ಜನಕನು ಆಯೋಜಿಸಿದ್ದ ಯಜ್ಞದಲ್ಲಿ "ಬ್ರಹ್ಮವಿತ್ತಮ ಯಾರು?", ಎಂಬ ಪರೀಕ್ಷೆಯಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳು ದಿಗ್ವಿಜಯ ಸಾಧಿಸಿದ ರೋಚಕ ಕಥೆ ನಮಗೆಲ್ಲಾ ತಿಳಿದೇ ಇದೆ(ಹಿಂದಿನ ಅಂಕಣವನ್ನು ನೋಡಿ). ಜನಕನು ಈ ಪರೀಕ್ಷೆಯನ್ನು ಆಯೋಜಿಸಿದ ಉದ್ದೇಶವೇ ಬ್ರಹ್ಮಜ್ಞಾನಿ ಯಾರೆಂದು ತಿಳಿದು, ಅವರನ್ನು ಅರಸಿ, ಬ್ರಹ್ಮಜ್ಞಾನದ ವಿಚಾರವಾಗಿ ಉಪದೇಶ ಪಡೆಯುವುದಾಗಿತ್ತು. ಯಾಜ್ಞವಲ್ಕ್ಯರ ವಿಜಯದ ನಂತರ ಜನಕ - ಯಾಜ್ಞವಲ್ಕ್ಯರ ನಡುವೆ ಸಂಭಾಷಣೆಗಳು ಹೆಚ್ಚುತ್ತಾ, ಸಂಬಂಧ ಗಾಢವಾಗುತ್ತಾ ಬಂತು. ಅವರ ನಡುವೆ ನಡೆದ ಸಂವಾದಗಳು ಹಲವು ವೈದಿಕ ಹಾಗೂ ಜಾನಪದ ಗ್ರಂಥಗಳಲ್ಲಿ ದಾಖಲಾಗಿವೆ.
ಒಮ್ಮೆ
ಯಾಜ್ಞವಲ್ಕ್ಯ ಮಹರ್ಷಿಗಳು ಜನಕನ ಸಾಮ್ರಾಜ್ಯಕ್ಕೆ ಆಗಮಿಸಿ,
ರಾಜನೊಡನೆ ಉಭಯಕುಶಲೋಪರಿ ವಿಚಾರ ವಿನಿಮಯವಾದ ನಂತರ, ಜನಕನು ಮಾಡುತ್ತಿರುವ ಉಪಾಸನೆಯ ಬಗ್ಗೆ ತಿಳಿಯಲು ಇಚ್ಚಿಸುತ್ತಾರೆ. ಅದಕ್ಕುತ್ತರವಾಗಿ, ಜನಕನು ತಾನು ಹಿಂದಿನ ಆಚಾರ್ಯರಿಂದ
ಕಲಿತು ಅನುಷ್ಠಾನಿಸುತ್ತಿರುವ ವೈಶ್ವಾನರ ವಿದ್ಯೆ / ಉಪಾಸನಾ ವಿಚಾರವನ್ನು ಮತ್ತು ಅದರ ಸ್ವರೂಪವನ್ನು ವಿಷದವಾಗಿ
ತಿಳಿಸುತ್ತಾನೆ. ಮಹರ್ಷಿಗಳು, "ರಾಜ ನಿನ್ನ ಅಧ್ಯಯನಶೀಲತೆಯನ್ನು
ಕಂಡು ಆನಂದಭರಿತನಾಗಿದ್ದೇನೆ ಹಾಗೂ ನಿನಗೊಂದು ವರವನ್ನು ಕೊಡಲು ಬಯಸುತ್ತೇನೆ. ನಿನಗೇನು ಬೇಕು ಕೇಳು?", ಎಂದು
ಹೇಳುತ್ತಾರೆ. ಪ್ರಸನ್ನಚಿತ್ತನಾಗಿ ಜನಕಮಹಾರಾಜ, "ಮಹರ್ಷಿಗಳೇ! ನಾನು ಪ್ರಶ್ನಕಾಮನಾಗಿದ್ದೇನೆ. ಹಾಗಾಗಿ, ನಾನು ಯಾವ ಷರತ್ತುಗಳಿಲ್ಲದೆ,
ಯಾವ ಸಂದರ್ಭದಲ್ಲೇ ಆಗಲಿ, ನಿಮ್ಮಲ್ಲಿ ಯಾವ ಪ್ರಶ್ನೆಯನ್ನು ಬೇಕಾದರೂ
ಕೇಳಬಹುದು ಎಂಬ ವರವನ್ನು ನೀಡಿ",
ಎನ್ನಲು ಯಾಜ್ಞವಲ್ಕ್ಯರು, "ತಥಾಸ್ತು", ಎಂದು ಸಂತೋಷದಿಂದ ಒಪ್ಪುತ್ತಾರೆ.
