ಒಂದಾನೊಂದು ಕಾಲದಲ್ಲಿ ಕುರುಸಂಸ್ಥಾನದಲ್ಲಿ ಉಶಸ್ತಿ ಚಾಕ್ರಾಯಣನೆಂಬ ವೈದಿಕ ಬ್ರಾಹ್ಮಣ ಗೃಹಸ್ಥಾಶ್ರಮವನ್ನು ಪ್ರವೇಶಿಸಿ, ವರ್ಣಾಶ್ರಮಧರ್ಮಾನುಸಾರ ಜೀವನ ನಡೆಸುತ್ತಿದ್ದ. ಯಜ್ಞ-ಯಾಗಾದಿಗಳ ಪೌರೋಹಿತ್ಯ, ಪೂಜೆ ಮುಂತಾದ ಕರ್ಮಗಳಿಂದ ದೊರೆತ ದಕ್ಷಿಣೆ ಮತ್ತು ದಾನದ ಮೂಲಕ ತನ್ನ ಕುಟುಂಬವನ್ನು ನಿರ್ವಹಿಸುತ್ತಿದ್ದ. ಬಡತನವೇ ಅವನಿಗೆ ಅಭರಣದಂತಿದ್ದು, ಸರಳ ಜೀವನ ಮತ್ತು ಉತ್ಕೃಷ್ಟ ಚಿಂತನೆಗೆ ತನ್ನನ್ನು ತಾನು ತೊಡಗಿಸಿಕೊಂಡು ಅನಂದದಿಂದಿದ್ದ.
ಹೀಗಿದ್ದಾಗ, ಒಮ್ಮೆ ಮಹಾಸಿಡಿಲು, ಮಳೆಯಿಂದ ಅತೀವೃಷ್ಟಿಯಾಗಿ, ಪ್ರದೇಶವೇ ಪ್ರಾಕೃತಿಕ ವಿಕೋಪಕ್ಕೊಳಗಾಗಿ, ಎಲ್ಲರೂ ಕಷ್ಟಕ್ಕೆ ಸಿಲುಕುವಂತಾಯಿತು. ಇದರ ಪರಿಣಾಮ, ಆಕಳಿಗೆ ಮೇವಿಲ್ಲ, ಮಕ್ಕಳಿಗೆ ಹಾಲಿಲ್ಲ, ಜನರಿಗೆ ಆಹಾರವಿಲ್ಲದಂತಾಯಿತು. ರಾಜರ ದಕ್ಷತೆ, ಜಮೀನ್ದಾರರ ಔದಾರ್ಯ ಮತ್ತು ಜನಸಾಮಾನ್ಯರ ಸೇವಾಮನೋಭಾವದಿಂದ ಆಹಾರವಿತರಣೆಗಳು ನಡೆಯುತ್ತಿದ್ದವು. ಹೊಟ್ಟೆಗೆ ಹಿಟ್ಟೆ ಇಲ್ಲದಿದ್ದಾಗ ಪೂಜೆ, ಹೋಮ-ಹವನ ಮಾಡಿಸುವವರಾದರೂ ಯಾರು? ಹೀಗಾಗಿ ಉಶಸ್ತಿ ಚಾಕ್ರಾಯಣನ ಕುಟುಂಬ ಅತೀ ಸಂಕಷ್ಟಕ್ಕೆ ಸಿಲುಕಿ ನರಳುವಂತಾಯ್ತು.
