ನಾವು 'ಶಾಸ್ತ್ರ’ ಎಂಬ ಪದದ ಗಾಢತೆ, ವಿಶಾಲತೆ ಹಾಗೂ ಅರ್ಥವನ್ನು ತಿಳಿದೋ, ತಿಳಿಯದೆಯೋ ಅಥವಾ ತಪ್ಪು ತಿಳಿದೋ, ಹಲವು ಬಾರಿ ಸಂಭಾಷಣೆಯ ಮಧ್ಯೆ ಕೇಳಿರಬಹುದು ಇಲ್ಲವೇ ಉಪಯೋಗಿಸಿರಬಹುದು. ’ಶಾಸ್ತ್ರಂ’ ಎಂಬ ಸಂಸ್ಕೃತ ಪದದ ವಾಚ್ಯಾರ್ಥ 'ಚತುರ್ವಿಧ ಪುರುಷಾರ್ಥಗಳ ವಿಷಯವನ್ನು ಹೊಂದಿರುವ ವೈದಿಕ ಸನಾತನಧರ್ಮದ ಗ್ರಂಥಗಳು’. ಶಾಸ್ತ್ರಗ್ರಂಥಗಳು ಮಾನವನಿಗೆ ಸಹಾಯ ಮಾಡಲು ಇರುವವೇ ವಿನಃ ಸ್ವಾತಂತ್ರ್ಯ ಕಸಿದುಕೊಳ್ಳಲು ಅಥವಾ ತೊಂದರೆ ಕೊಡುವುದಕ್ಕಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ರೈಲ್ವೆ ನಿಲ್ದಾಣದಲ್ಲಿನ Enquiry ಸೇವಾಕೌಂಟರ್, ಸಹಾಯ ಕೇಳಿದವರಿಗೆ ಸೂಕ್ತ ಮಾರ್ಗದರ್ಶನ, ಮಾಹಿತಿ ನೀಡುವಂತೆ ಶಾಸ್ತ್ರಗಳೂ ಪುರುಷಾರ್ಥ ಪ್ರಾಪ್ತಿಯನ್ನು ಸಾಧಿಸಿಕೊಳ್ಳಲು ಮಾರ್ಗದರ್ಶನ ಬಯಸುವ ಮಾನವನಿಗೆ ದಾರಿದೀಪದ ಹಾಗೆ, ಶಿಶುವನ್ನು ಕೈಹಿಡಿದು ನಡೆಸುವ ತಾಯಿಯಂತೆ ಸೂಕ್ತಹಾದಿಯಲ್ಲಿ ಮುನ್ನಡೆಸುತ್ತವೆ. ’ಶಾಸ್ತ್ರಂ’ ಎಂಬ ಪದವನ್ನು ’ಸೂಕ್ತ ಬೋಧನೆ, ಸಲಹೆಗಳ ಮೂಲಕ ಮಾನವನನ್ನು ಸಂರಕ್ಷಣೆ ಮಾಡುವ ಸಾಧನ’ ('ಶಾಸನಾತ್ ತ್ರಾಯತೇ ಇತಿ ಶಾಸ್ತ್ರಂ') ಎಂದು ಅರ್ಥೈಸಬೇಕು. ಪ್ರಪಂಚದ ಬಹುತೇಕ ಮತಗಳು ಒಂದು ಗ್ರಂಥಕ್ಕಷ್ಟೇ ಸೀಮಿತವಾಗಿದ್ದರೆ, ವೈದಿಕ ಸನಾತನಧರ್ಮದಲ್ಲಿ ಹಲವಾರು ಶಾಸ್ತ್ರಗ್ರಂಥಗಳಿದ್ದು, ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಜೀವಿತಾವಧಿಯಲ್ಲಿ ಓದಿಮುಗಿಸಲಾಗದಷ್ಟು ಬೃಹತ್ಗ್ರಂಥರಾಶಿಯಾಗಿದೆ.
ಮೂಲ ಗ್ರಂಥಗಳಾದ
ವೇದಗಳು:
’ವೇದ’ ಎಂಬ
ಪದದ ಅರ್ಥ ’ಜ್ಞಾನ’. ವೇದಗಳು ಯಾವುದೇ ಮನುಷ್ಯನಿಂದ ಸೃಷ್ಟಿಯಾದ ಜ್ಞಾನವಾಗಿರದೆ, ಸ್ವಯಂ ಪರಮಾತ್ಮನಿಂದ ಮಾನವಕುಲಕ್ಕೆ ದೊರಕಿದ ಜ್ಞಾನ ಭಂಡಾರವಾದ ಕಾರಣ, ಇವನ್ನು ’ಅಪೌರುಷೇಯ ಶಾಸ್ತ್ರ’ ಎಂದು ಕರೆಯುತ್ತಾರೆ.
ಈ ವಿಷಯವು ವೇದಗಳಲ್ಲಿ ಹಲವು ಕಡೆ ಉಲ್ಲೇಖವಾಗಿದೆ. ಉದಾಹರಣೆ ಶ್ವೇತಾಶ್ವತ್ತರ ಉಪನಿಷತ್ - 'ಯೋ
ಬ್ರಹ್ಮಾಣಂ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈಃ'* - ಪರಮಾತ್ಮನು ಸೃಷ್ಟಿಯ ಪೂರ್ವದಲ್ಲಿ
ಚತುರ್ಮುಖ ಬ್ರಹ್ಮನನ್ನು ಸೃಷ್ಟಿಸಿ, ನಂತರ ವೇದಜ್ಞಾನವನ್ನು ಅವನಿಗೆ ಕೊಟ್ಟನು.
