅದು ಮತ್ತಿನ್ನಾರೂ ಅಲ್ಲದೆ ಬ್ರಹ್ಮವಿದ್ಯಾರೂಪಿಣಿ ಹೈಮವತೀ ಉಮೆ. ಇಂದ್ರ ಭಗವತಿಗೆ ಪ್ರಣಾಮಮಾಡಿ, ತನ್ನ ಮನದಲ್ಲಿದ್ದ ಪ್ರಶ್ನೆಯಾದ ಯಕ್ಷನ ಸ್ವರೂಪವೇನು ಎಂದು ವಿನಯದಿಂದ ಪ್ರಶ್ನಿಸಿದ. ಉತ್ತರವಾಗಿ ಉಮಾ, "ನೀವು ಕಂಡ ಆ ಯಕ್ಷ ಪರಬ್ರಹ್ಮವೇ. ನೀವೆಲ್ಲರೂ ಅಸುರರ ವಿರುದ್ಧ ವಿಜಯಸಾಧಿಸಲು ನಿಜವಾದ ಕಾರಣ ಆ ಪರಬ್ರಹ್ಮವಸ್ತುವೇ. ಇದನ್ನರಿಯದೇ ಹೆಮ್ಮೆಯಿಂದ ಬೀಗುತ್ತಿದ್ದ ನಿಮ್ಮ ಅಹಂಕಾರವನ್ನು ನಾಶಮಾಡಲೆಂದು ಬ್ರಹ್ಮವಸ್ತುವೇ ಯಕ್ಷನ ಅವತಾರ ಪಡೆದದ್ದು" ಎಂದು ತಿಳಿಸಿ ಆತ್ಮವಿದ್ಯೆಯನ್ನು ಇಂದ್ರನಿಗೆ ಬೋಧಿಸಿದಳು. ಬ್ರಹ್ಮವಿದ್ಯೆಯನ್ನು ಮೊದಲು ತಿಳಿದ ಇಂದ್ರ, ದೇವಸಭೆಗೆ ಬಂದು ವಾಯು, ಅಗ್ನಿ ಮುಂತಾದ ದೇವತೆಗಳಿಗೆ ಅದೇ ವಿದ್ಯೆಯನ್ನು ಉಪದೇಶಿಸಿದನು.
ಈ ಕಥೆಯಿಂದ ಜೀವನಕ್ಕೆ ಕಲಿಯಬಹುದಾದ ಅಂಶಗಳು
1) ವಿಜಯಸಾಧಿಸಿದಾಗ ಗರ್ವವೆಂಬುದು ತಲೆಗೆ ಹತ್ತಬಾರದು.
2) ಯಶಸ್ಸನ್ನು ಸಾಧಿಸುವಲ್ಲಿ ಪುರುಷಪ್ರಯತ್ನದಷ್ಟೇ ಈಶ್ವರಕೃಪೆಯೂ ಮುಖ್ಯ ಎಂಬ ಅರಿವು
3) ಅಹಂ ಇದ್ದೆಡೆ ಸೋsಹಮ್ ಜ್ಞಾನವು ಅಸಾಧ್ಯ.
4) ಇಂದ್ರಾದಿ ದೇವತೆಗಳಿಗೂ ಆತ್ಮವಿದ್ಯೆಯನ್ನು ಪಡೆಯಲು ಗುರುವಿನ ಅವಶ್ಯಕತೆ ಬೇಕಾಗಿರುವಾಗ, ನಮ್ಮಂತಹ ಮಾನವರಿಗೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ.
5) ದೇವತೆಗಳಲ್ಲೂ ಗರ್ವ, ಅಹಂಕಾರ, ಅಸಡ್ಡೆ ಮುಂತಾದ ದೋಷಗಳು ಆಗಾಗ ಕಂಡುಬರುತ್ತದೆ. ಆದರೆ ಅದನ್ನು ಮೆಟ್ಟಿನಿಲ್ಲುವ ಸಾಹಸವಿರುತ್ತದೆ. ಹಾಗಿರುವಾಗ, ನಾವು ಪ್ರತಿಯೊಂದು ಕ್ಷಣದಲ್ಲೂ ಅತೀ ಜಾಗೃತಿಯಿಂದ ಆಸುರೀಗುಣಗಳನ್ನು ನಾಶಮಾಡಿ, ದೈವೀಗುಣಗಳನ್ನು ವರ್ಧಿಸಿಕೊಳ್ಳುವತ್ತ ನಮ್ಮ ಸಾಧನೆಯನ್ನು ನಡೆಸಬೇಕು.
(ಕೇನೋಪನಿಷತ್ತು)
No comments:
Post a Comment