ಉಶಸ್ತಿ ಆಹಾರದ ಹುಡುಕಾಟದಲ್ಲಿದ್ದಾಗ, ರಸ್ತೆಯಲ್ಲಿ ಶ್ರೀಮಂತನೋರ್ವನಿಂದ ಬೇಳೆ-ಕಾಳುಗಳನ್ನು ದಾನ ಸ್ವೀಕರಿಸಿ, ಸಂತಸದಿಂದ ಬರುತ್ತಿದ್ದ ಜನರನ್ನು ನೋಡಿದ. ತಾನೂ ದಾನ ಪಡೆಯಲು ಯೋಗ್ಯನಾಗಿರುವುದರಿಂದ, ತನ್ನ ಕುಟುಂಬದ ಹಸಿವು ನಿಗಬಹುದೇನೋ ಎಂಬ ಆಶಾಭಾವನೆಯನ್ನು ಹೊತ್ತು ಆಹಾರ ವಿತರಿಸುತ್ತಿದ್ದ ಸ್ಥಳಕ್ಕೆ ತಲುಪಿದ. ವಿಧಿಯೋ, ಅವನ ದೌರ್ಭಾಗ್ಯವೋ, ಉಶಸ್ತಿ ತಲುಪುವ ವೇಳೆಗೆ
ಆಹಾರಧಾನ್ಯಗಳೆಲ್ಲಾ ಮುಗಿದು ಎಲ್ಲರೂ ಹೊರಡುವ ನಿಟ್ಟಿನಲ್ಲಿದ್ದರು. ಉಶಸ್ತಿಯ ಪರಿಸ್ಥಿತಿಯನ್ನು ತಿಳಿದ ಶ್ರೀಮಂತನ ಮನಸ್ಸು ಹಿಂಡಿದಂತಾದರೂ, ಅಸಹಾಯಕನಾಗಿ ಕೈಯಲ್ಲಿರುವ ಕಾಳುಗಳನ್ನು ಹೊರತುಪಡಿಸಿ ಇನ್ನೇನು ಅವನ ಬಳಿ ಇಲ್ಲವೆಂದು ತಿಳಿಸಿದನು. ಕೈಲಿರುವ ಕಾಳನ್ನೇ ನೀಡು ಎಂದು ಬೇಡಿದರೂ, ಅದು ಉಚ್ಚಿಷ್ಟವಾದ್ದರಿಂದ ದಾನಕ್ಕೆ ಯೋಗ್ಯವಲ್ಲವೆಂದು ತಿಳಿಸಿದನು. ಆಗ ಶಾಸ್ತ್ರಾನುಸಾರವಾಗಿ ಆಪದ್ಧರ್ಮದ ಪ್ರಸಂಗವಾದ್ದರಿಂದ ಅದನ್ನು ಸ್ವೀಕರಿಸಬಹುದೆಂದು ತಿಳಿಸಿ, ಅದನ್ನೇ ದಾನವಾಗಿ ಪರಿಗ್ರಹಿಸಿ, ಅದರ ಒಂದು ಭಾಗವನ್ನು ಉಶಸ್ತಿ ಅಲ್ಲೇ ತಿನ್ನಲು ಆರಂಭಿಸಿದನು. ಆಹಾರ ನೆತ್ತಿಗೆ ಹತ್ತಿದ ಕಾರಣ, ಕೆಮ್ಮು ಬಂತು ಹಾಗೂ ಶ್ರೀಮಂತನು ತನ್ನ ಬಳಿಯಲ್ಲಿದ್ದ ನೀರನ್ನು ನೀಡಿದನು. ನೀರಿಗೆ ಯಾವುದೇ ಬರವಿಲ್ಲದ್ದರಿಂದ ಮತ್ತು ಉಚ್ಚಿಷ್ಟವಾಗಿರುವುರಿಂದ ಇದನ್ನು ತಾನು ಸ್ವೀಕರಿಸಲಾರೆನು ಎಂದು ಉಶಸ್ತಿ ಗೌರವದಿಂದ ನಿರಾಕರಿಸಿದನು. ಅವನ ಧರ್ಮಶ್ರದ್ಧೆಯನ್ನು ಕಂಡು ಶ್ರೀಮಂತನು ಆಶ್ಚರ್ಯದಿಂದ ವಂದಿಸಿದನು. ಉಳಿದ ಕಾಳುಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಮನೆಗೆ ಬರುವಷ್ಟರಲ್ಲಿ, ಮಡದಿ ಮತ್ತು ಮಗು ಹೇಗೋ ಆಹಾರ ಸೇವಿಸಿ ಮಲಗಿದ್ದರು. ಮಡದಿಯನ್ನು ನಿದ್ದೆಯಿಂದ ಎಚ್ಚರಿಸಿ, ಮರುದಿನ ಹತ್ತಿರದ ಊರಿನಲ್ಲಿ ಯಜ್ಞವೊಂದು ನಡೆಯುವುದೆಂದು ತಿಳಿದು, ಅಲ್ಲಿಗೆ ದಕ್ಷಿಣಾರ್ಥವಾಗಿ ತೆರಳುವೆನೆಂದು ತಿಳಿಸಿದನು.
