🔍 Search This Blog

🌍 Translate

ಭಜಗೋವಿಂದಂ - ಶ್ಲೋಕ - 12 (Bhajagovindam - Sloka 12)

ಭಜಗೋವಿಂದಮ್ ಗ್ರಂಥದಲ್ಲಿ ಆದಿ ಶಂಕರಾಚಾರ್ಯರು ಸಾಧಕರಲ್ಲಿ ಅಡಗಿರುವ ಪ್ರತಿಯೊಂದು ತಪ್ಪು ತಿಳುವಳಿಕೆಗಳನ್ನು ಮತ್ತು ಮೋಹಗಳನ್ನು ಮುದ್ಗರದಿಂದ ಪ್ರಹರಿಸಿ ತುಂಡುತುಂಡು ಮಾಡುತ್ತಿದ್ದಾರೆ. ಧನ-ಜನ-ಯೌವ್ವನದ ಗರ್ವಪಡದೆ, ಮಾಯಾಮಯವಾದ ಜಗತ್ತಿಗೆ ಅಂಟಿಕೊಳ್ಳದೆ, ಬ್ರಹ್ಮಜ್ಞಾನವನ್ನು ಸಂಪಾದಿಸಿಕೊಳ್ಳಬೇಕೆಂದು ಹಿಂದಿನ ಶ್ಲೋಕದಲ್ಲಿ ಉಪದೇಶಿಸಿದ್ದರು. ತಮ್ಮ ಉಪದೇಶದ ಉಪಸಂಹಾರವೆಂಬಂತೆ ಪ್ರಸ್ತುತ ಶ್ಲೋಕವನ್ನು ಹೇಳುತ್ತಿದ್ದಾರೆ.

ದಿನಯಾಮಿನ್ಯೌ ಸಾಯಂ ಪ್ರಾತಃ

ಶಿಶಿರವಸಂತೌ ಪುನರಾಯಾತಃ

ಕಾಲಃ ಕ್ರೀಡತಿ ಗಚ್ಛತ್ಯಾಯುಃ

ತದಪಿ ಮುಂಚತ್ಯಾಶಾವಾಯುಃ ॥12||

 

ಸಾಮಾನ್ಯವಾಗಿ ಮನುಷ್ಯನ ಪ್ರವೃತ್ತಿ ಹೇಗೆಂದರೆ, ತನ್ನ ಬಳಿಯಲ್ಲಿರುವ ವಸ್ತು ಬಿಟ್ಟು ಹೋಗುವವರೆಗೂ ಅದಕ್ಕೆ ಅಂಟಿಕೊಂಡಿರುವುದು ಮತ್ತು ವಸ್ತು ಕೈತಪ್ಪಿಹೋದನಂತರ ಗೋಳಾಡುತ್ತಾ ಮುಂದೇನು? ಎಂದು ನರಳುವುದು

 ಮನೆಯಲ್ಲಿ ವಿದ್ಯುತ್ ವ್ಯತ್ಯಯವನ್ನು ಮುಂದಾಲೋಚಿಸಿ UPS (Uninterrupted Power Supply) ಅಳವಡಿಸುವಂತೆ, ಜೀವನಕ್ಕೂ ಒಂದು UPS (Uninterrupted Peace Supply) ಬೇಕೆಂದು ಅನ್ನಿಸುವುದಿಲ್ಲವೇ? ಆತ್ಯಂತಿಕ ಶಾಂತಿ, ಆನಂದದ ಸ್ವರೂಪವೇ ನಾವಾಗಿದ್ದರೂ, ಅದನ್ನು ತಿಳಿಯದೇ, ಪ್ರಾಪಂಚಿಕ ವಸ್ತುಗಳಲ್ಲಿ ಆನಂದವನ್ನು ಹುಡುಕುತ್ತಿರುವ ನಾವು ಆಧ್ಯಾತ್ಮಿಕವಾಗಿ ತಿರುಕರೇ ಸರಿ! ಇರುವ ಸಮಯವನ್ನು ಆಧ್ಯಾತ್ಮಿಕ ಸಾಧನೆಗೆ ಹಚ್ಚಿ, ಜೀವನಸಾರ್ಥಕ್ಯ ಮಾಡಿಕೊಳ್ಳಬೇಕೆಂದು ತಿಳಿಸಲು ಕಾಲದ ಮಹತ್ವವನ್ನು ಆಚಾರ್ಯರು ಇಲ್ಲಿ ತಿಳಿಸುತ್ತಿದ್ದಾರೆ.

