🔍 Search This Blog

🌍 Translate

ವೇದಾಂತ ಪರಿಚಯ - ಭಾಗ 3 - ವರ್ಣಾಶ್ರಮ ವ್ಯವಸ್ಥೆ

ಮಾನವನ ಸಮಗ್ರ ಅಭಿವೃದ್ಧಿಗಾಗಿ ಶಾಸ್ತ್ರಗಳು ಪುರುಷಾರ್ಥಗಳ ಸಾಧನೆಯನ್ನು ‘ವರ್ಣ’ ಮತ್ತು ‘ಆಶ್ರಮ’ ವ್ಯವಸ್ಥೆಗಳ ಮೂಲಕ ಸುವ್ಯವಸ್ಥಿತವಾಗಿ ನಿರ್ದೇಶಿಸಿದೆ. ವೇದಗಳು ಆಶ್ರಮ ವ್ಯವಸ್ಥೆಯನ್ನು ವ್ಯಕ್ತಿಯ ಸ್ವಹಿತಾಸಕ್ತಿ, ಸರ್ವತೋಮುಖ ಬೆಳವಣಿಗೆ ಮತ್ತು ಮನಃಶಾಂತಿಯ ಪ್ರಾಪ್ತಿಗಾಗಿ ನೀಡಿದ್ದರೆ, ವರ್ಣ ವ್ಯವಸ್ಥೆಯನ್ನು ಸಾಮಾಜಿಕ ಸಮತೋಲನ ಮತ್ತು ಸಮೃದ್ಧಿಯ ಉದ್ದೇಶದಿಂದ ನೀಡಿವೆ. ಇವೆರಡರ  ಸಮೂಹವನ್ನು ’ವರ್ಣಾಶ್ರಮ ವ್ಯವಸ್ಥೆ’ ಎನ್ನುತ್ತಾರೆ. ಹಲವರು ತಮ್ಮ ಕುಟುಂಬಕ್ಕಷ್ಟೇ ಸೀಮಿತವಾದ ಸ್ವಾರ್ಥಜೀವನ ನಡೆಸುತ್ತಾ ಸಮಾಜವನ್ನು ನಿರ್ಲಕ್ಷಿಸಿದರೆ, ಇನ್ನೂ ಕೆಲವರು ಸಮಾಜಸೇವೆಯ ಹೆಸರಿನಲ್ಲಿ ತಮ್ಮ ಪರಿವಾರವನ್ನು ಕಡೆಗಣಿಸುತ್ತಾರೆ. ಆದರೆ ಆಶ್ರಮ ಹಾಗು ವರ್ಣ ವ್ಯವಸ್ಥೆಗಳು, ವ್ಯಕ್ತಿಯ ಹಿತ(ವ್ಯಷ್ಟಿ) ಹಾಗು ಸಮಾಜದ ಅಭಿವೃದ್ಧಿಯನ್ನು (ಸಮಷ್ಟಿ) ಸಮತೋಲನಗೊಳಿಸುವ ರಕ್ಷಣಾವ್ಯವಸ್ಥೆಯಾಗಿದೆ.

ವರ್ಣ ವ್ಯವಸ್ಥೆ:

’ವರ್ಣ’ ಎಂದರೆ ಸಮಾಜದಲ್ಲಿನ ವರ್ಗೀಕರಣದಿಂದ ಆದ ಒಂದು ಗುಂಪು. ಶಾಸ್ತ್ರಗಳು ನಿರ್ದೇಶಿಸಿರುವ ವರ್ಣಗಳು ಯಾವುದೇ ದೇಶ ಮತ್ತು ಧರ್ಮಕ್ಕೆ ಸೀಮಿತವಾಗಿರದಿರುವುದು, ಅವುಗಳ ವೈಶಿಷ್ಟ್ಯತೆಯನ್ನು ಸೂಚಿಸುತ್ತದೆ. ಇದರ ಪ್ರಕಾರ ಸಮಾಜವನ್ನು ನಾಲ್ಕು (4) ವರ್ಣಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗು ಶೂದ್ರ. ಈ ವರ್ಣಗಳನ್ನು ಜನ್ಮ, ಗುಣ ಮತ್ತು ಕರ್ಮಗಳೆಂಬ ಮೂರು(3) ದೃಷ್ಟಿಕೋನದಿಂದ ಮಾಡಲಾಗಿದೆ. 


ಜನ್ಮ-ಆಧಾರಿತ ವರ್ಣಗಳು:

ವ್ಯಕ್ತಿಯ ಜನ್ಮವನ್ನಾಧರಿಸಿ (ತಂದೆಯ ವರ್ಣದಿಂದ ಮಕ್ಕಳ ವರ್ಣ ನಿರ್ಧರಿಸುವಿಕೆ), ಸಮಾಜವನ್ನು 4 ವರ್ಣಗಳನ್ನಾಗಿ ವಿಂಗಡಿಸಿರುವುದೇ 'ಜಾತಿ ವ್ಯವಸ್ಥೆ'. ಇದರಿಂದಾಗಿರುವ ವರ್ಣಗಳು: ಜಾತಿ-ಬ್ರಾಹ್ಮಣ, ಜಾತಿ-ಕ್ಷತ್ರಿಯ, ಜಾತಿ-ವೈಶ್ಯ ಹಾಗು ಜಾತಿ-ಶೂದ್ರ


ಗುಣ-ಆಧಾರಿತ ವರ್ಣಗಳು:

ವ್ಯಕ್ತಿಯ ಸ್ವಭಾವವು ತನ್ನ ಆಂತರಿಕ ಸಂಸ್ಕಾರಗಳು, ಪ್ರವೃತ್ತಿಗಳ ಮೇಲೆ ಅವಲಂಬಿತವಾಗಿದ್ದು, ಇದು  ತ್ರಿಗುಣಗಳ ಸಂಯೋಜನೆಯಿಂದ ಕೂಡಿದೆ: ಸತ್ವ (ಪಾವಿತ್ರ್ಯತೆ, ಸಮತೋಲನೆ, ಜ್ಞಾನಾಸಕ್ತಿ...), ರಜಸ್ (ಉತ್ಸಾಹ, ಚಟುವಟಿಕೆ, ಮಹತ್ವಾಕಾಂಕ್ಷೆ...), ಮತ್ತು ತಮಸ್ (ಅಜ್ಞಾನ, ಜಡತ್ವ, ಆಲಸ್ಯ...). ಈ ಮೂರೂ ಗುಣಗಳು ಪ್ರತಿಯೊಬ್ಬರಲ್ಲಿಯೂ ಇರುತ್ತವೆ; ಆದರೆ ಅವುಗಳ ಪ್ರಾಬಲ್ಯ ಕಾಲ-ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಗುಣಪ್ರಾಬಲ್ಯವೇ ‘ಗುಣಾಧಾರಿತ ವರ್ಣ’ಗಳ ಆಧಾರ. ಹೀಗೆ ವಿಂಗಡಿಸಲಾದ ಸಮಾಜದ 4 ವರ್ಣಗಳು: ಗುಣ-ಬ್ರಾಹ್ಮಣ, ಗುಣ-ಕ್ಷತ್ರಿಯ, ಗುಣ-ವೈಶ್ಯ ಹಾಗು ಗುಣ-ಶೂದ್ರ.

ಯಾರು ಸತ್ವಗುಣ ಪ್ರಧಾನ ಸ್ವಭಾವ ಅಥವಾ ಆಧ್ಯಾತ್ಮಿಕ ಪ್ರವೃತ್ತಿ ಹೊಂದಿರುತ್ತಾರೋ, ಅವರನ್ನು 'ಗುಣ-ಬ್ರಾಹ್ಮಣ' ಎಂದು ಕರೆಯುತ್ತಾರೆ.