ಮರುದಿನವೇ ಲೋಕಕಲ್ಯಾಣಾರ್ಥವಾಗಿ ಆಯೋಜಿಸಿದ್ದ ಯಜ್ಞಶಾಲೆಗೆ ನೇರವಾಗಿ ತಲುಪಿದನು. ಆ ವೇಳೆಗಾಗಲೇ ರಾಜನು ದೀಕ್ಷಾವಿಧಿಯನ್ನು ಮುಗಿಸಿ, ಮೂರು ಜನ ಋತ್ವಿಜರು ಮಂತ್ರೋಚ್ಚಾರಣೆ ಮಾಡುತ್ತಿದ್ದರು. ಇಲ್ಲಿಯೂ ತನಗೆ ಯಾವುದೇ ದಕ್ಷಿಣೆ ಸಿಗದಿರಬಹುದೆಂದು ತಿಳಿದು, ಋತ್ವಿಜರ ಸಮೀಪದಲ್ಲೇ ಯಜ್ಞಕಾರ್ಯವನ್ನು ಗಮನಿಸುತ್ತಾ ಕುಳಿತನು. ಅದ್ಭುತವಾದ ಮಂತ್ರೋಚ್ಚಾರಣೆ ಆಲಿಸಿದ ಉಶಸ್ತಿ, "ಹೇ ಋತ್ವಿಜರೇ, ನೀವು ಉಚ್ಚರಿಸುತ್ತಿರುವ ಮಂತ್ರಗಳ ಅರ್ಥ, ಮಂತ್ರದ ಅಧಿದೇವತೆ ಮತ್ತು ಫಲವನ್ನು ತಿಳಿಯದೇ ಕರ್ಮವನ್ನು ಮಾಡಿದರೆ, ಯಜಮಾನನಿಗೂ ಶ್ರೇಯಸ್ಸಲ್ಲ ಮತ್ತು ನಿಮಗೂ ಪುಣ್ಯಪ್ರದವಲ್ಲ. ಇವೆಲ್ಲದರ ಅರ್ಥ ತಿಳಿದು ಮಾಡುತ್ತಿರುವಿರಲ್ಲವೇ?", ಎಂದಾಗ ಋತ್ವಿಜರ ಮುಖ ಸಪ್ಪೆಯಾಯಿತು ಹಾಗೂ ರಾಜನಿಗೆ ಆಕಾಶವೇ ಕಳಚಿಬಿದ್ದಂತಾಯಿತು. ರಾಜನಿಗೆ ಈ ವ್ಯಕ್ತಿ ತಾನು ಯಜ್ಞಕಾರ್ಯಕ್ಕಾಗಿ ಹುಡುಕುತ್ತಿದ್ದ ಉಶಸ್ತಿ ಚಾಕ್ರಾಯಣ ಎಂದು ತಿಳಿದು, ಬಹುವಿನಮ್ರದಿಂದ ಉಶಸ್ತಿಯ ಬಳಿಸಾರಿ, "ನೀವೇ ಈ ಯಜ್ಞವನ್ನು ನಡೆಸಿಕೊಟ್ಟು ನಮ್ಮನ್ನು ಧನ್ಯರಾಗಿಸಬೇಕು" ಎಂದು ಬೇಡಿಕೊಂಡನು. "ನನಗೆ ಒಪ್ಪಿಗೆಯಿದೆ; ಆದರೆ ಷರತ್ತುಗಳು ಅನ್ವಯಿಸುತ್ತವೆ" ಎಂದು ತಿಳಿಸಿ ತನ್ನ ಷರತ್ತುಗಳನ್ನು ಹೀಗೆ ತಿಳಿಸಿದನು - "ಯಜ್ಞದೀಕ್ಷೆ ಈಗಿರುವ ಋತ್ವಿಜರಿಂದ ಆಗಿರುವುದರಿಂದ ಅವರೇ ಈ ಕರ್ಮವನ್ನು ಮುನ್ನಡೆಸಲಿ. ಅವರಿಗೂ ಕೂಡ ನನ್ನಂತೆಯೇ ದಕ್ಷಿಣೆಯ ಅವಶ್ಯಕತೆ ಇರಬಹುದು ಹಾಗೂ ಅವರ ಕುಟುಂಬವೂ ಅದನ್ನೇ ನೆಚ್ಚಿರಬಹುದು. ನಾನು