ಇಂತಹ ಅತ್ಯಮೂಲ್ಯ
ಉಡುಗೊರೆ ಮಾನವಕುಲಕ್ಕೆ ದೊರೆತುದಾದರೂ ಹೇಗೆ? ತಪಸ್ಸಿನ ಮೂಲಕ ಸಾಧನೆ ಮಾಡಿದ ಋಷಿಗಳು ತಮ್ಮ ಅತಿಸೂಕ್ಷ್ಮ
ಮನಸ್ಸಿನಲ್ಲಿ ಶಬ್ದರೂಪದಲ್ಲಿದ್ದ ವೇದಮಂತ್ರಗಳನ್ನು ಸಾಕ್ಷಾತ್ಕರಿಸಿಕೊಂಡರು. ಇದು ಸೃಷ್ಟಿಯಲ್ಲಿ
ಸದಾ ಇರುವ ವೈಜ್ಞಾನಿಕ ಸತ್ಯಗಳನ್ನು ಸಂಶೋಧನಾನಿರತ ವಿಜ್ಞಾನಿಗಳು ಒಂದು ನಿರ್ದಿಷ್ಟ ಸಮಯದಲ್ಲಿ ಕಂಡುಹಿಡಿದ
ಹಾಗೆ. ಆದ್ದರಿಂದ ಋಷಿಗಳನ್ನು ’ಮಂತ್ರದ್ರಷ್ಟಾರ’ ಎಂದು ಕರೆಯುತ್ತೇವೆ ಹೊರತು ’ಮಂತ್ರಕರ್ತಾ’ ಎಂದಲ್ಲ. ಈ ಮಂತ್ರಗಳು ಗುರುಶಿಷ್ಯ ಪರಂಪರೆಯಲ್ಲಿ ಅವ್ಯಾಹತವಾಗಿ ಕರ್ಣ(ಶ್ರೋತ್ರ) ಮಾಧ್ಯಮದ ಮೂಲಕ
ಹರಿದುಬಂದ ಕಾರಣ ವೇದಗಳನ್ನು ’ಶ್ರುತಿ’ ಅಥವಾ ’ಶಬ್ದಪ್ರಮಾಣ’ವೆಂದೂ ಕರೆಯುತ್ತಾರೆ.
ವ್ಯಾಸ ಮಹರ್ಷಿಗಳು
ಸಮಸ್ತ ವೇದಜ್ಞಾನವನ್ನು ನಾಲ್ಕು ವೇದಗಳನ್ನಾ ಗಿ ವಿಂಗಡಿಸಿದ್ದಾರೆ, ಅವೇ ಋಗ್ವೇದ, ಯಜುರ್ವೇದ, ಸಾಮವೇದ
ಹಾಗು ಅಥರ್ವಣವೇದ. ಪ್ರತಿ ವೇದದಲ್ಲಿಯೂ ಧರ್ಮ-ಅರ್ಥ-ಕಾಮ ವಿಷಯಾಧಾರಿತ ಕರ್ಮಪ್ರಧಾನವಾದ 'ವೇದಪೂರ್ವ(ಕರ್ಮಕಾಂಡ)' ಹಾಗೂ ಮೋಕ್ಷವಿಷಯವನ್ನು ಉಪನಿಷತ್ತುಗಳ ಮೂಲಕ ಪ್ರತಿಪಾದಿಸುವ ಜ್ಞಾನಪ್ರಧಾನವಾದ 'ವೇದಾಂತ(ಜ್ಞಾನಕಾಂಡ)'ಗಳೆಂದು ಮರುವಿಂಗಡಿಸಬಹುದು. ಕಾಲಪ್ರವಾಹದಲ್ಲಿ ಬೃಹತ್ಗಾತ್ರದ ಮಂತ್ರಗಳು ನಷ್ಟವಾದ ನಂತರವೂ, ಇಂದು
ನಮಗೆ ದೊರೆತಿರುವ ಒಟ್ಟು ವೇದಮಂತ್ರಗಳು ಸುಮಾರು 20000!!
ಉಪಪ್ರಧಾನ ಗ್ರಂಥಗಳು (The Secondary Literature):
ಮೂಲಗ್ರಂಥವಾದ
ವೇದಗಳನ್ನು ಅಧ್ಯಯನ ಮಾಡಿ, ಅವನ್ನು ಆಧರಿಸಿ, ವಿದ್ವಾಂಸರು, ಆಚಾರ್ಯರುಗಳಿಂದ ರಚಿಸಲ್ಪಟ್ಟ ಗ್ರಂಥಗಳು
ಅಥವಾ ಬರವಣಿಗೆಗಳನ್ನು 'ಉಪಪ್ರಧಾನ ಗ್ರಂಥ’ಗಳೆಂದು ಕರೆಯುತ್ತಾರೆ. ಈ ಗ್ರಂಥಗಳು ಮಾನವನಿಂದ ರಚಿಸಲ್ಪಟ್ಟ
ಕಾರಣದಿಂದ, ಇವನ್ನು ’ಪೌರುಷೇಯ ಶಾಸ್ತ್ರವೆಂದೂ ಕರೆಯಲಾಗುತ್ತದೆ.