ರಜೋಗುಣ ಪ್ರಧಾನದಿಂದ ಕೂಡಿರುವ, ಹೆಚ್ಚು ನಿಸ್ವಾರ್ಥ ಮನೋಭಾವ  ಹೊಂದಿರುವ ವ್ಯಕ್ತಿಗಳನ್ನು 'ಗುಣ-ಕ್ಷತ್ರಿಯ' ಎನ್ನುತ್ತಾರೆ. 

ರಜೋಗುಣ ಪ್ರಧಾನವಾಗಿದ್ದರೂ, ಆರ್ಥಿಕ ಆಸಕ್ತಿ ಅಧಿಕವಾಗಿದ್ದು, ಧನ, ಆಸ್ತಿ ಆರ್ಜನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವವರನ್ನು 'ಗುಣ -ವೈಶ್ಯ' ಎನ್ನುತ್ತಾರೆ. 

ಇನ್ನು ತಮೋಗುಣ ಪ್ರಧಾನವಾಗಿರುವ, ನಿದ್ದೆ ಆಲಸ್ಯದಿಂದ ಕೂಡಿದ್ದು, ವಿವೇಚನಾ ಶಕ್ತಿ ಕಡಿಮೆ ಇರುವ ಮನೋಭಾವವುಳ್ಳ ಮನುಷ್ಯರನ್ನು 'ಗುಣ-ಶೂದ್ರ’ ಎನ್ನುತ್ತಾರೆ. 

ಗುಣ-ಆಧಾರಿತ ವರ್ಣಗಳು

ಗುಣಗಳು

ವ್ಯಕ್ತವಾಗುವ ಗುಣಕ್ರಮ

ಸತ್ವ (S)

ರಜಸ್ (R)

ತಮಸ್ (T)

ಗುಣ-ಬ್ರಾಹ್ಮಣ

ಅತ್ಯಧಿಕ

ಮಿತ

ಅತ್ಯಲ್ಪ

ಸತ್ವ-ರಜಸ್-ತಮಸ್(SRT)

ಗುಣ-ಕ್ಷತ್ರಿಯ

ಮಿತ

ಅತ್ಯಧಿಕ

ಅತ್ಯಲ್ಪ

ರಜಸ್-ಸತ್ವ-ತಮಸ್(RST)

ಗುಣ -ವೈಶ್ಯ

ಅತ್ಯಲ್ಪ

ಅತ್ಯಧಿಕ

ಮಿತ

ರಜಸ್-ತಮಸ್-ಸತ್ವ(RTS)

ಗುಣ-ಶೂದ್ರ

ಅತ್ಯಲ್ಪ

ಮಿತ

ಅತ್ಯಧಿಕ

ತಮಸ್-ರಜಸ್-ಸತ್ವ(TRS)


ಕರ್ಮ-ಆಧಾರಿತ ವರ್ಣಗಳು:

ಮಾನವನು ತಾನು ಆರಿಸಿಕೊಳ್ಳುವ ವೃತ್ತಿ/ಕೆಲಸದ ಆಧಾರದ ಮೇಲೆ ಸಮಾಜವನ್ನು 4 ವರ್ಣಗಳನ್ನಾಗಿ ವಿಂಗಡಿಸಲಾಗಿದೆ. ವೇದ ಅಧ್ಯಾಪನ, ಧಾರ್ಮಿಕ ಕಾರ್ಯ, ಧರ್ಮ ಪ್ರಚಾರ ಮಾಡುವವರನ್ನು ’ಕರ್ಮ-ಬ್ರಾಹ್ಮಣ’ ಎಂದು ಕರೆಯಲಾಗುತ್ತದೆಯಾದರೂ, ಜ್ಞಾನಶಕ್ತಿಯನ್ನು ಪ್ರಧಾನವಾಗಿ ಉಪಯೋಗಿಸಿಕೊಂಡು ಯಾವುದೇ ಕರ್ಮ ಮಾಡುವವರನ್ನು ಈ ವರ್ಣಕ್ಕೆ ಸೇರಿಸಿಕೊಳ್ಳಬಹುದು. ಪುರೋಹಿತರು, ಕವಿಗಳು, ಆಚಾರ್ಯರು, ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣತಜ್ಞರು, ಉನ್ನತಮಟ್ಟದ ಸಲಹೆಗಾರರು ಇತ್ಯಾದಿ ವೃತ್ತಿ ಮಾಡುವವರು ಕರ್ಮಬ್ರಾಹ್ಮಣರಾಗುತ್ತಾರೆ. 

ಕ್ರಿಯಾಶಕ್ತಿಯನ್ನು ಪ್ರಧಾನವಾಗಿಸಿಕೊಂಡು, ನಾಯಕತ್ವ ಮತ್ತು ರಕ್ಷಣಾ ವೃತ್ತಿಗಳ ಮೂಲಕ ಸಮಾಜ ಮತ್ತು ದೇಶದ ಸೇವಾಕಾರ್ಯ ಮಾಡುವವರನ್ನು 'ಕರ್ಮ-ಕ್ಷತ್ರಿಯ’ ರೆನ್ನಲಾಗುತ್ತದೆ. ರಾಜಕೀಯ ನಾಯಕರು ಮತ್ತು ರಾಯಭಾರಿಗಳು, ಸೇನಾ ಮತ್ತು ಪೊಲೀಸ್ ಅಧಿಕಾರಿಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಉನ್ನತಾಧಿಕಾರಿಗಳು, ವಕೀಲರು, ಉನ್ನತ ಮಟ್ಟದ ಕ್ರೀಡಾಪಟುಗಳು ಇತ್ಯಾದಿ ವೃತ್ತಿಯಲ್ಲಿರುವವರು ಈ ವರ್ಣಕ್ಕೆ ಸೇರುತ್ತಾರೆ. 

ವ್ಯಾಪಾರ, ವ್ಯವಹಾರ, ಕೃಷಿ, ಗೋಪಾಲನೆ ಹಾಗೂ ಯಾವುದೇ ರೀತಿಯ ಸಂಪತ್ವೃದ್ಧಿ ಕೆಲಸ ಮಾಡುವವರನ್ನು ’ಕರ್ಮ-ವೈಶ್ಯ’ ಎಂದು ಕರೆಯಲಾಗುತ್ತದೆ. ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ರೈತರು,  ಹೂಡಿಕೆದಾರರು ಇತ್ಯಾದಿ ವೃತ್ತಿಯಲ್ಲಿರುವವರು ಈ ವರ್ಣಕ್ಕೆ ಸೇರುತ್ತಾರೆ. 

ಇನ್ನು ಮೇಲಿನ ಮೂರು ವರ್ಣಗಳ ವೃತ್ತಿಗಳಿಗೆ ಬೇಕಾದ ಸೇವೆಯನ್ನು ಒದಗಿಸುವ ಸಹಾಯಕರನ್ನು ’ಕರ್ಮ-ಶೂದ್ರ’ ಎನ್ನಲಾಗುತ್ತದೆ. ಇವರ ಶ್ರಮದಾನದಿಂದಲೇ ರಕ್ಷಣೆ, ಆರೋಗ್ಯ, ಶಿಕ್ಷಣ, ವಾಣಿಜ್ಯ, ಕೃಷಿ ಇನ್ನಿತರ ಸಮಾಜದ ಎಲ್ಲಾ ಕ್ಷೇತ್ರಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯ.


ವ್ಯಕ್ತಿಯ ವರ್ಣ:

ವ್ಯಕ್ತಿಯ ವರ್ಣವು ಜಾತಿ, ಗುಣ ಮತ್ತು ಕರ್ಮಗಳ ಆಧಾರದ ಮೇರೆಗೆ ಒಂದೇ ಇರಬೇಕೆಂಬ ನಿಯಮವಿಲ್ಲ. ಆದರೂ ಒಂದೇ ಆಗಿರುವುದು ಬಹಳ ವಿರಳ. 

