🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 4 (Bhajagovindam - Sloka 4)

 ಆದಿ ಶಂಕರಾಚಾರ್ಯರು ಭಜಗೋವಿಂದಮ್ ಗ್ರಂಥದ ಮೊದಲ ಮೂರು ಶ್ಲೋಕಗಳಲ್ಲಿ ಕ್ರಮವಾಗಿ ಅಪರಾ ವಿದ್ಯೆ, ಧನ ಮತ್ತು ಸ್ತ್ರೀಪುರುಷ ಪರಸ್ಪರ ಕಾಮದ ಪರಿಮಿತಿಯನ್ನು ತಿಳಿಸಿ, ಅವುಗಳ ಮೇಲಿನ ಮೋಹವನ್ನು ತುಂಡರಿಸಿದ್ದಾರೆ. ಅಪರಾ ವಿದ್ಯೆಯನ್ನು ಪರಮಾತ್ಮ ವಿದ್ಯೆಗಾಗಿ ಬಳಸುವ ಮೂಲಕ, ಧನವನ್ನು ಸ್ವಯಾರ್ಜಿತವಾಗಿ ಗಳಿಸಿ ಧರ್ಮಕಾರ್ಯಕ್ಕೆ ನಿಯೋಜಿಸುವ ಮೂಲಕ, ಕಾಮವನ್ನು ವಿವೇಕ, ಪ್ರತಿಪಕ್ಷಭಾವನೆ, ನಿಯಂತ್ರಣ ಜೀವನ ಮತ್ತು ಉತ್ಕೃಷ್ಟ ಗುರಿಯ ಚಿಂತನೆಯ ಮೂಲಕ ಅಧ್ಯಾತ್ಮೀಕರಿಸಬಹುದೆಂಬುದು ಲಕ್ಷ್ಯ.

ಇಷ್ಟೆಲ್ಲಾ ವಿಚಾರವನ್ನು ಆಲಿಸಿದ ನಂತರ ಹಲವರಿಗೆ ಬರುವ ಯೋಚನೆಯೆಂದರೆ, "ನನಗೀಗ ಹಲವಾರು ಜವಾಬ್ದಾರಿಗಳಿವೆ. ಮುಂದೆ ಜೀವನದಲ್ಲಿ ಎಲ್ಲವೂ ಒಂದು ಮಟ್ಟಕ್ಕೆ ಬಂದನಂತರ ಮೋಕ್ಷದ ಬಗ್ಗೆ ಯೋಚಿಸೋಣ". ಆದರೆ ಜೀವನವಾದರೂ ಹೇಗಿದೆ ಆಲೋಚಿಸಿ.

 

ಒಮ್ಮೆ ಯುವಕರ ತಂಡವೊಂದು ಒಬ್ಬ ಯೋಗಿಯನ್ನು ಬಳಿಸಾರಿ ನಮ್ಮ ಭವಿಷ್ಯವನ್ನು ಹೇಳಬಲ್ಲಿರಾ ಎಂದು ಸವಾಲೊಡ್ಡುತ್ತಾರೆ. ಯೋಗಿಯು ಸಮ್ಮತಿಸಿ, ಎಲ್ಲರಿಗೂ ಒಟ್ಟಿಗೆ ಅವರೆಲ್ಲರ ಭವಿಷ್ಯವನ್ನು ಹೇಳುತ್ತೇನೆ ಎನ್ನುತ್ತಾರೆ. ಆಶ್ಚರ್ಯಚಕಿತರಾಗಿ ಕುಳಿತ ಯುವಕರನ್ನು ಉದ್ದೇಶಿಸಿ, ಯೋಗಿ ತಮ್ಮ ಕಣ್ಣು ಮುಚ್ಚಿ ಹೇಳಲಾರಂಭಿಸುತ್ತಾರೆ -