ಉಪಪ್ರಧಾನ ಗ್ರಂಥಗಳ ಅವಶ್ಯಕತೆ:
ಸ್ವಯಂ ಭಗವಂತನಿಂದಲೇ ಬಂದಿರುವ ವೇದಗಳಿರುವಾಗ, ಇನ್ನು ಉಪಪ್ರಧಾನ ಗ್ರಂಥಗಳ ಅವಶ್ಯಕತೆಯಾದರೂ ಏನು? ಎಂಬ ಯೋಚನೆ ಬರುವುದು ಸಾಮಾನ್ಯ. ಇದಕ್ಕೆ ಕಾರಣಗಳೆಂದರೆ:
- ವೇದಗಳ ಹಲವು ವಿಷಯಗಳು ಇಂದ್ರಿಯ ಅಗೋಚರವಾಗಿದ್ದು, ಸಾಮಾನ್ಯ ವ್ಯಕ್ತಿಗೆ ಅರ್ಥವಾಗುವುದು ಕಷ್ಟ. ವೇದಾರ್ಥವನ್ನು ಐತಿಹಾಸಿಕ ಘಟನೆಗಳು, ದೃಷ್ಟಾಂತಗಳು, ಕಥೆಗಳು, ಸೂತ್ರಗಳು ಇತ್ಯಾದಿಗಳ ಮೂಲಕ ಸುಲಭವಾಗಿ ಅರ್ಥಮಾಡಿಸುವ ಮಾಧ್ಯಮದ ಅವಶ್ಯಕತೆ ಇರುತ್ತದೆ. ಹೇಗೆಂದರೆ ಗಣಿತದಲ್ಲಿ ಸಂಖ್ಯೆಗಳು ಅಮೂರ್ತ ಕಲ್ಪನೆಯಾಗಿದ್ದು (abstract concept) ಪುಟ್ಟಮಕ್ಕಳಿಗೆ ಅರ್ಥಮಾಡಿಸಲು, ವಸ್ತುಗಳ ಮಾಧ್ಯಮದ ಮೂಲಕ ಕಲಿಸಲಾಗುತ್ತದೆ.
- ಹಲವು ಮಂತ್ರದ್ರಷ್ಟಾರರಿಂದ ದೊರಕಿದ ವೇದಮಂತ್ರಗಳು ಅವ್ಯವಸ್ಥಿತವಾಗಿದ್ದು, ಇವನ್ನು ವಿಷಯವಾರು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ಪ್ರಸ್ತುತಪಡಿಸುವ ಅಗತ್ಯತೆ
- ವೇದವಿಷಯಗಳಿಗೆ ವಿವರಣೆ, ವಿಶ್ಲೇಷಣೆ ನೀಡುವ ಆವಶ್ಯಕತೆ
- ವೇದಗಳನ್ನು ಅರ್ಥೈಸುವ ಕಾಲಘಟ್ಟದಲ್ಲಿ ಮೂಡುವ ಸಂಶಯಗಳನ್ನು ಪರಿಹರಿಸುವ ಅನಿವಾರ್ಯತೆ
ಸೂತ್ರಗಳು:
ಸೂತ್ರಗಳು ಒಂದು
ವಿಶಿಷ್ಟ ರೀತಿಯ ಗ್ರಂಥಗಳಾಗಿದ್ದು, ಇದರ ಲಕ್ಷಣವನ್ನು ಹೇಳುವ ಸಂಸ್ಕೃತಶ್ಲೋಕ ಹೀಗಿದೆ:
ಅಲ್ಪಾಕ್ಷರಂ ಅಸಂದಿಗ್ಧಂ ಸಾರವತ್ ವಿಶ್ವತೋಮುಖಮ್ ।
ಅಸ್ತೋಭಮನವಧ್ಯಂ ಸೂತ್ರಂ ಸೂತ್ರವಿದೋ ವಿದುಃ ॥
ಅರ್ಥ: ಸಾಧ್ಯವಾದಷ್ಟು
ಕಡಿಮೆ ಅಕ್ಷರಗಳನ್ನು ಒಳಗೊಂಡ, ಸಂದೇಹದಿಂದ ಮುಕ್ತವಾಗಿರುವ, ಅರ್ಥಗರ್ಭಿತವಾಗಿರುವ, ಸಾರ್ವತ್ರಿಕವಾಗಿ
ಅನ್ವಯಿಸಲಾಗಿ ವ್ಯಾಪಕವಾಗಿ ಅರ್ಥೈಸಲಾಗುವ, ಅನಗತ್ಯ ವಿರಾಮಗಳಿಲ್ಲದ, ದೋಷರಹಿತವಾಗಿರುವ ಲಕ್ಷಣ ಹೊಂದಿರುವ
ಪದಸಮೂಹವನ್ನು ’ಸೂತ್ರ’ವೆಂದು ಕರೆಯುತ್ತಾರೆ.
ಇದು ಕಂಪ್ಯೂಟರ್
ನಲ್ಲಿನ compress ಆಗಿರುವ file/folder ಇದ್ದ ಹಾಗೆ. ಸೂತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ
ಕಾರಣದಿಂದ ಗುರುಶಿಷ್ಯ ಪರಂಪರೆಯಲ್ಲಿ ಅವ್ಯಾಹತವಾಗಿ ಪ್ರಸರಣವಾಯಿತು. ಕಲ್ಪಸೂತ್ರಗಳು, ಶುಲ್ಬಸೂತ್ರಗಳು,
ಶ್ರೌತಸೂತ್ರಗಳು, ಧರ್ಮಸೂತ್ರಗಳು, ಯೋಗಸೂತ್ರಗಳು ಹಾಗು ಪಾಣಿನಿ ವ್ಯಾಕರಣಸೂತ್ರಗಳು ಕೆಲವು ಪ್ರಮುಖ
ಸೂತ್ರ ಗ್ರಂಥಗಳಾಗಿವೆ.
ತತ್ವಸಿದ್ಧಾಂತವನ್ನು
ತಾರ್ಕಿಕವಾಗಿ ವಿಶ್ಲೇಷಿಸಿ, ನಿರೂಪಿಸಿರುವ ಆರು ದರ್ಶನಗಳಾದ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ,
ಪೂರ್ವಮೀಮಾಂಸ ಹಾಗೂ ಉತ್ತರಮೀಮಾಂಸ ಗ್ರಂಥಗಳೂ ಕೂಡ ಸೂತ್ರರೂಪದಲ್ಲಿವೆ.