ಉದಾಹರಣೆ: ದಾಸಿಯ ಪುತ್ರನಾಗಿದ್ದು , ಸತ್ವಗುಣ ಸಂಪನ್ನನಾದ ಮನೋಭಾವದಿಂದ ರಾಜವಂಶದವರಿಗೆ ಮಂತ್ರಿಯಾಗಿ/ಸಲಹೆಗಾರನಾಗಿ ಸೇವೆ ಸಲ್ಲಿಸಿದ ವಿಧುರನು: ಜನ್ಮ-ಶೂದ್ರ, ಗುಣ-ಬ್ರಾಹ್ಮಣ, ಕರ್ಮ-ಬ್ರಾಹ್ಮಣ. ಹಾಗೆಯೇ ವಿಶ್ಮಾಮಿತ್ರರು: ಜನ್ಮ-ಕ್ಷತ್ರಿಯ, ಗುಣ-ಬ್ರಾಹ್ಮಣ, ಕರ್ಮ-ಬ್ರಾಹ್ಮಣ.

ವರ್ಣಗಳ ಶ್ರೇಣೀಕರಣ:

ಈ ವರ್ಣಗಳಲ್ಲಿ ಯಾವುದು ಶ್ರೇಷ್ಟ, ಯಾವುದು ಕನಿಷ್ಟ ಎಂಬ ಶ್ರೇಣಿ ಇದೆಯೇ? 

ಜನ್ಮವು ಯಾವುದೇ ವ್ಯಕ್ತಿಯನ್ನು ಶ್ರೇಷ್ಟ ಅಥವಾ ಕನಿಷ್ಟನನ್ನಾಗಿಸುವುದಿಲ್ಲ. ಆದ್ದರಿಂದ ಜಾತಿ-ಆಧಾರಿತ ವರ್ಣಗಳಲ್ಲಿ ಯಾವುದೇ ಬೇಧವಿಲ್ಲ, ಶ್ರೇಣಿಯಿಲ್ಲ ಎಂದು ಶಾಸ್ತ್ರಗಳು ತಿಳಿಸುತ್ತವೆ. ಕಳೆದ ಶತಮಾನಗಳಲ್ಲಿ ಪ್ರಬಲ ವ್ಯಕ್ತಿಗಳು, ತಮ್ಮ ಅನುಕೂಲಕ್ಕಾಗಿ ಜಾತಿಗಳ ನಡುವೆ ತಾರತಮ್ಯ ಮಾಡಿ, ಬೇಧವನ್ನುಂಟು ಮಾಡಿದ ಕಾರಣ ಜಾತಿ ವ್ಯವಸ್ಥೆಯಿಂದ  ಸಾಮಾಜಿಕ ಅಸಮತೋಲನೆಯಾಯಿತು  ಎಂಬುದು ವಿಷಾದನೀಯ ಸಂಗತಿ!

ಎಲ್ಲಾ ವೃತ್ತಿಗಳೂ ಸಮಾಜದ ಸರ್ವತೋಮುಖ ಏಳಿಗೆಗಾಗಿಯೇ  ಇದ್ದು, ತಮ್ಮ ಯೋಗದಾನವನ್ನು ನೀಡುವ ಮೂಲಕ ಪ್ರಮುಖವೇ ಆಗಿರುವ ಕಾರಣ ಕರ್ಮ-ಆಧಾರಿತ ವರ್ಣಗಳಲ್ಲಿಯೂ ಶ್ರೇಣಿಗಳಿಲ್ಲವೆಂದು ಶಾಸ್ತ್ರಗಳು ತಿಳಿಸುತ್ತವೆ. ಇದು ಶರೀರದಲ್ಲಿನ ಅಂಗಾಂಗಗಳ ಕಾರ್ಯಗಳು ವಿವಿಧವಾಗಿದ್ದರೂ, ಎಲ್ಲವೂ ಜೀವಿಯ ನಿರ್ವಹಣೆಯಲ್ಲಿನ ತಮ್ಮದೇ ಪಾತ್ರ ನಿರ್ವಹಿಸುವಂತೆ. ವೃತ್ತಿಯಲ್ಲಿ ಇಂತಹ ಸಮತೆಯನ್ನು (dignity of labour) ಸಾರುವ ನಮ್ಮ ಸನಾತನ ಸಂಸ್ಕೃತಿಗೆ ತದ್ವಿರುದ್ಧವಾಗಿ, ಇಂದು ಜಗತ್ತಿನಲ್ಲಿ ಕೆಲವು ವೃತ್ತಿಪರರಿಗೆ ಮಾತ್ರ ಹೆಚ್ಚು ಗೌರವ ನೀಡುತ್ತಾ, ಇನ್ನಿತರ ಹಲವು ವೃತ್ತಿಪರರನ್ನು ತುಚ್ಚವಾಗಿ ಕಾಣುವುದು ಎಂತಹ ವಿಪರ್ಯಾಸ!

’ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ’ ಎಂಬ ’ಸ್ಕಂದ ಪುರಾಣ’ದ ವಾಣಿಯಂತೆ ಜನ್ಮತಃ ಎಲ್ಲರೂ ಅಸಂಸ್ಕೃತರಾಗಿದ್ದು, ಬೆಳೆಸಿಕೊಂಡ ಉತ್ತಮ ಸಂಸ್ಕಾರದಿಂದ ಶ್ರೇಷ್ಟರಾಗುತ್ತಾರೆ. ಆದ್ದರಿಂದ ಗುಣ-ಆಧಾರಿತ ವರ್ಣಗಳಲ್ಲಿ ಶ್ರೇಣಿಯನ್ನು ಮಾಡಲಾಗಿದೆ. ಹೀಗಾಗಿ ಗುಣ-ಶೂದ್ರನಿಗಿಂತ ಗುಣ-ವೈಶ್ಯನು ಉತ್ತಮನ್ನಾಗಿದ್ದು, ಗುಣ-ಕ್ಷತ್ರಿಯನು ಇನ್ನೂ ಶ್ರೇಷ್ಟನಾದರೆ, ಗುಣ-ಬ್ರಾಹ್ಮಣನು ಸರ್ವಶ್ರೇಷ್ಟನೆಂದು ಶಾಸ್ತ್ರಗಳು ಸಾರುತ್ತವೆ. ಆದ್ದರಿಂದ ಸತ್ವಗುಣಸಂಪನ್ನ ಯಾವುದೇ ವ್ಯಕ್ತಿಯನ್ನು ಸಮಾಜವು ಹೆಚ್ಚು ಗೌರವಿಸಬೇಕೆಂಬುದು ಪಾರಂಪರಿಕವಾಗಿ ಬಂದಿದೆ. ಪುರಂದರದಾಸರು, ತಮಿಳುನಾಡಿನ ನಯನ್ಮಾರರು ಜನ್ಮತಃ ಬ್ರಾಹ್ಮಣರಲ್ಲದಿದ್ದರೂ, ಎಲ್ಲರೂ ಪೂಜ್ಯಭಾವದಿಂದ ಕಾಣುವುದಿಲ್ಲವೇ!


ವರ್ಣಗಳ ಆಯ್ಕೆ:

ನಮ್ಮ ಜನನದಲ್ಲಿ ನಮ್ಮ ಯಾವುದೇ ಪಾತ್ರವಿರದ ಕಾರಣ, ಜಾತಿ-ಆಧಾರಿತ ವರ್ಣದಲ್ಲಿ ನಮ್ಮ ಆಯ್ಕೆಯಿಲ್ಲ ಹಾಗು ಬದಲಾವಣೆ ಮಾಡಲಾಗುವುದಿಲ್ಲ. ಜೊತೆಗೆ ಜಾತಿ ವರ್ಣಗಳಲ್ಲಿ ಬೇಧವಿಲ್ಲದ ಕಾರಣ, ನಮ್ಮ ಜಾತಿಯನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುವುದು ಉತ್ತಮ. 