"ಜಗತ್ತಿನಲ್ಲಿರುವ ಎಲ್ಲರ ಜೀವನವೂ ದುಃಖದಿಂದ ತುಂಬಿದೆ. ಹುಟ್ಟಿರುವುದೆಲ್ಲವೂ ನಾಶವಾಗುತ್ತದೆ(ಜಾತಸ್ಯ ಹಿ ಧ್ರುವೋ ಮೃತ್ಯು: - ಭಗವದ್ಗೀತೆ). ಜೀವನವೆಂಬುದು ಅನಿಶ್ಚಿತ. ಯಾರು ಪೂರ್ವಸಿದ್ಧತೆ ಮಾಡಿಕೊಳ್ಳುತ್ತಾರೋ ಅವರು ಮಾತ್ರ ಜೀವನದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಸಾಧ್ಯತೆಯಿದೆ.(ಅನನ್ಯಚೇತಾ: ಸತತಮ್ ಯೋ ಮಾಂ ಸ್ಮರತಿ ನಿತ್ಯಶ: ತಸ್ಯಾಹಮ್ ಸುಲಭಂ ಪಾರ್ಥ ನಿತ್ಯಯುಕ್ತಸ್ಯ ಯೋಗಿನ: - ಭಗವದ್ಗೀತೆ)" ಇದನ್ನು ಆಲಿಸಿದ ಯುವಕರು ಎಲ್ಲವೂ ಸತ್ಯವಾಗಿದೆ, ಎಲ್ಲರಿಗೂ ಸತ್ಯವಾಗಿದೆ, ಎಲ್ಲಾ ಸಮಯದಲ್ಲೂ ಪ್ರಸ್ತುತವಾಗಿದೆ ಎಂದು ತಿಳಿದು ಮೂಕವಿಸ್ಮಿತರಾಗಿ ಯೋಗಿಗಳಿಗೆ ನಮಸ್ಕರಿಸಿ ತೆರಳುತ್ತಾರೆ. ವಿಚಾರವನ್ನೇ ಆಚಾರ್ಯ ಶಂಕರರು ಮುಂದಿನ ಶ್ಲೋಕದಲ್ಲಿ

 ನಲಿನೀದಲ-ಗತಜಲಮತಿತರಲಂ

ತದ್ವಜ್ಜೀವಿತಮತಿಶಯ-ಚಪಲಮ್

ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ

ಲೋಕಂ ಶೋಕಹತಂ ಸಮಸ್ತಮ್ ॥ 4 ||

 

ನಳಿನೀದಲಗತಜಲವತ್ - ಪದ್ಮಪತ್ರದ ಮೇಲಿರುವ ನೀರಿನ ಹನಿಯಂತೆ. ಕಮಲಕ್ಕೆ ಸನಾತನಧರ್ಮದಲ್ಲಿ ಉನ್ನತ ಸ್ಥಾನವಿದೆ. ಅದಕ್ಕೆ ಕಾರಣಗಳು - ಕೊಳಚೆನೀರಿನಲ್ಲಿದ್ದರೂ ಅರಳುವುದು, ಕೊಳಚೆಯ ಸಂಗದಲ್ಲಿದ್ದರೂ ನಿರ್ಲೇಪವಾಗಿರುವುದು. ಹೀಗೇ ನಮ್ಮ ಜೀವನದಲ್ಲಿ ಹೊರಗಿನ ಪರಿಸ್ಥಿತಿ ಏನೇ ಇದ್ದರೂ ಮನಸ್ಥಿತಿ ಕೆಡಿಸಿಕೊಳ್ಳದೇ ಅರಳುವುದು ಮತ್ತು ಎಂಥವರೊಂದಿಗಿದ್ದರೂ ನಮ್ಮ ಮನಸ್ಸು ಅದರಿಂದ ಮಲಿನಗೊಳ್ಳದಂತೆ ಅಸಂಗನಾಗಿರುವುದು ಮುಖ್ಯ. ಜಗತ್ತಿನಲ್ಲಿರುವ ಅನಂತ ವಸ್ತುಗಳಲ್ಲಿ ಜೀವನಕ್ಕೆ ಪದ್ಮಪತ್ರದ ಮೇಲಿರುವ ಹನಿಯ ಉಪಮೆ ಉಪಯೋಗಿಸಿರುವುದು ಜೀವನದ ಅನಿಶ್ಚಿತತೆ, ಸಮಂಜಸತೆಯ ಜೊತೆಗೆ ಆಚಾರ್ಯರ ಸೂಕ್ಷ್ಮದರ್ಶಿತ್ವವನ್ನು ತೋರಿಸುತ್ತದೆ