ಸೂತ್ರಗಳನ್ನು
ಅರ್ಥೈಸಲು ಸಾಮಾನ್ಯವಾಗಿ ಕಷ್ಟಕರವಾಗಿದ್ದು, ಸಂಶಯಗಳಿಗೆ ಎಣೆಮಾಡಿಕೊಡುವ ಕಾರಣ ಸ್ಮೃತಿಗ್ರಂಥಗಳು
ಆವಶ್ಯಕವಾಗುತ್ತವೆ. ’ಸ್ಮೃತಿ’ ಎಂದರೆ ’ನೆನಪಿಸಿಕೊಂಡ ಜ್ಞಾನ’ - ವೇದಗಳನ್ನು ಅಧ್ಯಯನಮಾಡಿ,
ಅರ್ಥೈಸಿಕೊಂಡ ಆಚಾರ್ಯರು, ನಂತರ ಅವನ್ನು ನೆನಪಿಸಿಕೊಂಡು, ಕ್ರಮಬದ್ಧವಾಗಿ ವಿಷಯಾನುಸಾರ ಪ್ರಸ್ತುತಿಪಡಿಸಿದ
ಗ್ರಂಥಗಳಾಗಿವೆ.
ಸ್ಮೃತಿಗಳು ಶ್ಲೋಕರೂಪದಲ್ಲಿದ್ದು
ವಿಸ್ತೃತವಾಗಿವೆ. ವೇದಗಳ ಅಧ್ಯಯನ ಮತ್ತು ವ್ಯಾಖ್ಯಾನಕ್ಕೆ ಅಗತ್ಯವಾದ ವೈದಿಕ ಸಾಹಿತ್ಯದ ಭಾಗವಾಗಿರುವ
ಆರು ಸಹಾಯಕ ವಿಭಾಗಗಳಾದ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು ಹಾಗು ಜ್ಯೋತಿಷ್ಯ ಶಾಸ್ತ್ರಗ್ರಂಥಗಳನ್ನು ’ವೇದಾಂಗ’ಗಳೆಂದು ಕರೆಯುತ್ತಾರೆ.
ವೇದಗಳಿಗೆ ಪೂರಕವಾಗಿದ್ದು,
ಜೀವನ ಮತ್ತು ಸಮಾಜದ ವಿವಿಧ ಕ್ಷೇತ್ರಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ಗ್ರಂಥಗಳಾದ ಆಯುರ್ವೇದ,
ಧನುರ್ವೇದ, ಗಂಧರ್ವವೇದ ಮತ್ತು ಶಿಲ್ಪವೇದಗಳನ್ನು(ಅರ್ಥಶಾಸ್ತ್ರ) ’ಉಪವೇದ’ಗಳೆಂದು ಕರೆಯುತ್ತಾರೆ.
ಇವುಗಳೂ ಅಲ್ಲದೆ
ಮನುಸ್ಮೃತಿ, ಪರಾಶರಸ್ಮೃತಿ, ಶಾಂಡಿಲ್ಯಸ್ಮೃತಿ, ವ್ಯಾಸಸ್ಮೃತಿಗಳು ಕೆಲವು ಮುಖ್ಯ ಸ್ಮೃತಿಗ್ರಂಥಗಳಾಗಿವೆ.
ಸ್ಮೃತಿಯಲ್ಲಿರುವ ಕೆಲವು ವಿಷಯಗಳು ದೇಶ-ಕಾಲಕ್ಕೆ ಬದಲಾಗುವ ಕಾರಣ, ಅವನ್ನು ಸಂದರ್ಭೋಚಿತವಾಗಿ
ಮರುವ್ಯಾಖ್ಯಾನ ಮಾಡಲಾಗುತ್ತದೆ ಅಥವಾ ವೇದವಿರುದ್ಧವಾಗದಂತೆ ಬದಲಾಯಿಸಲಾಗುತ್ತದೆ.
ಇತಿಹಾಸಗಳು:
’ಇತಿಹಾಸ’ ಪದದ ಅರ್ಥ ’ಹಾಗೆಯೇ ಆಗಿತ್ತು’. ಇದರ ಕಾರಣ ಇತಿಹಾಸ ಗ್ರಂಥಗಳಾದ ’ರಾಮಾಯಣ’ ಮತ್ತು ’ಮಹಾಭಾರತ’ಗಳು, ಪಾಶ್ಚಾತ್ಯರು ಕರೆಯುವ ಹಾಗೆ Mythology ಅಲ್ಲ. ’The Titanic’ ಇಂಗ್ಲಿಷ್ ಸಿನಿಮಾವು ನೈಜ
ಘಟನೆಗಳ ಆಧಾರಿತವಾದುದಾದರು, ಕಾಲ್ಪನಿಕ ಘಟನೆಗಳು ಸೇರಿರುವಂತೆ, ಇತಿಹಾಸಗಳು ವಾಸ್ತವಿಕ-ಕಾಲ್ಪನಿಕ
ಘಟನೆಗಳ ಮಿಶ್ರಣವೆಂದು ಅರ್ಥೈಸಬೇಕು. ಭಾರತದ ಜ್ಞಾನಪರಂಪರೆಯ ಅನರ್ಘ್ಯ ರತ್ನಗಳಾಗಿರುವ, ಇವುಗಳ
ಬಗ್ಗೆ ತಿಳಿಯದ ಭಾರತೀಯನಿಲ್ಲವೆಂದರೆ ಅತಿಶಯೋಕ್ತಿಯಾಗದು! ಇವುಗಳು ಮಾನವರಿಗೆ ದೊರೆತಿರುವ ದೃಶ್ಯಕೈಪಿಡಿಗಳಾಗಿದ್ದು,
ಇದರಲ್ಲಿನ ಕಥೆಗಳು ಭಾರತವನ್ನಷ್ಟೇ ಅಲ್ಲದೇ, ಜಗತ್ತಿನ ಹಲವು ದೇಶಗಳ ಮನೆಮನಗಳನ್ನು ಪ್ರವೇಶಿಸಿ ಆದರ್ಶವಾಗಿವೆ.