ಜನಕ
: "ಕಿಂ ಜ್ಯೋತಿ: ಅಯಂ ಪುರುಷ:", ಎಂದರೆ,
ಯಾವ ಬೆಳಕಿನ ಸಹಾಯದಿಂದ ವ್ಯಕ್ತಿಯು ಎಲ್ಲವನ್ನೂ ಅರಿಯುತ್ತಾನೆ?
ಯಾಜ್ಞವಲ್ಕ್ಯ:
ರಾಜ! ನಿನಗಿದು ತಿಳಿಯದೆ? ಸೂರ್ಯನ ಬೆಳಕಿನಿಂದ ಜೀವಿಗಳೆಲ್ಲವೂ ಎಚ್ಚರವಾಗುತ್ತವೆ, ಸೂರ್ಯನ ಬೆಳಕಿನ ಸಹಾಯದಿಂದ ಜೀವಿಗಳೆಲ್ಲವೂ ಚಲಿಸುತ್ತವೆ ಹಾಗೂ ಕಾರ್ಯ ನಿರ್ವಹಿಸುತ್ತವೆ.
ಜನಕ
: ಸರಿ. ಸೂರ್ಯನು ಅಸ್ತಂಗತನಾಗಿದ್ದಾಗ, ಯಾವ ಬೆಳಕಿನ ಸಹಾಯದಿಂದ
ವ್ಯಕ್ತಿಯು ಎಲ್ಲವನ್ನೂ ಅರಿಯುತ್ತಾನೆ?
ಯಾಜ್ಞವಲ್ಕ್ಯ:
ಚಂದ್ರನ ಬೆಳಕಿನ ಸಹಾಯದಿಂದ
ಜನಕ
: ಸೂರ್ಯನೂ ಅಸ್ತಂಗತನಾಗಿ, ಚಂದ್ರನೂ ಇಲ್ಲದ ರಾತ್ರಿಯಲ್ಲಿ ವ್ಯಕ್ತಿ ಯಾವ ಬೆಳಕಿನ ಸಹಾಯದಲ್ಲಿ
ಎಲ್ಲವನ್ನೂ ಅರಿಯುತ್ತಾನೆ?
ಯಾಜ್ಞವಲ್ಕ್ಯ:
ಅಗ್ನಿಯ ಬೆಳಕಿನ ಸಹಾಯದಿಂದ
ಜನಕ
: ಸೂರ್ಯ, ಚಂದ್ರ ಮತ್ತು ಅಗ್ನಿ ಮೂರೂ ಇಲ್ಲದಿದ್ದಾಗ?
ಯಾಜ್ಞವಲ್ಕ್ಯ:
ವಾಕ್ ಇಂದ್ರಿಯ ಎಂದರೆ ಶಬ್ದವನ್ನು ಉಪಯೋಗಿಸಿಕೊಂಡು ಕತ್ತಲಿನಲ್ಲೂ ತಿಳಿದು ವ್ಯವಹರಿಸಬಹುದು
ಜನಕ
: ಯಾವ ವಸ್ತು ಅಥವಾ ಇಂದ್ರಿಯಗಳ ಸಹಾಯವೂ
ಇಲ್ಲದಿದ್ದಾಗ, ಯಾವ ಬೆಳಕಿನ ಆಧಾರದ
ಮೇಲೆ ಜೀವಿ ಎಲ್ಲವನ್ನೂ ಅರಿಯುತ್ತಾನೆ?