ನಾವು ಪ್ರೌಢಾವಸ್ಥೆಗೆ ಬರುವ ಮೊದಲೇ  ನಮ್ಮ ಸ್ವಭಾವವು ಪೂರ್ವಜನ್ಮ ಸಂಸ್ಕಾರದಿಂದ ಹಾಗೂ ಈ ಜನ್ಮದಲ್ಲಿ ಕುಟುಂಬ, ಸಮಾಜದಿಂದ ದೊರೆತ/ಕಲಿತ ಸಂಸ್ಕಾರದಿಂದ ರೂಪಿತವಾಗಿರುತ್ತದೆ. ಆದರೂ ಇಚ್ಛಾಶಕ್ತಿ, ಪುರುಷಪ್ರಯತ್ನ ಹಾಗು ವಿವೇಕಯುತಬುದ್ಧಿಯಿಂದ ನಮ್ಮ ಗುಣಸ್ವಭಾವವನ್ನು, ಸಂಸ್ಕಾರವನ್ನು  ಬದಲಿಸಿಕೊಳ್ಳಲು ಸಾಧ್ಯವಾಗುವ ಕಾರಣ ಗುಣ-ಆಧಾರಿತ ವರ್ಣದಲ್ಲಿ ಆಯ್ಕೆಯಿದೆ. ಇಂತಹ ಬದಲಾವಣೆ ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಆವಶ್ಯಕ ಕೂಡ. ಆದ್ದರಿಂದ ಮಾನವ ಜೀವನದ ಉದ್ದೇಶ: ಗುಣ-ಶೂದ್ರ -> ಗುಣ-ವೈಶ್ಯ -> ಗುಣ-ಕ್ಷತ್ರಿಯ -> ಗುಣ-ಬ್ರಾಹ್ಮಣ.

ಇನ್ನು ಕರ್ಮ-ಆಧಾರಿತ ವರ್ಣದ ಆಯ್ಕೆ ನಮ್ಮಲ್ಲಿದೆ. ವಂಶಪಾರಂಪರಿಕವಾಗಿ ಬಂದ ವೃತ್ತಿಯ ಕೌಶಲ್ಯವನ್ನು ಮನೆಯಲ್ಲಿ ಬಾಲ್ಯಾವಸ್ಥೆಯಿಂದಲೂ ನೋಡಿ, ತಿಳಿದುಕೊಂಡು, ಅಭ್ಯಾಸಮಾಡಿ, ಕೌಟುಂಬಿಕ ಮಾರ್ಗದರ್ಶನದಿಂದ ಪರಿಣಿತಿ ಪಡೆಯಲು ಸುಲಭವಾದುದರಿಂದ, ಪ್ರಾಚೀನ ಭಾರತದಲ್ಲಿ ಈ ಪದ್ಧತಿಯು ಪ್ರಚಲಿತವಾಗಿತ್ತು. ಇಂದು ಕೂಡ ವ್ಯಕ್ತಿ ಇದರ ಉಪಯೋಗವನ್ನರಿತು, ಸೂಕ್ತವೆನಿಸಿದಲ್ಲಿ, ವಂಶಪಾರಂಪರಿಕವಾಗಿ ಬಂದ ವೃತ್ತಿಯನ್ನು ಆಯ್ಕೆಮಾಡಿಕೊಳ್ಳುವ ಅವಕಾಶವಿದೆ. ಇಲ್ಲವೇ ತನ್ನ ಸ್ವಭಾವ, ಯೋಗ್ಯತೆ, ಸಾಮರ್ಥ್ಯ ಹಾಗು ಒಲವಿನ ಆಧಾರದ ಮೇಲೆ ವೃತ್ತಿಯನ್ನು ಆಯ್ಕೆಮಾಡಿಕೊಳ್ಳಬಹುದು. ಈ ಆಯ್ಕೆಯನ್ನು ಸ್ವತಃ ತಾನೇ ಮಾಡಬಹುದು ಅಥವಾ ಇಂದಿನ ಕಾಲದಲ್ಲಿರುವ ವೃತ್ತಿಪರ career counsellors, ಉದ್ಯಮತಜ್ಞರು, ಜಾಲತಾಣ (online platforms) ಹಾಗು ಸೂಕ್ತ ಹಿರಿಯರಿಂದ ಮಾರ್ಗದರ್ಶನ ಪಡೆಯಬಹುದು. ಆದರೆ ವ್ಯಕ್ತಿಯ ಯೋಗ್ಯತೆ, ಸಾಮರ್ಥ್ಯ, ಒಲವುಗಳು ದೇಶ-ಕಾಲಕ್ಕೆ ಬದಲಾಗುವ ಕಾರಣ, ಕೆಲವೊಮ್ಮೆ ವೃತ್ತಿಯನ್ನು ಬದಲಾವಣೆ ಮಾಡಬಹುದಾದರೂ, ವೃತ್ತಿ ಬದಲಾವಣೆಯೇ ಹವ್ಯಾಸವಾಗಬಾರದು.  


ಆಶ್ರಮ ವ್ಯವಸ್ಥೆ:

'ಆಶ್ರಮ’ ಎಂದರೆ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗಾಗಿ ವೇದಗಳು ನಿಗದಿಪಡಿಸಿದ ಹಂತಗಳು. ಇವನ್ನು ಎಲ್ಲರೂ ಬಾಹ್ಯವಾಗಿ ಅಥವಾ ಕನಿಷ್ಟ ಆಂತರಿಕವಾಗಿ  ಹಾದುಹೋದರೆ ಒಳಿತು. ಪ್ರತಿ ಹಂತವು ವಯಸ್ಸು ಹಾಗೂ ಮನಸ್ಸಿನ ವಿಕಾಸಕ್ಕನುಗುಣವಾಗಿದ್ದು,  ಅಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳನ್ನು ಈ ವ್ಯವಸ್ಥೆಯ ಮೂಲಕ ನಿರ್ದೇಶಿಸಿದೆ. ಈ ವ್ಯವಸ್ಥೆಯ ನಾಲ್ಕು(4) ಆಶ್ರಮಗಳು ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ ಹಾಗು ಸಂನ್ಯಾಸ.

ಬ್ರಹ್ಮಚರ್ಯಾಶ್ರಮವು ವ್ಯಕ್ತಿಯ ಬಾಲ್ಯಾವಸ್ಥೆಯಲ್ಲಿ ವಿದ್ಯಾರ್ಜನೆ ಪ್ರಾರಂಭಿಸಿದ ಸಮಯದಿಂದ ತರುಣನಾಗಿ ವಿದ್ಯಾಭ್ಯಾಸ ಸಂಪೂರ್ಣಗೊಳಿಸುವವರೆಗೂ ಇದೆ. ಈ ಸಮಯದಲ್ಲಿ ವ್ಯಕ್ತಿಯನ್ನು ಬ್ರಹ್ಮಚಾರಿ/ಬ್ರಹ್ಮಚಾರಿಣಿ ಎಂದು ಕರೆಯುತ್ತಾರೆ. ಆಗ ವಿದ್ಯಾರ್ಥಿಯಾಗಿ ಸ್ವಾಧ್ಯಾಯದೊಂದಿಗೆ ನಿಗದಿತ ಕರ್ತವ್ಯಗಳನ್ನು ನಿರ್ವಹಿಸುತ್ತಾ, ಆಚಾರ್ಯರುಗಳಿಂದ  ಜೀವನ ಮೌಲ್ಯಗಳು, ಕಲೆ, ವೃತ್ತಿಪರ ಕೌಶಲ್ಯಗಳು, ಮತ್ತು ಪುರುಷಾರ್ಥಗಳ ಬಗ್ಗೆ ತಿಳಿದುಕೊಂಡು,  ಸಾರ್ಥಕ ಜೀವನ ನಡೆಸಲು ಬೇಕಾದ ಜ್ಞಾನವನ್ನು ಪಡೆಯುವುದು ಮುಖ್ಯ ಉದ್ದೇಶವಾಗಿದೆ.