ವಾಲ್ಮೀಕಿ ವಿರಚಿತ ರಾಮಾಯಣವು ’ಆದಿಕಾವ್ಯ’ವೆಂದು ಪ್ರಸಿದ್ಧಿಯಾಗಿದ್ದು 24,000 ಶ್ಲೋಕಗಳಿಂದ
ವಿರಾಜಿಸುತ್ತಿದ್ದರೆ, ವೇದವ್ಯಾಸ ವಿರಚಿತ ಮಹಾಭಾರತವು ’ಪಂಚಮವೇದ’ವೆಂದು ಪ್ರತೀತಿ ಹೊಂದಿದ್ದು
ಸುಮಾರು 1,00,000 ಶ್ಲೋಕಗಳಿರುವ ಕಾರಣ ’ಜಗತ್ತಿನ ಅತಿದೊಡ್ಡ ಮಹಾಕಾವ್ಯ’ವಾಗಿದೆ.
ಪುರಾಣಗಳು:
’ಪುರಾಣ'ವೆಂದರೆ 'ಪ್ರಾಚೀನ ಮತ್ತು ನವನವೀನ' ಎಂದರ್ಥ. ಇವುಗಳು ಜನಸಾಮಾನ್ಯರಿಗೆ ವೇದವಿಷಯವನ್ನು ಕಥಾರೂಪದಲ್ಲಿ ತಲುಪಿಸುವ
ಮಾಧ್ಯಮವಾಗಿದ್ದು, ಇಲ್ಲಿ ನಿರೂಪಿಸಿರುವ ಹಲವು ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಇವುಗಳಲ್ಲಿ ಕಲ್ಪನೆಯ ವಿಷಯಗಳೊಂದಿಗೆ, ಬಹಳ ಹಿಂದೆ ಸಂಭವಿಸಿದ ಕೆಲವೊಂದು ನೈಜ ಘಟನೆಗಳೂ ಸೇರಿಕೊಂಡಿವೆ. ಪಾಶ್ಚಾತ್ಯದಲ್ಲಿ
ಪ್ರಖ್ಯಾತಿಯಾಗಿರುವ Batman, Superman, Harry Potter ಇನ್ನಿತರ ಕಾಲ್ಪನಿಕ ಕಥೆಗಳಲ್ಲಿರುವ ಅವಾಸ್ತವಿಕ
ಘಟನೆಗಳು, ಅತಿರೇಕದ ಕಲ್ಪನೆಗಳು, ರೋಚಕತೆಯ ತಿರುವುಗಳು ಪುರಾಣಗಳಲ್ಲಿ ಅತ್ಯದ್ಭುತವಾಗಿ ವರ್ಣಿಸಲ್ಪಟ್ಟಿದೆ.
ರಾಜ ಹರಿಶ್ಚಂದ್ರನ ಕಥನದಿಂದ ’ಸತ್ಯಂ ವದ’ ಎಂಬ ವೇದವಾಕ್ಯದ ವ್ಯಾಖ್ಯಾನವನ್ನು, ಪ್ರಹ್ಲಾದ ಚರಿತೆಯು
ಭಕ್ತಿಯ ಪರಾಕಾಷ್ಠೆಯನ್ನು, ಶಿಬಿ ಚಕ್ರವರ್ತಿಯ ಕಥೆಯು ದಾನದ ಮಹಿಮೆಯನ್ನು, ತಾಯಿ ಮದಾಲಸ ಕಥನವು ಮಕ್ಕಳಿಗೆ
ಗುರುವಾಗಿ ಉತ್ಕೃಷ್ಟ ಆಧ್ಯಾತ್ಮಿಕ ವಿಚಾರಗಳನ್ನು ಬೋಧಿಸುವುದನ್ನು ಗಮನಿಸಿದರೆ, ಪುರಾಣಗಳು ಆದರ್ಶ-ಮೌಲ್ಯಗಳ
ಗಣಿಯಾಗಿರುವುದನ್ನು ಗಮನಿಸಬಹುದು.
ವಿಶ್ವಕೋಶವಾಗಿರುವ
ಪುರಾಣ ಸಾಹಿತ್ಯದಲ್ಲಿ ವಿಶ್ವಶಾಸ್ತ್ರ, ಖಗೋಳಶಾಸ್ತ್ರ, ಖನಿಜಶಾಸ್ತ್ರ, ತತ್ವಶಾಸ್ತ್ರ, ಧರ್ಮಬೋಧನೆಗಳಲ್ಲದೆ
ಹಲವು ವ್ಯಾಪಕ ಶ್ರೇಣಿಯ ವಿಷಯಗಳನ್ನು (ದೇವತೆಗಳು, ಋಷಿ-ದೇವತೆಗಳ ವಂಶಾವಳಿ, ರಾಜರು...) ಪ್ರಸ್ತಾಪಿಸಲಾಗಿದೆ.
ಹಲವು ಪುರಾಣಗಳಿಗೆ ವಿಷ್ಣು, ಶಿವ, ಬ್ರಹ್ಮ, ಸ್ಕಂದ, ಗಣಪತಿ ಮತ್ತು ದೇವೀಯಂತಹ ಗಮನಾರ್ಹ ದೇವತೆಗಳ
ಹೆಸರಿಡಲಾಗಿದೆ. ಇದರೊಂದಿಗೆ ಪೂರಕವಾಗಿ ಉಪಪುರಾಣಗಳು ಕೂಡ ಈ ವಿಷಯಗಳನ್ನೇ ಪ್ರಸ್ತುತಪಡಿಸುತ್ತವೆ.
ವೇದವ್ಯಾಸರು 18 ಪುರಾಣ ಹಾಗು 18 ಉಪಪುರಾಣಗಳನ್ನು ರಚಿಸಿದ್ದಾರೆಂದು ನಂಬಿಲಾಗಿದ್ದು, ಇವುಗಳಲ್ಲಿರುವ
4 ಲಕ್ಷಗಳಿಗೂ ಅಧಿಕ ಶ್ಲೋಕಗಳು ಶಾಸ್ತ್ರದ ಅಗಾಧತೆಗೆ ಸಾಕ್ಷಿಯಲ್ಲವೇ?!