ಯಾಜ್ಞವಲ್ಕ್ಯರು
(ಮನಸ್ಸಿನಲ್ಲಿ): ನನಗೆ ತಿಳಿದಿತ್ತು. ನೀನು
ಇಂತಹ ಪ್ರಶ್ನೆಯನ್ನೇ ಕೇಳುವೆ ಎಂದು. ಶಿಷ್ಯನನ್ನು ಪ್ರೋತ್ಸಾಹಿಸುವ ಧ್ವನಿಯಲ್ಲಿ ಮುಗುಳ್ನಗುತ್ತಾ, ಹೀಗೆ ಹೇಳುತ್ತಾರೆ -
"ರಾಜ!
ಯಾವ ವಸ್ತುಗಳೂ, ಸರ್ವ ಇಂದ್ರಿಯಗಳ ವ್ಯಾಪಾರ
ಇಲ್ಲದಿದ್ದಾಗಲೂ, ಜೀವ ತನ್ನ ಅರಿವನ್ನು
ಪಡೆಯುವುದು ಆತ್ಮಚೈತನ್ಯದ ಇರುವಿಕೆಯಿಂದಲೇ. ಎಲ್ಲಾ ಇಂದ್ರಿಯಗಳೂ ಕೆಲಸ ಮಾಡುತ್ತಿರುವುದು ಈ
ಚೈತನ್ಯದ ಪ್ರಭಾವದಿಂದಲೇ." (ತಮೇವ ಭಾಂತಂ ಅನುಭಾತಿ
ಸರ್ವಂ...)
ಜನಕ
: ಮಹರ್ಷಿಗಳೇ! ಜ್ಯೋತಿಗಳ ಜ್ಯೋತಿಯಾದ ಈ ಆತ್ಮತತ್ವವನ್ನು ವಿಷದವಾಗಿ
ತಿಳಿಸಿ.
ಯಾಜ್ಞವಲ್ಕ್ಯ:
ಈ ಆತ್ಮಜ್ಯೋತಿಯೇ ಕಣ್ಣಿನೊಂದಿಗೆ ಸೇರಿ ಸರ್ವವನ್ನೂ ದೃಶ್ಯವಾಗಿಸುತ್ತದೆ,
ಆದರೆ ಈ ಆತ್ಮವು ಎಂದೂ
ದೃಶ್ಯವಾಗುವುದಿಲ್ಲ. ಶ್ರೋತ್ರೇಂದ್ರಿಯದೊಂದಿಗೆ ಸೇರಿ ಸರ್ವವನ್ನೂ ಆಲಿಸುತ್ತದೆ,
ಆದರೆ ಎಂದಿಗೂ ಶ್ರೋತ್ರೇಂದ್ರಿಯಕ್ಕೆ ವಿಷಯವಾಗುವುದಿಲ್ಲ..... (ಮುಂದುವರಿಸುತ್ತಾರೆ)..
ಹೀಗೆ
ಆತ್ಮಜ್ಯೋತಿಯ ಪ್ರಕಾಶ ಯಾಜ್ಞವಲ್ಕ್ಯ ಮಹರ್ಷಿಗಳಿಂದ ಜನಕನಿಗೆ ತೋರಿಸಲ್ಪಟ್ಟಿತು ಹಾಗೂ ಕೊನೆಯಲ್ಲಿ ಆತ್ಮಜ್ಞಾನವನ್ನು
ಪಡೆದ ಜನಕನನ್ನು ಕಂಡು, "ಜನಕ! ನೀನು ಪರಿಪೂರ್ಣನಾಗಿ,
ಅಭಯವನ್ನು ಪಡೆದಿರುವೆ", ಎಂಬ ಗುರು ಆಶೀರ್ವಾದದಿಂದ
ಈ ಅದ್ಭುತವಾದ ಕಥೆ ಮುಕ್ತಾಯವಾಗುತ್ತದೆ.