 

ದಿನಯಾಮಿನ್ಯೌ ಸಾಯಂ ಪ್ರಾತಃ - ದಿನ ಎಂದರೆ ಹಗಲು, ಯಾಮಿನೀ ಎಂದರೆ ರಾತ್ರಿ, ಸಾಯಂ ಎಂದರೆ ಸಂಜೆ ಮತ್ತು ಪ್ರಾತಃ ಎಂದರೆ ಬೆಳಗ್ಗೆ. ದಿನಗಳು ಎಷ್ಟು ವೇಗವಾಗಿ ನಮ್ಮ ಕಣ್ಣಮುಂದೆ ಕಳೆದುಹೋಗುತ್ತಿದೆ ಎಂದು ಗಮನಿಸಲು ಉಪದೇಶ. ಎಷ್ಟೋ ಬಾರಿ ದಿನಗಳುರುಳಿದ್ದು ನಮ್ಮ ಪರಿವೆಗೆ ಬರುವುದೇ ಇಲ್ಲ. ಮುಂದೆ ಯಾವಾಗಲೋ ಯೋಚಿಸಿದಾಗ, 'ಅಯ್ಯೋ! ಸಮಯ ವ್ಯರ್ಥ ಮಾಡಿದೆನಲ್ಲ! ಹೀಗೇಕಾಯಿತು?' ಎಂದು ಪಶ್ಚಾತ್ತಾಪ ಪಡುವವರೇ ಹೆಚ್ಚು. ಈಗಂತೂ ಹಗಲು ರಾತ್ರಿ ಎನ್ನದೇ ದುಡಿಯುತ್ತಾ ಇರುವ ಬಹುಪಾಲು ಜನರ ದೇಹೇಂದ್ರಿಯಗಳೆಲ್ಲಾ weakened(ಜರ್ಜರಿತವಾಗಿ),  weekend ಬರಲು ಹಾತೊರೆಯುವುದೇ ಜೀವನವಾಗಿಬಿಟ್ಟಿದೆ. ವಾರಾಂತ್ಯದಲ್ಲಿ ಮೋಜು-ಮಸ್ತಿಯಲ್ಲೋ, ನಿದ್ರಾದಿಗಳಲ್ಲೋ ಸಮಯ ವ್ಯಯವಾಗಿ ಜೀವನವೇ ಕಳೆದುಹೋಗುತ್ತಿದೆ. "ಸೋರುತಿಹುದು ಮನೆಯ ಮಾಳಿಗೆ.. ಅಜ್ಞಾನದಿಂದ.." ಎಂಬ ಶಿಶುನಾಳ ಶರೀಫರ ತತ್ವಪದ ಸ್ಮರಣಾರ್ಹ.