ಭಾಷ್ಯಗಳು:
ವೇದಗಳು ಹಾಗು
ಉಪಪ್ರಧಾನಗ್ರಂಥಗಳನ್ನು ವೇದಕ್ಕೆ ವಿರುದ್ಧವಾಗದ ರೀತಿಯಲ್ಲಿ ವ್ಯಾಖ್ಯಾನಿಸಿ, ವಿಸ್ತರಿಸಲ್ಪಟ್ಟ ಗ್ರಂಥಗಳನ್ನು ’ಭಾಷ್ಯ’ಗಳೆಂದು ಕರೆಯುತ್ತಾರೆ. ಶಂಕರಾಚಾರ್ಯರು ಉಪನಿಷತ್ತುಗಳಿಗೆ ಹಾಗು ಭಗವದ್ಗೀತೆಗೆ ರಚಿಸಿದ
ಗ್ರಂಥಗಳು ಭಾಷ್ಯಗಳಿಗೆ ಉದಾಹರಣೆಯಾಗಿದೆ.
ಶಾಸ್ತ್ರೋ ರಕ್ಷತಿ
ರಕ್ಷಿತಃ:
’ತಸ್ಮಾಚ್ಛಾಸ್ತ್ರಂ
ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ’ ಎಂಬ ಭಗವದ್ಗೀತೆಯಲ್ಲಿನ ಶ್ರೀಕೃಷ್ಣನ ಉಪದೇಶದಂತೆ ಏನು
ಮಾಡಬೇಕು (ನಿಯತ ಕರ್ಮಗಳು) ಮತ್ತು ಏನು ಮಾಡಬಾರದು (ನಿಷಿದ್ಧ ಕರ್ಮಗಳು) ಎಂಬುದನ್ನು ನಿರ್ಧರಿಸುವಲ್ಲಿ
ನಮ್ಮ ಇಂದ್ರಿಯಗಳು, ತರ್ಕ ಇನ್ನಿತರ ಯಾವುದೇ ಜ್ಞಾನಸಾಧನಗಳು ಪ್ರಮಾಣವಾಗದ ಕಾರಣ, ಕೇವಲ ಶಾಸ್ತ್ರಗಳು
ಮಾತ್ರವೇ ವಿಶ್ವಾಸಾರ್ಹ ಪ್ರಮಾಣವಾಗಿದೆ. ಹಿಂದೆ ಕೆಲವರಿಗಷ್ಟೇ ಸೀಮಿತವಾಗಿ, ಚದರಿಕೊಂಡಿದ್ದ ಈ ಅಗಾಧ
ಪ್ರಮಾಣದ ಜ್ಞಾನಭಂಡಾರವು, ಇಂದು ಮಾಹಿತಿತಂತ್ರಜ್ಞಾನ ಕ್ರಾಂತಿಯ (IT Revolution) ಕೃಪೆಯಿಂದ
ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲ್ಪಟ್ಟಿದ್ದು, ಜಾಲತಾಣದಲ್ಲಿ ಎಲ್ಲರಿಗೂ ಲಭ್ಯವಾಗಿದೆ. ಇಂತಹ ಅನರ್ಘ್ಯನಿಧಿಯನ್ನು
ಮೂಢನಂಬಿಕೆ, ಅಪ್ರಸ್ತುತ ಅಥವಾ ಕೇವಲ ಒಂದು ಧರ್ಮಕ್ಕೆ ಸೀಮಿತವಾದುದೆಂಬ ತಪ್ಪುಕಲ್ಪನೆಗಳನ್ನು ತೊಡೆದುಹಾಕುವುದು
ಅತ್ಯಾವಶ್ಯಕ. ಈ ಸುವರ್ಣಪರ್ವದಲ್ಲಿ ಶಾಸ್ತ್ರಗಳ ಅಧ್ಯಯನ ಮಾಡುವುದರೊಂದಿಗೆ, ಅಲ್ಲಿ ತಿಳಿಸಿರುವ
ಮಾರ್ಗದರ್ಶನದಂತೆ ಜೀವನ ನಡೆಸುತ್ತಾ, ನಂತರ ಇವುಗಳನ್ನು ಮುಂದಿನ ಯುವಪೀಳಿಗೆಗೆ ಯಥಾವತ್ತಾಗಿ ಹಸ್ತಾಂತರಿಸುವುದೇ
ಶಾಸ್ತ್ರರಕ್ಷಣೆ. ಇದರಿಂದ ಸ್ವಹಿತದೊಂದಿಗೆ ಜಗತ್ಕಲ್ಯಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ 🙏🙏. ಪಾಮರರಿಗೂ ಅರ್ಥ ಆಗುವ ರೀತಿಯಲ್ಲಿ ತಿಳಿಸಿದ್ದೀರಿ. ಧನ್ಯವಾದಗಳು 🙏🙏
ReplyDelete🙏🙏🙏🙏
ReplyDeleteNice information
ReplyDeleteಜನರು ಸಾಧಾರಣವಾಗಿ ಉಪಯೋಗಿಸುವ ಮಾತು "ಶಾಸ್ತ್ರದಲ್ಲಿ ಹೇಳಿದೆ" ಎಂದು. ಆದರೆ ಶಾಸ್ತ್ರ ಅನ್ನುವುದರ ಬಗ್ಗೆ ಎಷ್ಟೊಂದು ವಿಷಯಗಳು ಇವೆ ಎನ್ನುವುದನ್ನು ಬಹಳ ಚೆನ್ನಾಗಿ ತಿಳಿಸಿದ್ದೀರ, ಸರ್ 🙏🏻.