ಈ ಕಥೆಯಿಂದ ನಾವು ಕಲಿಯಬಹುದಾದ ಕೆಲವು
ಅಂಶಗಳು -
- ರಾಜನಾಗಿಯೂ ತನ್ನೆಲ್ಲಾ ಕಾರ್ಯಕಲಾಪಗಳ ನಡುವೆ ಅಧ್ಯಾತ್ಮ ವಿಷಯಕ್ಕೆ ಸಮಯ ಮಾಡಿಕೊಳ್ಳಬಹುದಾದರೆ, ನಾವು ಆಧ್ಯಾತ್ಮವಿದ್ಯೆಗೆ ಸಮಯಮಾಡಿಕೊಳ್ಳದಿರಲು ಸಾಧ್ಯವೇ!
- ಜನಕನು ತನ್ನ ಮುಂಚಿನ ಆಚಾರ್ಯರಿಂದ ಕಲಿತ ವಿದ್ಯೆಯಲ್ಲಿ ಹೊಂದಿದ್ದ ಪರಿಣತಿ ಅನುಕರಣೀಯ
- ಯಾಜ್ಞವಲ್ಕ್ಯರು ವರವನ್ನು ಕರುಣಿಸಿದಾಗ, ಬೇರೆ ಯಾವ ಬಯಕೆಯನ್ನೂ ಬೇಡದೆ, ಪ್ರಶ್ನಕಾಮನೆಯನ್ನು ಬೇಡಿದ್ದು ಅನುಪಮ
- ಮಹರ್ಷಿಗಳು ತಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ವಿಚಾರದ ಸಂವಾದ ನಡೆಸುವುದು ಬೇಡವೆಂದು ಯೋಜನೆ ಮಾಡಿದ್ದರೂ, ಶಿಷ್ಯನ ಜಿಜ್ಞಾಸುತ್ವಕ್ಕೆ ಮೆಚ್ಚಿ, ಪ್ರಶ್ನೆಗೆ ಉತ್ತರಿಸಿದ್ದು ಗುರುಕಾರುಣ್ಯಕ್ಕೆ ಹಿಡಿದ ಕನ್ನಡಿ
- ಸುಲಭವಾಗಿ, ಸ್ಥೂಲವಾಗಿ ತೋರುವಂತಹ ಪ್ರಶ್ನೆಯಿಂದ ವಿಚಾರವನ್ನು ಪ್ರಾರಂಭಿಸಿ, ಸೂಕ್ಷ್ಮಾತಿಸೂಕ್ಷ್ಮ ಆತ್ಮಜ್ಞಾನದವರೆಗೆ ತಲುಪುವತನಕ ತಿಳಿಯುವ ಹಂಬಲವನ್ನು ತೋರಿದ ಜನಕ ನಮಗೆಲ್ಲಾ ಆದರ್ಶವಾಗಬೇಕು
- ಗುರುಗಳ ಆಶೀರ್ವಾದದಂತೆ ಆತ್ಮಜ್ಞಾನದ ಫಲ ಅದ್ವೈತದ ಅಭಯವೇ ಆಗಿದೆ
- ಸ್ವಯಂಜ್ಯೋತಿ ಬ್ರಾಹ್ಮಣದ ವಿಚಾರವನ್ನೇ ಸುಲಭವಾಗಿ ಆದಿ ಶಂಕರರು, ತಮ್ಮ ಏಕಶ್ಲೋಕಿಯಲ್ಲಿ ಹೀಗೆ ವಿವರಿಸುತ್ತಾರೆ.
किं
ज्योतिस्तव भानुमानहनि मे रात्रिौ प्रदीपादिकम्
स्यादेवं
रविदीपदर्शनविधौ किं ज्योतिराख्याहि मे।
चक्षुस्तस्य
निमिलनादिसमये किं दीर्घयो दर्शने
किं
तत्राहमतो भवन परमकं ज्योतिस्तदस्मि
प्रभो॥
No comments:
Post a Comment