ಗೃಹಸ್ಥಾಶ್ರಮವೆಂದರೆ ವಿದ್ಯಾರ್ಜನೆ ಸಂಪೂರ್ಣವಾದ ನಂತರ ಅರ್ಥ-ಕಾಮ ಅಭಿಲಾಶಿಯಾಗಿರುವ ಮಾನವನು ಧರ್ಮಾಧಾರಿತ ಜೀವನ ನಡೆಸುವುದು. ಇದು ವ್ಯಕ್ತಿಯ ವಿವಾಹ, ಸಂತಾನ,  ಗೃಹಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಿಕೆಯನ್ನು ನಿರ್ದೇಶಿಸಿದ್ದು, ಆತನು ಸಮಾಜದ ಏಳಿಗೆಗಾಗಿ ತನು-ಮನ-ಧನದ ಮೂಲಕ ಸೇವೆಯನ್ನು ಒದಗಿಸುವ ಕರ್ಮಪ್ರಧಾನವಾದ ಹಂತವಾಗಿದೆ. 

ವಾನಪ್ರಸ್ಥಾಶ್ರಮವು ಜೀವನದ ಅನುಭವಗಳಿಂದ  ಪಕ್ವವಾದ ವ್ಯಕ್ತಿಯು  ಶ್ರೇಯೋಭಿಲಾಶಿಯಾಗಿ ತನ್ನ ಕರ್ಮಗಳನ್ನು ಕಡಿಮೆ ಮಾಡಿಕೊಂಡು, ಧ್ಯಾನ, ಉಪಾಸನಾಪ್ರಧಾನವಾದ ಜೀವನ ನಡೆಸುವ ಹಂತವಾಗಿದೆ. 'ಅರಣ್ಯವಾಸಿ' ಎಂಬ ಅರ್ಥ ಇರುವ ಈ ಹಂತವನ್ನು, ಬದಲಾದ ಇಂದಿನ ಕಾಲಮಾನದಲ್ಲಿ  ಏಕಾಂತವಾಸಿ ಅಥವ ತ್ಯಾಗಿ ಗೃಹಸ್ಥ ಎಂದು ಅರ್ಥೈಸಬಹುದು. 

ಸಂನ್ಯಾಸಾಶ್ರಮವು ಸಾಂಸಾರಿಕ ಕರ್ತವ್ಯ ಹಾಗೂ ವೈದಿಕ ಕರ್ಮಗಳಿಂದ  ನಿವೃತ್ತಿಹೊಂದಿ, ಆತ್ಮಜ್ಞಾನಪ್ರಾಪ್ತಿಗೆ ಶ್ರಮಿಸುವ ಮಾನವನ ಜ್ಞಾನಪ್ರಧಾನ ಹಂತವಾಗಿದೆ. ವಿಧಿಪೂರ್ವಕವಾಗಿ  ಸಂನ್ಯಾಸ ಸ್ವೀಕರಿಸಲಾಗದಿದ್ದರೂ, ಕನಿಷ್ಟ ಪಕ್ಷ ಮಾನಸಿಕ ಸಂನ್ಯಾಸಿಯಾಗಿ, ಮುಮುಕ್ಷುವು(ಮೋಕ್ಷಾಕಾಂಕ್ಷಿ) ಜೀವನದ ಅಂತ್ಯಕಾಲವನ್ನು  ಆತ್ಮವಿಚಾರ/ವೇದಾಂತ ಚಿಂತನೆಯಲ್ಲಿ ತೊಡಗಬೇಕೆಂಬುದು ವೇದಗಳ ಆಶಯ. ವ್ಯಕ್ತಿಯು ಯಾವುದೇ ಆಶ್ರಮದಲ್ಲಿದ್ದರೂ, ಮೋಕ್ಷದ ತೀರ್ವ ಇಚ್ಛೆಯುಂಟಾದಲ್ಲಿ, ಸಂನ್ಯಾಸಶ್ರಮವನ್ನು (ಬಾಹ್ಯ ಅಥವಾ ಮಾನಸಿಕ) ಸ್ವೀಕರಿಸಿ,  ಸಾಧನಾನಿರತನಾಗುವ ಅವಕಾಶವಿದೆ.


ವರ್ಣಾಶ್ರಮ ವ್ಯವಸ್ಥೆಗಳು ಇಂದು ಪ್ರಸ್ತುತವೇ?

ವರ್ಣ-ಆಶ್ರಮಗಳು ಜೀವಿಯ ಶಾಶ್ವತ ಸ್ವರೂಪವಲ್ಲ; ಸಮಾಜವನ್ನು ವಿಭಜಿಸಲು ರೂಪುಗೊಂಡ ವ್ಯವಸ್ಥೆಯೂ ಅಲ್ಲ. ಸ್ವಭಾವತಃ ನಿತ್ಯ-ಶುದ್ಧ-ಬುದ್ಧ-ಮುಕ್ತ-ಆನಂದ ಸ್ವರೂಪಿಯಾದ ಜೀವಾತ್ಮನಿಗೆ ವರ್ಣ-ಆಶ್ರಮಗಳಿಲ್ಲ. ತನ್ನ ನೈಜಸ್ವರೂಪವನ್ನು ಇನ್ನೂ ಅರಿಯದ ಮಾನವನಿಗೆ ಪುರುಷಾರ್ಥಗಳ ಮೂಲಕ ಮೋಕ್ಷಪ್ರಾಪ್ತಿಗಾಗಿ ಸಹಾಯಕವಾಗಲೆಂದು ಶಾಸ್ತ್ರಗಳು ರೂಪಿಸಿದ ಜೀವನವ್ಯವಸ್ಥೆಯ ಸಾಧನಗಳೇ - ವರ್ಣಾಶ್ರಮ ವ್ಯವಸ್ಥೆ.

ಇಂದು ಸಾಮಾನ್ಯವಾಗಿ ಮಾನವನಲ್ಲಿ ಕಾಣುವ ಹಕ್ಕುಗಳನ್ನು ಒತ್ತಾಯಿಸುವ (right-based) ಮನೋಭಾವ, ಸ್ವಾರ್ಥಕೇಂದ್ರಿತ ಬದುಕು, ಗ್ರಾಹಕ ಸಂಸ್ಕೃತಿ (Consumerist Culture), ಜೀವನ ಮೌಲ್ಯಗಳ ನಿರ್ಲಕ್ಷ್ಯತೆ ಹಾಗು ಉನ್ನತ ಉದ್ದೇಶವಿಲ್ಲದ ಜೀವನಶೈಲಿ - ಇವು ಸಮಾಜದ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತವೆ.

ಇಂತಹ ಸಂದರ್ಭದಲ್ಲಿ ವರ್ಣಾಶ್ರಮ ವ್ಯವಸ್ಥೆಗಳು ನಮಗೆ ಸಾರುವ ಸ್ಪಷ್ಟ ಸಂದೇಶ:

ಎಲೈ ಮಾನವ, 

ಹಕ್ಕು ಬೇಡುವ ಮನಸ್ಥಿತಿ ಬದಲಿಸು; ಕರ್ತವ್ಯ ನಿಷ್ಠೆಯಿಂದ ಪಾಲಿಸು.

ಸ್ವಾರ್ಥಕೇಂದ್ರಿತ ಜೀವನ ತ್ಯಜಿಸು; ಧರ್ಮಾಧಾರಿತ ಬದುಕು ನಡೆಸು.