ReplyDeleteಶಾಸ್ತ್ರ ಎಂದರೆ ಏನು, ಶಾಸ್ತ್ರದ ಅವಶ್ಯಕತೆ, ಶಾಸ್ತ್ರಗಳ ವಿಧಗಳು, ಶಾಸ್ತ್ರದಿಂದ ಆಗುವ ಪ್ರಯೋಜನಗಳು, ಇಂದಿನ ಕಾಲಕ್ಕೆ ಶಾಸ್ತ್ರಗಳು ಹೇಗೆ ಪ್ರಸ್ತುತ ಎನ್ನುವುದರ ವಿವರಗಳು ತುಂಬಾ ಸಹಾಯಕವಾಗಿದೆ.
ತುಂಬಾ ಧನ್ಯವಾದಗಳು 🙏🏻
Namaste guruji
ReplyDeleteEe kaalakke vedha vignanabagge prathi sanathana dharmi ge gothaaga beku.thaavu thumba chennagi simple language alli Abba magu gu artha aago thara explain maadidhira.
Dhanyavadhagalu
Bhaga - 1 ra kondiyannoo hakuvira illi dayavittu?
ReplyDeletehttps://learnvedantaonline.blogspot.com/2025/12/1.html?m=1
DeletePlease find the first article here
ಪುಟ್ಟ ಮಕ್ಕಳಿಗೂ ಹೇಳಿ ಕೊಟ್ಟು ಅರ್ಥೈಸಬಹುದು ಎನಿಸುವಂತಹ ಸರಳ, ಆಸಕ್ತಿಕರ ಮತ್ತು ನಿಖರ ಮಾಹಿತಿಯ ಬರಹವಾಗಿದೆ !
ReplyDeleteಶಾಸ್ತ್ರಗಳು ನಮ್ಮ ಜೀವನಕ್ಕೆ ದಿಕ್ಕು ತೋರಿಸುವ ಮಾರ್ಗಸೂಚಿಗಳು.
ReplyDeleteಶಾಸ್ತ್ರಗಳನ್ನು ರಕ್ಷಿಸಿದರೆ, ಶಾಸ್ತ್ರಗಳೇ ನಮ್ಮನ್ನು ರಕ್ಷಿಸುತ್ತವೆ.
🙏🙏🙏
ReplyDeleteಪರಮ ಗುರುಗಳಿಗೆ ಪ್ರಣಾಮಗಳನ್ನು ಸಲ್ಲಿಸುತ್ತಾ ವೇದಾಂತ ಪರಿಚಯ ಭಾಗ ಎರಡರಲ್ಲಿ ಶಾಸ್ತ್ರಗಳ ಬಗ್ಗೆ ನೀಡಿರುವ ಪರಿಚಯಾತ್ಮಕ ಲೇಖನ ಶಾಸ್ತ್ರ ಶಬ್ದದ ವ್ಯುತ್ಪತ್ತಿಯಿಂದ ಆರಂಭಿಸಿ ಪುರಾಣ ಉಪಪುರಾಣ ಭಾಷ್ಶಗಳವರೆಗಿನ ಶಾಸ್ತ್ರಾಂತರ್ಗತ ಸರ್ವ ವಿಚಾರಗಳ ಸಾಗರ ಸಂಗಮವಾಗಿ ಶಾಸ್ತ್ರೋರಕ್ಷತಿ ರಕ್ಷಿತ: ಎಂಬ ಶಾಸ್ತ್ರ ನಿರ್ಣಯದವರೆಗೆ ಮೂಡಿಬಂದಿರುವ ಶೈಕ್ಷಣಿಕ ಮಹತ್ವವನ್ನು ಒಳಗೊಂಡ ಲೇಖನ ಅತ್ಯದ್ಭುತವಾಗಿ ಮೂಡಿಬಂದಿದೆ
ReplyDeleteಹಾಗೂ ಜಿಜ್ಞಾಸು ಮತ್ತು ಸಾಧಕರಿಗೆ ನೇರವಾಗಿ ಗುರು ಮುಖೇನ ಶಿಕ್ಷಣ ಪಡೆಯುತ್ತಿರುವಂತೆ ಭಾಸಿಸುವುದರಲ್ಲಿ ಸಂದೇಹವೇ ಇಲ್ಲ.
ಇನ್ನು ವ್ಯಾಸಂಗ ಪಡೆಯುವ ನಾವೆಲ್ಲಾ ಶಿಷ್ಯ ಸಮೂಹ ಹಾಗೂ ಪಾಠಕರಿಗೆ ತಾವು ನೀಡುವ ಶಿಕ್ಷಣದ ಪದ್ಧತಿ ಹೇಗಿರುತ್ತದೆ ಎಂದರೆ ಅದು ಹಂತ ಹಂತವಾಗಿ ತಾಯಿ ಮಗುವಿನ ಕೈ ಹಿಡಿದು ನಡೆಸುವಂತೆ ಅಧ್ಯಾತ್ಮ ಹಾದಿಯಲ್ಲಿ ಸಾಧಕರನ್ನು ಸಾವಿರ ತಾಯಂದಿರಿಗೆ ಸಮನಾದ ಶಾಸ್ತ್ರದಂತೆ ಕೈ ಹಿಡಿದು ಮುನ್ನಡೆಸುತ್ತಾ ಭ್ರಮರ ಕೀಟ ನ್ಯಾಯದಂತೆ ಕೀಟವನ್ನು ಭ್ರಮರವನ್ನಾಗಿಸುವ ಗುಙ್ಗುಡುವ ಶಬ್ದಬ್ರಹ್ಮನ ನಾದದ ವಾಕ್ಸವಿತ್ರಿಯ ಪುರುಷ ಸರಸ್ವತಿಯ ವಾಣಿಯಿಂದ ಯಾರು ತಾನೇ ಧನ್ಯರಾಗದಿರಲು ಸಾಧ್ಯ?