ಅವರಿಗೆ ಮಂತ್ರಾರ್ಥವನ್ನು ಮತ್ತು ಕರ್ಮದ ಎಲ್ಲ ಅಂಗಗಳನ್ನು ಅರ್ಥಸಹಿತವಾಗಿ ತಿಳಿಸಿ ಉಪದೇಶಿಸುತ್ತೇನೆ. ತನ್ಮೂಲಕ ಉಪದಿಷ್ಟರಾದ ಋತ್ವಿಜರು ಯಜ್ಞಮಾಡಲು ಅರ್ಹರಾಗುತ್ತಾರೆ." ರಾಜನಿಗೆ ಸಂತೋಷವಾಗಿ, 'ಅಸ್ತು' ಎನ್ನಲು ಕರ್ಮವು ಸಾಂಗೋಪಾಂಗವಾಗಿ ಸಾರ್ಥಕವಾಗಿ ನಡೆಯಿತು ಹಾಗೂ ಅದರ ದೃಷ್ಟಫಲವೂ ಕಾಣತೊಡಗುತ್ತದೆ. ಇದಕ್ಕೆ ಸಾಕ್ಷಿಯಾದ ರಾಜ ಉಶಸ್ತಿಗೆ ಬೃಹತ್ ದಕ್ಷಿಣೆಯನ್ನು ನೀಡಲು ಮುಂದಾದಾಗ, "ಎಲ್ಲ ಋತ್ವಿಜರಿಗೆ ನೀಡಿದ ದಕ್ಷಿಣೆಯಷ್ಟನ್ನೇ ಸ್ವೀಕರಿಸುತ್ತೇನೆ" ಎಂದು ದಕ್ಷಿಣೆ ಪಡೆದು ಮನೆಗೆ ತೆರಳಿದನು.
(ಛಾOದೋಗ್ಯ ಉಪನಿಷತ್ತು)
ಈ ಕಥೆಯಿಂದ ನಮ್ಮ ಜೀವನಕ್ಕೆ ಕಲಿಯಬಹುದಾದ ಕೆಲವು ಅಂಶಗಳು -
1) ವರ್ಣಾಶ್ರಮಧರ್ಮವನ್ನು ಆಧರಿಸಿ ನಮ್ಮ ಜೀವನ ಸಾಗಿಸುವುದು
2) ಯಾವುದೇ ಆದರ್ಶ/ನಿಯಮಗಳನ್ನು ಆಪತ್ಕಾಲದಲ್ಲಿ ಹೊರತು ಪಡಿಸಿ, ಬೇರೆಂದೂ ಯಾವುದೇ ಕಾರಣಕ್ಕೂ ಮೀರದಿರುವುದು
3) ಪ್ರತಿಯೊಂದು ಕರ್ಮಗಳ ಅರ್ಥತಿಳಿದು ಅದನ್ನು ಆಚರಣೆಗೆ ತರುವುದು ಹೆಚ್ಚು ಶ್ರೇಯಸ್ಕರ
4) ಉಶಸ್ತಿಯಲ್ಲಿ ಇನ್ನುಳಿದ ಋತ್ವಿಜರ ಮೇಲಿದ್ದಂತಹ ಸಹಾನುಭೂತಿ ಅನುಕರಣೀಯ
5) ಸರಳ ಜೀವನ - ಉದಾತ್ತ ಚಿಂತನ (Simple Living - High Thinking) ಅಧ್ಯಾತ್ಮ ಸಾಧನೆಗೆ ಸಹಾಯಕವಾದ ಜೀವನ ಪದ್ಧತಿ
6) ಶಾಸ್ತ್ರಶ್ರದ್ಧೆ, ಧರ್ಮಾಚರಣೆ, ವೇದೋಕ್ತಜೀವನ ಪಥ ಇವೆಲ್ಲವೂ ನಮ್ಮಲ್ಲಿ ಸಾಧನ ಚತುಷ್ಟಯ ಸಂಪತ್ತನ್ನು ಮೂಡಿಸುವ ಮೂಲಕ ಆತ್ಮಜ್ಞಾನಕ್ಕೆ ಯೋಗ್ಯರನ್ನಾಗಿ ಮಾಡುತ್ತದೆ
No comments:
Post a Comment