ಲಕ್ಷ್ಯವನ್ನು ಸಾಧಾರಣ ಗುರಿಯಿಂದ ಮೋಕ್ಷದೆಡೆಗೆ ತಿರುಗಿಸು; ಜೀವನ ಕೃತಕೃತ್ಸ್ನವಾಗಿಸು.




20 comments:

  1. Namaste sir.🙏excellent. First time I learnt detailed and very clear explanation about varnashrama vyavasthe. Siva namas meaning and how to apply to our lives beautifully you advised us sir. I feel . Lot to know and practice in present daily life from your teachings. Thank you so much. 🙏🙏 Vijayalakshmi. Bangalore.

    ReplyDelete
  2. ಅಚ್ಯುತ ಮೂರ್ತಿ ಕಾಂತಾವರ17 February 2026 at 16:31

    ಒಂದೊಂದು ಪದವೂ ಬಹಳ ಅಚ್ಚುಕಟ್ಟಾಗಿ ಜೋಡಿಸಿದ್ದು ಸರಳವೂ ಅರ್ಥಪೂರ್ಣವಾಗಿಯೂ ಇವೆ. ಬಹು ಉಪಯುಕ್ತವಾಗಿದೆಯಲ್ಲದೇ ಜ್ಞಾನಭರಿತವಾಗಿವೆ. ಹೃತ್ಪೂರ್ವಕ ಅಭಿನಂದನೆಗಳು

    ReplyDelete
  3. Excellent sir great work by you in guiding all of us towards spiritual pinnacle🙏🙏

    ReplyDelete
  4. Shivanna, Bangalore17 February 2026 at 17:04

    Namaste Guruji. Very useful information. By following this, our life will change from animal level to human level , next to oneness and become Divine.
    Thanks Guruji. 🙏🙏🙏

    ReplyDelete
  5. ನಮಸ್ಕಾರಗಳು 🙏 ಈ ಜ್ಞಾನ ಎಲ್ಲರಿಗೂ ಲಭ್ಯ ವಿಲ್ಲ. ಎಷ್ಟೋ ಜನ್ಮದ ಪುಣ್ಯ. ನೀವು ನಿಸ್ವಾರ್ಥ ವಾಗಿ ಹಂಚುವ ಕೆಲಸ ಮಾಡಲು ಹೊರಟಿರುವಿರಿ.ಇದು ನಮ್ಮ ಪುಣ್ಯ.
    ಪ್ರಸ್ತುತ ಈ ಕಾಲಕ್ಕೆ ,
    ನೀವು ಹೇಳುವುದನ್ನು ಕೇಳಿ ಜನ ಬದಲಾವಣೆ ಹೊಂದಬೇಕು. ಎಷ್ಟು ಸುಲಭವಾಗಿ ಅರ್ಥವಾಗುವ ಹಾಗೆ ಅಲ್ಲದೆ ಎಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡುವ ಅವಕಾಶ ವನ್ನು ಕೊಟ್ಟಿರುವ ನಿಮ್ಮ ಜ್ಞಾನ ಪ್ರಸಾರ ದ ಈ ಕೆಲಸ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.
    ಇದರ ರುಚಿ ನೋಡಿದ ವರು , ಜೀವನ ಹೇಗೆ ಸರಾಗವಾಗಿ ಮಾಡಬಹುದು ಎಂದು ಅರಿಯುವ ರು.
    ಈ ಸತ್ಸಂಗ ದ ಜ್ಞಾನ ಯಜ್ಞ ಹೀಗೆ ಮುಂದುವರಿಯಲಿ.
    ಜ್ಞಾನ ದ ಬೆಳಕಲ್ಲಿ ಜೀವನ ನಡೆಸಿದರೆ ಕರ್ಮಗಳ ಹೊರೆ ಕಡಿಮೆ ಆಗಿ , ಜನನ ಮರಣ ಚಕ್ರ ಕಡಿಮೆ ಆಗುವುದು.
    ಈ ಜ್ಞಾನ ಯಜ್ಞ ಪ್ರಸಾರ ಮಾಡಲು ಆ ಪರಮಾತ್ಮ ನಿಮಗೆ ಆರೋಗ್ಯ ಆಯುಸ್ಸು ಕೊಟ್ಟು ಕಾಪಾಡಲಿ ಎಂದು ಹಾರೈಸುವೆ .

    ReplyDelete
  6. Namaste Guruji. Very nice and crystal clear description of division and functioning of present day society. It would have been nice if caste based society was not there but only Varnashrama was followed looking at the misuse of caste by politicians for their gain.Thanks for a wonderful tranfer of knowledge

    ReplyDelete
  7. Balakrishna D. Karanth17 February 2026 at 17:26

    Varnasharma is explained in a systamatic, compact and an excellent way. ತಾವು ಪ್ರವಚನಕ್ಕಿಂತಲೂ ಉತ್ತಮವಾಗಿ ಬರೆಯಬಲ್ಲಿರಿ ಎಂಬುದನ್ನು ಮನಗಂಡೆ. ಭವಿಷ್ಯದಲ್ಲಿ ನಮ್ಮ ಅಧ್ಯಾತ್ಮ ಶಾಸ್ತ್ರ ಗ್ರಂಥಗಳ ಸಾರ ಸರ್ವಸ್ವ ವಿಷಯಗಳು ವ್ಯವಸ್ಥಿತವಾಗಿ ಪುಸ್ತಕ ರೂಪದಲ್ಲಿ ತಮ್ಮಿಂದ ಹೊರಬರಲಿದೆ. Advance congratulations for the same!!

    ReplyDelete
  8. ಲೇಖನವು ಅಚ್ಚುಕಟ್ಟಾದ ಅರ್ಥಪೂರ್ಣ, ಙ್ಞಾನಭರಿತ,ಸರಳ, ಪರಿಪೂರ್ಣವಾದ, ಉಪಯುಕ್ತ ಮಾಹಿತಿಯಾಗಿದೆ. ಧನ್ಯವಾದಗಳು, ವರಲಕ್ಷ್ಮಿ

    ReplyDelete
    Replies
    1. ನಮಸ್ತೆ ಗುರೂಜಿ ,
      "ವರ್ಣಾಶ್ರಮ ವ್ಯವಸ್ಥೆ " ಲೇಖನ ಅತ್ಯದ್ಭುತ ವಾಗಿದೆ. ನೀವು ತಿಳಿಸಿರುವ ಹಾಗೆ ನಿಮ್ಮ ' ಪುರುಷಾರ್ಥಗಳು' ಮತ್ತು 'ಶಾಸ್ತ್ರಗಳು ' ಸಂಚಿಕೆಗಳು ಪೂರಕವಾಗಿದೆ . ಶ್ರೀ ಕೃಷ್ಣನ 'ಚಾತುರ್ವರ್ಣ ' ವನ್ನು ತಪ್ಪಾಗಿ ಅರ್ಥೈಸಿ ಕೊಂಡಿರುವ ಜನರಿಗೆ ಹಿಡಿದ ಕನ್ನಡಿಯಾಗಿದೆ . ಒಬ್ಬನೇ ಮನುಷ್ಯ , ಒಂದೇ ದಿನದಲ್ಲಿ , ಅವನು ಮಾಡುವ ಕರ್ಮಗಳಿಂದ ಅಥವಾ ಮನಸ್ಸಿನ ಆಲೋಚನೆಗಳಿಂದ ಆಗಲೀ ಗುಣ ಬ್ರಾಹ್ಮಣ, ಗುಣ ಕ್ಷತ್ರಿಯmu, ಗುಣ ವೈಶ್ಯ , ಗುಣ ಶೂದ್ರ ಆಗಿರುತ್ತಾನೆ , ಎಂದು ನನ್ನ ಅನಿಸಿಕೆ.
      ಹಾಗೆಯೇ, ಮನುಷ್ಯ ಒಂದು ದಿನದಲ್ಲಿ ಮಾನಸಿಕವಾಗಿ ಬಾಲ್ಯ , ಗೃಹಸ್ಥ , ಏಕಾಂಗಿ ಹಾಗೂ ಸನ್ಯಾಸ ಎಲ್ಲವನ್ನೂ ಅನುಭವಿಸಬಹುದು .
      ಮಾನವ ಜನ್ಮದ ಉದ್ದೇಶ ಸಾರ್ಥಕವಾಗಬೇಕಾದರೆ ಜ್ಞಾನಮಾರ್ಗ ಒಂದೇ ಸೂಕ್ತವಾದುದು .ಜ್ಞಾನಾಭಿವೃದ್ಧಿ ಮಾಡಿಕೊಂಡು ಮುಮುಕ್ಷುವಾಗಿ ಮೋಕ್ಷಪಥವನ್ನು ಅನುಸರಿಸಬೇಕಾದರೆ , ಮನುಷ್ಯ ಹೆಚ್ಚು ಹೆಚ್ಚು ಸಾತ್ವಿಕನಾಗುವುದು ಅಗತ್ಯ.
      ಸಾತ್ವಿಕರಾಗಬೇಕೆಂಬ ಆಶಯ ಹಾಗೂ ಹಂಬಲವನ್ನು ವೃದ್ಧಿ ಗೊಳಿಸುತ್ತಿರುವ ನಿಮಗೆ
      ಅನಂತಾನಂತ ಹೃತ್ಪೂರ್ವಕ ವಂದನೆಗಳು ಹಾಗೂ ಧನ್ಯವಾದ ಗಳು 🙏🙏🙏