 ಶಿಶಿರವಸಂತೌ ಪುನರಾಯಾತಃ - ಶಿಶಿರ ವಸಂತ ಋತುಗಳು ಒಂದಾದನಂತರ ಮತ್ತೊಂದು ಬಂದುಹೋಗುತ್ತಿವೆ. ಭಾರತೀಯ ಪಂಚಾಂಗ ಪದ್ಧತಿಗನುಸಾರ, ಕಾಲವನ್ನು ಅನುಕೂಲಕ್ಕಾಗಿ ಹಲವಾರು ಪರಿಮಾಣಗಳಾದ - ಕ್ಷಣ, ಮುಹೂರ್ತ, ಯಾಮ, ತಿಥಿ, ಪಕ್ಷ, ಮಾಸ, ಋತು, ಆಯನ, ಸಂವತ್ಸರ, ಯುಗ, ಮನ್ವಂತರ, ಕಲ್ಪ ಎಂದು ವಿಂಗಡಣೆ ಮಾಡಲಾಗಿದೆ . ಶಿಶಿರ (ಚಳಿಗಾಲ), ವಸಂತ (ಬೇಸಿಗೆಗಾಲ) ಎಂದು ಶ್ಲೋಕದಲ್ಲಿ ಉಪಯೋಗಿಸುರುವುದು ಉಪಲಕ್ಷಣವಾಗಿ. ಇಲ್ಲಿ ಎಲ್ಲಾ ಋತುಗಳನ್ನೂ ಪರಿಗಣಿಸಬೇಕು. ಎಷ್ಟೋ ಬಾರಿ ತಿಂಗಳುಗಳು ಉರುಳಿ ವರ್ಷಗಳಾಗಿರುತ್ತವೆ. ಆದರೆ ನಾವು ಮಾತ್ರ ಮೈಮರೆತುಬಿಟ್ಟಿರುತ್ತೇವೆ. ನಮ್ಮ ಬಂಧುಗಳ ಮಕ್ಕಳನ್ನೋ, ಸ್ನೇಹಿತರನ್ನೋ ನೋಡಿದಾಗ ನಾವೇ, "ನಿನ್ನೆಯಷ್ಟೇ ನಿಮ್ಮ ಮಕ್ಕಳನ್ನು ನೋಡಿದಂತಿದೆ. ಇಷ್ಟು ಬೇಗ ವರ್ಷಗಳು ಕಳೆದುಹೋಯಿತಾ?" ಎಂದು ಆಶ್ಚರ್ಯಪಟ್ಟಿಲ್ಲವೇ! ಪರೀಕ್ಷೆಗೆ ಇನ್ನೂ ಬೇಕಾದಷ್ಟು ಸಮಯ ಇದೆ ಎಂದು, ಸ್ವಲ್ಪ ಆರಾಮಾಗಿದ್ದ ವಿದ್ಯಾರ್ಥಿಗಳು, "ನಾನೇನು ಮಾಡಿದೆ? ಪರೀಕ್ಷೆ ಮುಂದಿನವಾರವೇ ಬಂದುಬಿಟ್ಟಿತಲ್ಲಾ" ಎಂದು ಗಾಬರಿಯಿಂದ ಹೆದರುವುದನ್ನು ಕಂಡಿಲ್ಲವೇ

 ಶಿಶಿರ ವಸಂತ ಎಂಬುದು ಶೀತ-ಉಷ್ಣವೆಂಬ ದ್ವಂದ್ವಗಳನ್ನು ಸೂಚಿಸುವ ಮತ್ತೊಂದು ಅರ್ಥವೆಂದೂ ಗ್ರಹಿಸಬಹುದು. ಜೀವನವೆಂದರೆ ಶೀತ-ಉಷ್ಣ, ಜಯ-ಅಪಜಯ, ಮಾನ-ಅಪಮಾನ, ಲಾಭ-ನಷ್ಟಗಳ, ಸುಖ-ದುಃಖಾದಿ ಅನುಭವಗಳ ಪ್ರವಾಹವೇ ಆಗಿದೆ. ಹೇಗೆ ಕಾಲಗಳು ಬದಲಾಗುತ್ತವೋ, ಹಾಗೇ ಜೀವನದ ಪರಿಸ್ಥಿತಿಗಳೂ ಬದಲಾಗುತ್ತವೆ ಎಂಬುದು ಸಾರ್ವಕಾಲಿಕ ಸತ್ಯ. ಆದ್ದರಿಂದ ಅನುಕೂಲ ಪರಿಸ್ಥಿತಿಯಲ್ಲಿ ಹೆಚ್ಚು ಹಿಗ್ಗದೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ತೀರಾ ಕುಗ್ಗದೆ ಜೀವನವನ್ನು ಸಮತ್ವದಿಂದ ನಡೆಸಬೇಕೆಂಬುದು ಗೀತಾಚಾರ್ಯನ ಉಪದೇಶ.

