ಹಳ್ಳಿಯೊಂದರಲ್ಲಿ ಮಕ್ಕಳೆಲ್ಲಾ ಆಡುತ್ತಿದ್ದಾರೆ. ಅದರೊಲ್ಲೊಬ್ಬ ಸ್ನೇಹಿತರೊಡನೆ ಸ್ನೇಹದಲ್ಲಿ ಆಟವಾಡುತ್ತಿದ್ದರೂ ಅವನ ಕಣ್ಣುಗಳು ಅವನ ಅಂತರ್ಮುಖತ್ವವನ್ನು ಸೂಚಿಸುತ್ತಿವೆ. ಒಬ್ಬನೇ ಕುಳಿತು ಹಲವಾರು ಮೂಲಭೂತ ಪ್ರಶ್ನೆಗಳ ಬಗ್ಗೆ ಯೋಚಿಸುವುದು, ಅವಕಾಶ ಒದಗಿದಾಗ ಇತರರಲ್ಲಿ ಸಮಾಲೋಚಿಸುತ್ತಿದ್ದಾನೆ. ಇವನ ಪ್ರಶ್ನೆಗಳಿಗೆ ಉತ್ತರ ನೀಡಲಾಗದವರು, "ತಲೆ ಹರಟೆ ಮಾಡಬೇಡ. ಇವೆಲ್ಲಾ ಪ್ರಶ್ನೆಗಳೇ ಅಲ್ಲ" ಎಂದು ಜಾರಿಕೊಳ್ಳುತ್ತಿರುತ್ತಿದ್ದಾರೆ. ತನ್ನೆಲ್ಲಾ ಸ್ನೇಹಿತರು ಉಪನೀತರಾಗಿ, ಅಧ್ಯಯನಕ್ಕೆಂದು ಗುರುಕುಲಕ್ಕೆ ತೆರಳುತ್ತಿರುವುದನ್ನು ಕಂಡು, ತಾಯಿಯ ಬಳಿ ತೆರಳಿ, "ನನ್ನನ್ನೂ ಗುರುಕುಲಕ್ಕೆ ಕಳಿಸು. ನಾನೂ ಕಲಿಯಬೇಕಿದೆ. ಯಾವ ಅಚಾರ್ಯರನ್ನೇ ಕೇಳಿದರೂ, ನಾನೊಬ್ಬ ದಾಸೀಪುತ್ರನೆಂದು, ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ನಾನೇಕೆ ದಾಸೀಪುತ್ರನಾದೆ?", ಎಂದು ಹೃದಯಾಂತರಾಳದಿಂದ ಅಳುತ್ತಾ ಪ್ರಶ್ನಿಸುತ್ತಿದ್ದನು. ತಾಯಿ ಹೇಗೋ ಸಮಾಧಾನ ಮಾಡುತ್ತಿದ್ದಳು.
ಒಮ್ಮೆ ಹಳ್ಳಿಗೆ ಶ್ರೋತ್ರಿಯ, ಬ್ರಹ್ಮನಿಷ್ಠರಾದ ಆಚಾರ್ಯ ಗೌತಮರು ಅಗಮಿಸಿದ್ದನ್ನು ತಿಳಿದು, ಅವರ ಅನುಷ್ಠಾನದ ವೇಳೆ ಬಳಿಸಾರಿ, ಕಲಿಕೆಯ ಹಂಬಲವನ್ನು ಅವರ ಮುಂದಿಡುತ್ತಾನೆ. ಅವನ ಆಸಕ್ತಿ, ವಿಧೇಯತೆ, ಚುರುಕುತನವನ್ನು ಕಂಡು ಸಂತೋಷರಾದ ಆಚಾರ್ಯರು, "ನಿನ್ನನ್ನು ಶಿಷ್ಯನಾಗಿ ಸ್ವೀಕರಿಸುವೆ. ನಿನ್ನ ತಂದೆ, ಕುಲ, ಗೋತ್ರ ಇನ್ನಿತರೆ ವಿಷಯಗಳನ್ನು ತಿಳಿದುಕೊಂಡು ಬಾ", ಎನ್ನುತ್ತಾರೆ. ಅತ್ಯಾನಂದದಿಂದ ಮನೆಗೆ ಓಡಿ ಹೋದ ಬಾಲಕ, ತಾಯಿಯನ್ನು