 

ತದ್ವತ್ ಜೀವಿತಮತಿಶಯ ಚಪಲಮ್ - ಯಾವುದೋ ತಿಳಿಯದ ಕಾರಣದಿಂದ ಕೆರೆಯ ಒಂದು ಹನಿ ಪದ್ಮಪತ್ರದ ಮೇಲೆ ಬರುತ್ತದೆ, ಗಾಳಿಯ ಹೊಡೆತಕ್ಕೆ ಸಿಕ್ಕಿ ಕುಣಿದಾಡುತ್ತದೆ ಮತ್ತು ಆಕಸ್ಮಿಕವಾಗಿ ಕೆರೆಗೆ ಲೀನವಾಗುತ್ತದೆ. ಹೀಗೇ ಅಲ್ಲವೇ ನಮ್ಮ ಜೀವನ - ಎಲ್ಲೋ ಜನನವಾಗಿ, ಕರ್ಮದ ಹೊಡೆತಕ್ಕೆ ಸಿಕ್ಕಿ ನೋವು-ನಲಿವು ಅನುಭವಿಸಿ, ಅಚಾನಕ್ಕಾಗಿ ಒಂದು ದಿನ ಕಣ್ಮರೆಯಾಗುತ್ತೇವೆ. ಕಣ್ಣಮುಂದೆಯೇ ಹಿಂದಿನ ದಿನ ಖುಷಿಯಾಗಿ ಮಾತಾಡಿದ ವ್ಯಕ್ತಿ ಮರುದಿನ ಮರಣವನ್ನಪ್ಪಿದಾಗ ಜೀವನದ ಅನಿತ್ಯತೆ, ಚಂಚಲತೆ, ಅಸ್ಥಿರತೆಯನ್ನು ಗುರುತುಸುವುದು ಕಷ್ಟವೇನಲ್ಲ. ನೀರಿನ ಹನಿ ಕಮಲದ ಎಲೆಯ ಮೇಲಿದ್ದಾಗ ನೋಡಲು ಸುಂದರವಿದ್ದರೂ, ಅದರ ಮೇಲಿರುವ ಸಮಯ ಎಷ್ಟು ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಹಾಗೇ ಎಷ್ಟೇ ಸುಗಮವೆನಿಸಿದರೂ ಜೀವನ ಎಷ್ಟು ವರ್ಷ ಎಂಬುದು ಖಚಿತವಿಲ್ಲ. ಮನೆಯಲ್ಲಿ ಬೀಳುವುದೋ, ಸಣ್ಣ ಅಪಘಾತವೋ, ಮಲಗಿದ್ದವರು ಚಿರನಿದ್ರೆಗೆ ಜಾರುವುದೋ ಹೀಗೆ ನಮ್ಮ ಜೀವನ warranty card ಜೊತೆಗೆ ಬಂದಿಲ್ಲವೆಂಬುದು ಸತ್ಯ