 

 ಕಾಲಃ ಕ್ರೀಡತಿ ಗಚ್ಛತ್ಯಾಯುಃ - ನಮ್ಮ ಜೀವನದ ಆಯಸ್ಸು ಸವೆಸುವುದು ಕಾಲದ ಆಟವೇ ಸರಿ! 'Time and tide waits for none', ಎನ್ನುವಂತೆ ಕಾಲ ಯಾರಿಗೂ ಕಾಯುವುದಿಲ್ಲ ಹಾಗೇ ಕಳೆದ ಕಾಲ ಎಂದಿಗೂ ಮತ್ತೆ ಮರಳಿ ಬರುವುದಿಲ್ಲ. ಸಾಮಾನ್ಯರು ಜೀವನದಲ್ಲಿ ಸಮಯವನ್ನು ವ್ಯಯಮಾಡುವ ವಿಚಾರವನ್ನು ಭರ್ತೃಹರಿ ತನ್ನ ವೈರಾಗ್ಯ ಶತಕದಲ್ಲಿ

ಆದಿತ್ಯಸ್ಯ ಗತಾಗತೈರಹರಹಃ ಸಂಕ್ಷೀಯತೇ ಜೀವಿತಂ 

ವ್ಯಾಪಾರೈರ್ಬಹುಕಾರ್ಯಭಾರಗುರುಭಿಃ ಕಾಲೋ ವಿಜ್ಞಾಯತೇ। 

ದೃಷ್ಟ್ವಾ ಜನ್ಮಜರಾವಿಪತ್ತಿ ಮರಣಂ ತ್ರಾಸಶ್ಚ ನೋಪತ್ಪದ್ಯತೇ 

ಪೀತ್ವಾ ಮೋಹಮಯೀಂ ಪ್ರಮಾದಮದಿರಾಮುನ್ಮತ್ತಭೂತಂ ಜಗತ್ ||

ಮಾನವನ ಜೀವಿತವು ಪ್ರತಿನಿತ್ಯ ಸೂರ್ಯನ ಉದಯಾಸ್ತಮಾನದಿಂದಕ್ಷೀಣಗೊಳ್ಳುತ್ತಿದೆ. ಸಮಯ ಸಾಗುವುದು ಕಾರ್ಯಕಲಾಪಗಳ ವ್ಯವಹಾರದಲ್ಲಿ ತಿಳಿಯದೇ ಹೊಗುತ್ತಿದೆ. ಜನನ​-ಮುಪ್ಪು-ನೋವು-ಸಾವುಗಳನ್ನು ಕಂಡೂ ತ್ರಾಸವುಂಟಾಗದಾಗಿದೆ. ತಪ್ಪುತಿಳಿವಳಿಕೆಗಳೆಂಬ ಮೊಹಮಯವಾದ ಮದಿರೆಯನ್ನು ಕುಡಿದು ಜಗತ್ತು ಉನ್ಮತ್ತವಾಗಿಹೊಗಿದೆ! ಇಂಥಾ ಮೂಢರು ಇಷ್ಟಾಗಿಯೂ ಎಚ್ಚರವಾಗುತ್ತಿಲ್ಲವಲ್ಲ ಎಂದು ಭರ್ತೃಹರಿ ಬೇಸರ ವ್ಯಕ್ತಪಡಿಸುತ್ತಿದ್ದಾನೆ.