      Delete
    2. ವರ್ಣಾಶ್ರಮ ವ್ಯವಸ್ಥೆ ನಮಗೆ ಒಂದು ಮಹತ್ವದ ಸಂದೇಶವನ್ನು ಕೊಡುತ್ತದೆ.
      ಮಾನವನು ಹಕ್ಕುಗಳಿಗಾಗಿ ಮಾತ್ರ ಹೋರಾಡುವುದನ್ನು ಬಿಟ್ಟು, ತನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನೆರವೇರಿಸಬೇಕು.

      ನಾವು ಸ್ವಾರ್ಥದ ಚಿಂತನೆಗಳಲ್ಲಿ ಸಿಲುಕಿಕೊಂಡು ಬದುಕುವುದಕ್ಕಿಂತ, ಧರ್ಮದ ಆಧಾರದ ಮೇಲೆ ಜೀವನವನ್ನು ನಡೆಸಬೇಕು. ಧರ್ಮ ಎಂದರೆ ನ್ಯಾಯ, ಸತ್ಯ ಮತ್ತು ನೀತಿ ಪಾಲನೆ.

      ಜೀವನದ ಗುರಿ ಕೇವಲ ಹಣ, ಹೆಸರು ಅಥವಾ ಹುದ್ದೆ ಅಲ್ಲ. ನಮ್ಮ ಅಂತಿಮ ಗುರಿ ಮೋಕ್ಷವಾಗಿರಬೇಕು. ಅಂದರೆ ಆತ್ಮಶಾಂತಿ ಮತ್ತು ಆತ್ಮಜ್ಞಾನವನ್ನು ಪಡೆಯುವುದು.

      ಈ ರೀತಿಯಾಗಿ ಬದುಕಿದಾಗ ಮಾತ್ರ ಜೀವನ ಸಂಪೂರ್ಣವಾಗುತ್ತದೆ ಮತ್ತು ಅರ್ಥಪೂರ್ಣವಾಗುತ್ತದೆ.

      Delete
  9. Thumba arthapornawagide dhanyavadagalu Gurugale

    ReplyDelete
  10. Namaste Sir
    You have explained the Varnashrama system in a very simple way. It's a complex subject which is misunderstood by maximum number of people, thank you very much for an elaborate explanation with examples. Will wait for the next article to be published.

    ReplyDelete
  11. Excellent article
    Sadhguro Paahi 🙏

    ReplyDelete
  12. ನಮಸ್ತೆ Sir, ವರ್ಣಾಶ್ರಮ ವ್ಯವಸ್ಥೆಯನ್ನು ಶಾಸ್ತ್ರಗಳಲ್ಲಿ ಹೇಳಿರುವಂತೆ ಅರ್ಥೈಸಿ ಹೇಳಿರುವುದು ನಮಗೆ ಅರ್ಥ ಮಾಡಿಕೊಳ್ಳಲು ಸುಲಭವಾಗಿದೆ ಮತ್ತು ಇಂದಿನ ಕಾಲಕ್ಕೆ ಹೊಂದಿಸಿ, ಇಂದೂ ಹೇಗೆ ಪ್ರಸ್ತುತ ಎಂದು ತಿಳಿಸಿರುವ ರೀತಿ ತುಂಬಾ ಸೂಕ್ತವಾಗಿದೆ.
    ಎಲ್ಲವನ್ನೂ ವೇದಾಂತದ ಹಿನ್ನೆಲೆಯಲ್ಲಿ ತಿಳಿಸಿ ಕೊಡುತ್ತಿರುವ ನಿಮಗೆ ಅನಂತಾನಂತ ಧನ್ಯವಾದಗಳು 🙏🏻

    ReplyDelete
  13. Thanks Guruji , really it's very brief and good information. My all doubts are clear reading by this blog. Thanks again. Dandvat pranams

    ReplyDelete
  14. ಪರಮ ಗುರುಗಳಿಗೆ ಪ್ರಣಾಮಗಳನ್ನು ಅರ್ಪಿಸುತ್ತಾ ಎಲ್ಲರಿಗೂ ನಮಸ್ಕಾರ.

    ಅವರಿಂದ ನಿಜ ಬೋಧನೆಯನ್ನು ಪಡೆಯುತ್ತಿರುವ ಅವರ ಶಿಷ್ಯ ವೃಂದ ಹಾಗೂ ಪಾಠಕರು ಧನ್ಯರೇ ಸರಿ.

    ಪ್ರವಚನಾವಧಿಯ ಒಂದು ಪದವೂ ವ್ಯರ್ಥವಾಗದಂತೆ ಅವರು ನೀಡುವ ಉಪದೇಶ ಸಕ್ಕರೆಯ ಗೊಂಬೆಯ ಪ್ರತಿ ಭಾಗವೂ ಸಿಹಿ ಇರುವಂತೆ ಅನುಕ್ಷಣವೂ ಜನ್ಮ ಸಾರ್ಥಕತೆ ಪಡೆಯಲು ನೀಡುವ ಮಾರ್ಗ ಸೂಚಿಯಾಗಿರುತ್ತದೆ.