ತಮ್ಮ ಉಪದೇಶಾಮೃತದಿಂದ
ಧನ್ಯರಾಗುತ್ತಿರುವರೆಲ್ಲರೂ ಧನ್ಯರೇ ಎಂಬುದಾಗಿ ಅರಿಕೆ ಮಾಡಿಕೊಳ್ಳುತ್ತಾ ಹೃತ್ಪೂರ್ವಕ ಪ್ರಣಾಮಗಳು
ಸರ್ವಂ ಶ್ರೀ ಸದ್ಗುರು ಚರಣಾರವಿಂದಾರ್ಪಣಮಸ್ತು
ಜೈ ಶ್ರೀ ರಾಮ್ ಜೈ ಗುರುದೇವ್
ಜೈ ಜೈ ಗುರುದೇವ್
Fantastic rendering sir, 👍👍
ReplyDeleteVery nearly explained about shastra, significance and different types,
ReplyDeleteVery nice to revise what we learnt in courses also sir🙏🙏
Can I get the English version of the write up.🙏🙏
ReplyDeleteShall try to bring those in days to come. Thank you very much
DeleteVery much interesting matters, you explained it very well as usual
ReplyDeleteOm sri gurubhyo namaha very well explained guruji 🙏🙏🙏
ReplyDeleteಪ್ರತಿಯೊಂದು ಶಬ್ದವೂ ಸಹಾ ಅತ್ಯಂತ ತೂಕದ ಹಾಗೂ ಸ್ವವಿವರಣೆ ಹೊಂದಿದ ಶಬ್ದಗಳೇ ಆಗಿದ್ದು ಬಹಳ ಚೆನ್ನಾಗಿ ಮೂಡಿಬಂದಿದೆ ಹೃತ್ಪೂರ್ವಕ ಅಭಿನಂದನೆಗಳು ಇಂತಹ ಅಂಶಗಳನ್ನು ತಿಳಿಸಿದ್ದಕ್ಕೆ
ReplyDeleteಎಲ್ಲರು ತಿಳಿಯುವ ಬೇಕಾದ ವಿಷಯ.ಆಧ್ಯಾತ್ಮದ ಬುನಾದಿ.ಬಹಳ ಆಸಕ್ತ ವಿಷಯವನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವ ಹಾಗೆ ತಿಳಿಸಿರುವಿರಿ. ನಮ್ಮ ಪೂರ್ವಜರ ಸಾಧನೆಯಿಂದ ನಮಗೆ ಸಿಕ್ಕಿತ್ತು,ಖಂಡಿತ ನಾವು ಈ ಶಾಸ್ತ್ರಗಳ ಅಧ್ಯಯನ ಮಾಡುವುದರೊಂದಿಗೆ, ತಾವು ತಿಳಿಸಿದ ಹಾಗೆ ಅದೇ ಮಾರ್ಗದರ್ಶನದಂತೆ ನಾವು ಜೀವನ ನಡೆಸುವ ಪ್ರಯತ್ನ ಮಾಡಿದರೆ ನಮ್ಮ ಮಕ್ಕಳಿಗೆ ಪರಿಚಯ ವಾಗುತ್ತೆ. ಅನಂತ ಧನ್ಯವಾದಗಳು.
ReplyDeleteಪ್ರಮೋದ್ ಗುರುಜಿಯವರ ಬೋಧನೆ ತುಂಬಾ ಸರಳ ಮತ್ತು ಹೃದಯಸ್ಪರ್ಶಿಯಾಗಿದೆ.
ReplyDeleteಅವರು ಅಧ್ಯಾತ್ಮ ವಿಷಯಗಳನ್ನು ಒಮ್ಮೆಲೆ ಹೇಳುವುದಿಲ್ಲ.
ಹಂತ ಹಂತವಾಗಿ,
ತಾಯಿ ಮಗುವಿನ ಕೈ ಹಿಡಿದು ನಡೆಸುವಂತೆ,
ಸಾಧಕರನ್ನು ನಿಧಾನವಾಗಿ ಮುನ್ನಡೆಸುತ್ತಾರೆ.
ಅವರ ಶಿಕ್ಷಣದಲ್ಲಿ ಸಹನೆ, ಮಮತೆ ಮತ್ತು ಸ್ಪಷ್ಟತೆ ಇದೆ.
ಶಂಕೆಗಳನ್ನು ದೂರಮಾಡಿ, ಸರಿಯಾದ ದಾರಿಯಲ್ಲಿ ನಡೆಸುತ್ತಾರೆ.
ಶಾಸ್ತ್ರಗಳು ಜೀವನದ ದಾರಿದೀಪ, ವೇದಗಳು ಮೂಲ ದಿವ್ಯ ಜ್ಞಾನ, ಉಪಗ್ರಂಥಗಳು ಅರ್ಥೈಸುವ ಸಹಾಯಕ ಗ್ರಂಥಗಳು, ಇತಿಹಾಸ ಮತ್ತು ಪುರಾಣಗಳು ಕಥೆಗಳ ಮೂಲಕ ಧರ್ಮ ಮತ್ತು ಮೌಲ್ಯಬೋಧನೆ.
ಇದು ಕೇವಲ ಪಾಠವಲ್ಲ —
ಇದು ಜೀವನ ಪರಿವರ್ತನೆಯ ಪಥ.
ಇಂತಹ ಸೌಮ್ಯ ಮತ್ತು ಶಾಸ್ತ್ರಾಧಾರಿತ ಮಾರ್ಗದರ್ಶನ ನೀಡುತ್ತಿರುವ
ಪ್ರಮೋದ್ ಗುರುಜಿಯವರಿಗೆ ಧನ್ಯವಾದಗಳು ಮತ್ತು ನಮಸ್ಕಾರಗಳು. 🙏