 ಅಪಘಾತಗಳು, ಅನಾಹುತಗಳ ಮೂಲಕ ಜೀವನ ಕೊನೆಯಾಗುವುದು ಅಪರೂಪವಷ್ಟೇ. ನನ್ನ ಜೀವನ ಹಾಗಲ್ಲವೆಂದರೆ

ವಿದ್ಧಿ ವ್ಯಾಧಿ ಅಭಿಮಾನ ಗ್ರಸ್ತಮ್ - ಜೀವನ ದೈಹಿಕ ಮತ್ತು ಮಾನಸಿಕ ರೋಗದಿಂದ ನರಳುತ್ತಿದೆ ಎಂಬುದನ್ನು ತಿಳಿ. ಹಲವರಿಗೆ ಸಾವು ಹೇಳಿ - ಕೇಳಿ ಬರವುದಿಲ್ಲ. ಆದರೆ ಹೆಚ್ಚಿನವರಿಗೆ ಹಲವಾರು ಖಾಯಿಲೆಗಳ, ವೃದ್ಧಾಪ್ಯದ notice letter ನೊಂದಿಗೆ ಮೃತ್ಯು ಸಮೀಪಿಸುವುದು. ಪ್ರತೀ ದಿನವೂ ನಾವು ಮೃತ್ಯುವಿಗೆ ಸಮೀಪಿಸುತ್ತಿದ್ದೇವೆ ಎಂಬುದು ಸರ್ವವಿದಿತವಾದರೂ ಒಪ್ಪಿಕೊಳ್ಳಲು ಕಷ್ಟಸಾಧ್ಯವಾದ ಸತ್ಯ. ಒಂದು ಕಾಲದಲ್ಲಿ ಸಲೀಸಾಗಿ ಓಡಾಡುತ್ತಿದ್ದವರಿಗೆ ಮೈಕೈ ನೋವು, ಕೂದಲು ಬೆಳ್ಳಗಾಗುವುದು, ಹಲ್ಲುಗಳು ಉದುರುವುದು, ಮುಖ ಸುಕ್ಕುಗಟ್ಟುವುದು, ಹಲವಾರು ರೋಗಗಳಿಗೆ ತುತ್ತಾಗುವುದೇ ಯಮ ನಮಗೆ ಕಳಿಸುತ್ತಿರುವ notice. ಇನ್ನು ಮನೋವ್ಯಾಧಿಗಳ ಬಗ್ಗೆ ಹೇಳುವಷ್ಟೇ ಇಲ್ಲ. ಜೀವನವಿಡೀ ಒಬ್ಬರು ಮಾತನಾಡಿಸಲಿಲ್ಲವೆಂದು ದುಃಖ, ಮತ್ತೊಬ್ಬರು ಸರಿಯಾಗಿ ಮಾತನಾಡಲಿಲ್ಲವೆಂದು, ಮಗದೊಬ್ಬರು ಹೆಚ್ಚು ಮಾತಾಡಿ ಸಮಯ ಹಾಳುಮಾಡಿದರೆಂದು ದುಃಖ. ಒಬ್ಬರು ನೋಡಿಯೂ ನಗಲಿಲ್ಲವೆಂದು ದುಃಖವಾದರೆ, ಮತ್ತೊಬ್ಬರು ನಮ್ಮನ್ನು ನೋಡಿ ನಕ್ಕರೆಂದು ದುಃಖ. ಕೆಲವರು ಸಹಾಯಕ್ಕೆ ಬರಲಿಲ್ಲವೆಂದು ಮತ್ತು ಕೆಲವರು ತೊಂದರೆ ಕೊಡುತ್ತಿದ್ದಾರೆಂದು ಹೀಗೆ ದುಃಖಕ್ಕೆ ಸಾವಿರ ಕಾರಣಗಳು. ಆದ್ದರಿಂದಲೇ ಅಭಿಮಾನ ಹೆಚ್ಚಿರುವ ಗರ್ವಿಯನ್ನು ಮೈಯೆಲ್ಲ ಹುಣ್ಣಾಗಿರುವ ವ್ಯಕ್ತಿಗೆ ಹೋಲಿಸುವುದು. ಎಲ್ಲಿ ಮುಟ್ಟಿದರೂ ನೋವೇ. ಹಾಗಾಗಿ ನಮ್ಮ ಜೀವನವೆಲ್ಲ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗಿರುತ್ತೇವೆ ಎನ್ನುತ್ತಾರೆ ಆಚಾರ್ಯರು