    ಇನ್ನು ಅಮೃತ ತುಲ್ಯವಾದ ಪ್ರವಚನಾವಧಿಯಲ್ಲಿ ಅವರಿಂದ ಪಡೆಯುವ ನಿರರ್ಗಳವಾದ ನಿಜ ಬೋಧೆಯ ಶ್ರವಣ ಅವರ ಆಳವಾದ ಅಧ್ಯಯನ, ಪುರುಷ ಸರಸ್ವತಿಗಳಾದ ಅವರ ಜ್ಞಾನ ವ್ಯಾಪ್ತಿಯ ಅಪಾರತತೆಯ ಅರಿವು ನೀಡುತ್ತಾ ತಸ್ಯೈ ವಾಣ್ಯೈ ನಮೋನ್ನಮಃ ಎಂಬಂತೆ ಅವರ ವಾಗ್ವೈಭವದಲ್ಲಿ ಓತಪ್ರೋತವಾಗಿ ಭೋರ್ಗರೆಯುತ್ತಾ ಹರಿದು ಬರುವ ಜ್ಞಾನ ಗಂಗೆಯಲ್ಲಿ ಮಿಂದು ಮೀಯುತ್ತಾ ಪುನೀತರಾಗಿ ಧನ್ಯತಾ ಭಾವ ಪಡೆಯುವ ಪರಿ

    ಉಪ್ಪಿನ ಗೊಂಬೆ ಸಮುದ್ರದ ಆಳವನ್ನು ಅಳೆಯಲು ಹೋಗಿ ತನ್ನ ಗಡಸುತನ ಕರಗಿಸಿಕೊಂಡು ಕರಗಿಹೋಗುವಂತೆ ಸಮುದ್ರ ಜಲದಲ್ಲಿ ಅಂತರ್ಲೀನವಾಗುವಂತೆ ಶ್ರೋತೃಗಳು ಪರಮಾತ್ಮನ ದಿವ್ಯಾನುಭೂತಿಯಲ್ಲಿ ತೇಲಿ ಹೋಗುವಂತೆ ಅಲ್ಲ ಪ್ರಾಪ್ತಸ್ಯ ಪ್ರಾಪ್ತಿಯ ದಿವ್ಯಾನುಭವದ ಅನುಭೂತಿಯ ಎಂದರೆ ಜೀವನ್ಮುಕ್ತ ಸ್ಥಿತಿಯ ಪರಿಕಲ್ಪನೆ ಉಂಟು ಮಾಡುವುದು ದಿಟವಾದ ಸತ್ಯವೇ ಆಗಿದೆ

    ಎಂಬುದನ್ನು ಸವಿನಯವಾಗಿ ಅರಿಕೆ ಮಾಡಿಕೊಳ್ಳುತ್ತಾ ವರ್ಣಾಶ್ರಮ ವ್ಯವಸ್ಥೆಯ ಬಗ್ಗೆ ಮೂಡಿಬಂದಿರುವ ಲೇಖನ ಅತ್ಯದ್ಭುತವಾಗಿ ಸರಳವಾದ ಶೈಲಿಯಲ್ಲಿ ಹಾಗೂ ಗಹನವಾದ ರೀತಿಯಲ್ಲಿ ಪ್ರತಿಯೊಬ್ಬರಿಗೂ
    ಶಾಸ್ತ್ರದ ಮಹತ್ವ ಅರಿವಾಗುವಂತೆ ಹಾಗೂ ಅನುಷ್ಠಾನ ಎಷ್ಟು ಮುಖ್ಯ ಎಂಬುದನ್ನು ಮನವರಿಕೆಯಾಗುವಂತೆ ಮನೋಜ್ಞವಾಗಿ ನೀಡಿರುವ ಅತ್ಯಂತ ಶೈಕ್ಷಣಿಕ ಮಹತ್ವವನ್ನು ಒಳಗೊಂಡ ಸನಾತನ ಧರ್ಮದ ಮಹತ್ವವನ್ನು ತಿಳಿಸುವ ವಿಚಾರಧಾರೆಯ ಲೇಖನ ಸೊಗಸಾಗಿ ಮೂಡಿಬಂದಿದೆ ಎಂಬುದಾಗಿ ಅರಿಕೆ ಮಾಡಿಕೊಳ್ಳುತ್ತಾ ಹೃತ್ಪೂರ್ವಕ ಪ್ರಣಾಮಗಳನ್ನು ಅರ್ಪಿಸಲಾಗಿದೆ.
    ಸರ್ವಂ ಶ್ರೀ ಸದ್ಗುರು ಚರಣಾರವಿಂದಾರ್ಪಣಮಸ್ತು ಜೈ ಶ್ರೀ ರಾಮ್ ಜೈ ಗುರುದೇವ್ ಜೈ ಜೈ ಗುರುದೇವ್

    ReplyDelete
  15. ತುಂಬಾ ಚೆನ್ನಾಗಿದೆ, ಇಷ್ಟೊಂದು ವಿವರವಾಗಿ ವಿಷಯಗಳು ಎಲ್ಲಿಯೂ ಸಿಗಲು ಸಾಧ್ಯವಿಲ್ಲ ಎಂದೆನಿಸುತ್ತದೆ. ಬಹಳ ಸರಳವಾಗಿ, ಅರ್ಥಪೂರ್ಣವಾಗಿ, ಜ್ಞಾನಪೂರ್ಣವಾಗಿ ಇದೆ. ವರ್ಣಾಶ್ರಮ ವಿವರಣೆ ಅದ್ಭುತವಾಗಿದೆ. ಧನ್ಯವಾದಗಳು.

    ReplyDelete
  16. ನಮಸ್ಕಾರ ಗುರೂಜೀ,
    ನಿಮ್ಮ ವಾಗ್ಝರಿಯು ಎಷ್ಟು ಸುಂದರವೋ, ಅಷ್ಟೇ ಸಂದರವಾಗಿದೆ ನಿಮ್ಮ ಲೇಖನ. ಸರಸ್ವತೀಪುತ್ರರಾದ ನಿಮ್ಮನ್ನು ಪಡೆದಿರುವುದು ನಮ್ಮ ಸೌಭಾಗ್ಯವೇ ಸರಿ. ತರಗತಿಯ ನಂತರದಲ್ಲಿ ನಿಮ್ಮ ಲೇಖನಗಳನ್ನು ಪ್ರಕಟಿಸುತ್ತಿರುವುದರಿಂದ ಎಲ್ಲರಿಗೂ ತುಂಬಾ ಸಹಕಾರಿಯಾಗಿದೆ. ನಿಮಗೂ ಮತ್ತು ನಿಮ್ಮ ಪರಿಶ್ರಮಕ್ಕೂ ಅನಂತಾನಂತ ಹೃತ್ಪೂರ್ವಕ ಧನ್ಯವಾದಗಳು.

    ReplyDelete
  17. ನಮಸ್ತೆ ಅಣ್ಣಾ,
    ವರ್ಣಾಶ್ರಮ ವಿಷಯವನ್ನು ಬಹಳ ವಿಸ್ತಾರವಾಗಿ ಹಾಗು ಸುಲಭವಾಗಿ ಅರ್ಥವಾಗುವ ರೀತಿ ತಿಳಿಸಿಕೊಟ್ಟಿದ್ದೀರಿ. ಸಂಸಾರದಲ್ಲೇ ಮುಳುಗಿ ಹೋಗಿರುವ ನಮ್ಮೆಲ್ಲರಿಗೂ ಎಚ್ಚರಿಸಲು ನೀವು ಕೊನೆಗೆ ಹೇಳಿರುವ ಕರ್ಮ ನಿಷ್ಠೆ ಪಾಲನೆ, ಧರ್ಮಾಧಾರಿತ ಬದುಕು, ಮೋಕ್ಷದ ಕಡೆಗಿನ ಒಲವು, ಮನಸ್ಸನ್ನು ಮುಟ್ಟುವ ರೀತಿ ಇದೆ. ನೀವು ನಮಗೆ ನೀಡುತ್ತಿರುವ ಜ್ಞಾನ ಅಪಾರ🙏

    ReplyDelete
  18. ವರ್ಣಾಶ್ರಮ ಪ್ರತೀ ಹಂತದ ವಿವರಣೆ ತುಂಬಾ ಅಚ್ಚುಕಟ್ಟಾಗಿದೆ, ಮಾನವ ಜೀವನದ ಸಾರ್ಥಕತೆಯನ್ನು ಜ್ಞಾನ ಮಾರ್ಗದ ಮೂಲಕ ತಿಳಿದುಕೊಳ್ಳುತ್ತ ,ಮೋಕ್ಷವನ್ನು ಪಡೆಯುವುದನ್ನು ವಿವರವಾಗಿ ತಿಳಿಸಿರುವ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು 🙇🙏

    ReplyDelete