ತನ್ನ ಹುಟ್ಟು, ಕುಲದ ವೃತ್ತಾಂತದ ವಿವರಗಳನ್ನು ಕೇಳುತ್ತಾನೆ. ಅದಕ್ಕೆ ಆ ತಾಯಿ ಹೀಗೆ ಉತ್ತರಿಸುತ್ತಾಳೆ, "ನಾನೊಬ್ಬ ದಾಸಿ. ಹಲವರಿಗೆ ಸೇವೆ ಮಾಡುತ್ತಿದ್ದ ನನಗೆ ಚಿಕ್ಕವಯಸ್ಸಿನವಳಾಗಿದ್ದಾಗ ನೀನು ಹುಟ್ಟಿದೆ. ನಿನ್ನ ತಂದೆ ಯಾರೆಂದು ತಿಳಿದಿಲ್ಲ. ಗುರುವಿನ ಬಳಿ ಹೋಗಿ ಹೇಳು, 'ನಾನು ಜಬಾಲಳ ಪುತ್ರ ಸತ್ಯಕಾಮ ಜಾಬಾಲ', ಎಂದು". ಬಾಲಕ ಗುರುಗಳೆಡೆಗೆ ಹೋಗಿ ತಾಯಿ ಹೇಳಿದ್ದೆಲ್ಲವನ್ನೂ ಚಾಚೂ ತಪ್ಪದೆ ಧೈರ್ಯವಾಗಿ ನುಡಿದ. ಸುತ್ತಮುತ್ತಲ ಜನರೆಲ್ಲ ಅವನನ್ನು ದೂಷಿಸುವುದಕ್ಕೆ ಸಿದ್ಧರಾದರೆ, ಆಚಾರ್ಯರು, "ನಿನ್ನ ತಾಯಿ ಸಾಧ್ವಿಯೇ ಸರಿ. ಮಗನಿಗೆ ಕಲಿಸಬೇಕಾದ ಸತ್ಯದ ಪಾಠವನ್ನೇ ಕಲಿಸಿದ್ದಾಳೆ ಮತ್ತು ನೀನು ಹೆಸರಿಗೆ ಅನ್ವರ್ಥವೆಂಬಂತೆ ಸತ್ಯಕಾಮನೇ ಆಗಿರುವೆ. ನಿನ್ನನ್ನು ಶಿಷ್ಯನಾಗಿ ಸ್ವೀಕರಿಸುವೆ" ಎಂದು ತಿಳಿಸಿ, ಶುಭಸಂದರ್ಭದಲ್ಲಿ ಉಪನಯನ ಸಂಸ್ಕಾರಮಾಡಿ, ಗುರುಕುಲಕ್ಕೆ ಕರೆದೊಯ್ಯುತ್ತಾರೆ.
ತಾಯಿಯ ಆಜ್ಞೆಯಂತೆ ಸತ್ಯಕಾಮ ಶ್ರದ್ಧೆ, ಗುರುಭಕ್ತಿ ಮತ್ತು ಸೇವೆ ಮಾಡುತ್ತಾ, ತನ್ನ ಕಲಿಕೆಯಲ್ಲಿ ನಿರತನಾಗುತ್ತಾನೆ. ಒಂದು ದಿನ ಆಚಾರ್ಯರು ಸತ್ಯಕಾಮನಿಗೆ ವಿಶೇಷವಾಗಿ ಪಾಠಕಲಿಸಲು, "ಈ ಗೋವುಗಳು ನಮಗೆ ತಾಯಿಯಿದ್ದಂತೆ. ಈ ಗೋವುಗಳು ಬಡಕಲಾಗಿವೆ. ಇವನ್ನು ಜಾಗೃತಿಯಿಂದ ನೋಡಿಕೊಳ್ಳುವೆಯಾ?" ಎಂದು ಕೇಳಿದಾಗ, ಉತ್ಸಾಹ, ಹುಮ್ಮಸ್ಸಿನಿಂದ, "ಸರಿ ಗುರುವರ್ಯ. ನಾನು ಈ 400 ಗೋವುಗಳು ಸಶಕ್ತವಾಗಿರುವಂತೆಯೂ ಮತ್ತು ಗೋಸಂಪತ್ತು1000 ಆಗುವವರೆಗೂ ಕಾಡಿನಲ್ಲಿ ಇವನ್ನು ನೋಡಿಕೊಳ್ಳುತ್ತೇನೆ" ಎಂದು ಗೋವುಗಳೊಡನೆ ಹೊರಡುತ್ತಾನೆ.