  ತೊಂದರೆಗಳೆಲ್ಲ ಇರುವುದು ಮನುಷ್ಯಲೋಕದಲ್ಲಿ. ನಾನಿಲ್ಲಿರುವುದಿಲ್ಲ. ಸ್ವರ್ಗಕ್ಕೋ ಅಥವಾ ವೈಕುಂಟಕ್ಕೋ ಹೋಗಬಯಸುತ್ತೇನೆಂದರೆ

ಲೋಕಮ್ ಶೋಕಹತಮ್ ಸಮಸ್ತಮ್ - ಎಲ್ಲ ಲೋಕಗಳೂ ಶೋಕದ ಹೊಡೆತಕ್ಕೆ ಸಿಲುಕಿದವುಗಳೇ. ಆಶ್ಚರ್ಯವೇ! ನಂಬಲಾಗುತ್ತಿಲ್ಲವೇ! ಇಂದ್ರಾದಿ ದೇವತೆಗಳಿಗೆ ದೈಹಿಕ ದುಃಖವಿರದಿದ್ದರೂ ಅಭಿಮಾನ, ಗರ್ವ, ಕಾಮ, ಕ್ರೋಧ ಮುಂತಾದ ಮಾನಸಿಕ ಅಭದ್ರತೆಯನ್ನು ತೋರಿಸುವ ಪೌರಾಣಿಕ ಕಥೆಗಳು ಹಲವಾರು. ಇನ್ನು ವೈಕುಂಟದಲ್ಲಿದ್ದ ಜಯ-ವಿಜಯರೂ ಆಂತರಿಕ ವೈರಿಗಳಿಗೆ ಸೋತು ರಾಕ್ಷಸರಾಗಿ ಜನಿಸಿದ ಕಥೆ ಜನಜನಿತವಾಗಿದೆ. ಆದ್ದರಿಂದ ಇಹಲೋಕ-ಪರಲೋಕಗಳಲ್ಲಿ ಎಲ್ಲೂ ಶೋಕವಿಲ್ಲದ, ಅತ್ಯಂತಿಕ ಸುಖವಿರುವ ಸ್ಥಾನವಿಲ್ಲ.

 

ಸಾರಾಂಶ: ಯಾವುದೇ ತೊಂದರೆಗಳನ್ನೇ ಅನುಭವಿಸದ ಸಿದ್ಧಾರ್ಥ ಗೌತಮ ಒಮ್ಮೆ ವಿಹಾರಕ್ಕೆಂದು ತೆರಳಿದಾಗ ಕಂಡ ವೃದ್ಧಾಪ್ಯ, ವ್ಯಾಧಿ ಮತ್ತು ಮರಣದ ದೃಶ್ಯಗಳು  ಜೀವನದ ಅನಿತ್ಯತೆ, ಅನಿಶ್ಚಿತತೆಯನ್ನು ತೋರಿಸಿ ದುಃಖಂ ದುಃಖಂ ಸರ್ವಂ ದುಃಖಂ ಎಂದು ಮನಗಂಡು ಪರಿಪೂರ್ಣತೆಯನ್ನು ಪಡೆಯುವ ಹಾದಿಯಲ್ಲಿ ತೆರಳಿ ಬುದ್ಧನಾದ ಉದಾಹರಣೆ ಪ್ರೇರಣೆಯಾಗಬೇಕು (ಜನ್ಮಮೃತ್ಯುಜರಾವ್ಯಾಧಿ ದುಃಖದೋಷಾನು ದರ್ಶನಂ - ಭಗವದ್ಗೀತೆ). ಜೀವನದ ಬಗ್ಗೆಯಿರುವ ಮೋಹ ನಾಶವಾಗಿ ಶೀಘ್ರವಾಗಿ ಮೋಕ್ಷದೆಡೆಗೆ ನಡೆಯಲು ಸರ್ವಪ್ರಯತ್ನವನ್ನು ಮಾಡಿ ಭಗವಂತನ ಕೃಪೆಗಾಗಿ ಪ್ರಾರ್ಥನೆ ಮಾಡೋಣ - ಭಜಗೋವಿಂದಮ್.





No comments:

Post a Comment