 ನಮ್ಮ ಅತ್ಯಲ್ಪ ಜೀವಿತದಲ್ಲಿ ಹೊಟ್ಟೆಪಾಡಿಗಾಗಿ ಮಾಡುವ ಚಾಕರಿ, ನಿದ್ದೆ, ಕಾಡುಹರಟೆ, TV, ಮೊಬೈಲ್ ಬಳಕೆ ಮುಂತಾದ ವಿಷಯಗಳಲ್ಲಿ ಎಷ್ಟು ಸಮಯ ಅನವಶ್ಯಕವಾಗಿ ಪೋಲುಮಾಡುತ್ತಿದ್ದೇವೆಂದು ಒಮ್ಮೆ ಗಮನಿಸಿದರೆ, ನಮಗೇ ಆಶ್ಚರ್ಯ ಮತ್ತು ಖೇದವುಂಟಾಗುವುದರಲ್ಲಿ ಸಂಶಯವಿಲ್ಲ. ಜೀವನದಲ್ಲಿ ಉಳಿದಿರುವ ಸಮಯವನ್ನಾದರೂ ಸಮರ್ಥವಾಗಿ ಉಪಯೋಗಿಸಿಕೊಂಡರೆ ನಮಗೇ ಲಾಭ. ಇಲ್ಲದಿದ್ದರೆ ನಷ್ಟವು ನಮ್ಮ ಹೆಗಲ ಮೇಲೇ ಏರುತ್ತದೆ

 

ತದಪಿ ಮುಂಚತ್ಯಾಶಾವಾಯುಃ - ಇಷ್ಟೆಲ್ಲಾ ತಿಳಿದರೂ ನಮ್ಮ ಮನಸ್ಸಿನಲ್ಲಿ ಏಳುವ ಆಸೆಯೆಂಬ ಬಿರುಗಾಳಿ ಶಾಂತವಾಗುವುದಿಲ್ಲ. ಪ್ರಾಪಂಚಿಕ ವಿಷಯಗಳ ನಶ್ವರತೆ, ಪ್ರಾಪಂಚಿಕ ಗಳಿಕೆಗಳ ಅನಿತ್ಯತೆ, ಕಾಲದ ಆಟವನ್ನು ತಿಳಿದರೂ ಮನಸ್ಸು ರಾಮನನ್ನು ಅರಸುವ ಬದಲು ಕಾಮನನ್ನೇ ಅರಸುತ್ತದಲ್ಲಾ! ಬಯಕೆ ಎಂಬುದು ದೊಡ್ಡ ಬಿರುಗಾಳಿಯಂತೆ ನಮ್ಮ ಮನಸ್ಸನ್ನು ಕದಡುತ್ತದೆ. ರಾಮನನ್ನು ವನವಾಸದಲ್ಲೂ ಹಿಂಬಾಲಿಸಿ ಬಂದ ಸೀತೆ, ಒಂದು ಕ್ಷಣ ರಾಮನನ್ನು ಮರೆತು, ಸ್ವರ್ಣಮೃಗವನ್ನು ಬಯಸಿದ್ದರಿಂದ ಪಟ್ಟ ಕಷ್ಟ ನಮಗೆ ಪಾಠವಾಗಬೇಕಲ್ಲವೇ!?


ಹಾಗಾದರೆ ನಾವೇನು ಮಾಡಬೇಕು? ಸುಭಾಷಿತವೊಂದನ್ನು ನೆನಪಿಸಿಕೊಳ್ಳಬಹುದು.