ಕಾಡಿನ ಹಚ್ಚಹಸಿರಿನ ವಾತಾವರಣ, ತಣ್ಣನೆ ಗಾಳಿ, ಶುಭ್ರವಾದ ನೀರಿನಿಂದ ಗೋವುಗಳನ್ನು ದೇವರೇ ಎಂಬಂತೆ ಸೇವೆಸಲ್ಲಿಸುತ್ತಾ, ತನ್ನ ಪ್ರಾತರ್ವಿಧಿಗಳನ್ನು ಮತ್ತು ಅನುಷ್ಠಾನಗಳನ್ನು ಶ್ರದ್ಧೆಯಿಂದ ಮಾಡುತ್ತಾ ದಿನಗಳು, ವಾರಗಳು, ತಿಂಗಳುಗಳನ್ನೇ ಕಳೆಯುತ್ತಾನೆ. ಮೊದಲಿಗೆ ಒಂಟಿತನವಿದ್ದದ್ದು ಏಕಾಂತತೆಯಾಗಿ, ಮಾತನಾಡಲು ಯಾರೂ ಇಲ್ಲದ ಕಾರಣ ಗೋವುಗಳೊಡನೆ, ಪಶು, ಪಕ್ಷಿ, ಗಿಡಮರಗಳೊಡನೆ ಸಂವಹನ ಮಾಡಲು ಕಲಿಯುತ್ತಾನೆ. ಇವನ ಶ್ರದ್ಧಾಭರಿತ ಸೇವೆ, ಶುಶ್ರೂಷೆಗಳಿಂದ ಗೋವುಗಳು ಶಕ್ತಿಭರಿತವಾಗುವುದಷ್ಟೇ ಅಲ್ಲದೆ, ಅವುಗಳ ಸಂಖ್ಯೆಯೂ ಬೆಳೆಯುತ್ತಾ ಹೋಗುತ್ತದೆ. ಅವನಿಗೋ ತನ್ನ ಕಾರ್ಯದಲ್ಲಿ ತನ್ಮಯನಾಗಿ, ಸಂಖ್ಯೆಗಳ ಕಡೆ ಗಮನವೇ ಇಲ್ಲ. ಒಂದು ದಿನ ಗೋಸಂಪತ್ತಿನಲ್ಲಿದ್ದ ಒಂದು ವೃಷಭ, ಮೇರುದನಿಯಲ್ಲಿ ಶಬ್ದಮಾಡಿ ಗೋವುಗಳ ಸಂಖ್ಯೆ1000 ಆಗಿರುವುದನ್ನು ಸೂಚಿಸುತ್ತದೆ.
ಸಂತೋಷದಿಂದ ಗುರುಕುಲದೆಡೆಗೆ ಗೋವುಗಳನ್ನೆಲ್ಲ ಕರೆದೊಯ್ಯುವಾಗ ವಾಯುದೇವನು ವೃಷಭನ ಮೂಲಕ ಸತ್ಯಕಾಮನನ್ನು ಉದ್ದೇಶಿಸಿ, "ನೀನು ಸತ್ಯವನ್ನು ತಿಳಿಯ ಬಯಸುವೆ ಅಲ್ಲವೇ! ಸತ್ಯವೇ ಬ್ರಹ್ಮ. ನಾಲ್ಕು ದಿಕ್ಕುಗಳೇ ಬ್ರಹ್ಮದ ಒಂದು ಪಾದವಾದ 'ಪ್ರಕಾಶವಾನ್'" ಎಂದು ಉಪದೇಶಿಸುತ್ತಾನೆ. ಅದನ್ನೇ ಧ್ಯಾನಿಸುತ್ತಾ, ಆ ಜ್ಞಾನವನ್ನು ತನ್ನದಾಗಿ ಮಾಡಿಕೊಂಡ ನಂತರ ಅಗ್ನಿದೇವನು, "ಬ್ರಹ್ಮದ ಎರಡನೇ ಪಾದವನ್ನು ಉಪದೇಶಿಸುವೆ. ಪೃಥ್ವಿ, ಜಲ, ಅಂತರಿಕ್ಷ ಮತ್ತು ಆಕಾಶವನ್ನು ಒಳಗೊಂಡ 'ಅನಂತವಾನ್' ಎಂದು ತಿಳಿ" ಎಂದು ಉಪದೇಶಿಸುತ್ತಾನೆ. ಸೂರ್ಯದೇವ ಹಂಸನ ರೂಪದಲ್ಲಿ ಬಂದು, "ಬ್ರಹ್ಮದ ಮೂರನೇ ಪಾದ 'ಜ್ಯೋತಿಶ್ಮಾನ್' - ಅಗ್ನಿ, ಸೂರ್ಯ, ಚಂದ್ರ ಮತ್ತು ವಿದ್ಯುತ್ ಎಂದು ಉಪಾಸನೆ ಮಾಡು" ಎಂದು ಉಪದೇಶಿಸಿದರೆ, ಪ್ರಾಣದೇವರು ಜಲಚರದ ರೂಪದಲ್ಲಿ ತೋರಿ, "ಪ್ರಾಣ, ಚಕ್ಷು, ಶ್ರೋತ್ರ ಮತ್ತು ಮನಸ್ಸಿಗೆ ಶಕ್ತಿಕೊಡುವ 'ಆಯತವಾನ್' ಬ್ರಹ್ಮದ ನಾಲ್ಕನೇ ಪಾದವೆಂದು ತಿಳಿ. ಈ ಷೋಡಶಕಲಾವಿದ್ಯೆಯನ್ನು ಗುರುವಿನಿಂದ ಕಲಿತು ಇದರ ಫಲವನ್ನು ಪಡೆ" ಎಂದು ಉಪದೇಶಿಸಿ ಕಣ್ಮರೆಯಾದನು.