ಕ್ಷಣಶಃ ಕಣಶಶ್ಚೈವ  ವಿದ್ಯಾಮರ್ಥಂ   ಚಿನ್ತಯೇತ್  |

ಕ್ಷಣತ್ಯಾಗೇ ಕುತೋ ವಿದ್ಯಾ ಕಣತ್ಯಾಗೇ ಕುತೋ ಧನಮ್ || 

ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನೂ ಆತ್ಮವಿದ್ಯೆಯನ್ನು ಗಳಿಸಲು ಮತ್ತು ಪ್ರತಿಯೊಂದು ಕಣವನ್ನೂ ಶ್ರೀಮಂತಿಕೆ ಗಳಿಸಲು ಬಳಸಿಕೊಳ್ಳಬೇಕು. ಇಲ್ಲಿ ಶ್ರೀಮಂತಿಕೆ ಎಂದರೆ ಹೃದಯ ಶ್ರೀಮಂತಿಕೆ ಎಂದು ತಿಳಿದರೆ ಪ್ರಸ್ತುತ ವಿಷಯಕ್ಕೆ ಹೊಂದುತ್ತದೆ.

 

ಸಾರಾಂಶ : ಮಹಾಭಾರತದ ಕೊನೆಯಲ್ಲಿ ಕಾರಣಾಂತರಗಳಿಂದ ಪರೀಕ್ಷಿತನಿಗೆ ಒಂದು ವಾರದಲ್ಲಿ ಮೃತ್ಯು ಸಂಭವಿಸುವುದು ಎಂದು ಶಾಪವಾಗುತ್ತದೆ. ತನ್ನ ಜೀವನದಲ್ಲಿ ಉಳಿದಿರುವ ಒಂದು ವಾರವನ್ನು ಶುಕಮುನಿಗಳಿಂದ ಭಗವಂತನ ಕಥಾಶ್ರವಣ, ಅಧ್ಯಾತ್ಮಜ್ಞಾನ ಸಂಪಾದನೆಗೆ ವಿನಿಯೋಗಿಸಿಕೊಂಡು ಮುಕ್ತನಾದನೆಂದು ಕಥೆ ತಿಳಿಸುತ್ತದೆ. ಪರೀಕ್ಷಿತನಿಗೆ ಒಂದು ವಾರ ಆಯಸ್ಸು ಉಳಿದಿದೆ ಎಂಬುದಾದರೂ ಖಚಿತವಾಗಿತ್ತು. ಆದರೆ ನಮಗೆ ನಾಳೆ ಬದುಕಿರುತ್ತೇವೋ, ಇಲ್ಲವೋ ಎಂಬುದು ತಿಳಿದಿಲ್ಲ. ಹೀಗಿದ್ದರೂ ನಮ್ಮ ಜೀವನದ ಬಹುಪಾಲು ಸಮಯವನ್ನು ಬಯಕೆಗಳನ್ನು ತೀರಿಸಿಕೊಳ್ಳುವೆನೆಂದು ಮರೀಚಿಕೆಯ ಹಿಂದೆ ಓಡುತ್ತೇವಲ್ಲ! ಇದೆಂಥ ವಿಪರ್ಯಾಸ! ಕಾಮನಿರುವೆಡೆ ರಾಮನಿಲ್ಲ. ಅಯೋಧ್ಯೆಯಲ್ಲೇನೋ ಇದೀಗ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಇನ್ನಾದರೂ ನಮ್ಮ ಹೃನ್ಮನಗಳಲ್ಲಿ ಕಾಮದಾಹನ ಮಾಡಿ, ರಾಮನ ಪ್ರತಿಷ್ಠಾಪನೆ ಮಾಡಬೇಕಾಗಿದೆ. ಆದ್ದರಿಂದ, ಉಳಿದಿರುವ ಪ್ರತೀಕ್ಷಣವೂ ಭಗವಂತನನ್ನು ತಿಳಿಯಲು, ಭಗವಂತನನ್ನು ಸ್ಮರಿಸಲು ಮತ್ತು ಭಗವಂತನನ್ನು ಧ್ಯಾನಿಸಲು ಬಳಸೋಣ ಹಾಗೂ ಮೋಹದಿಂದ ಮೋಕ್ಷದೆಡೆಗೆ ಪಯಣಿಸೋಣ - ಭಜಗೋವಿಂದಮ್.




No comments:

Post a Comment