ಬ್ರಹ್ಮತೇಜಸ್ಸಿನೊಂದಿಗೆ, 1000 ಗೋವುಗಳನ್ನು ಕರೆದುಕೊಂಡು ಬಂದ ಸತ್ಯಕಾಮನನ್ನು ಕಂಡು ಗೌತಮರು, "ನಿನ್ನ ಮುಖವನ್ನು ಕಂಡರೆ ಬ್ರಹ್ಮವನ್ನು ತಿಳಿದಂತಿದೆ. ಸಕಲ ದುಃಖನಿವೃತ್ತಿ ನಿನ್ನ ಮುಖದ ಮಂದಹಾಸದಲ್ಲಿ ತೋರುತ್ತಿದೆ", ಎಂದಾಗ ಸತ್ಯಕಾಮ ವಿನಯದಿಂದ ಆದ ವೃತ್ತಾಂತವನ್ನು ತಿಳಿಸಿ, "ನನಗೆ ಬ್ರಹ್ಮೋಪದೇಶ ಮಾಡುವ ಔದಾರ್ಯ, ಶಕ್ತಿ ನಿಮ್ಮನ್ನು ಹೊರತುಪಡಿಸಿ ಇನ್ಯಾರಿಗಿದೆ! ದಯಮಾಡಿ ಆ ಬ್ರಹ್ಮವನ್ನು ಉಪದೇಶಿಸಿ", ಎಂದು ವಿದ್ಯೆಯನ್ನು ಬೇಡುತ್ತಾನೆ. ಗುರುಗಳು ಅವನ ವಿನಯಕ್ಕೆ ಮನಸೋತು, "ಈ ಷೋಡಶಕಲೆಯಿಂದ ತೋರುವ ಪುರುಷನೇ ಆ ಏಕಮೇವ ಅದ್ವಿತೀಯ ಬ್ರಹ್ಮ(4x4=1)" ಎಂದು ಬ್ರಹ್ಮನನ್ನು ನೇರವಾಗಿ ಉಪದೇಶಿಸಿ ಸತ್ಯಕಾಮನನ್ನು ಕೃತಕೃತ್ಯನನ್ನಾಗಿ ಮಾಡುತ್ತಾರೆ.
ಈ ಕಥೆಯಿಂದ ಕಲಿಯಬಹುದಾದ ಅಂಶಗಳು -
1) ಸತ್ಯವನ್ನು ತಿಳಿಯಲು ಸತ್ಯಕಾಮನಲ್ಲಿದ್ದ ವ್ಯಾಕುಲತೆ ಅಗತ್ಯ
2) ಮಕ್ಕಳನ್ನು ಮತ್ತು ಶಿಷ್ಯರನ್ನು ಹೇಗೆ ನೋಡಿಕೊಳ್ಳಬೇಕೆಂಬುದನ್ನು ಜಬಾಲ ಮತ್ತು ಗೌತಮರಿಂದ ಕಲಿಯಬೇಕು
3) ಸಮ್ಯಗ್ದರ್ಶನ ಸಾಧಿಸಲು ಗುರುಭಕ್ತಿ, ಸೇವೆ ಮತ್ತು ವಿಧೇಯತೆ ಮುಖ್ಯ. ಗುರುವಿನ ಮನೋಭಿಲಾಷೆಯನ್ನು ಅರಿತು, ಅದಕ್ಕೆ ತಕ್ಕಂತೆ ಸೇವೆ ಮಾಡುವುದು.
4) 'ವಿದ್ಯಾ ದದಾತಿ ವಿನಯಮ್' ಎಂಬಂತೆ ವಿನಯವನ್ನು ಎಂದೂ ಗಟ್ಟಿಯಾಗಿ ಹಿಡಿದುಕೊಳ್ಳುವುದು
5) ಸತ್ಯವೆಂಬ ತಪಸ್ಸಿರದ ವ್ಯಕ್ತಿಗೆ, ಸತ್ಯಸಾಕ್ಷಾತ್ಕಾರ ದೂರದ ಮಾತು
6) ನಮ್ಮ ಸಾಧನೆ ಸರಿಯಾದ ಉದ್ದೇಶದಿಂದ ಕೂಡಿದ್ದು, ಅದರೆಡೆಗೆ ಪ್ರಯತ್ನ ಮಾಡಿದರೆ, ಅದರ ಫಲ ತಿಳಿಯದ ರೀತಿಯಲ್ಲಿ ನಮಗೆ ತಲುಪುವುದು ನಿಶ್ಚಯ.
(ಛಾ0ದೋಗ್ಯ ಉಪನಿಷತ್ತು)
No comments:
Post a Comment